ಮೂಡುಬಿದಿರೆ : ಮೂಡುಬಿದಿರೆಯ ಆಳ್ವಾಸ್ ಕಾಲೇಜು (ಸ್ವಾಯತ್ತ)ನ ಕನ್ನಡ ವಿಭಾಗ ಹಾಗೂ ಗಾಂಧಿ ವಿಚಾರ ವೇದಿಕೆಗಳ ಜಂಟಿ ಆಶ್ರಯದಲ್ಲಿ ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ದಿನಾಂಕ 19 ಡಿಸೆಂಬರ್ 2025ರಂದು ಉದಯ ಕುಮಾರ್ ಹಬ್ಬು ಇವರ ‘ಉತ್ತರ ಸತ್ಯಾಗ್ರಹ ಗೀತಾ’ ಅನುವಾದಿತ ಕೃತಿ ಬಿಡುಗಡೆಗೊಂಡಿತು.

ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಗೋವಿಂದ ದಾಸ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ಕೃಷ್ಣಮೂರ್ತಿ “ಮಹಾತ್ಮಾ ಗಾಂಧೀಜಿಯವರ ಚಿಂತನೆಗಳು ಇಂದಿನ ಕಾಲಘಟ್ಟದಲ್ಲಿ ಪ್ರಸ್ತುತವಾಗಿದ್ದು, ಯುವ ಸಮುದಾಯ ಗಾಂಧೀಜಿಯವರ ಚಿಂತನೆಗಳನ್ನು ಅಧ್ಯಯನ ಮಾಡಬೇಕಾಗಿದೆ. ಮಹಾರಾಷ್ಟ್ರದ ಕವಯಿತ್ರಿ ಪಂಡಿತಾ ಕ್ಷಮಾರಾವ್ 1948ರಲ್ಲಿ ಸಂಸ್ಕೃತದಲ್ಲಿ ಬರೆದ ‘ಉತ್ತರ ಸತ್ಯಾಗ್ರಹ ಗೀತಾ’ ಕಾವ್ಯವು 1931ರಿಂದ 1944ರವರೆಗಿನ ಸತ್ಯಾಗ್ರಹದ ಹೋರಾಟದ ಕಥನವನ್ನು ಒಳಗೊಂಡಿದ್ದು ಹಿರಿಯ ಸಾಹಿತಿ ಉದಯ ಕುಮಾರ್ ಹಬ್ಬು ಕನ್ನಡಕ್ಕೆ ಗದ್ಯಾನುವಾದ ಮಾಡಿದ್ದು ಕನ್ನಡ ಸಾಹಿತ್ಯಕ್ಕೆ ವಿಶಿಷ್ಟ ಕೊಡುಗೆಯಾಗಿದೆ. ಗಾಂಧೀಜಿಯವರ ರಾಜಕೀಯ, ಸಾಮಾಜಿಕ, ಆರ್ಥಿಕ ಹಾಗೂ ಆಧ್ಯಾತ್ಮಿಕ ಚಿಂತನೆಗಳು ಈ ಕೃತಿಯಲ್ಲಿ ಒಡ ಮೂಡಿದ್ದು ಆಧುನಿಕ ಭಾರತದ ಇತಿಹಾಸದ ಘಟನೆಗಳು ಕಾವ್ಯ ರೂಪದಲ್ಲಿ ಪ್ರಕಟವಾಗಿದೆ. ಸತ್ಯಾಗ್ರಹದ ಮಹತ್ವವನ್ನು, ಗಾಂಧೀಜಿಯವರ ದೃಢ ನಿಲುವುಗಳನ್ನು ಮತ್ತು ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡಿದ್ದ ನಾಯಕರ ತ್ಯಾಗವನ್ನು ಅರಿತುಕೊಳ್ಳಲು ಈ ಕೃತಿ ಸಹಕಾರಿಯಾಗಿದೆ” ಎಂದು ನುಡಿದರು.
ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಮಾತನಾಡಿ “ಬ್ರಿಟಿಷ್ ಆಡಳಿತ ನಿರ್ಮಿಸಿದ ಸ್ವಾರ್ಥ ಪರವಾದ ರಾಜಕೀಯ ವ್ಯವಸ್ಥೆಯನ್ನು ಮೀರಿ ಜನಪರ ವಾದ ಆಡಳಿತ ವ್ಯವಸ್ಥೆಯನ್ನು ಗಾಂಧಿಜೀ ರೂಪಿಸಲು ಶ್ರಮಿಸಿದರು” ಎಂದರು. ಅಧ್ಯಕ್ಷತೆ ವಹಿಸಿದ್ದ ಗಾಂಧಿ ವಿಚಾರ ವೇದಿಕೆಯ ಶ್ರೀಧರ್ ಜಿ. ಭಿಡೆ ಮಾತನಾಡಿ “ವರ್ತಮಾನ ಭಾರತ ಗಾಂಧೀಜಿಯವರ ಚಿಂತನೆಗಳನ್ನು ಅರಿತು ಅನುಷ್ಠಾನಗೊಳಿಸಬೇಕಾಗಿದೆ. ಗಾಂಧೀಜಿಯವರ ಚಿಂತನೆಗಳು ವಿಶ್ವ ಶಾಂತಿಗೆ ಪ್ರೇರಣೆ ಕೊಡಬಲ್ಲದು” ಎಂದರು.

ಲೇಖಕ ಉದಯ ಕುಮಾರ್ ಹಬ್ಬು ಮಾತನಾಡಿ “ಉತ್ತರ ಸತ್ಯಾಗ್ರಹ ಗೀತಾ ಕೃತಿಯು ಸ್ವಾತಂತ್ರ್ಯ ಹಾಗೂ ಸ್ವಾಭಿಮಾನದ ಸಂಕೇತವಾಗಿದ್ದು ಓದುಗರನ್ನು ತಲುಪ ಬೇಕಾಗಿದೆ” ಎಂದರು. ಆಳ್ವಾಸ್ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಯೋಗೀಶ್ ಕೈರೋಡಿ ಸ್ವಾಗತಿಸಿ, ವಿದ್ಯಾರ್ಥಿನಿ ಸೌಮ್ಯ ನಿರೂಪಿಸಿದರು.
