ಬೆಂಗಳೂರು : ತೊ. ನಂಜುಂಡಸ್ವಾಮಿ ಗೆಳೆಯರ ಬಳಗ ಇದರ ವತಿಯಿಂದ ರಂಗಕರ್ಮಿ ತೊ. ನಂಜುಂಡಸ್ವಾಮಿ ನೆನೆಪಿನ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 10 ಫೆಬ್ರವರಿ 2025ರಂದು ಬೆಂಗಳೂರಿನ ಮಲ್ಲತ್ತಹಳ್ಳಿ ಕಲಾಗ್ರಾಮ ಸಾಂಸ್ಕೃತಿಕ ಸಮುಚ್ಚಯದಲ್ಲಿ ನಡೆಯಿತು. ರಂಗ ಸಂಘಟಕರು, ರಂಗ ನಿರ್ದೇಶಕರು ಸಮಾಜ ಸೇವಕರಾದ ಶ್ರೀ ಪ್ರಭು ಗುರಪ್ಪನವರ ಇವರಿಗೆ 2025ನೇ ಸಾಲಿನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಶಸ್ತಿ ಪ್ರದಾನ ಮಾಡಿದ ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾದ ಕೆ.ವಿ. ನಾಗರಾಜಮೂರ್ತಿ ಇವರು ಮಾತನಾಡಿ “ರಂಗಪ್ರೀತಿ ಇದ್ದರೆ ಎಂತಹ ಸಾಮಾನ್ಯ ಗ್ರಾಮವೂ ಸಹಾ ವಿಶ್ವದ ಗಮನ ಸೆಳೆಯಲು ಸಾಧ್ಯ. ಶೇಷಗಿರಿ ಅಂತಹ ಒಂದು ಸಾಧಾರಣ ಗ್ರಾಮ ಇಂದು ರಂಗ ಗ್ರಾಮವನ್ನಾಗಿ ಅರಳಿ ಹೆಸರಾಗಿದೆ. ಇಂತಹ ರಂಗಪ್ರೀತಿ ಪ್ರತಿಯೊಬ್ಬರಲ್ಲಿಯೂ ಇರಲಿ. ಒಬ್ಬ ಪೋಸ್ಟ್ ಮಾಸ್ಟರ್ ಆಗಿದ್ದ ಪ್ರಭು ಗುರಪ್ಪನವರ ಒಳಗೆ ಅಸಾಧಾರಣ ರಂಗ ಪ್ರೇಮಿಯಿದ್ದ. ಹಾಗಾಗಿಯೇ ಶೇಷಗಿರಿ ಇಂದು ರಂಗಭೂಮಿಯಲ್ಲಿ ಅಭೂತಪೂರ್ವ ಸಾಧನೆ ಮಾಡಿದೆ. ರಂಗಭೂಮಿಯ ಸೆಳೆತ ವಿಶಿಷ್ಟವಾದದ್ದು. ಶೇಷಗಿರಿಯಲ್ಲಿ ಸಾಧಾರಣ ಕೆಲಸ ಮಾಡಿಕೊಂಡಿದ್ದ ಜನರು ಕಟ್ಟಿದ ವಾಲಿ ವಧೆ ನಾಟಕ ಇಂದು ದೇಶಾದ್ಯಂತ ಸಂಚರಿಸಿದೆ. ಎಲ್ಲರಲ್ಲಿಯೂ ಈ ರಂಗಪ್ರೀತಿ ಬೆಳೆಯಲಿ” ಎಂದು ಹಾರೈಸಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪ್ರಭು ಗುರಪ್ಪನವರ “ಮೂಲಭೂತ ಸೌಕರ್ಯದಿಂದ ಬಳಲುತ್ತಿದ್ದ ಶೇಷಗಿರಿ ಗ್ರಾಮ ರಂಗಭೂಮಿಯ ಕಾರಣದಿಂದಾಗಿ ಒಗ್ಗಟ್ಟು ಸಾಧಿಸಿತು. ಕ್ರಮೇಣ ಸಾಕ್ಷರತೆ, ಆರೋಗ್ಯದ ವಿಚಾರದಲ್ಲಿಯೂ ಒಳ್ಳೆಯ ಬೆಳವಣಿಗೆ ಕಂಡಿತು. ರಂಗಭೂಮಿ ಎಲ್ಲರನ್ನೂ ತನ್ನ ತೆಕ್ಕೆಯೊಳಗೆ ಇಟ್ಟುಕೊಂಡು ಮುಂದೆ ಹೋಗುತ್ತದೆ ಎನ್ನುವುದಕ್ಕೆ ನಮ್ಮ ಗ್ರಾಮ ಉದಾಹರಣೆ” ಎಂದರು.
ರಂಗಕರ್ಮಿಗಳಾದ ಗುಂಡಣ್ಣ ಚಿಕ್ಕಮಗಳೂರು, ಶ್ರೀನಿವಾಸ ಜಿ. ಕಪ್ಪಣ್ಣ, ಸೆಂಟರ್ ಸ್ಟೇಜ್ ಗಂಗಾಧರ, ನರೇಂದ್ರಬಾಬು, ಮುಖ್ಯಮಂತ್ರಿ ಚಂದ್ರು, ಬಿ.ವಿ. ರಾಜಾರಾಂ, ಹೂಲಿ ಶೇಖರ್, ಶಶಿಧರ ಅಡಪ, ಮಲ್ಲಿಕಾರ್ಜುನ ಮಹಾಮನೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಗುರಪ್ಪನವರ ಇವರನ್ನು ಅಭಿನಂದಿಸಿದರು. ಗೆಳೆಯರ ಬಳಗದ ಡಾ. ಶಿವಲಿಂಗ ಪ್ರಸಾದ್ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದ ಅಂಗವಾಗಿ ಸಹಚಾರಿ ತಂಡ ‘ಶಾಂತಿ ಮತ್ತು ಪ್ರೀತಿಗಾಗಿ’ ಎನ್ನುವ ವಿಶಿಷ್ಟವಾದ ಭರತನಾಟ್ಯ ಪ್ರಸ್ತುತಿಯನ್ನು ಹಾಗೂ ಆನಂದ್ ಮಾಲೂರು ಮತ್ತು ತಂಡದವರಿಂದ ಅಂಬೇಡ್ಕರ್ ಹಾಗೂ ಸಂವಿಧಾನ ಗೀತೆಗಳನ್ನು ಪ್ರಸ್ತುತಪಡಿಸಿತು.