ಬೆಂಗಳೂರು ದೂರದರ್ಶನದ ಪ್ರಸಾದನ ಕಲಾವಿದ, ರಂಗ ಭೂಮಿಯ ಕ್ರಿಯಾಶೀಲ ಉಮೇಶ್ ದಿನಾಂಕ 08-03-2024ರಂದು ನಿಧನರಾದರು. ನಮ್ಮ ದೂರದರ್ಶನ ಉಮೇಶ್ ಎಂದೇ ಖ್ಯಾತಿಯ, ಸಮುದಾಯ ಮತ್ತು ರಂಗನಿರಂತರ, ರಂಗ ಸಂಪದ ತಂಡಗಳೊಟ್ಟಿಗೆ ಗುರುತಿಸಿಕೊಂಡು ರಂಗ ಚಟುವಟಿಕೆಗಳನ್ನು ನಡೆಸಿ, ದೂರದರ್ಶನದಲ್ಲಿ ಪ್ರಸಾದನ ಕಲಾವಿದ ಎಂಬ ಹುದ್ದೆಗೆ ಸೇರಿ, ಹಲವು ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದ, ಸೇತೂರಾಂ ಅವರ ನಿರ್ದೇಶನದ ಹಲವಾರು ದಾರವಾಹಿಗಳಿಗೆ ಹಲವು ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದ, ಬಹು ಜನರ ಶೋತೃವಾಗಿದ್ದ ಉಮೇಶ ಇನ್ನಿಲ್ಲ ಎಂಬ ದಾರುಣ ಸುದ್ದಿ ಗೆಳೆಯ ನಂದಕುಮಾರನಿಂದ ತಲುಪಿದೆ.
ಇತ್ತೀಚಿನ ವರುಷಗಳಲ್ಲಿ ಅವನಿಗೆ ಅನಾರೋಗ್ಯ ತೀವ್ರವಾಗಿ ಕಾಡಿತ್ತು. ಫೆಬ್ರವರಿ 23ರಂದು ನಾನು ನನ್ನ ಮನೆಯವರನ್ನು ಆಸ್ಟ್ರೋ ಆರ್.ವಿ. ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾಗ, ಮಧ್ಯಾನ್ಹ 3-4ರ ಸುಮಾರಿಗೆ ಉಮೇಶನೂ ತನ್ನ ಆರೋಗ್ಯ ತಪಾಸಣೆಗೆ ಬಂದಿದ್ದ. ಅಸ್ಪಷ್ಟ ಮಾತುಗಳು ಮತ್ತು ಅಸಹಜ ದೈಹಿಕ ಕ್ರಿಯೆಗಳಿಂದ ಬಳಲುತಿದ್ದ ಉಮೇಶನ ಮುಂದೆ ನಿಲ್ಲಲು ನನಗೆ ಮನಸ್ಸಾಗಲಿಲ್ಲ. ಏನಾದರೂ ಸಹಾಯ ಬೇಕಾ ಎಂದಾಗ ಅವನ ಜೊತೆ ಇದ್ದವರು ಇಲ್ಲ ಸಾರ್, ನಾವು ಇಲ್ಲಿ ರೆಗ್ಯುಲರ್ ಆಗಿ ಬರುತ್ತೇವೆ, ತೊಂದರೆ ಇಲ್ಲ ಎಂದರು.
ಬಹಳ ಕ್ರಿಯಾಶೀಲ ದಿನಗಳಲ್ಲಿ ಕಂಡಂತ ಉಮೇಶನನ್ನು ಹೀಗೆ ನೋಡಲು ಸಾಧ್ಯವಾಗದಾಯಿತು. ಬಲವಂತವಾಗಿ ನಾನು ನನ್ನ ಕೆಲಸದ ಮೇಲೆ ಮುಂದುವರಿದೆ. ಅವನ ಹುಟ್ಟುಹಬ್ಬದ ಸಂಭ್ರಮಾಚರಣೆ ಅವನ ಮನೆಯಲ್ಲಿ ಸುಮಾರು ಎರಡು ವರುಷಗಳ ಹಿಂದೆ ನಡೆಯಿತು. ಕೆಲವೇ ಕೆಲವು ಆತ್ಮೀಯರಿಂದ ನಡೆದ ಆ ಸಂಭ್ರಮಾಚರಣೆಯಲ್ಲಿ ನಾನೂ ಒಬ್ಬ. ಅಂದು ಸಾಕಷ್ಡು ರಂಗಭೂಮಿ, ದಾರವಾಹಿ, ದೂರದರ್ಶನ, ಜುಟ್ಟಿ ಎಲ್ಲದರ ಬಗ್ಗೆಯೂ ಮಾತನಾಡಿದೆವು. ಗತಕಾಲದ ರಂಗ ಇತಿಹಾಸವನ್ನು ಮೆಲಕು ಹಾಕಿದೆವು. ಅದೇ ನಮ್ಮ ಆತ್ಮೀಯ ಕೊನೆಯ ಭೇಟಿ.
