ಪುತ್ತೂರು : ಶ್ರೀ ಶಾರದಾ ಕಲಾ ಕೇಂದ್ರ ಟ್ರಸ್ಟಿನ 30ನೇ ವಾರ್ಷಿಕೋತ್ಸವ ‘ತ್ರಿಂಶತಿ ಸಂಭ್ರಮ’ವು ಪುತ್ತೂರು ಪುರಭವನದಲ್ಲಿ ಸಭೆ, ಗಾಯನ, ನರ್ತನ, ವಾದ್ಯ ವಾದನಗಳ ಪ್ರಸ್ತುತಿಗಳೊಂದಿಗೆ ದಿನಾಂಕ 28-01-2024ರಂದು ವಿಜೃಂಭಣೆಯಿಂದ ನೆರವೇರಿತು. ಹರೀಶ್ ಕಿಣಿಯವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಂಗೀತ ಗುರುಗಳಾದ ವಿದ್ವಾನ್ ಸುದರ್ಶನ್ ಭಟ್ ಅವರ ನಿರ್ದೇಶನದಲ್ಲಿ ಸಂಸ್ಥೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ ನಡೆಯಿತು. ತದನಂತರ ಕೊಳಲು ವಾದನ ಗುರು ಸುರೇಂದ್ರ ಆಚಾರ್ಯ ಅವರ ಶಿಷ್ಯ ವೃಂದದಿಂದ ಕೊಳಲು ವಾದನ ನಡೆಯಿತು. ಸಂಜೆ 6 ಗಂಟೆಗೆ ವಿದುಷಿ ನಯನಾ ವಿ. ರೈ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಅಂತರ್ಜಲ ಸಂಶೋಧಕ ಹಾಗೂ ವಾಹಿನಿ ದರ್ಬೆ ಕಲಾಸಂಘದ ರಾಜ್ಯಾಧ್ಯಕ್ಷ ಮಧುರಕಾನನ ಗಣಪತಿ ಭಟ್ ಪಾಲ್ಗೊಂಡರು.
ನಂತರ ಹಿರಿಯ ವಿದ್ಯಾರ್ಥಿಗಳು, ಗುರು ವಿದ್ವಾನ್ ಸುದರ್ಶನ್ ಎಂ.ಎಲ್. ಭಟ್ ಹಾಗೂ ತಾಯಿ ಮಾಲಿನಿ ಭಟ್ ಅವರಿಗೆ ಗುರುವಂದನೆ ಸಲ್ಲಿಸಿದರು. ಈ ಸಂದರ್ಭ ಸಂಸ್ಥೆಯ ಜೂನಿಯರ್, ಸೀನಿಯರ್, ವಿದ್ವತ್ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ ಅಂಕಪಟ್ಟಿಗಳನ್ನು ವಿತರಿಸಲಾಯಿತು. ಭರತನಾಟ್ಯದಲ್ಲಿ ವಿಶೇಷ ಸಾಧನೆ ಗೈದ ವಿದುಷಿ ಚೈತ್ರಾ ಪ್ರಜ್ವಲ್ ಶೆಟ್ಟಿ ಮಂಗಳೂರು, ಡಿಂಪಲ್ ಎನ್.ಎಸ್. ಅನಂತಾಡಿ, ಅಕ್ಷತಾ ಶ್ರೀವತ್ಸ ಬಾಯಾರು, ಜೀವಿತಾ ಅನಂತಾಡಿ, ಅನುಶ್ರೀ ಸಾಮೆತ್ತಡ್ಕ, ವೈಷ್ಣವಿ ನಾಯಕ್ ನೆಹರುನಗರ, ಪೂರ್ಣಿಮಾ ಬನ್ನೂರು ಇವರುಗಳಿಗೆ ಶಾರದಾ ಕಲಾಕೇಂದ್ರದ ‘ಶಾರದಾ ಕಲಾಶ್ರೀ’ ಬಿರುದು ಪ್ರದಾನ ಮಾಡಲಾಯಿತು.
ಶಾರದಾ ಕಲಾಸಂಸ್ಥೆಯ ಸಹಾಯಕ ನಿರ್ದೇಶಕಿ ದಿವ್ಯಶ್ರೀ ಸುದರ್ಶನ್, ಖಜಾಂಚಿ ಮಾಲಿನಿ ಭಟ್, ಸಹಶಿಕ್ಷಕಿ ವಿದುಷಿ ಸಂಧ್ಯಾ ಗಣೇಶ್ ಪುತ್ತೂರು, ಮೃದಂಗ ಶಿಕ್ಷಕ ವಿದ್ವಾನ್ ಶ್ಯಾಮ ಭಟ್ ಸುಳ್ಯ, ಕೊಳಲು ಶಿಕ್ಷಕ ವಿದ್ವಾನ್ ಸುರೇಂದ್ರ ಆಚಾರ್ಯ, ಪುತ್ತೂರು ಮತ್ತಿತರರಿದ್ದರು. ಗೋಪಾಲಕೃಷ್ಣ ಸಹಕರಿಸಿದರು. ಕಲಾಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕರಾದ ವಿದ್ವಾನ್ ಸುದರ್ಶನ್ ಭಟ್ ಪ್ರಸ್ತಾವಿಸಿ, ಅತಿಥಿಗಳನ್ನು ಸ್ವಾಗತಿಸಿದರು. ವೀಣಾ ಜಗದೀಶ್ ನಿರೂಪಿಸಿ, ಪೂರ್ಣಿಮಾ ವಂದಿಸಿದರು.
ಸಂಜೆ ಸಂಸ್ಥೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪ್ರಸ್ತುತ ಪಡಿಸಿದ ಭರತನಾಟ್ಯ ಹಾಗೂ ಭಾವನರ್ತನಗಳು ಜನರ ಮೆಚ್ಚುಗೆಗೆ ಪಾತ್ರವಾದವು. ನಟುವಾಂಗ ಹಾಡುಗಾರಿಕೆಯಲ್ಲಿ ಸುದರ್ಶನ್ ಭಟ್, ಕೀಬೋರ್ಡ್‌ನಲ್ಲಿ ಬಿ.ಎಸ್. ಕಾರಂತ, ಕೊಳಲು ವಾದನದಲ್ಲಿ ಸುರೇಂದ್ರ ಆಚಾರ್ಯ ಹಾಗೂ ಮೃದಂಗದಲ್ಲಿ ವಿದ್ವಾನ್ ಶ್ಯಾಮ ಭಟ್ ಸಹಕರಿಸಿದರು. ವಿದುಷಿ ಸಂಧ್ಯಾ ಗಣೇಶ್ ನಿರ್ವಹಿಸಿದರು.