ಮಂಜೇಶ್ವರ: ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಭಾಷಾಂತರ ಅಧ್ಯಯನ ವಿಭಾಗ ಮತ್ತು ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನ ಜಂಟಿ ಆಶ್ರಯದಲ್ಲಿ ಭಾಷಾಂತರಕಾರರ ನಾಲ್ಕನೇ ಸಮಾವೇಶ ಹಾಗೂ ಪುಸ್ತಕ ಬಿಡುಗಡೆ ಸಮಾರಂಭ ದಿನಾಂಕ 17 ಫೆಬ್ರವರಿ 2025ರಂದು ಮಂಜೇಶ್ವರದ ಗೋವಿಂದ ಪೈ ಕಾಲೇಜಿನಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಡಿ. ವಿ. ಪರಮಶಿವ ಮೂರ್ತಿ ಮಾತನಾಡಿ “ಭಾಷಾ ಶಾಸ್ತ್ರದ ವಿಷಯಕ್ಕೆ ಸಂಬಂಧಿಸಿದ ವಿದ್ವಾಂಸರು ಇತ್ತೀಚೆಗೆ ಕಡಿಮೆಯಾಗುತ್ತಿದ್ದಾರೆ. ಭಾಷಾ ಶಾಸ್ತ್ರದ ವಿಷಯ ಮರೀಚಿಕೆಯಾಗಿದೆ. ಭಾಷೆ ಮತ್ತು ಸಂಸ್ಕೃತಿಯ ವಿಚಾರ ಚಿಂತಾಜನಕವಾಗಿದೆ. ಈಗಿನ ವಿದ್ಯಾರ್ಥಿಗಳು ಅಂಕಗಳ ಹಿಂದೆ ಹೋಗುತ್ತಾರೆ. ಆದ್ದರಿಂದ ಭಾಷೆ ಮತ್ತು ಸಂಸ್ಕೃತಿ ಅಳಿಸಿ ಹೋಗುವ ಆತಂಕ ಎದುರಾಗಿದೆ. ಶಾಸ್ತ್ರೀಯ ಬೇರುಗಳು ಉಳಿದರೆ ಮಾತ್ರ ಹೊಸ ಜ್ಞಾನ ಲಭಿಸಲು ಸಾಧ್ಯ. ಈ ನಿಟ್ಟಿನಲ್ಲಿ ಡಾ. ಸುಭಾಷ್ ಪಟ್ಟಾಜೆಯವರ ‘ಬಹುಮುಖಿ’, ವಿಶ್ವನಾಥ ನಾಗಠಾಣ ಅವರ ‘ಕೃತಿಶೋಧ’, ಡಾ.ಮೋಹನ ಕುಂಟಾರ್ ಅವರ ‘ಇರುಳಿನ ಆತ್ಮ’ ಹಾಗೂ ‘ಪುರಾಣ ಕಥಾ ಕೋಶ’ ಎಂಬ ಕೃತಿಗಳು ಯಶಸ್ವಿಯಾಗಿವೆ ಎಂದು ಅವರು ಅಭಿಪ್ರಾಯಪಟ್ಟರು.
