06 ಮಾರ್ಚ್ 2023 ತುಮಕೂರು: ತುಮಕೂರು ಜಿಲ್ಲೆಯ ಸದ್ಯದ ಸಾಂಸ್ಕೃತಿಕ ರಾಯಭಾರಿಯಂತೆ ಮೆಳೇಹಳ್ಳಿ ದೇವರಾಜ್ ನಿರಂತರವಾಗಿ ರಂಗತರಬೇತಿ ನೀಡುತ್ತಾ ನೂರಾರು ವಿದ್ಯಾರ್ಥಿಗಳಿಗೆ ಬಣ್ಣದ ಪರಿಚಯ ಮಾಡಿಕೊಟ್ಟಿದ್ದಾರೆ. ಅವರ ಜೊತೆ ಕೈಜೋಡಿಸಿರುವ ಅವರ ಕುಟುಂಬದ ಎಲ್ಲಾ ಸದಸ್ಯರು ಅಭಿನಂದನಾರ್ಹರು. ಇಂತಹ ಕಾರ್ಯಗಳಿಗೆ ನಮ್ಮ ಬೆಂಬಲ ಸದಾ ಇರುತ್ತದೆ ಎಂದು ತುಮಕೂರು ವಿ.ವಿ. ಕಲಾ ಕಾಲೇಜು ಪ್ರಾಂಶುಪಾಲರಾದ ಪ್ರೊ. ಕರಿಯಣ್ಣ ಅಭಿಪ್ರಾಯಪಟ್ಟರು.
ಅವರು ಡಮರುಗ ತಂಡವು ದಿನಾಂಕ 04-03-2023 ಶನಿವಾರ ಮೆಳೇಹಳ್ಳಿಯ ವಿ. ರಾಮಮೂರ್ತಿ ರಂಗಸ್ಥಳದಲ್ಲಿ ಪ್ರಯೋಗಿಸಿದ ಟಿ.ಪಿ. ಕೈಲಾಸಂರವರ ಟೊಳ್ಳು ಗಟ್ಟಿ ನಾಟಕ ಉದ್ಘಾಟಿಸಿ ಮಾತನಾಡಿದರು. ನಂತರ ಮಾತನಾಡಿದ ಉಪನ್ಯಾಸಕ ಡಾ. ಶಿವಣ್ಣ ಬೆಳವಾಡಿಯವರು ವೃದ್ಧಾಶ್ರಮಗಳು ಹೆಚ್ಚಾಗುತ್ತಿರುವ ಇಂದಿನ ಸಮಾಜದಲ್ಲಿ ಚಿಕಿತ್ಸಕ ರೀತಿಯಲ್ಲಿ ಕೈಲಾಸಂ ನಾಟಕ ನಿಲ್ಲುತ್ತದೆ. ಇಂದಿನ ಯುವಕರಿಗೆ ನಾಟಕದ ಆಶಯಗಳು ದಕ್ಕುವಂತಾಗಲಿ ಎಂದರು. ಸಭಾರಂಭದಲ್ಲಿ ಹೋಬಳಿ ಕ.ಸಾ.ಪ. ಅಧ್ಯಕ್ಷ ಬಿ. ವಜ್ರಪ್ಪ, ರಂಗ ನಿರ್ದೇಶಕ ಮೆಳೇಹಳ್ಳಿ ದೇವರಾಜು ಉಪಸ್ಥಿತರಿದ್ದರು.
