ಬೆಂಗಳೂರು : ರಂಗ ವಿಸ್ಮಯ ನಾಟಕ ತಂಡವು ಪ್ರತಿ ಭಾನುವಾರ ಬೆಳಿಗ್ಗೆ 10.30ರಿಂದ ಸಂಜೆ 5ರವರೆಗೆ 18ನೇ ಕ್ರಾಸ್, ಬಸ್ ನಿಲ್ದಾಣದ ಹಿಂಭಾಗ ಮಲ್ಲೇಶ್ವರದ ವಿಸ್ಮಯ ಅಂಗಳದಲ್ಲಿ, ವಿದ್ಯಾರ್ಥಿಗಳಿಗೆ ರಂಗ ಶಿಕ್ಷಣ ಇಡೀ ದಿನ ‘ಅಭಿನಯ ತರಬೇತಿ’ ನೀಡುತ್ತಿದೆ. ಈ ಶಿಕ್ಷಣ ಮುಜುಗರ, ನಾಚಿಕೆ, ಸಂಕೋಚ ಹಾಗೂ ಅಂಜಿಕೆಗಳನ್ನು ಹೋಗಲಾಡಿಸಿ ವಾಕ್ಚಾತುರ್ಯ ಬೆಳೆಸುವುದಲ್ಲದೆ, ಕನ್ನಡ ಭಾಷಾಜ್ಞಾನ, ನೆನಪಿನ ಶಕ್ತಿ ಮತ್ತು ಆಲೋಚನಾ ಮಟ್ಟವನ್ನು ಹೆಚ್ಚಿಸಲಿದೆ. ಇದರೊಂದಿಗೆ, ಅಭಿನಯದ ಎಲ್ಲಾ ಆಯಾಮಗಳಲ್ಲಿ ತರಬೇತಿ ನೀಡಲಾಗುವುದು.
ಯಾವುದೇ ವಯಸ್ಸಿನ ಆಸಕ್ತರು ಇದರಲ್ಲಿ ಭಾಗವಹಿಸಬಹುದಾಗಿದೆ. ಇನ್ನಿತರ ವಿವರಗಳಿಗೆ ನಿರ್ದೇಶಕರಾದ ಅ.ನಾ.ರಾವ್ ಜಾದವ್ ಅವರನ್ನು ಸಂಪರ್ಕಿಸಲು ಕೋರಲಾಗಿದೆ. ಕರೆಮಾಡಿ ಬನ್ನಿ. ಹಾಗೇ ಇನ್ನಿತರ ಆಸಕ್ತರಿಗೂ ತಿಳಿಸಿ – ಸಂಪರ್ಕ: ಮೊ.9880841290 / 8951656099.
ರಂಗ ವಿಸ್ಮಯ :
ಹೊಸ ಪ್ರತಿಭೆಗಳನ್ನು ರಂಗಕ್ಕೆ ತರುವ ಸಲುವಾಗಿಯೇ ರಂಗವಿಸ್ಮಯ ಪ್ರತಿ ಭಾನುವಾರ ವಿದ್ಯಾರ್ಥಿಗಳಿಗೆ ಅಭಿನಯ ತರಬೇತಿ ನೀಡುತ್ತಿದೆ. ಭಾಷೆ ಮತ್ತು ಅದರ ಬಳಕೆಗೆ ಹೆಚ್ಚು ಪ್ರಾಶಸ್ತ್ಯ ನೀಡಿ, ಅಭಿನಯದ ವಿವಿಧ ಮಜಲುಗಳನ್ನು ಬೋಧಿಸಲಾಗುತ್ತಿದೆ. ಇದರೊಂದಿಗೆ ವರದಿ ವಾಚನ-ವಾರ್ತಾವಾಚನ ಕಾರ್ಯಕ್ರಮ ನಿರೂಪಣೆ-ಕಂಠದಾನ ಇನ್ನಿತರೆ ಕಲೆಗಳಲ್ಲೂ ತರಬೇತಿಗೊಳಿಸಲಾಗುವುದು. ಸಂಪೂರ್ಣವಾಗಿ ಪ್ರಾಯೋಗಿಕ ರೀತಿಯಲ್ಲೇ ನಡೆಸಲಾಗುತ್ತಿರುವ, ಈ ತರಬೇತಿಯಿಂದ ಈಗಾಗಲೇ ಬಹಳಷ್ಟು ಪ್ರತಿಭೆಗಳು ರಂಗಕ್ಕೆ ಪಾದಾರ್ಪಣೆ ಮಾಡಿವೆ. ರಾಜ್ಯದ ಮೂಲೆಮೂಲೆಗಳಿಂದ ಕಾರ್ಯ ನಿಮಿತ್ತ ನಗರಕ್ಕೆ ಬಂದು ನೆಲೆಸಿದವರು ಕಲಿಕೆಯಲ್ಲಿ ಹೆಚ್ಚು ಆಸ್ಥೆವಹಿಸಿ ತಂಡದಲ್ಲಿ ತರಬೇತಿ ಪಡೆಯುತ್ತಲೇ ಇದ್ದಾರೆ. ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಿರುವವರಿಂದ ಹಿಡಿದು ಉನ್ನತ ಹುದ್ದೆಗಳಲ್ಲಿ ಇರುವವರೂ ಸಹ ಇಲ್ಲಿ ಕಲಿಯುತ್ತಿರುವುದು ವಿಶೇಷ.
