ಕಾಸರಗೋಡು : ಶೇಣಿಯ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಕುಂಬಳೆ ಉಪಜಿಲ್ಲಾ ಮಟ್ಟದ 63ನೇ ಕೇರಳ ರಾಜ್ಯ ಶಾಲಾ ಕಲೋತ್ಸವ ದಿನಾಂಕ 18 ನವೆಂಬರ್ 2024ರ ಸೋಮವಾರದಂದು ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಮಂಜೇಶ್ವರದ ಶಾಸಕ ಎ. ಕೆ. ಎಂ. ಅಶ್ರಫ್ ಮಾತನಾಡಿ “ಕೇರಳದಲ್ಲಿ ಪ್ರತಿ ವರ್ಷ ನಡೆಯುವ ಶಾಲಾ ಕಲೋತ್ಸವವನ್ನು ಏಷ್ಯಾದ ಅತಿ ದೊಡ್ಡ ಕಲೋತ್ಸವ ಎಂದೇ ಅಂತಾರಾಷ್ಟ್ರೀಯ ಮಾಧ್ಯಮಗಳು ಬಿಂಬಿಸಿವೆ. ಪಠ್ಯದೊಂದಿಗೆ ಕಲೆ, ಕ್ರೀಡೆ ಸಹಿತ ಪಠೇತರ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ಕೇರಳದ ಶಿಕ್ಷಣ ವ್ಯವಸ್ಥೆ ದೇಶಕ್ಕೇ ಮಾದರಿಯಾಗಿದೆ. ಕಲೆಗೆ ಜಾತಿ, ಮತ, ಧರ್ಮಗಳ ಬೇಧವಿಲ್ಲ. ಇದರಿಂದ ಜನರನ್ನು ಒಗ್ಗೂಡಿಸಲು ಸಾಧ್ಯವಾಗುತ್ತದೆ. ಯಕ್ಷಗಾನ, ಭರತ ನಾಟ್ಯ, ಶಾಸ್ತ್ರೀಯ ಸಂಗೀತ ಸಹಿತ ನಾನಾ ಕಲಾ ಪ್ರಕಾರಗಳನ್ನೊಳಗೊಂಡ ಶಾಲಾ ಕಲೋತ್ಸವವು ನಾಳೆಯ ಗೋವಿಂದ ಪೈ ಹಾಗೂ ಕಯ್ಯಾರ ಕಿಂಞಣ್ಣ ರೈಗಳಂಥ ಮೇರು ವ್ಯಕ್ತಿಗಳನ್ನು ನಾಡಿಗೆ ಸಮರ್ಪಿಸುವ ವೇದಿಕೆಯಾಗಿ ಕಾರ್ಯ ನಿರ್ವಹಿಸುತ್ತಿದೆ.” ಎಂದರು.
ಎಣ್ಮಕಜೆ ಗ್ರಾಮ ಪಂಚಾಯತ್ ಮತ್ತು ಕಲೋತ್ಸವದ ಸ್ವಾಗತ ಸಮಿತಿಯ ಅಧ್ಯಕ್ಷರಾದ ಸೋಮಶೇಖರ್ ಜೆ. ಎಸ್. ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಿ.ಬಿ.ಐ ವಿಭಾಗದ ಬೆಂಗಳೂರು ಶಾಖೆಯ ಸೀನಿಯರ್ ಪಬ್ಲಿಕ್ ಪ್ರಾಸಿಕ್ಯೂಟರ್ ಶಿವಾನಂದ ಪೆರ್ಲ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಉದುಮ ಶಾಸಕ ಸಿ.ಎಚ್. ಕುಂಞಂಬು ಮಾತನಾಡಿ “ಯಕ್ಷಗಾನ ಕೇವಲ ತುಳುನಾಡಿಗೆ ಸೀಮಿತವಾಗಿಲ್ಲ. ಕಲೆಗೆ ಜಾತಿ, ಮತ, ಸ್ಥಳಗಳ ಸೀಮೆಯಿಲ್ಲ.” ಎಂದು ಅಭಿಪ್ರಾಯ ಪಟ್ಟರು.
ಉದ್ಯಮಿ ಅಬ್ದುಲ್ಲ ಮಧುಮೂಲೆ, ಅಬುಧಾಬಿ ಯು .ಎ. ಇ ಎಕ್ಸ್‌ಚೇಂಜ್ ಇದರ ನಿವೃತ್ತ ಸಿ. ಇ. ಒ. ಸುಧೀರ್ ಕುಮಾರ್ ಶೆಟ್ಟಿ ಎಣ್ಮಕಜೆ, ಪುತ್ತಿಗೆ ಗ್ರಾ. ಪಂ. ಅಧ್ಯಕ್ಷ ಸುಬ್ಬಣ್ಣ ಆಳ್ವ, ಮಣಿಯಂಪಾರೆ ಇಗರ್ಜಿಯ ಧರ್ಮಗುರು ಫಾ. ನೆಲ್ಸನ್ ಡಿ. ಅಲ್ಮೆಡಾ, ನವಜೀವನ ವಿಶೇಷ ಶಾಲೆಯ ವ್ಯವಸ್ಥಾಪಕ ಫಾ. ಜೋಸ್ ಚೆಂಬೋಟಿಕ್ಕಲ್ ಹಾಗೂ ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಎಣ್ಮಕಜೆ ಗ್ರಾ. ಪಂ. ಉಪಾಧ್ಯಕ್ಷೆ ರಮ್ಲ ಇಬ್ರಾಹಿಂ, ಜಿ. ಪಂ. ಸದಸ್ಯ ನಾರಾಯಣ ನಾಯ್ಕ, ಬ್ಲಾಕ್ ಪಂ. ಸದಸ್ಯರಾದ ಬಟ್ಟು ಶೆಟ್ಟಿ, ಅನಿಲ್ ಕುಮಾರ್ ಕೆ. ಪಿ. , ವಿದ್ಯಾ ಸಂಸ್ಥೆಯ ವ್ಯವಸ್ಥಾಪಕಿ ಶಾರದಾ ವೈ., ಸ್ವಾಗತ ಸಮಿತಿ ಸಂಚಾಲಕ ಹಾಗೂ ಯು. ಪಿ. ವಿಭಾಗದ ಮುಖ್ಯ ಶಿಕ್ಷಕ ರಾಧಾಕೃಷ್ಣ ನಾಯಕ್ ಶೇಣಿ, ಸಹ ಸಂಚಾಲಕ ಮತ್ತು ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಶ್ರೀಶ ಕುಮಾರ್, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ವಿಲ್ಸನ್ ಡಿ’ಸೋಜ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಯೂಸುಫ್ ಶೇಣಿ, ಎಣ್ಮಕಜೆ – ಪುತ್ತಿಗೆ ಗ್ರಾ. ಪಂ. ಜನಪ್ರತಿನಿಧಿಗಳು ಉಪಸ್ಥಿತರಿದ್ದರು. ಕುಂಬಳೆ ಉಪ ಜಿಲ್ಲಾ ವಿದ್ಯಾಧಿಕಾರಿ ಶಶಿಧರ್ ಸ್ವಾಗತಿಸಿ, ಶಿಕ್ಷಕ ಅಶ್ರಫ್ ಮರ್ತ್ಯ ನಿರೂಪಿಸಿ, ಹೈಯರ್ ಸೆಕೆಂಡರಿ ಶಾಲೆಯ ಪ್ರಿನ್ಸಿಪಾಲ್ ಶಾಸ್ತ ಕುಮಾರ್ ವಂದಿಸಿದರು.