ಪುತ್ತೂರು : ಸಂಸ್ಕಾರ ಭಾರತೀ ದ. ಕ. ಜಿಲ್ಲೆ ಪುತ್ತೂರು ವಿಭಾಗ ಇದರ ವತಿಯಿಂದ ಆಯೋಜಿಸಲ್ಪಟ್ಟ ತ್ಯಾಗರಾಜ ಆರಾಧನಾ ಮಹೋತ್ಸವವು ದಿನಾಂಕ 12-3-2024ನೇ ಮಂಗಳವಾರದಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಒಳಾಂಗಣದಲ್ಲಿ ಭಕ್ತಿ, ಭಾವಪೂರ್ಣ ಹಾಗೂ ವಿಜೃಂಭಣೆಯಿಂದ ಜರುಗಿತು.
ಹಿರಿಯ ಸದಸ್ಯರು ಹಾಗೂ ವಿವೇಕಾನಂದ ಮಹಾವಿದ್ಯಾಲಯದ ನಿವೃತ್ತ ಪ್ರೊಫೆಸರ್ ಆಗಿರುವ ಶ್ರೀಮತಿ ವತ್ಸಲಾ ರಾಜ್ಞಿ ಇವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭಹಾರೈಸಿದರು. ಈ ಕಾರ್ಯಕ್ರಮದಲ್ಲಿ, ಪುತ್ತೂರಿನ ವಿವಿಧ ಸಂಗೀತ ಶಾಲಾ ಗುರುಗಳು ಹಾಗೂ ವಿದುಷಿಯರಾದ, ವೀಣಾ ರಾಘವೇಂದ್ರ, ವಿದ್ಯಾ ಈಶ್ವರ ಚಂದ್ರ, ರಮಾ ಪ್ರಭಾಕರ್, ಪ್ರೀತಿಕಲಾ, ಪಾರ್ವತಿ ಹೊಸಮೂಲೆ, ಸ್ವರ್ಣ ಭಟ್, ಗೀತಾ ಸಾರಡ್ಕ ಮುಂತಾದವರು ಭಾಗವಹಿಸಿ, ಪಂಚರತ್ನ ಕೀರ್ತನೆ ಗೋಷ್ಠಿ ಗಾಯನವನ್ನು ನಡೆಸಿಕೊಟ್ಟರು. ವಿದುಷಿ ಮೇಘನಾ ಪಾಣಾಜೆ, ವಿದ್ವಾನ್ ಗೋಪಾಲಕೃಷ್ಣ ವೀರಮಂಗಲ, ಶ್ರೀರಾಗ, ಭಾರತಿ ಶಶಿ ಹಾಗೂ ಇತರ ಕಲಾವಿದರು ಮುಂಚೂಣಿಯಲ್ಲಿದ್ದು ಸಹಕರಿಸಿದರು.
ಹಿಮ್ಮೇಳನವಾದ ಮೃದಂಗದಲ್ಲಿ ಶ್ಯಾಮ ಭಟ್ ಸುಳ್ಯ ಮತ್ತು ಪ್ರಸನ್ನ ಭಟ್ ಬಲ್ನಾಡು, ವೀಣೆಯಲ್ಲಿ ಮಧುಲಿತಾ ಹಾಗೂ ಪಿಟೀಲಿನಲ್ಲಿ ತನ್ಮಯಿ ಉಪ್ಪಂಗಳ ಮತ್ತು ಅನನ್ಯ ಪುಳು ಸಹಕರಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಸಂಸ್ಕಾರ ಭಾರತೀ ಪುತ್ತೂರು ವಿಭಾಗದ ಸಂಯೋಜಕರಾದ ವಿದ್ವಾನ್ ದೀಪಕ್ ಕುಮಾರ್ ಇವರು ಪುರಂದರದಾಸರು ಮತ್ತು ತ್ಯಾಗರಾಜರ ಚಿತ್ರಗಳಿಗೆ ಆರತಿ ಬೆಳಗುವುದರ ಮೂಲಕ ಮಂಗಳಾರ್ಪಣೆಗೈದರು.
ಸಂಸ್ಕಾರ ಭಾರತೀ ದ.ಕ.ಜಿಲ್ಲಾ ಉಪಾಧ್ಯಕ್ಷೆ ಶ್ರೀಮತಿ ರೂಪಲೇಖಾ, ಸದಸ್ಯರಾದ ವಿದುಷಿ ಸುಮಂಗಲಾ, ವಿದ್ವಾನ್ ಗಿರೀಶ್ ಕುಮಾರ್, ಹಿರಿಯ ಸದಸ್ಯರಾದ ಶಶಿಪ್ರಭಾ ಮುಂತಾದವರು ಉಪಸ್ಥಿತರಿದ್ದರು. ಸದಸ್ಯರಾದ ಶಂಕರಿ ಶರ್ಮ ಸ್ವಾಗತಿಸಿ, ಪದ್ಮ ಕೆ. ಆರ್ ಆಚಾರ್ಯ ವಂದಿಸಿದರು. ಲಘು ಉಪಹಾರದೊಂದಿಗೆ ಕಾರ್ಯಕ್ರಮವು ಸಂಪನ್ನಗೊಂಡಿತು.