ಪುತ್ತೂರು : ಪ್ರಧಾನ ಮಂತ್ರಿ ವಿಶೇಷವಾಗಿ ಶಿಕ್ಷಣ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಲು ದತ್ತು ತೆಗದುಕೊಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವೀರಮಂಗಲ ಇಲ್ಲಿ ‘ಶಿಕ್ಷಣದಲ್ಲಿ ರಂಗಭೂಮಿ’ ಕಾರ್ಯಗಾರ ಕಾರ್ಯಕ್ರಮವು ದಿನಾಂಕ 16-06-2024 ರಂದು ನಡೆಯಿತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಕಾರ್ಯಾಗಾರವನ್ನು ಉದ್ಘಾಟಿಸಿದ ರಂಗ ಕಲಾವಿದೆ ವಸಂತ ಲಕ್ಷ್ಮಿ ಪುತ್ತೂರು ಮಾತನಾಡಿ “ನಾವು ಭಾವನೆಗಳೊಂದಿಗೆ ಬದುಕು ಸಾಗಿಸುತ್ತೇವೆ. ರಂಗಭೂಮಿ ಭಾವನೆಗಳ ಭಾಷ್ಯ. ಮಕ್ಕಳ ಕನಸುಗಳಿಗೆ ವೇದಿಕೆ ಕಲ್ಪಿಸಿಕೊಡುವ ಭಾವನೆಗಳು ಶಾಲೆಗಳಲ್ಲಿ ಮೂಡಿಬಂದಾಗ ಮಕ್ಕಳಲ್ಲಿ ಹುದುಗಿರುವ ಸುಪ್ತ ಪ್ರತಿಭೆಗಳಿಗೆ ಬೆಳಕು ಚೆಲ್ಲಿದಂತಾಗುತ್ತದೆ.” ಎಂದು ನುಡಿದರು.
ಶಾಲಾ ಶಿಕ್ಷಣದಲ್ಲಿ ರಂಗಭೂಮಿ ಎಂಬ ಶೀರ್ಷಿಕೆಯಡಿಯಲ್ಲಿ ಪ್ರತಿ ಶನಿವಾರ ಮಧ್ಯಾಹ್ನದ ನಂತರದ ಅವಧಿಯಲ್ಲಿ ನಡೆಯುವ ರಂಗ ತರಬೇತಿ ಕಾರ್ಯಕ್ರಮವನ್ನು ಪಿಎಂಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವೀರಮಂಗಲದಲ್ಲಿ ಶಾಲಾ ಮುಖ್ಯಗುರು ತಾರಾನಾಥ ಸವಣೂರು ಇವರ ಪರಿಕಲ್ಪನೆಯಲ್ಲಿ ಆಯೋಜಿಸಲಾಗಿದ್ದು, ಈಗಾಗಲೇ ಯಕ್ಷಗಾನ ಹಾಗೂ ಭರತನಾಟ್ಯ ತರಗತಿಗಳು ನಡೆಯುತ್ತಿದೆ. ಈ ವರ್ಷ ವಿಶೇಷವಾಗಿ ನಾಟಕ ತರಬೇತಿ ಕಾರ್ಯಾಗಾರವನ್ನು ಮಕ್ಕಳಿಗೆ ಉಚಿತವಾಗಿ ಆಯೋಜಿಸಲಾಗಿದೆ. ಚಾರುವಸಂತ ನಾಟಕ ಪ್ರಧಾನ ಪಾತ್ರಧಾರಿಯಾಗಿ ನಟಿಸಿದ ವಸಂತಲಕ್ಷ್ಮಿ ಇವರು ರಂಗಕರ್ಮಿ ಜೀವನ್ ರಾಂ ಸುಳ್ಯ ಇವರ ಗರಡಿಯಲ್ಲಿ ಪಳಗಿದವರು. ಇವರು ಉಚಿತವಾಗಿ ರಂಗ ಚಟುವಟಿಕೆಗಳನ್ನು ಧಾರೆಯೆರಲಿದ್ದಾರೆ.
ಶಾಲಾ ಕಲಾ ಸಂಘದ ನಿರ್ದೇಶಕಿ ಶ್ರೀಲತಾ ಕಾರ್ಯಕ್ರಮ ಸಂಯೋಜಿಸಿದರು. ಹಿರಿಯ ಶಿಕ್ಷಕಿ ಹರಿಣಾಕ್ಷಿ ಗೌರವಾರ್ಪಣೆ ಗೈದು, ಶಾಲಾ ಮುಖ್ಯಗುರು ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿಯರಾದ ಶೋಭಾ, ಕವಿತಾ, ಹೇಮಾವತಿ, ಶಿಲ್ಪಾರಾಣಿ, ಸೌಮ್ಯ, ಸವಿತಾ, ಸಂಚನಾ ಹಾಗೂ ಚಂದ್ರಾವತಿ ಸಹಕರಿಸಿದರು. ಎಸ್. ಡಿ. ಎಂ. ಸಿ. ಸದಸ್ಯರಾದ ಭವ್ಯ ಮತ್ತು ಚಿತ್ರಾ ಉಪಸ್ಥಿತರಿದ್ದರು.