ಉಡುಪಿ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ವಾದಿರಾಜ ಕನಕದಾಸ ಸಂಗೀತೋತ್ಸವ ಸಮಿತಿ, ಕನಕದಾಸ ಅಧ್ಯಯನ ಸಂಶೋಧನ ಪೀಠ ಉಡುಪಿ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್, ಎಂ.ಜಿ.ಎಂ. ಕಾಲೇಜು ಉಡುಪಿ, ಸರಿಗಮ ಭಾರತಿ ಸಂಗೀತ ವಿದ್ಯಾಲಯ (ರಿ) ಪರ್ಕಳ ಇವರ ಸಹಯೋಗದಲ್ಲಿ ಎಂ.ಜಿ.ಎಂ. ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ ದಿನಾಂಕ 28 ಡಿಸೆಂಬರ್ 2025ರಂದು 47ನೆಯ ‘ವಾದಿರಾಜ ಕನಕದಾಸ ಸಂಗೀತೋತ್ಸವ’ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಜೊತೆಗೆ ವಾದಿರಾಜ ಕನಕದಾಸ ‘ಸಾಹಿತ್ಯ ಮಂಥನ’ ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಹಿರಿಯ ವಿದ್ವಾಂಸ ಡಾ. ಬಿ ಎ. ವಿವೇಕ ರೈ “ಉಡುಪಿ ಎಂಬ ಈ ಸ್ಥಳ ಬಹು ಪವಿತ್ರವಾದದ್ದು, ತತ್ವಜ್ಞಾನಿಗಳು, ಕವಿಗಳು, ಯತಿಗಳು ಇದ್ದಂತಹ ನಾಡು. ಜೊತೆಗೆ ವಿದ್ವತ್ತಿನ ಜಿಜ್ಞಾಸೆಯ ಕೆಂದ್ರವೂ ಹೌದು. ಶ್ರೀ ವಾದಿರಾಜರು, ಮಧ್ವಾಚಾರ್ಯರ ಹಲವು ಚಿಂತನೆಗಳನ್ನು ಕೃತಿರೂಪದಲ್ಲಿ ಕನ್ನಡ ಮತ್ತು ತುಳುವಿನಲ್ಲಿ ತಂದರು. ಹಾಗಾಗಿ ಶ್ರೀ ವಾದಿರಾಜರು ಮತ್ತು ಕನಕದಾಸರು ಜನಸಾಮಾನ್ಯರ ಬದುಕಿಗೆ ಮಾರ್ಗದರ್ಶಿಗಳಾದರು. ವಾದಿರಾಜರು ಮತ್ತು ಕನಕದಾಸರು ಬದುಕಿನಲ್ಲಿ ಹಲವು ಬಾರಿ ಮುಖಾಮುಖಿಯಾಗುತ್ತಾರೆ, ಚಿಂತನೆಗಳಲ್ಲಿ ಒಂದಾಗುತ್ತಾರೆ, ಇವರಿಬ್ಬರ ಸಾಹಿತ್ಯ ರಚನೆಗಳು ಕೇವಲ ಭಕ್ತಿಯ ಅನುಭೂತಿಯನ್ನು ಕೊಡುವಂತಹುದಲ್ಲ, ಬದುಕಿನಲ್ಲಿ ತಾಳ್ಮೆಯನ್ನು ತಂದುಕೊಳ್ಳುವಂತೆ ನಿರ್ದೇಶಿಸುತ್ತವೆ” ಎಂದು ಹೇಳಿದರು.

ಪೂರ್ಣಪ್ರಜ್ಞ ಕಾಲೇಜಿನ ಸಂಸ್ಕೃತಿ ವಿಭಾಗ ಮುಖ್ಯಸ್ಥರಾದ ಡಾ. ರಮೇಶ್ ಟಿ.ಎಸ್. ಇವರು ವಾದಿರಾಜ ಕನಕದಾಸರ ಕುರಿತು ಉಪನ್ಯಾಸವನ್ನು ನೀಡಿದರು. ಕನಕದಾಸ ಅಧ್ಯಯನ ಸಂಶೋಧನ ಪೀಠದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸರಿಗಮ ಭಾರತಿ ಸಂಗೀತ ವಿದ್ಯಾಲಯ ಪರ್ಕಳ ಇದರ ನಿರ್ದೇಶಕರಾದ ಉಮಾಶಂಕರಿ ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಡಾ. ಅರುಣ ಕುಮಾರ್ ಎಸ್.ಆರ್. ಕಾರ್ಯಕ್ರಮ ನಿರ್ವಹಿಸಿ, ಧನ್ಯವಾದ ಸಮರ್ಪಿಸಿದರು. ಸಭಾ ಕಾರ್ಯಕ್ರಮದ ನಂತರ ವಿಭಾ ಎಸ್. ನಾಯಕ್ ಮಂಗಳೂರು ಬಳಗದವರಿಂದ ಹಿಂದೂಸ್ಥಾನಿ ಸಂಗೀತ ಕಚೇರಿ ನಡೆಯಿತು.
ಮಧ್ಯಾಹ್ನ ಗಂಟೆ 2-00ರಿಂದ ವಾದಿರಾಜ ಕನಕದಾಸ ಸಂಗೀತೋತ್ಸವದ ಪ್ರಯುಕ್ತ ನಡೆಸಿದ ವಾದಿರಾಜ ಕನಕದಾಸ ಗಾಯನ ಸ್ಪರ್ಧಾ ವಿಜೇತರಿಂದ ಗಾಯನ ಪ್ರಸ್ತುತಿ, ಸಮಾರೋಪ ಹಾಗೂ ಬಹುಮಾನ ವಿತರಣೆ ನಡೆಯಿತು. ಮುಖ್ಯ ಅತಿಥಿಗಳಾಗಿ ಎಂ.ಜಿ.ಎಂ. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಮಾಲತಿದೇವಿ ಉಪಸ್ಥಿತರಿದ್ದರು. ಸಂಜೆ ಶ್ರೀಮತಿ ಉಷಾ ರಾಮಕೃಷ್ಣ ಭಟ್ ಬೆಂಗಳೂರು ಮತ್ತು ಬಳಗದವರಿಂದ ಕರ್ನಾಟಕ ಸಂಗೀತ ಕಚೇರಿ ನಡೆಯಿತು.
