ಮೂಡುಬಿದಿರೆ : ಮೂಡುಬಿದಿರೆ ಮಾರೂರು ಸಮೀಪದ ನೂಯಿಯಲ್ಲಿರುವ ಬಲಿಪ ಭವನದಲ್ಲಿ ಪಡ್ರೆ ಚಂದು ಯಕ್ಷಗಾನ ತರಬೇತಿ ಕೇಂದ್ರದ 18ನೇ ವಾರ್ಷಿಕೋತ್ಸವದ ಅಂಗವಾಗಿ ದಿನಾಂಕ : 25-06-2023ರಂದು ಭಾನುವಾರ ಸಂಜೆ ಬಲಿಪತ್ರಯರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಯಕ್ಷರಂಗದ ಮಹಾನ್ ಕಲಾವಿದ ಬಲಿಪ ನಾರಾಯಣ ಭಾಗವತರ ಹೆಸರನ್ನು ಚಿರಸ್ಥಾಯಿಯಾಗಿಸುವ ನಿಟ್ಟಿನಲ್ಲಿ ಪೆರ್ಲದ ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದ ವತಿಯಿಂದ ಪ್ರಶಸ್ತಿ ಸ್ಥಾಪಿಸುವುದಾಗಿ ಕೇಂದ್ರದ ಸ್ಥಾಪಕಾಧ್ಯಕ್ಷ ನಾಟ್ಯಾಚಾರ್ಯ ಸಬ್ಬಣಕೋಡಿ ರಾಮ ಭಟ್ ತಮ್ಮ ನಿರ್ಧಾರ ಪ್ರಕಟಿಸಿದರು. ತಕ್ಷಣ ಮೊದಲ ವರ್ಷದ ಪ್ರಶಸ್ತಿಯನ್ನು ತಾನು ಪ್ರಾಯೋಜಿಸುವುದಾಗಿ ಮುಖ್ಯ ಅತಿಥಿ ಡಾ.ವಿಷ್ಣುಪ್ರಸಾದ್ ಬರಕೆರೆ ತಿಳಿಸಿದರು.
ಬಲಿಪ ಭಾಗವತರ ಆಪ್ತ ಹಾಗೂ ಉದ್ಯಮಿ ಕೆ. ಶ್ರೀಪತಿ ಭಟ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಲಿಪ ನಾರಾಯಣ ಭಾಗವತರಿಗೆ ಘೋಷಿಸಲಾದ ‘ಚೇವಾರು ಕಾಮತ್ ಪ್ರಶಸ್ತಿ’ಯನ್ನು ಮರಣೋತ್ತರವಾಗಿ ಭಾಗವತರ ಪುತ್ರ ಮಾಧವ ಭಟ್ ರಿಗೆ ನೀಡಲಾಯಿತು, ಬಲಿಪರ ಪುತ್ರ ಪ್ರಸಾದ್ ಬಲಿಪ ಭಾಗವತರಿಗೆ ನೀಡಲಾಗುವ ‘ಪಡ್ರೆ ಚಂದು ಪ್ರಶಸ್ತಿ’ಯನ್ನು ಮರಣೋತ್ತರವಾಗಿ ಪ್ರಸಾದ್ ಬಲಿಪರ ಪತ್ನಿ ದುರ್ಗಾದೇವಿಯವರಿಗೆ ಹಾಗೂ ಭಾಗವತ ಬಲಿಪ ಶಿವಶಂಕರ ಭಟ್ ರಿಗೆ ‘ಅಡ್ಕಸ್ಥಳ ಪ್ರಶಸ್ತಿ’ಯನ್ನು ನೀಡಿ ಗೌರವಿಸಲಾಯಿತು. ಈ ಸನ್ಮಾನ ನಗದು, ಸಮ್ಮಾನ ಪತ್ರ ಮತ್ತು ಫಲಪುಷ್ಪಗಳನ್ನೊಳಗೊಂಡಿರುತ್ತದೆ.
ಮದ್ದಳೆಗಾರ ಚಂದ್ರಶೇಖರ ಭಟ್ ಕೊಂಕಣಾಜೆ ಅಭಿನಂದನ ಭಾಷಣ ಮಾಡುತ್ತಾ “ಚೇವಾರು ರಾಮಕೃಷ್ಣ ಕಾಮತ್ ಮತ್ತು ಬಲಿಪ ನಾರಾಯಣ ಭಾಗವತರಲ್ಲಿ ಸರಳತೆ ಎಂಬುದು ಸಮಾನ ಗುಣವಾಗಿದ್ದು ಬಲಿಪರು ಈ ಪ್ರಶಸ್ತಿಗೆ ಅರ್ಹರು” ಎಂದರು. ಕೊರೊನಾ ಕಾಲದಲ್ಲಿ ತಾನು ಬಲಿಪ ಪ್ರಸಾದ್ ಭಾಗವತರೊಂದಿಗೆ ಬಲಿಪ ಗಾನಯಾನ ದಾಖಲಿಸಿ ಯೂಟ್ಯೂಬ್ ಮೂಲಕ ಪ್ರಸಾರ ಮಾಡಿದ್ದು, ಹಳತರಲ್ಲಿ ಏನಿತ್ತು ಎಂಬುದನ್ನು ಯಾವುದೇ ಗಿಮಿಕ್ಸ್ ಇಲ್ಲದೆ ಹೇಗಿದೆಯೋ ಹಾಗೆ ಲೋಕಮುಖಕ್ಕೆ ಗೊತ್ತುಪಡಿಸಿದ ಸಾರ್ಥಕತೆಯನ್ನು ನೆನಪಿಸಿಕೊಂಡರು.
