ಕಿನ್ನಿಗೋಳಿ : ಕಿನ್ನಿಗೋಳಿ ರಾಜರತ್ನಪುರದ ಯಕ್ಷಕೌಸ್ತುಭ ಯಕ್ಷಗಾನ ತರಬೇತಿ ಸಂಸ್ಥೆಯ ಚತುರ್ಥ ವರ್ಷದ ವಾರ್ಷಿಕೋತ್ಸವ ಸಂದರ್ಭ ರಾಜರತ್ನಪುರದ ಸರಾಫ್ ಅಣ್ಣಯ್ಯಾಚಾರ್ಯ ಸಭಾಭವನದಲ್ಲಿ ಬಣ್ಣದ ಮನೆ ಪರಿಕಲ್ಪನೆಯೊಂದಿಗೆ ಸಂಯೋಜಿಸಿದ ಉಚಿತ ತೆಂಕುತಿಟ್ಟು ಯಕ್ಷಗಾನ ಬಣ್ಣಗಾರಿಕೆ ತರಬೇತಿ ಶಿಬಿರವನ್ನು ಯುಗ ಪುರುಷ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ ಇವರು ದಿನಾಂಕ 15-10-2023ರಂದು ಉದ್ಘಾಟಿಸಿದರು. ಅವರು ಮಾತನಾಡುತ್ತಾ “ಯಕ್ಷಗಾನದ ಮೂಲಚೌಕಟ್ಟಿಗೆ ಧಕ್ಕೆ ಬಾರದಂತೆ ಶಿಷ್ಟ ಪರಂಪರೆಯ ಕಲೆಯಾದ ಯಕ್ಷಗಾನವನ್ನು ಪೋಷಿಸುವಲ್ಲಿ ಮಕ್ಕಳನ್ನು ತರಬೇತಿಗೊಳಿಸುವ ಇಂತಹ ಕಮ್ಮಟಗಳು ಬಹಳ ಉಪಯುಕ್ತ” ಎಂದು ಹೇಳಿದರು.
ಯಕ್ಷಗಾನ ಕಲಾವಿದರು ಹಾಗೂ ಬಣ್ಣಗಾರಿಕೆ ಶಿಬಿರದ ಪ್ರಧಾನ ಸಂಯೋಜಕರಾದ ಶರತ್ ಕೊಡೆತ್ತೂರು ಇವರು “ನಾಲ್ಕು ವರ್ಷದಿಂದ ಯಕ್ಷಕೌಸ್ತುಭ ಸಂಸ್ಥೆಯ ಆಶ್ರಯದಲ್ಲಿ ಯಕ್ಷನಾಟ್ಯ ತರಗತಿ ಯಶಸ್ವಿಯಾಗಿ ನಡೆಯುತ್ತಿದ್ದು, ಬಣ್ಣಗಾರಿಕೆ ತರಗತಿಗಳು ಪ್ರತೀ ಭಾನುವಾರ ಬೆಳಗ್ಗೆ 10ರಿಂದ ಎರಡು ಗಂಟೆಗಳ ಕಾಲ ವೃತ್ತಿಪರ ಪ್ರಸಿದ್ಧ ಕಲಾವಿದರ ಉಪಸ್ಥಿತಿಯಲ್ಲಿ ನಡೆಸಲಾಗುವುದು. ಬಣ್ಣಗಾರಿಕೆಯ ಪೂರ್ಣಪಾಠ ತರಬೇತಿಗೊಳಿಸುವ ಧ್ಯೇಯ ನಮ್ಮದು.” ಎಂದು ಹೇಳಿದರು.
ಕಲಾಪೋಷಕ ಪೃಥ್ವಿರಾಜ ಆಚಾರ್ಯ, ಯಕ್ಷಗಾನ ಕಲಾವಿದ ಗಣೇಶ್ ಚಂದ್ರಮಂಡಲ, ಪ್ರಸಾಧನ ಸಂಸ್ಥೆಯಾದ ಕಿನ್ನಿಗೋಳಿ ಮೋಹಿನಿ ಕಲಾ ಸಂಪದದ ಗಂಗಾಧರ ಡಿ.ಶೆಟ್ಟಿಗಾರ್, ಯಕ್ಷಗಾನ ಕಲಾವಿದರಾದ ಬಾಲಕೃಷ್ಣ ಮಿಜಾರು, ಶಶಿಧರ ಪಂಜ, ಜಯರಾಮ ಶೆಟ್ಟಿ ಬಾಕ್ಯಾರ್‌ಕೋಡಿ, ಸುರೇಶ್ ಕೊಲಕ್ಕಾಡಿ, ಬಾಲಗಣೇಶೋತ್ಸವ ಸಮಿತಿಯ ಸಂದೀಪ್, ಶಿಬಿರ ಸಂಘಟಕ ಶರತ್ ಕೊಡೆತ್ತೂರು ಉಪಸ್ಥಿತರಿದ್ದರು. ಯಕ್ಷಮಿತ್ರರು ಪಂಜಿನಡ್ಕ ಹಾಗೂ ಜಿಲ್ಲೆಯ ಹೆಸರಾಂತ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ‘ಯಕ್ಷ-ನಾಟ್ಯ-ಹಾಸ್ಯ-ವೈಭವ’ ಗಮನ ಸೆಳೆಯಿತು.