ನಂತರ ಸಮಸಮಾಜವನ್ನು ಕಟ್ಟಿದ ಸಮಾಜಕ್ಕೆ ಯಾವುದೇ ಉಪಯೋಗವಿಲ್ಲದ, ಸ್ವಾರ್ಥವನ್ನು ಕಟ್ಟಿಕೊಂಡು ಮನುಷ್ಯನನ್ನು ಯಾಂತ್ರಿಕವಾಗಿಸುವ ವಿದ್ಯಾಭ್ಯಾಸ ಕ್ರಮ ನಿಲ್ಲಿಸಿ ಮೌಲ್ಯಧಾರಿತ ವಿದ್ಯಾಭ್ಯಾಸ ಅನುಸರಿಸುವಂತಾಗಲಿ ಎಂಬ ಆಶಯ ಹೊತ್ತ “ಟೊಳ್ಳು ಗಟ್ಟಿ” ನಾಟಕ ಮೆಳೇಹಳ್ಳಿ ದೇವರಾಜು ನಿರ್ದೇಶನದಲ್ಲಿ ಪ್ರಯೋಗಗೊಂಡಿತು. ಎಲ್ಲಾ ಕಲಾವಿದರು ಪ್ರೌಢ ಅಭಿನಯ ನೀಡಿದರು. ರಂಗದಲ್ಲಿ ಗಗನ, ಕಾವ್ಯ, ದೀಕ್ಷ, ನಂದಿತಾ ಭಟ್, ಸವಿತ, ಶಿವಶಂಕರ್, ಅಕ್ಷಯ್, ಯೋಗೇಶ್, ಪಾತಲಿಂಗಯ್ಯ, ಪ್ರಕಾಶ್ ಮೆಳೇಹಳ್ಳಿ ಬೆಳಕು, ಸ್ನೇಹಾಚಿನ್ಮಯ ವಸ್ತ್ರಲಂಕಾರ, ರೇಖಾಲಯ ಮುಖವರ್ಣಿಕೆ ಪ್ರಯೋಗಕ್ಕೆ ಮೆರುಗು ನೀಡಿತು.
ನಿರ್ದೇಶಕರು: 20 ವರ್ಷಗಳ ರಂಗಾನುಭವ ಹೊಂದಿದ್ದರೂ ರಂಗ ವಿದ್ಯಾರ್ಥಿಯಂತೆ ಸದಾ ಹೊಸತನಕ್ಕೆ ಹಂಬಲಿಸುವ ಇವರು “ಹರಿಗೆ ಆಟವನ್ನು” ರಂಗಕ್ಕೆ ತಂದ ಮೊದಲಿಗರು. “ಧೂತ ವಾಕ್ಯ”, “ಋಷಿಯಾಟ”, “ಕೇಳು ಜನಮೇಜಯ”, “ಮತ್ತವಿಲಾಸ”, “ಸೇವಂತಿ ಪ್ರಸಂಗ”, “ತೆರೆಗಳು”, “ಬಲಿಯಾದಳು ಭಾಗೀರಥಿ”, “ಯಾರಿಗೂ ಹೇಳೋಣು ಬ್ಯಾಡ”, “ಸಾಯೋಆಟ”, “ಅಂಗುಲಿಮಾಲ”, “ಕಾಲಜ್ಞಾನಿ ಕನಕ”, “ಸಾಲವತಿ”, “ಹಳಿಯ ಮೇಲಿನ ಸದ್ದು”, “ವಿರಾಟಪರ್ವ”, “ಭರತ ಬಾಹುಬಲಿ”, “ಶ್ವಾನದಳ”, “ದೊರೆ ಈಡಿಪಸ್”, ಮೈಲಾರ ಮಹಾದೇವ”, ಇನ್ನೂ ಅನೇಕ ನಾಟಕಗಳನ್ನು ನಿರ್ದೇಶಿಸಿದ್ದಾರೆ. ರಂಗ ಅಧ್ಯಯನ ಕೇಂದ್ರ ಕುಂದಾಪುರ, ರಂಗಾಯಣ-ಮೈಸೂರು, ಅಭಿನಯ-ಶಿವಮೊಗ್ಗ, ಸಮಸ್ತರು-ಹರಪನಹಳ್ಳಿ ಎಂ.ಇ.ಎಸ್. ರಂಗಶಾಲೆ ಬೆಂಗಳೂರು, ಎನ್.ಎಸ್.ಡಿ.ಆರ್.ಆರ್.ಸಿ. ಬೆಂಗಳೂರು, ನಾಟಕ ಮನೆ-ತುಮಕೂರು ಇನ್ನೂ ಹಲವು ಕಡೆ ಸಂಪನ್ಮೂಲ ವ್ಯಕ್ತಿಯಾಗಿ ಮೆಳೇಹಳ್ಳಿ ದೇವರಾಜ್ ಸೇವೆ ಸಲ್ಲಿಸಿದ್ದಾರೆ. ಡಮರುಗ ರಂಗ ಸಂಪನ್ಮೂಲ ಕೇಂದ್ರದ ಕಾರ್ಯದರ್ಶಿಯಾಗಿದ್ದು ರಂಗ ಮಂದಿರ ನಿರ್ಮಿಸಿ 7 ದಿನಗಳ ಎರಡು ರಾಷ್ಟ್ರೀಯ ನಾಟಕೋತ್ಸವಗಳನ್ನು ಆಯೋಜಿಸಿದ್ದಾರೆ.