ಸಬ್ಬಣಕೋಡಿ ರಾಮಭಟ್ಟರು ಮಾತನಾಡಿ “ಬಲಿಪ, ಅಗರಿ. ಮಂಡೆಚ್ಚ, ಕುಂಡೆಚ್ಚ ಈ ನಾಲ್ಕು ಮಂದಿ ತೆಂಕುತಿಟ್ಟು ಯಕ್ಷಗಾನದ ಸ್ತಂಭಗಳು; ಅವರ ಕೊಡುಗೆ ಅನನ್ಯ ಎಂದು ಸ್ಮರಿಸಿ, ತನ್ನ ಹಿರಿತನದಲ್ಲಿ ನಡೆಯುತ್ತಿರುವ ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದ ಮೂಲಕ ನಾಲ್ಕೈದು ಸಾವಿರ ಮಂದಿ ಯಕ್ಷಗಾನ ಕಲಿತು ಕಲಾವಿದರಾಗಿ, ಕಲಾಸಹೃದಯಿಗಳಾಗಿ ಸಮಾಜದಲ್ಲಿ ಮಿಂಚುತ್ತಿದ್ದಾರೆಂಬುದೇ ತನಗೆ ಸಂತೃಪ್ತಿಯ ಸಂಗತಿ. ಇದಕ್ಕೆ ಸಹಕರಿಸುತ್ತಿರುವ ಎಲ್ಲ ಮಹನೀಯರೂ ಮದನೀಯರು; ಮುಂದಿನ ನಡೆಗಳಿಗೂ ಸಹೃದಯಿಗಳ ಸಹಕಾರ ಬೇಕು” ಎಂದರು.
ಪೆರ್ಲದ ಜ್ಯೋತಿ ಮೆಡಿಕಲ್ಸ್ ನ ಡಾ. ಎಸ್.ಎನ್. ಭಟ್, ಪಡ್ರೆ ಚಂದು ಸ್ಮಾರಕ ಯಕ್ಷಗಾನ ತರಬೇತಿ ಕೇಂದ್ರ ಗೌರವಾಧ್ಯಕ್ಷ ಎನ್.ಕೆ. ರಾಮಚಂದ್ರ ಭಟ್ ಪನೆಯಾಲ, ಪತ್ರಕರ್ತ, ‘ಕಣಿಪುರ’ ಯಕ್ಷಗಾನ ಮಾಸಪತ್ರಿಕೆಯ ಸಂಪಾದಕ ಎಂ.ನಾ. ಚಂಬಲ್ತಿಮಾರ್, ಪತ್ರಕರ್ತ ಧನಂಜಯ ಮೂಡುಬಿದಿರೆ, ಶಿರ್ತಾಡಿ ಜವಹರಲಾಲ್ ನೆಹರೂ ಹೈಸ್ಕೂಲು ಅಧ್ಯಾಪಕ ಗೋವರ್ಧನ ಎಂ., ಉದ್ಯಮಿ ಅಗರಿ ವಾದಿರಾಜ ಭಟ್ ಭಾಗವಹಿಸಿದ್ದರು.
ಸಬ್ಬಣಕೋಡಿ ರಾಮಭಟ್ಟರ ಶಿಷ್ಯೆ, ಅಧ್ಯಾಪಕ ಗೋವರ್ಧನ ಎಂ. ಅವರ ಪುತ್ರಿ ಅಭಿಜ್ಞಾ ಅವರು ಬಲಿಪ ಶಿವಶಂಕರ ಭಟ್ ಭಾಗವತಿಕೆಯಲ್ಲಿ ಏಕವ್ಯಕ್ತಿ ಯಕ್ಷನಾಟ್ಯ ಪ್ರಸ್ತುತಪಡಿಸಿದರು. ಮೃದಂಗದಲ್ಲಿ ಸತ್ಯಜಿತ್ ರಾವ್ ರಾಯಿ, ಚೆಂಡೆಯಲ್ಲಿ ಕೊಂಕಣಾಜೆ, ಚಕ್ರತಾಳದಲ್ಲಿ ಅಜಯ ಸುಬ್ರಹ್ಮಣ್ಯ ಸಹಕರಿಸಿದರು, ಜ್ಯೋತ್ಸ್ನಾ ಕಾರ್ಯಕ್ರಮ ನಿರೂಪಿಸಿದರು.