ವಿವಿಧ ರಂಗ ನಾಟಕದ ವಿಡಿಯೋ ಪ್ರದರ್ಶನ ಮತ್ತು ಪ್ರಯೋಗಾತ್ಮಕ ಚಲನಚಿತ್ರಗಳ ಪ್ರದರ್ಶನಗಳನ್ನು ಏರ್ಪಡಿಸುವುದರ ಮೂಲಕ, ರಂಗಾಸಕ್ತರಲ್ಲಿ ಉತ್ತಮ ಕಲಾಭಿರುಚಿಯನ್ನು ಬೆಳೆಸುವಲ್ಲಿ ರಂಗ ವಿಸ್ಮಯದ ಪ್ರಯತ್ನಗಳು ನಡೆದಿವೆ.
ಇಲ್ಲಿ ಅಭಿನಯ ತರಬೇತಿ ಪಡೆದ ಪ್ರತಿಭೆಗಳಿಂದಲೇ, ರಂಗ ವಿಸ್ಮಯ ನಾಟಕ ಪ್ರದರ್ಶನಗಳನ್ನು ನೀಡಲಾಗುತ್ತದೆ. ಈ ನಿಟ್ಟಿನಲ್ಲಿ ಮೊದಲಿಗೆ ಪೂರ್ಣಚಂದ್ರ ತೇಜಸ್ವಿಯವರ ‘ಪರಿಸರದ ಕಥೆ’ ಕೃತಿಯನ್ನು ಆಯ್ಕೆ ಮಾಡಿಕೊಂಡು ರಂಗಕ್ಕೆ ಅಳವಡಿಸಲಾಗಿದೆ. ಅಲ್ಲಿನ ಕೆಲ ಕಥೆಗಳನ್ನು ಮಾತ್ರವೇ ಆರಿಸಿಕೊಂಡು ‘ತೇಜಸ್ವಿ ಪರಿಸರ ಕಥಾ ಪ್ರಸಂಗ’ ಹೆಸರಲ್ಲಿ ಈಗಾಗಲೇ ಹದಿನೈದಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದೆ. ಪ್ರೇಕ್ಷಕರಿಂದಲೂ ಮತ್ತು ವಿಮರ್ಶಕರಿಂದಲೂ ಪ್ರಶಂಸೆಗೆ ಪಾತ್ರವಾದ ಈ ನಾಟಕ, ಆಕಾಶವಾಣಿ ಬೆಂಗಳೂರು ಕೇಂದ್ರದಿಂದ ಬಾನುಲಿಯಲ್ಲೂ ಬಿತ್ತರಗೊಂಡಿರುತ್ತದೆ. ಇದೀಗ ಇದರ ಮರು ಪ್ರದರ್ಶನಗಳೊಂದಿಗೆ, ಹೊಸ ನಾಟಕ ಪ್ರದರ್ಶನದ ಕುರಿತು ಸಿದ್ಧತೆಗಳು ನಡೆದಿವೆ. ಹೊಸಹೊಸ ಪ್ರಯೋಗಗಳನ್ನು ಮಾಡುವುದರ ಮೂಲಕ ಮತ್ತು ತರಬೇತಿ ನೀಡುವುದರ ಮೂಲಕ ಯುವಕರಲ್ಲಿ ರಂಗಾಸಕ್ತಿ ಬೆಳೆಸುವುದೇ ಅಲ್ಲದೇ, ಅವರಲ್ಲಿ ಕಲೆ-ಸಂಸ್ಕೃತಿ-ಸಾಮಾಜಿಕ ಪ್ರಜ್ಞೆ-ವೈಚಾರಿಕತೆ ಕುರಿತು ಜಾಗೃತಿ ಮೂಡಿಸುವತ್ತ, ರಂಗ ವಿಸ್ಮಯ ಹೊಸ ಹೆಜ್ಜೆಗಳನ್ನು ಇಡುತ್ತಿದೆ.
