ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಹಾಗೂ ಶ್ರೀ ದುರ್ಗಾ ಮಕ್ಕಳ ಮೇಳದ ಸಹಯೋಗದಲ್ಲಿ ದಿನಾಂಕ 12ರಿಂದ 14 ಜನವರಿ 2026ರವರೆಗೆ ಮೂರು ದಿನಗಳ ಕಾಲ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪದವಿ ಪೂರ್ವ ಕಾಲೇಜಿನಲ್ಲಿ ‘ಸಾತ್ವಿಕಾಭಿನಯ ಕಮ್ಮಟ’ ನಡೆಯಲಿದೆ.
ಶತಾವಧಾನಿ ಡಾ. ಆರ್. ಗಣೇಶ್ ಇವರ ನಿರ್ದೇಶನದಲ್ಲಿ ನಡೆಯಲಿರುವ ಈ ಕಮ್ಮಟದಲ್ಲಿ ಡಾ. ಶೋಭಾ ಶಶಿಕುಮಾರ್ ಮತ್ತು ಬಳಗದವರು ಪ್ರಾತ್ಯಕ್ಷಿಕೆ ನಡೆಸಿಕೊಡಲಿದ್ದಾರೆ. ಯಕ್ಷಗಾನದ ವಿದ್ವಾಂಸರು, ಯಕ್ಷಗಾನ ಗುರುಗಳು ಚರ್ಚೆಯಲ್ಲಿ ಭಾಗವಹಿಸಲಿದ್ದಾರೆ. ಬನ್ನಂಜೆ ಸಂಜೀವ ಸುವರ್ಣ, ಡಾ. ಎಂ. ಪ್ರಭಾಕರ ಜೋಶಿ, ಎಂ.ಎಲ್. ಸಾಮಗ, ಸುಣ್ಣಂಬಳ ವಿಶ್ವೇಶ್ವರ ಭಟ್, ಡಾ. ಪಾದೇಕಲ್ಲು ವಿಷ್ಣು ಭಟ್, ಮಂಟಪ ಪ್ರಭಾಕರ ಉಪಾಧ್ಯಾಯ. ಶ್ರೀಮತಿ ಪ್ರತಿಭಾ ಸಾಮಗ, ಲಕ್ಷ್ಮೀನಾರಾಯಣ ಭಟ್ ಕಟೀಲು, ಪ್ರಥ್ವಿರಾಜ್ ಕವತ್ತಾರ್, ವಾಸುದೇವ ರಂಗಾ ಭಟ್, ಅಂಡಾಲ ದೇವೀಪ್ರಸಾದ ಶೆಟ್ಟಿ, ಸರ್ಪಂಗಳ ಈಶ್ವರ ಭಟ್ ಮೊದಲಾದ ವಿದ್ವಾಂಸರು, ಕಲಾರಂಗದ ಯಕ್ಷಶಿಕ್ಷಣದ ಗುರುಗಳು, ಯಕ್ಷಗಾನ ತರಬೇತಿ ಕೇಂದ್ರದ ಗುರುಗಳು, ವಿವಿಧ ಮೇಳಗಳ ಹಿರಿಯ ಕಲಾವಿದರು ಭಾಗವಹಿಸಲಿದ್ದಾರೆ. ದಿವಾಕರ ಹೆಗಡೆ ಯಕ್ಷಗಾನ ವಾಚಿಕದಲ್ಲಿ ಸಾತ್ವಿಕಾಭಿನಯವನ್ನು ನಡೆಸಿ ಕೊಡಲಿದ್ದಾರೆ. ನಾಲ್ಕು ಅವಧಿಯ ಪ್ರಾತ್ಯಕ್ಷಿಕೆಯಲ್ಲಿ ಡಾ. ಶೋಭಾ ಶಶಿಕುಮಾರ್ ಇವರು ತಮ್ಮ ಯೋಜನೆಯ ಪ್ರಕಾರ ಆಂಗಿಕ-ಸಾತ್ತ್ವಿಕಗಳಿಗಿರುವ ಸಂಬಂಧ, ವಿಭಾವ-ಅನುಭಾವಗಳ ಸಂಯೋಜನೆ, ಉದ್ದೀಪನ ವಿಭಾವಗಳ ಮಹತ್ತ್ವ ಸಂಚಾರಿಗಳ ಹದ, ರಸ-ಭಾವಗಳ ಅವಿಷ್ಕಾರ ಮುಂತಾದ ಅಂಶಗಳನ್ನು ಸೋದಾಹರಣವಾಗಿ ನಿರೂಪಿಸುತ್ತಾರೆ. ಚರ್ಚೆಗಳಿಗೆ ಅವಕಾಶವಿದೆ. ಕಮ್ಮಟದಲ್ಲಿ ಭಾಗವಹಿಸಲಿಚ್ಚಿಸುವ ಆಸಕ್ತರು ಪಶುಪತಿ ಶಾಸ್ತ್ರಿ 9945984248 ಇವರನ್ನು ಸಂಪರ್ಕಿಸಬಹುದಾಗಿದೆ. ಸಮಾರೋಪದಲ್ಲಿ ಮೂಡುಬಿದ್ರೆಯ ಡಾ. ಮೋಹನ ಆಳ್ವ ವಾಸುದೇವ ಆಸ್ರಣ್ಣ ಸನತ್ ಕುಮಾರ ಶೆಟ್ಟಿ ಭಾಗವಹಿಸಲಿದ್ದಾರೆ.

