ಮೈಸೂರು : ಪರಿವರ್ತನ ರಂಗ ಸಮಾಜ ಇದರ ವತಿಯಿಂದ ಆಯೋಜಿಸಿದ್ದ ‘ರಂಗವಿಮರ್ಶೆ ಸದ್ಯದ ಸ್ಥಿತಿ ಸಾಧ್ಯತೆ’ ಎಂಬ ವಿಷಯದ ಬಗ್ಗೆ ಸಂವಾದ ಕಾರ್ಯಕ್ರಮವು ಮೈಸೂರಿನ ಕೃಷ್ಣಮೂರ್ತಿಪುರಂನ ನಮನ ಕಲಾವೇದಿಕೆಯಲ್ಲಿ ದಿನಾಂಕ 08 ನವೆಂಬರ್ 2025ರಂದು ನಡೆಯಿತು.
ಈ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ವಿಮರ್ಶಕ ಶಶಿಕಾಂತ ಯಡಹಳ್ಳಿ “ವಿಮರ್ಶೆ ಮತ್ತು ಚರ್ಚೆ ಇಲ್ಲದೆ ನಾಟಕಗಳು ಜೀವಂತವಾಗಿರುವುದಿಲ್ಲ. ನಾಟಕ ಪ್ರಯೋಗದ ಪರಿಪೂರ್ಣತೆ ಅರಿಯಲು ವಿಮರ್ಶೆ ಅತ್ಯಗತ್ಯವಾಗಿದೆ. ಆದರೆ ವಿಮರ್ಶಕರ ಸ್ಥಿತಿ ಶೋಚನೀಯವಾಗಿದೆ. ನಾಟಕ ವಿಮರ್ಶಕರಿಗೆ ಇಂದಿನ ದಿನಗಳಲ್ಲಿ ಯಾವುದೇ ಮೌಲ್ಯವಿಲ್ಲ. ವಿಮರ್ಶಕರನ್ನು ಮುಟ್ಟಿಸಿಕೊಳ್ಳದವರ ರೀತಿಯಲ್ಲಿ ಕಾಣುತ್ತಿದ್ದಾರೆ. ಇದರಿಂದ ವಿಮರ್ಶಕರಿಗೆ ಪೀಕಲಾಟ ಆಗುತ್ತಿದೆ. ನಾಟಕಗಳಲ್ಲಿ ಟಿಆರ್‌ಪಿ ಸಿಗುವುದಿಲ್ಲ ಎಂಬ ಕಾರಣಕ್ಕೆ ಮಾಧ್ಯಮಗಳು ಕೂಡ ಮುಖ ತಿರುಗಿಸಿವೆ. ರಂಗಭೂಮಿ ಹರಿಯುವ ನದಿ ಇದ್ದಾಗೆ. ಎಷ್ಟೇ ಕಟ್ಟೆ ಕಟ್ಟಿದರು ಹರಿಯುವ ದಿಕ್ಕನ್ನು ಬದಲಿಸಿಕೊಂಡು ಮುಂದುವರಿಯುತ್ತವೆ. ಇದೇ ರೀತಿ ವಿಮರ್ಶೆ ಕೂಡ ಸಾಗಬೇಕಿದೆ” ಎಂದು ಹೇಳಿದರು.
ಕುಸುಮ ಆಯರಹಳ್ಳಿ ಮಾತನಾಡಿ, “ವಿಮರ್ಶೆಯೆಂಬುದು ಹೊಗಳು ಭಟ್ಟರ ಆಶ್ರಯತಾಣವಾಗಿದೆ. ಪೂರ್ವಾಗ್ರಹ ಪೀಡಿತವಾಗಿ ನಾಟಕ ಸಂಯೋಜನೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಇಂತಹ ನಾಟಕಗಳನ್ನು ಪಕ್ಷಪಾತವಿಲ್ಲದೇ ಹೇಗೆ ಬರೆಯಬೇಕು ಎಂಬುದು ದೊಡ್ಡ ಪ್ರಶ್ನೆಯಾಗಿದೆ. ತಮ್ಮ ಸಿದ್ಧಾಂತ ವಿಷಯಗಳನ್ನು ಕಲೆಯ ಮೂಲಕ ಧಾಟಿಸುವುದಕ್ಕೆ ವಿಮರ್ಶೆಯನ್ನು ಒಂದು ಸಾಧನವಾಗಿ ಬಳಸಿಕೊಳ್ಳುತ್ತಿರುವುದು ಸರಿಯಲ್ಲ” ಎಂದು ಕಿಡಿಕಾರಿದರು.