ನಿರ್ದೇಶಕರ ಪರಿಚಯ :
ಅ.ನಾ.ರಾವ್ ಜಾದವ್, ನಟ-ನಾಟಕಕಾರ-ನಿರ್ದೇಶಕ
ಕಳೆದ ಮೂರು ದಶಕಗಳಿಂದಲೂ, ತಮ್ಮನ್ನು ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಇವರು ನಟನೆ, ನಿರ್ದೇಶನ ಮತ್ತು ನಾಟಕ ರಚನೆಯಲ್ಲಿ ಪರಿಣತಿ ಪಡೆದವರು. ಪೂರ್ಣಚಂದ್ರ ತೇಜಸ್ವಿಯವರ ‘ಕಿರಗೂರಿನ ಗಯ್ಯಾಳಿಗಳು’, ‘ಕರ್ವಾಲೊ’ ಮತ್ತು ‘ಪರಿಸರದ ಕಥೆ’ ಮೂಲ ಕೃತಿಗಳನ್ನು ನಾಟಕಕ್ಕೆ ರೂಪಾಂತರಿಸಿ ನಿರ್ದೇಶಿಸಿದ್ದಾರೆ. ಇವರ ಈ ಎಲ್ಲಾ ನಾಟಕ ಕೃತಿಗಳು, ನವ ಕರ್ನಾಟಕ ಪ್ರಕಾಶನದ ಮೂಲಕ ಪ್ರಕಟಣೆ ಕಂಡಿವೆ. ಭರತೇಶರ ‘ಎಲ್ಲಾರು ಮಾಡುವುದು’, ಜಯಶ್ರೀ ಕಂಬಾರರ ‘ಮಾಧವಿ’ ಮತ್ತು ಇವರದೇ ರಚನೆಯ ‘ಬೆಕ್ಕಿಗೆ ಘಂಟೆ ಕಟ್ಟಿದವರು ಯಾರು’ ಇವು ಇವರ ಇತ್ತೀಚಿನ ನಿರ್ದೇಶನದ ಕೆಲ ಪ್ರಮುಖ ನಾಟಕಗಳು.
ಮೂಲತಃ ಬೆಂಗಳೂರು ಆಕಾಶವಾಣಿ ನಾಟಕ ವಿಭಾಗದ ಆಡಿಷನ್ ಕಲಾವಿದರಾಗಿರುವ ಇವರು, ಅನೇಕ ರೇಡಿಯೊ ನಾಟಕಗಳಲ್ಲೂ ಅಭಿನಯಿಸಿದ್ದಾರೆ. ಅಲ್ಲದೇ, ತೇಜಸ್ವಿಯವರ ಹಲವಾರು ಕಥೆಗಳನ್ನು ಬಾನುಲಿಗೂ ಅಳವಡಿಸಿದ್ದಾರೆ. ಅವು ಬೆಂಗಳೂರು ನಿಲಯದಿಂದ ಬಿತ್ತರಗೊಂಡಿರುತ್ತವೆ. ‘ಸುಣ್ಣ ಹಚ್ಚಿದ ಸಮಾಧಿ’, ‘ರೊಟ್ಟಿ’, ‘ಅಬಚೂರಿನ ಪೋಸ್ಟಾಫೀಸು’, ‘ಯಯಾತಿ’, ‘ದಿಂಡಿ’, ‘ಹೆಜ್ಜೆಗಳು’, ‘ಕರ್ವಾಲೊ’, ‘ತೇಜಸ್ವಿ ಪರಿಸರ ಕಥಾ ಪ್ರಸಂಗ’ ಇವು ಇವರು ನಟಿಸಿದ ಕೆಲ ಮುಖ್ಯ ನಾಟಕಗಳು. ಕಂಠದಾನ ಕಲಾವಿದರೂ ಆಗಿರುವ ಇವರು, ಇತ್ತೀಚಿನ ಕೆಲ ವರ್ಷಗಳಿಂದ ಕಿರುತೆರೆ ನಟನೆಯಲ್ಲೂ ಸಕ್ರಿಯರಾಗಿದ್ದಾರೆ.
