ಮೂಲ್ಕಿ : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮೂಲ್ಕಿ ತಾಲೂಕು ಘಟಕ ಆಯೋಜಿಸುವ ಮೂಲ್ಕಿ ತಾಲೂಕು ಮೂರನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಖ್ಯಾತ ರಂಗಕರ್ಮಿ ಕೃಷ್ಣಮೂರ್ತಿ ಕವತ್ತಾರ್ ಇವರನ್ನು ಆಯ್ಕೆ ಮಾಡಲಾಗಿದೆ ಎಂದು ದ.ಕ. ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ತಿಳಿಸಿದ್ದಾರೆ.
ನಿನಾಸಂ ಸಂಸ್ಥೆಯಲ್ಲಿ ರಂಗಪದವಿ ಮುಗಿಸಿದ ಬಳಿಕ ಮೂರು ದಶಕಗಳಿಂದ ನೂರಾರು ನಾಟಕಗಳಲ್ಲಿ ಅಭಿನಯಿಸಿದ್ದಲ್ಲದೇ, ಮೂನ್ನೂರಕ್ಕೂ ಹೆಚ್ಚು ತುಳು ಮತ್ತು ಕನ್ನಡ ನಾಟಕಗಳನ್ನು ವಿನ್ಯಾಸಗೊಳಿಸಿದ್ದಾರೆ. ಲೋಕಶಾಕುಂತಲ, ಶಸ್ತ್ರಪರ್ವ, ಹಯ ವದನ, ದರ್ಮತ್ತಿಮಾಯೆ, ಪಿಲಿಪತ್ತಿ ಗಡಸ್, ಅವ್ವಾ ಗೌಡರ ಮಲ್ಲಿ ಹೀಗೆ ಅನೇಕ ನಾಟಕಗಳು, ಕಥನಕವನಗಳನ್ನು ರಂಗದಲ್ಲಿ ಮೂಡಿಸಿದ್ದಾರೆ. ಅನೇಕ ರಂಗಗೀತೆಗಳನ್ನು ರಚಿಸಿದ್ದಾರೆ. ಸಂಗೀತ ನಿರ್ದೇಶನ ಮಾಡಿದ್ದಾರೆ. ಸಾಯುವವನೇ ಚಿರಂಜೀವಿ ಏಕವ್ಯಕ್ತಿ ನಾಟಕ ನೂರಕ್ಕೂ ಹೆಚ್ಚು ಪ್ರಯೋಗ ಕಂಡಿದೆ. ನಾಡಿನ ಖ್ಯಾತ ನಟ, ನಟಿಯರಿಗೆ ಏಕವ್ಯಕ್ತಿ ನಾಟಕಗಳನ್ನು ನಿರ್ದೇಶಿಸಿದ್ದಾರೆ. ಮುದ್ರಾಡಿ, ಮಲ್ಲಾಡಿಹಳ್ಳಿ, ಚಿತ್ರದುರ್ಗ, ಕುಕ್ಕೆಸುಬ್ರಹ್ಮಣ್ಯ ಹೀಗೆ ನಾಡಿನಾದ್ಯಂತ ರಂಗಭೂಮಿಯ ಬೆಳವಣಿಗೆಗೆ ಸಹಕರಿಸಿದ್ದಾರೆ. 50ಕ್ಕೂ ಹೆಚ್ಚು ಕಾಲೇಜುಗಳಲ್ಲಿ ರಂಗತರಬೇತಿ ನೀಡಿದ್ದು, ಮೂವತ್ಕ್ಕೂ ಹೆಚ್ಚು ಮಕ್ಕಳ ನಾಟಕಗಳನ್ನು ರಂಗದ ಮೇಲೆ ತಂದಿದ್ದಾರೆ.
ಮನ್ವಂತರ, ಅಶ್ವಿನಿ ನಕ್ಷತ್ರ, ಗಾಂಧಾರಿ, ಪಲ್ಲವಿ ಅನುಪಲ್ಲವಿ, ನಾ ನಿನ್ನ ಬಿಡಲಾರೆ, ಭಾರತಿ ಹೀಗೆ ಇಪತ್ತಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಬೇರು, ಆವೇಶದಂತಹ ಅನೇಕ ನಾಟಕಗಳನ್ನು ಆಕಾಶವಾಣಿಗೆ ಬರೆದು, ನಿರ್ದೇಶಿಸಿದ್ದಾರೆ. ಗೌಡ್ರ ಸೈಕಲ್ ಮೊದಲಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕರ್ನಾಟಕ ನಾಟಕ ಅಕಾಡಮಿ, ಶಂಕರ್ ನಾಗ್ ಪ್ರಶಸ್ತಿ, ರಂಗನಿರಂತರ ಮೊದಲಾದ ಪ್ರಶಸ್ತಿಗಳಿಂದ ಅಲಂಕೃತರು. ಕರ್ನಾಟಕ ಯಕ್ಷಗಾನ ಅಕಾಡಮಿ ಸದಸ್ಯರಾಗಿದ್ದರು. ಇವರ ರಂಗಭೂಮಿ ಕುರಿತಾದ ಕೃತಿಯನ್ನು ಡಾ. ಪದ್ಮನಿ ನಾಗರಾಜ್ ರಚಿಸಿದ್ದಾರೆ. ದಿನಾಂಕ 01 ಮಾರ್ಚ್ 2026ರಂದು ಕಟೀಲಿನ ನಂದಿನೀ ನದಿಯ ಕುದ್ರುವಿನಲ್ಲಿ ದೇಗುಲದ ಸಹಕಾರದಲ್ಲಿ ಸಾಹಿತ್ಯ ಸಮ್ಮೇಳನ ನಡೆಯಲಿದೆ.