ತಂಡ: ಪ್ರಸಿದ್ಧ ರಂಗನಿರ್ದೇಶಕ ಗೋಪಾಲಕೃಷ್ಣ ನಾಯರಿಯವರಿಂದ 2000 ಇಸವಿಯಲ್ಲಿ ಉದ್ಘಾಟನೆಗೊಂಡು 13ನೇ ವರ್ಷಕ್ಕೆ ಕಾಲಿಟ್ಟಿರುವ ನಾವು ಬರ್ನಾಡ್ ಷಾರವರ “ಸೇವಂತಿ ಪ್ರಸಂಗ”, ಲಂಕೇಶರ “ತೆರೆಗಳು”, ಚಂದ್ರಶೇಖರ ಪಾಟೀಲರ “ಕೊಡೆಗಳು”, “ಕುಂಟಾ ಕುಂಟಾ ಕುರುವತ್ತಿ”, ಬೇಂದ್ರೆಯವರ “ಸಾಯೋ ಆಟ”, ಭೋದಾಯನನ “ಭಗವದಜ್ಜುಕೀಯ”, ಭಾಸ ಮಹಾ ಕವಿಯ “ಧೂತ ವಾಕ್ಯ”, ಕಾಪ್ಕಾರ “ಅನಾಥ ಮಕ್ಕಳು”, ಜಿ. ಇಂದ್ರಕುಮಾರರ “ಸಾಲವತಿ”, ಪ್ರಭುಶಂಕರರ “ಅಂಗುಲಿಮಾಲ”, ಭವಭೂತಿಯ “ಉತ್ತರ ರಾಮಚರಿತ” ಹಾಗೂ “ಹರ್ಡೇಕರ್ ಮಂಜಪ್ಪ”, “ತೆನಾಲಿ ರಾಮ”, “ಭೀಷ್ಮ”, “ಸಂಗ್ರಾಮ ಭಾರತ”, “ಕಣ್ಣಾಮುಚ್ಚಾಲೆ”, “ಹೈಕಳು”, “ಋಷಿಯಾಟ”, “ಗುಮ್ಮ”, “ಕಂಸಾಯಣ”, “ವಿರಾಟಪರ್ವ”, ಭರತ ಬಾಹುಬಲಿ”, “ಶ್ವಾನದಳ”, “ದೊರೆ ಈಡಿಪಸ್”, ಇನ್ನನೇಕ ನಾಟಕಗಳನ್ನು ಪ್ರಯೋಗಿಸಿದೆ. ಇದೀಗ ಹೂಗ್ ಬೇರ್ಸ್ ಪೋರ್ಡ್ ನ “ಮಹಡಿ ಮೇಲಿನ ಮನುಷ್ಯ”, ಟಿ.ಪಿ. ಕೈಲಾಸಂರವರ “ಟೊಳ್ಳು ಗಟ್ಟಿ” ನಾಟಕಗಳನ್ನು ಪ್ರದರ್ಶಿಸಲಾಗಿದೆ.
- ಭರತ್ ಡಮರುಗ