ಬಹುಮುಖಿ ಕೃತಿಯ ಬಗ್ಗೆ ಮಾತನಾಡಿದ ಉಜಿರೆಯ ಎಸ್. ಡಿ. ಎಂ. ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ರಾಜಶೇಖರ ಹಳೆಮನೆಯವರು “ಸಂಶೋಧಕರಾಗಿ, ಭಾಷಾಂತರಕಾರರಾಗಿ ಮತ್ತು ಪ್ರಾಧ್ಯಾಪಕರಾಗಿ ಮೋಹನ ಕುಂಟಾರರು ಸಲ್ಲಿಸಿದ ಸೇವೆ ವಿಶಿಷ್ಟ. ಭಾಷಾಂತರ ಅಧ್ಯಯನ ಮತ್ತು ಸೃಜನಶೀಲ ಕೃತಿಗಳ ಅನುವಾದಾದ ಮೂಲಕ ಅವರು ನೀಡಿದ ಕೊಡುಗೆ ಅಪಾರ” ಎಂದು ನುಡಿದರು. ‘ಅನುಶೋಧ’ದ ಬಗ್ಗೆ ಮಾತನಾಡಿದ ಎಸ್. ಆರ್. ಅರುಣಕುಮಾರ್, “ಮೂಲತಃ ಗಣಿತ ಅಧ್ಯಾಪಕರಾದ ನಾಗಠಾಣ ಅವರು ಯಾವುದೇ ಸಂಶೋಧನೆಯ ಹಿನ್ನೆಲೆ ಇರದಿದ್ದರೂ ತಮ್ಮ ಆಸಕ್ತಿ ಮತ್ತು ಅಧ್ಯಯನದ ಫಲವಾಗಿ ಇಂಥ ಸಂಶೋಧನ ಕೃತಿಯನ್ನು ಕೊಟ್ಟಿರುವುದು ಸ್ಮರಣೀಯ” ಎಂದು ಹೇಳಿದರು. ಎಂ. ಟಿ ವಾಸುದೇವನ್ ನಾಯರ್ ಕತೆಗಳ ಕುರಿತು ಯುವ ವಿಮರ್ಶಕ ವಿಕಾಸ ಹೊಸಮನಿಯವರು ಮಾತನಾಡುತ್ತಾ “ಅನುಭವಗಳಿಂದ ರೂಪುಗೊಂಡ ಎಂ. ಟಿ. ಕತೆಗಳು ಮನುಷ್ಯ ಜೀವನದ ಮಗ್ಗುಲುಗಳನ್ನು ತಲಸ್ಪರ್ಶಿಯಾಗಿ, ಹೃದಯಂಗಮವಾಗಿ ತೆರೆದಿಡುತ್ತವೆ. ಮನುಷ್ಯ ಮತ್ತು ಮನುಷ್ಯತ್ವದ ಕುರಿತು ಬರೆದ ಕತೆಗಳು ದೇಶ, ಕಾಲ, ಭಾಷೆಗಳನ್ನು ಮೀರಿ ನಿಲ್ಲುತ್ತವೆ. ಎಂ.ಟಿ ಕಥಾಜಗತ್ತಿಗೆ ಈ ಕೃತಿಯು ಉತ್ತಮ ಪ್ರವೇಶಿಕೆಯಾಗಿದೆ” ಎಂದರು. ‘ಪುರಾಣ ಕಥಾಕೋಶ’ದ ಬಗ್ಗೆ ಯಕ್ಷಗಾನ ಕಲಾವಿದ ತಾರಾನಾಥ ವರ್ಕಾಡಿಯವರು ಮಾತನಾಡಿ, “ಅಧ್ಯಾತ್ಮ ಮತ್ತು ಪುರಾಣ ಕಥೆಗಳಿಗೆ ಸಂಬಂಧಿಸಿದ ಸಣ್ಣ ಪುಟ್ಟ ಪ್ರಸಂಗಗಳನ್ನು ಕಥೆಯ ರೂಪದಲ್ಲಿ ಅಚ್ಚುಕಟ್ಟಾಗಿ ಕಟ್ಟಿ ಕೊಟ್ಟಿರುವ ಹಿರಿಯರ ಶ್ರಮ ಮತ್ತು ಅದನ್ನು ಸಂಪಾದಿಸಿ ಹೊಸ ತಲೆಮಾರಿಗೆ ದಾಟಿಸುವ ಕೆಲಸ ಅಭಿನಂದನೀಯ” ಎಂಡಿ ಹೇಳಿದರು.
ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನ ಪ್ರಿನ್ಸಿಪಾಲ್ ಡಾ. ಮೊಹಮ್ಮದಾಲಿ ಕೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಶಿವಶಂಕರ ಸ್ವಾಗತಿಸಿ, ಸಹಾಯಕ ಪ್ರಾಧ್ಯಾಪಕ ಡಾ. ಸುಜಿತ್ ವಂದಿಸಿದರು.