05 ಮಾರ್ಚ್, ಮೈಸೂರು: “ಪಠ್ಯವನ್ನು ರಂಗ ಚಟುವಟಿಕೆಯ ಮೂಲಕ ಕಲಿಸುವ ಆಟ – ಪಾಠ ವಿಧಾನವನ್ನು ಇಂಡಿಯನ್ ಥಿಯೇಟರ್ ಫೌಂಡೇಷನ್ ಅನುಷ್ಟಾನಗೊಳಿಸುತ್ತಿದ್ದು, ನಗರದ ಹಾರ್ಡ್ವಿಕ್ ಶಿಕ್ಷಣ ಸಂಸ್ಥೆಯ ಮೂಲಕ ಜಾರಿಗೊಳಿಸಲಾಗುವುದು” ಎಂದು ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆಯ ನಿರ್ದೇಶಕ ಪ್ರಸನ್ನ ಹೇಳಿದರು. ಹಾರ್ಡ್ವಿಕ್ ಶಿಕ್ಷಣ ಸಂಸ್ಥೆಯಲ್ಲಿ ಮಾರ್ಚ್ ತಿಂಗಳ 2 ನೇ ತಾರೀಖಿನಂದು ಆಯೋಜಿಸಿದ್ದ ಶೈಕ್ಷಣಿಕ ರಂಗ ಭೂಮಿ ಚಟುವಟಿಕೆಗಳ ಉದ್ಘಾಟನೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಶಿಕ್ಷಕರಿಗೆ ಪಠ್ಯಕ್ರಮ ಮುಗಿಸುವ ಧಾವಂತ, ಮಕ್ಕಳಿಗೆ ಅಂಕ ಮತ್ತು ಶ್ರೇಣಿ ಮೂಲಕ ಮುನ್ನುಗುವ ಛಲದಿಂದಾಗಿ ಪಠ್ಯವನ್ನು ಆಟ-ಪಾಠವಾಗಿ ಕಲಿಯುವ ವಿಧಾನ ಕಣ್ಮರೆಯಾಗಿದೆ. ಪಠ್ಯಕ್ರಮ-ಶ್ರೇಣಿ ಗುರಿ ಇಲ್ಲದ ಶಿಕ್ಷಣ ಸಂಸ್ಥೆಗಳು ಶಾಪಗ್ರಸ್ತ ಸಂಸ್ಥೆಗಳಂತೆ ಉಳಿಯುತ್ತದೆ, ಮುಚ್ಚ ಬೇಕಾಗುತ್ತದೆ. ಇಂಥ ‘ಶಾಪ’ವನ್ನು ವರವಾಗಿ ಪರಿವರ್ತಿಸುವ ಶೈಕ್ಷಣಿಕ ರಂಗಭೂಮಿ ಮೂಲಕ ಪಠ್ಯವನ್ನೇ ರಂಗ ಪ್ರಸಂಗವಾಗಿ ಪರಿವರ್ತಿಸಿ ಕಲಿಸುವ ವಿಧಾನವನ್ನು ಈ ಸಂಸ್ಥೆ ಅಳವಡಿಸುತ್ತದೆ. 1960ರಲ್ಲೇ ಆದ್ಯರಂಗಾಚಾರ್ಯರು ನಾಟಕ ಅಕಾಡೆಮಿಯಲ್ಲಿದ್ದಾಗ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ, ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಮೂಲಕ ಶಿಕ್ಷಕರಿಗೆ ರಂಗ ತರಬೇತಿ ನೀಡಲು ಪ್ರಯತ್ನಿಸಿದ್ದರು. ನಾಟಕದ ಮೂಲಕ ಪಠ್ಯ ಕಲಿಕೆಯಿಂದ ಮಾನಸಿಕ ಒತ್ತಡ ಕಡಿಮೆಯಾಗಿ ಕಲಿಕೆ ಗುಣಮಟ್ಟ ಹೆಚ್ಚುತ್ತದೆ. ಇದಕ್ಕಾಗಿ ಪೋಷಕರ ಸಹಯೋಗದೊಂದಿಗೆ ಮೈಸೂರಿನಲ್ಲಿ ಹಾರ್ಡ್ವಿಕ್. ಶಾಲೆಯಲ್ಲಿ ಶೈಕ್ಷಣಿಕ ರಂಗ ತರಬೇತಿ ಆರಂಭವಾಗಿದೆ. ಮಂಗಳೂರಿನಲ್ಲಿ ಇಂತ ಚಟುವಟಿಕೆ ಯಶಸ್ವಿಯಾಗಿದೆ’ ಎಂದು ಪ್ರಸನ್ನ ಹೇಳಿದರು.
