ಉಳ್ಳಾಲ: ಖ್ಯಾತ ನಾಟಕಕಾರ, ನಟ ಪಂಡಿತ್ ಹೌಸಿನ ಪಿಲಾರು ನಿವಾಸಿ ಗಿರೀಶ್ ಪಿಲಾರ್ (60) ಅಲ್ಪಕಾಲದ ಅಸೌಖ್ಯದಿಂದ ದಿನಾಂಕ 18-07-2023 ನೇ ಮಂಗಳವಾರ ಆಸ್ಪತ್ರೆಯಲ್ಲಿ ನಿಧನರಾದರು.
‘ದೇವೆರೆ ತೀರ್ಪು’, ‘ಆರ್ ಅತ್ತ್ ಈರ್’, ‘ಕೈಕೊರ್ಪೆರ್’, ‘ಬಲಿಪಡೆ ಉಂತುಲೆ’, ‘ಎಂಕುಲತ್ ನಿಕುಲು’, ‘ಎಂಕುಲ್ ಎನ್ನಿಲೆಕ ಅತ್ತ್’, ‘ಡಿಸೆಂಬರ್-1’ ಸೇರಿದಂತೆ 20ಕ್ಕೂ ಹೆಚ್ಚು ತುಳು ನಾಟಕಗಳನ್ನು ಬರೆದು ನಿರ್ದೇಶಿಸಿದ್ದರು. ಇವರು ಬರೆದು ನಿರ್ದೇಶಿಸಿದ ‘ದೇವೆರೆ ತೀರ್ಪು’ ನಾಟಕಕ್ಕೆ ಜಿಲ್ಲಾಮಟ್ಟದ ಪ್ರಶಸ್ತಿ ಲಭಿಸಿತ್ತು. ‘ಕೈಕೊರ್ಪೆರ್’ ನಾಟಕ ಬೆಳ್ತಂಗಡಿಯ ಪುಂಜಾಲ ಕಟ್ಟೆಯಲ್ಲಿ ಯಶಸ್ವಿ ಪ್ರದರ್ಶನ ಕಂಡು ಪ್ರಶಸ್ತಿ ಪಡೆದುಕೊಂಡಿತ್ತು. ‘ಬಲಿಪಡೆ ಉಂತುಲೆ’ ನಾಟಕವು 40 ಪ್ರದರ್ಶನ ಕಂಡಿತ್ತು.
ನವನೀತ್ ಶೆಟ್ಟಿ ಕದ್ರಿ ರಚಿಸಿ ಶರವು ಕಲಾವಿದರು ನಟಿಸಿದ ‘ಕಾರ್ನಿಕದ ಶನೀಶ್ವರೆ’ ನಾಟಕವು ಗಿರೀಶ್ ಪಿಲಾರ್ ನಿರ್ದೇಶನದಲ್ಲಿ ಯಶಸ್ವೀ 30 ಪ್ರದರ್ಶನಗಳನ್ನು ಕಂಡಿತ್ತು. ದಿನೇಶ್ ಕಂಕನಾಡಿ ಅವರ ನಾಟಕ ‘ಮಾಸ್ಟ್ರ್ ದಾನೆ ಮನಿಪುಜೆರ್’ ನಾಟಕದಲ್ಲಿ ಪ್ರಧಾನ ಭೂಮಿಕೆಯಲ್ಲಿ ನಟಿಸಿದ್ದರು. ಹಲವು ನಾಟಕಗಳಲ್ಲಿ ಸ್ತ್ರೀ ಪಾತ್ರಧಾರಿಯಾಗಿ ಗಮನ ಸೆಳೆದಿದ್ದ ಇವರು ಕಿರುತೆರೆ ನಟರೂ ಆಗಿದ್ದು ಇವರ ‘ಪುಂಡಿ ಪಣವು’ ಧಾರಾವಾಹಿ ದೂರದರ್ಶನ ಸೇರಿದಂತೆ ಸ್ಥಳೀಯ ವಾಹಿನಿಗಳಲ್ಲಿ ಪ್ರಸಾರವಾಗಿದೆ.
ಮೂಲತಃ ಬೆಳ್ತಂಗಡಿ ಪುಂಜಾಲಕಟ್ಟೆಯವರಾಗಿದ್ದ ಇವರು ಪದವಿ ನಂತರ ಪಿಲಾರು ಬಳಿ ವಾಸವಾಗಿದ್ದರು. ಕುತ್ತಾರು ಶ್ರೀ ರಾಜರಾಜೇಶ್ವರಿ ಸಿದ್ಧಿವಿನಾಯಕ ದೇವಸ್ಥಾನದ ಟ್ರಸ್ಟಿನ ಸದಸ್ಯರಾಗಿದ್ದ ಇವರು ಜಾಗೃತ ವಿವಿಧೋದ್ದೇಶ ಸಹಕಾರಿ ಸಂಘದಲ್ಲಿ ಹಲವು ವರ್ಷಗಳಿಂದ ಪಿಗ್ಮಿ ಸಂಗ್ರಾಹಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅವರಿಗೆ ಪತ್ನಿ ಮತ್ತು ಇಬ್ಬರು ಪುತ್ರರು ಇದ್ದಾರೆ.
Subscribe to Updates
Get the latest creative news from FooBar about art, design and business.