ಮಂಗಳೂರು : ಕರಾವಳಿ ಲೇಖಕಿಯರ – ವಾಚಕಿಯರ ಸಂಘದ ಆಶ್ರಯದಲ್ಲಿ ಮುಂಬಯಿ ಕನ್ನಡಿತಿ ಸುನೀತಾ ಎಂ. ಶೆಟ್ಟಿ ಇವರು ಪ್ರಾಯೋಜಿಸಿರುವ ‘ತೌಳವ ಸಿರಿ ಪ್ರಶಸ್ತಿ’ ಪ್ರದಾನ ಸಮಾರಂಭವು ದಿನಾಂಕ 12 ಏಪ್ರಿಲ್ 2025ರಂದು ಸಂಘದ ಸಭಾಂಗಣದಲ್ಲಿ ನಡೆಯಿತು.
ಸಮಾರಂಭದಲ್ಲಿ ತುಳು ಭಾಷೆಯ ತ್ರೈಮಾಸಿಕ ಉಡಲ್ ಪತ್ರಿಕೆಯ ಸಂಪಾದಕಿ ಮೂಡುಬಿದಿರೆಯ ಜಯಂತಿ ಎಸ್. ಬಂಗೇರ ಇವರಿಗೆ ಈ ಸಾಲಿನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಪ್ರಶಸ್ತಿ ಪ್ರದಾನ ಮಾಡಿದ ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷರಾದ ತಾರಾನಾಥ ಗಟ್ಟಿ ಕಾಪಿಕಾಡ್ ಮಾತನಾಡಿ “ಹೆಣ್ಣು ಮಕ್ಕಳು ಮನೆಯಿಂದ ಹೊರಗೆ ಬರುವುದೂ ಕಷ್ಟವಾಗಿದ್ದ ಕಾಲಘಟ್ಟದಲ್ಲಿ ಬರೆಯುವುದೇ ದೊಡ್ಡ ಸವಾಲಾಗಿತ್ತು. ಈ ಸಮಯದಲ್ಲಿ ಸಾಕಷ್ಟು ಪರಿವರ್ತನೆಗಳಾಗಿದ್ದರೂ ಹೆಣ್ಣು ಮಗಳೊಬ್ಬಳು ನಿಶ್ಚಿತ ಪೋಷಕರಿಲ್ಲದೆಯೂ 16 ವರ್ಷಗಳಿಂದ ಸೀಮಿತ ಓದುಗ ವರ್ಗವನ್ನು ಹೊಂದಿರುವ ತುಳು ತ್ರೈಮಾಸಿಕ ಪತ್ರಿಕೆಯನ್ನು ನಡೆಸುತ್ತಿರುವುದು ಒಂದು ಚಾರಿತ್ರಿಕ ಸಾಧನೆಯಾಗಿದೆ. ಜಯಂತಿ ಬಂಗೇರ ಅವರು ಸ್ವತಃ ಬೆಳೆಯುವುದರೊಂದಿಗೆ, ಪತ್ರಿಕೆಯಲ್ಲಿ ತುಳುವಿನಲ್ಲಿ ಬರೆಯುವವರಿಗೂ ವೇದಿಕೆ ಒದಗಿಸಿದರು. ಸ್ವಪ್ರಯ ತ್ನದಿಂದ ಇಂದು ಲೇಖಕಿಯಾಗಿ, ಪ್ರಕಾಶಕಿ ಯಾಗಿ, ಸಂಪಾದಕಿಯಾಗಿ ಮೂಡಿಬಂದಿದ್ದಾರೆ ಎಂದರು. ಡಾ.ಮೀನಾಕ್ಷಿ ರಾಮಚಂದ್ರ, ಜಯಂತಿ ಎಸ್. ಬಂಗೇರ ಹಾಗೂ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಕರಾವಳಿ ಲೇಖಕಿಯರ- ವಾಚಕಿಯರ ಸಂಘದ ಅಧ್ಯಕ್ಷೆಯಾದ ಶಕುಂತಳಾ ಟಿ. ಶೆಟ್ಟಿ ಸಭೆ ಅಧ್ಯಕ್ಷತೆಯನ್ನು ವಹಿಸಿದ್ದರು. ರತ್ನಾವತಿ ಬೈಕಾಡಿ ಆಶಯಗೀತೆ ಪ್ರಸ್ತುತ ಪಡಿಸಿದರು. ಗುಣವತಿ ರಮೆಶ್ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿ, ಅಕ್ಷಯ ಆರ್. ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಯಶೋದಾ ಮೋಹನ್ ವಂದಿಸಿದರು.