‘ನಾವೆಲ್ಲ ಚಿಕ್ಕವರಿರುವಾಗ ಶಾಲೆಯಲ್ಲಿ ನೇಯ್ಗೆ, ಕಲಾಗಾರಿಕೆ, ಕಸೂತಿ, ನೃತ್ಯ, ಅಡುಗೆ, ಸಂಗೀತ ಕಲಿಸುವ ಕ್ರಮ ಇತ್ತು. ಈಗ ಅವು ಕಣ್ಮರೆಯಾಗಿವೆ. ಅಂಕಗಳಿಕೆಯ ಗುರಿ ಇರಿಸಿರುವುದರಿಂದ ಮಕ್ಕಳು ಮಾನಸಿಕ ಅಸ್ವಸ್ಥರಾಗಿ ಖಿನ್ನತೆ ಅನುಭವಿಸುತ್ತಿದ್ದಾರೆ. ಪಠ್ಯದ ರಂಗರೂಪದಿಂದ ಪಾಠದಲ್ಲಿ ಕಲಿಕೆ, ಆಟದ ಮೋಜು ಇರುತ್ತದೆ. ರಂಗ ಪ್ರದರ್ಶನಕ್ಕೆ ಆಟ ಎಂಬ ಹೆಸರು ಇರುವುದರಿಂದ ಆಟ – ಪಾಠ ಅನ್ವರ್ಥವಾಗುತ್ತದೆ’ ಎಂದರು. ಕಾರ್ಯಕ್ರಮ ಉದ್ಘಾಟಿಸಿದ ಮಂಗಳೂರಿನ ಬಲ್ಮಠದಲ್ಲಿರುವ ಸಿಎಸ್ಐ ಕೆಎಸ್ ಡಿ ಸಂಸ್ಥೆಯ ಬಿಷಪ್ ರೆವೆರೆಂಡ್ ಹೇಮಚಂದ್ರ ಅಯ್ಯ ಮಾತನಾಡಿ,’ ಮಕ್ಕಳು ಮತ್ತು ಪೋಷಕರ ನಡುವೆ ಸಂವಹನ ಕಡಿಮೆಯಾಗಿದೆ, ಸಂಪರ್ಕ ಇಲ್ಲದಂತೆ ಮಾಡಿದೆ. ಕಲಿಕೆಯಲ್ಲಿ ವೈಚಾರಿಕತೆ ಬೆಸೆದು ಭಾವನೆಯನ್ನು ಅರಳಿಸಲು ಐಎಎಸ್ ಅಧಿಕಾರಿ ವಿಜಯ ಭಾಸ್ಕರ್ ಶಿಕ್ಷಣ ಇಲಾಖೆಯಲ್ಲಿದ್ದಾಗ ನಲಿ-ಕಲಿ ಯೋಜನೆ ರೂಪಿಸಿದ್ದರು’ ಎಂದರು.
ಪಠ್ಯದಲ್ಲಿರುವ ಪೂರ್ಣಚಂದ್ರ ತೇಜಸ್ವಿ ರಚನೆಯ ‘ಕೃಷ್ಣೇಗೌಡರ ಆನೆ’ ನಾಟಕವನ್ನು ಕಲಾವಿದರು ಪ್ರದರ್ಶಿಸಿದರು. ಪ್ರಾಂಶುಪಾಲ ಸುಂದರೇಶ್ ದೇವಪ್ರಿಯಂ, ಶಿಕ್ಷಣ ತಜ್ಞ ಡಾ. ಎಚ್. ಎಸ್. ಉಮೇಶ್, ಮುಖ್ಯ ಶಿಕ್ಷಕ ಗುರುಭಕ್ತಯ್ಯ, ಎಸ್ ಸನ್ನುತಾ ಉಪಸ್ಥಿತರಿದ್ದರು.