ಬೆಂಗಳೂರು : ಲಯನ್ಸ್ ಇಂಟರ್‌ನ್ಯಾಷನಲ್, ಕನ್ನಡ ಮತ್ತು ಸಂಸ್ಕೃತಿ ತಂಡ ಜಿಲ್ಲೆ 317F ಮತ್ತು ರಂಗಚಂದಿರ ಟ್ರಸ್ಟ್ ಸಹಯೋಗದಲ್ಲಿ “ಕಾರ್ಮಿಕ, ರಂಗ ನಿರ್ದೇಶಕ ಮೈಕೋ ಶಿವಣ್ಣ ನೆನಪು” ನಿಮಿತ್ತ ರಂಗಸಂಗೀತ, ರಂಗಗೌರವ, ಪುಸ್ತಕ ಬಿಡುಗಡೆ ಹಾಗೂ ನಾಟಕ ಪ್ರದರ್ಶನ ಕಾರ್ಯಕ್ರಮಗಳನ್ನು ಬೆಂಗಳೂರಿನ ಎನ್.ಆರ್.ಕಾಲೋನಿಯ ಡಾ. ಸಿ.ಅಶ್ವತ್ಥ್ ಕಲಾಭವನದಲ್ಲಿ ದಿನಾಂಕ 15 ಆಗಸ್ಟ್ 2024ರಂದು ಸಂಜೆ 5-00 ಗಂಟೆಗೆ ಹಮ್ಮಿಕೊಳ್ಳಲಾಗಿದೆ.
ರಂಗಭೂಮಿ ಕಲಾವಿದರಾದ ಶ್ರೀ ಚಂದ್ರಶೇಖರ್ ಎಸ್.ಎಸ್. ಹಾಗೂ ಸಮನ್ವಯ ಸೋಮಶೇಖರ್ ಇವರುಗಳಿಗೆ ರಂಗಗೌರವ ಸಲ್ಲಿಸಲಾಗುತ್ತದೆ. ಡಾ. ಬೇಲೂರು ರಘುನಂದನ್ ಇವರ ನಿರ್ದೇಶನದ ಪದ್ಮಶ್ರೀ ಸಾಲುಮರದ ತಿಮ್ಮಕ್ಕನವರ ಜೀವನಾಧಾರಿತ ನಾಟಕ “ಸಾಲುಮರಗಳ ತಾಯಿ ತಿಮ್ಮಕ್ಕ” ಪ್ರದರ್ಶನಗೊಳ್ಳಲಿದೆ. ಅಂಕುರ ಮಂಜುನಾಥ್ ಅವರಿಂದ ರಂಗಸಂಗೀತ ಇರುತ್ತದೆ. ವೇದಿಕೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಯನ್ ಎನ್.ಆರ್. ಹೆಗಡೆ ವಹಿಸಲಿದ್ದು, ಲಯನ್ ಸಿ.ಎಂ. ನಾರಾಯಣ ಸ್ವಾಮಿ, ಶ್ರೀ ಮಾಲತೇಶ್ ಎನ್. ಕೊಡ್ಲಿಯಾರ್, ರಂಗಚಂದಿರ ಗೌರವಾಧ್ಯಕ್ಷ ಆರ್.ಕೆ. ಹೆಗಡೆ, ಅಧ್ಯಕ್ಷೆ ಡಾ. ಪದ್ಮ, ಆರ್. ನರೇಂದ್ರ ಬಾಬು, ಬೈಯ್ಯಪ್ಪನಹಳ್ಳಿ ನಾಗರಾಜು ಹಾಗೂ ಅನೇಕರು ಭಾಗವಹಿಸುವರು. ಇದೇ ಸಂದರ್ಭದಲ್ಲಿ ರವಿ ಅಂಬೋಜಿ ವಿರಚಿತ “ಮಾರ್ಗದಾಳು” ಕಾದಂಬರಿಯನ್ನು ಖ್ಯಾತ ಸಾಹಿತಿ ಪ್ರೊ. ಎಸ್.ಜಿ.ಸಿದ್ದರಾಮಯ್ಯ ಇವರು ಲೋಕಾರ್ಪಣೆ ಮಾಡಲಿದ್ದಾರೆ.