ಇದರಿಂದಾಚಿಗೂ, ಹಲವಾರು ಹವ್ಯಾಸಗಳನ್ನು ರೂಢಿಸಿಕೊಂಡಿರುವ ಜಾದವ್, ಚಾರಣ (ಟ್ರೆಕ್ಕಿಂಗ್), ಛಾಯಾಗ್ರಹಣ ಮತ್ತು ಬರವಣಿಗೆಯಲ್ಲೂ ಹೆಚ್ಚಾಗಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಪರಿಸರ ಕುರಿತಾಗಿ ಆಪಾರ ಪ್ರೀತಿ ಬೆಳೆಸಿಕೊಂಡಿರುವ ಇವರು, ನಾಡಿನ ಕಾಡು-ಮೇಡುಗಳನ್ನಷ್ಟೇ ಅಲ್ಲದೇ ಹಿಮ ಪರ್ವತದ ಕಣಿವೆಗಳಲ್ಲೂ ಅಲೆದು ಬಂದಿದ್ದಾರೆ. ಛಾಯಾಗ್ರಾಹಕರಾಗಿ, ತಮ್ಮ ಅನೇಕ ಛಾಯಾಚಿತ್ರಗಳಿಗೆ ರಾಷ್ಟ್ರ ಮಟ್ಟದ ಪುರಸ್ಕಾರಗಳನ್ನು ಪಡೆದುಕೊಂಡಿದ್ದಾರೆ. ಪ್ರಕೃತಿ-ಪರಂಪರೆ ಕರಿತಾದ ಇವರ ಅಸಂಖ್ಯ ಚಿತ್ರ-ಲೇಖನಗಳು, ನಾಡಿನ ಪ್ರಸಿದ್ಧ ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿರುತ್ತವೆ. ಇವರ ಚಾರಣ ಕಥನ ಕೃತಿ ‘ಹಿಮಗಿರಿಯ ಕಣಿವೆಗಳಲ್ಲಿ’ ಸಹ ಪ್ರಕಟವಾಗಿರುತ್ತದೆ.
ನಮ್ಮ ದೇಶದ ಎಲ್ಲಾ ಸಾಮಾನ್ಯ ಗಿಡ-ಮರಗಳು ಮತ್ತು ಹಕ್ಕಿಗಳನ್ನು ಕೂಡ ಗುರುತಿಸಬಲ್ಲವರಾಗಿದ್ದಾರೆ. ಇದೀಗ ರಂಗ ವಿಸ್ಮಯ ತಂಡದ ಮೂಲಕ ವಿದ್ಯಾರ್ಥಿಗಳಲ್ಲಿ ಕನ್ನಡ ಭಾಷಾಜ್ಞಾನ ಬೆಳೆಸುವುದರೊಂದಿಗೆ ಆಭಿನಯದ ವಿವಿಧ ಆಯಾಮಗಳನ್ನು ಬೋಧಿಸುತ್ತಿದ್ದಾರೆ.
1 Comment
ರಂಗ ಚಟುವಟಿಕೆಗೆ, ರಂಗ ವಿಸ್ಮಯದ ಅಭಿನಯ ತರಬೇತಿ ಮತ್ತು ತಂಡದ ಇನ್ನಿತರ ವಿವರಗಳನ್ನು ಪ್ರಕಟಿಸಿ ಉಪಕರಿಸಿದ್ದಿರಿ. ಧನ್ಯವಾದಗಳು.