ಈ ವೇಳೆ ರಂಗಭೂಮಿಯನ್ನು ಪಕ್ಷಪಾತೀಯವಾಗಿ ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ವೇದಿಕೆ, ಪಕ್ಷಪಾತ ಬರವಣಿಗೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ನಾಟಕಗಳು ಜನಪರವಾಗಿ, ಮಹಿಳೆಯರು, ದಮನಿತರ, ಶೋಷಿತರ ಪರವಿರುವ, ಇತಿಹಾಸವನ್ನು ಸ್ಪಷ್ಟವಾಗಿ ಹೇಳುವ ನಾಟಕಗಳನ್ನು ಮಾತ್ರ ವಿಮರ್ಶೆ ಮಾಡಿ, ತಪ್ಪು-ತಪ್ಪು ಮಾಹಿತಿಗಳನ್ನು ಹಂಚುವುದು, ಇತಿಹಾಸ ತಿರುಚುವುದು, ಸಮಾಜ ವಿರೋಧಿ ನಾಟಕಗಳು ಬಂದಲ್ಲಿ ಕಟುವಾದ ಭಾಷೆಯಲ್ಲಿಯೇ ವಿರೋಧ ಮಾಡುವ ಜೊತೆಗೆ, ಇದು ಸರಿ, ಇದು ತಪ್ಪು ಎಂದು ನೇರವಾಗಿ ವಿಮರ್ಶಿಸುವಂತೆ ನಿರ್ಧರಿಸಲಾಯಿತು.
ಜೊತೆಗೆ ನಟರು, ನಾಟಕಕಾರರು, ಪ್ರದರ್ಶಕರು, ಪತ್ರಿಕೆಯವರು ಸೇರಿ, ಪತ್ರಿಕೆಗಳಲ್ಲಿ ವಿಮರ್ಶಕರಿಗೆ ಸಿಗುವ ಸ್ಥಳಾವಕಾಶ, ಸಾಮಾಜಿಕ ಮಾಧ್ಯಮಗಳ ಬಳಕೆ, ವಸ್ತು ನಿಷ್ಠವಾಗಿ ರಂಗ ಪ್ರಯೋಗ ಮಾಡುವುದು ಸೇರಿದಂತೆ ಪರಿವರ್ತನ ರಂಗ ವೇದಿಕೆಯಿಂದ ಸುದೀರ್ಘ ಲೇಖನ ಬರೆಯುವವರಿಗೆ ಉತ್ತೇಜನ ಮಾಡುವ ನಿಟ್ಟಿನಲ್ಲಿ ಲೇಖನಗಳನ್ನು ತಮ್ಮ ವೆಬ್‌ಸೈಟ್‌ನಲ್ಲಿ ದಾಖಲಿಸಲು ಹಾಗೂ ಅವುಗಳಿಗೆ ಒಂದಷ್ಟು ಬಹುಮಾನ ಕೊಡುವ ವ್ಯವಸ್ಥೆ ಮಾಡುವುದಾಗಿ ತೀರ್ಮಾನಿಸಿದರು. ಪ್ರೊ. ಎಸ್.ಆರ್. ರಮೇಶ್, ಪ್ರಸನ್ನಕುಮಾರ್ ಕೆರಗೋಡು, ಎಸ್. ಧನಂಜಯ, ಯತೀಶ್ ಕೊಳ್ಳೇಗಾಲ, ಸುಗುಣ ನಿರಂತರ, ರವಿಕುಮಾರ್ (ಕಲಾಬ್ರಹ್ಮ) ಉಪಸ್ಥಿತರಿದ್ದರು.
