ಬಂಟ್ವಾಳ: ‘ಅಭಿರುಚಿ’ ಜೋಡುಮಾರ್ಗ ಆಯೋಜಿಸಿದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಲಕ್ಷ್ಮೀಶ ತೋಳ್ಪಾಡಿ ಅವರೊಂದಿಗೆ ಒಂದು ಸಂಜೆ ಎಂಬ ವಿನೂತನ ಕಾರ್ಯಕ್ರಮ ಬಿ. ಸಿ. ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ದಿನಾಂಕ 26-05-2024ರ ಭಾನುವಾರ ಸಂಜೆ ನಡೆಯಿತು.
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕೃತಿ ‘ಮಹಾಭಾರತ ಯಾತ್ರೆ’ ಕುರಿತು ಅವಲೋಕನ, ಸಂವಾದ, ಗೌರವಾರ್ಪಣೆ ನಡೆಯಿತು. ಈ ಸಂದರ್ಭ ಮಹಾಭಾರತದ ಪಾತ್ರಗಳ ವ್ಯಕ್ತಿತ್ವ ವಿಸ್ತಾರದ ಕುರಿತು ಮೂಡಿದ ಜಿಜ್ಞಾಸೆಗಳಿಗೆ ಉತ್ತರಿಸಿದ ಲಕ್ಷ್ಮೀಶ ತೋಳ್ಪಾಡಿ “ಮಹಾಭಾರತ ದಟ್ಟ ಲೌಕಿಕತೆಯೊಂದಿಗೆ ಅಷ್ಟೇ ಆಧ್ಯಾತ್ಮಿಕವಾಗಿರುವ ಕೃತಿಯಾಗಿದೆ. ಸೃಷ್ಟಿಶೀಲವಾದುದು ಮಹಾಭಾರತ ಎಂದರು.
ಬಿ. ವಿ. ಕಾರಂತ ರಂಗಭೂಮಿಕಾ ಟ್ರಸ್ಟ್ ಅಧ್ಯಕ್ಷರಾದ ಕಜೆ ರಾಮಚಂದ್ರ ಭಟ್ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಲೇಖಕ ಪೃಥ್ವಿರಾಜ್ ಕವತ್ತಾರ್ ಭಾಗವಹಿಸಿ ಮಾತನಾಡಿದರು.
ಸಂವಾದದಲ್ಲಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ. ಅಜಕ್ಕಳ ಗಿರೀಶ ಭಟ್ಟ, ರಂಗಕರ್ಮಿ ಮೂರ್ತಿ ದೇರಾಜೆ, ಕೃಷಿಕ ಹಾಗೂ ಲೇಖಕರಾದ ವಸಂತ ಕಜೆ, ‘ಅಭಿರುಚಿ’ ಅಧ್ಯಕ್ಷ ಎಚ್. ಸುಂದರ ರಾವ್, ಮೋಹನ ಪೈ ಪಾಣೆಮಂಗಳೂರು, ಉಪನ್ಯಾಸಕ ಚೇತನ್ ಮುಂಡಾಜೆ ಪಾಲ್ಗೊಂಡರು.
ಮಹಾಬಲೇಶ್ವರ ಹೆಬ್ಬಾರ ಸ್ವಾಗತಿಸಿ, ಚೇತನ್ ಮುಂಡಾಜೆ ಸಂವಾದವನ್ನು ನಿರ್ವಹಿಸಿ, ರಾಧೇಶ ತೋಳ್ಪಾಡಿ ವಂದಿಸಿದರು. ಬಳಿಕ ಗುರುರಾಜ ಮಾರ್ಪಳ್ಳಿ ಮತ್ತು ಬಳಗದಿಂದ ಬಡಗುತಿಟ್ಟು ಯಕ್ಷಗಾನ ಪ್ರಯೋಗ ‘ಋತುಪರ್ಣ’ ಪ್ರದರ್ಶನಗೊಂಡಿತು.