ಇತ್ತೀಚಿನ ದಿನಗಳ ಸೇತೂ ದಾರವಾಹಿಯಲ್ಲೂ ಅವನು ತನ್ನ ಅನಾರೋಗ್ಯ ಕಾರಣ ಕಾರ್ಯ ನಿರ್ವಹಿಸಲಿಲ್ಲ. ರಂಗ ಶಂಕರದ ಕೂಡುಕಟ್ಟೆಗೂ ಅವನು ಬರುವುದನ್ನು ನಿಲ್ಲಿಸಿದ್ದ. ಜುಟ್ಟಿ, ಉಮೇಶ, ನಂದ…ಇವರುಗಳು ಇಲ್ಲದ ಕೂಡು ಕಟ್ಟೆ, ಯಾರಿದ್ದರೂ ಅಷ್ಟೇ…..
ಸಮುದಾಯದಿಂದ ತನ್ನ ಸಾಮಾಜಿಕ ಚಟುವಟಿಕೆಗಳನ್ನು ಪ್ರಾರಂಭಿಸಿದ ಉಮೇಶ, ನಂತರ ಸಿ.ಜಿ.ಕೆ. ಆಪ್ತನಾಗಿ ಗುರುತಿಸಿಕೊಂಡು ರಂಗ ನಿರಂತರದಲ್ಲಿ ಕಾರ್ಯ ನಿರ್ವಹಿಸಿದ. ಸಿ.ಜಿ.ಕೆ. ರಂಗ ಸಂಪದದಲ್ಲಿ ನಿರ್ದೇಶನ ಮಾಡಿದಾಗ ಅಲ್ಲಿಗೂ ಹೋದ. ರಂಗಭೂಮಿಯಲ್ಲಿ ಅನುಭವ ಇದೆ ಎಂದು ನಾವು ಸಮುದಾಯದಿಂದ ಕೊಟ್ಟ ಅನುಭವದ ಪತ್ರ, ಅವನನ್ನು ದೂರದರ್ಶನದ ಉದ್ಯೋಗಿಯನ್ನಾಗಿ ಮಾಡಿತು. ಆದರೆ ಅವನು ಕೇವಲ ದೂರದರ್ಶನದ ಉದ್ಯೋಗಿಯಾಗಿ ಉಳಿಯಲಿಲ್ಲ. ರಂಗಭೂಮಿಯಲ್ಲಿ ಯಾವುದೇ ಪ್ರಮುಖ ಕ್ರಿಯಾಶೀಲ. ಕಾರ್ಯಕ್ರಮಗಳು ನಡೆದರೂ ಅಲ್ಲಿ ಉಮೇಶ ಒಂದಲ್ಲ ಒಂದು ವಿಭಾಗದಲ್ಲಿ ಗುರುತಿಸಿಕೊಂಡು ಇರುತಿದ್ದ….
ಅಪಾರ ಜನರನ್ನು ಸಂಪಾದಿಸಿದ್ದ ಉಮೇಶನಿಗೆ, ಯಾವ ಕೆಲಸವೂ, ಸಂಪರ್ಕವೂ ಅಸಾಧ್ಯವಾದುದಲ್ಲ…. ತನ್ನ ಶಕ್ತಿ ಮೀರಿ ಇತರರಿಗೆ ರಂಗ ಮತ್ತು ಕ್ರಿಯಾಶೀಲ ಸಹಾಯ ಮಾಡಿದ ಉಮೇಶ ಇಂದು ಇಲ್ಲ ಎನ್ನುವುದು ನೋವಿನ ವಿಷಯವೇ. ಆದರೆ, ಅವನು ಬಳಲುತಿದ್ದ ರೀತಿಗೆ, ಸಮಾಧಾನದ ನಿಟ್ಟುಸಿರು ಬಿಡಬಹುದು.
ಸಾಕು ಕಣೋ ಉಮೇಶ…..
ನಿನ್ನ ಶಕ್ತಿ ಮೀರಿ ಕೆಲಸ ಮಾಡಿದ್ದೀಯ…
ಯಾರಿಗೂ ಕೇಡನ್ನೂ ಬಯಸಿಲ್ಲ…
ಇದು ನೀನು ನಿಜವಾಗಿಯೂ ವಿಶ್ರಮಿಸುವ ಗಳಿಗೆ..
ವಿಶ್ರಮಿಸು ಗೆಳೆಯಾ..
ನಿನ್ನ ನೋಡಲು ನಾನು ಬರಲಾರೆ, ಕ್ಷಮೆ ಇರಲಿ..
ಪ್ರೀತಿ, ಗೌರವಗಳಿಂದ
ಗುಂಡಣ್ಣ ಚಿಕ್ಕಮಗಳೂರು