ಮಂಗಳೂರು : ಕನ್ನಡ ನಾಡಿನ ಹೆಮ್ಮೆಯ ‘ಚಂದನ ವಾಹಿನಿ’ಯಲ್ಲಿ 4000 ಕಂತುಗಳನ್ನು ದಾಟಿ ಮುಂದುವರೆದು ಭಾರತದ ಟೆಲಿವಿಶನ್ ಇತಿಹಾಸದಲ್ಲೇ ದಾಖಲೆಯನ್ನು ಸೃಷ್ಟಿಸಿರುವ ‘ಥಟ್ಟಂತ ಹೇಳಿ’ ಕಾರ್ಯಕ್ರಮದ ಮೂಲಕ ಜನಮಾನಸಕ್ಕೆ ಚಿರಪರಿಚಿತರಾಗಿ ಖ್ಯಾತರಾದವರು ಡಾ. ನಾ.ಸೋಮೇಶ್ವರರು.
ವೃತ್ತಿಯಲ್ಲಿ ವೈದ್ಯರಾದರೂ ಪ್ರವೃತ್ತಿಯಲ್ಲಿ ಸಾಹಿತ್ಯಾಸಕ್ತಿಯನ್ನು ಬೆಳೆಸಿಕೊಂಡು 30ಕ್ಕೂ ಹೆಚ್ಚು ವಿವಿಧ ವಿಷಯಾಧಾರಿತ ಪುಸ್ತಕಗಳನ್ನು ಬರೆದಿದ್ದಾರೆ. ಈ ಪೈಕಿ ‘ಏಳು ಸುತ್ತಿನ ಕೋಟೆಯಲಿ ಎಂಟು ಕೋಟೆ’ ಎನ್ನುವ ಕೃತಿ ಹೆಚ್ಚು ಪ್ರಸಿದ್ದವಾಗಿದೆ. ವೈದ್ಯ ಸಾಹಿತ್ಯ ಪ್ರಶಸ್ತಿ -2003, ಡಾಕ್ಟರ್ಸ್ ಡೇ ಅವಾರ್ಡ್, ಕರ್ನಾಟಕ ಸಾಹಿತ್ಯ ಅಕಾಡಮಿ ಅವಾರ್ಡ್, ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ ಸಹಿತವಾಗಿ ಅನೇಕ ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿರುವ ಡಾ. ನಾ.ಸೋಮೇಶ್ವರ ಅವರನ್ನು ಕಲ್ಕೂರ ಪ್ರತಿಷ್ಠಾನದ ವತಿಯಿಂದ ನೀಡಲಾಗುವ ‘ಕಾರಂತ ಪ್ರಶಸ್ತಿ -2023’ಗೆ ಆಯ್ಕೆ ಮಾಡಲಾಗಿದೆ. ದಿನಾಂಕ 10-10-2023ರಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು.