ಗುಜರಾತದಲ್ಲಿರುವ ದ್ವಾರಕೆ ಮತ್ತು ಸೋಮನಾಥದ ಪ್ರಥಮ ಜ್ಯೋತಿರ್ಲಿಂಗ ದರ್ಶನ ಮಾಡುವ ಅವಕಾಶ ಸಿಕ್ಕಿದ್ದು ತೀರಾ ಅನಿರೀಕ್ಷಿತವಾಗಿ. ಬಾದಾಮಿಗೆ ಹೋದ ನಂತರ ಇನ್ನು ಈ ವರ್ಷ ಎಲ್ಲಿಗೂ ಹೋಗುವುದಿಲ್ಲವೆಂದು ತೀರ್ಮಾನಿಸಿದ್ದೆ. ಅಷ್ಟರಲ್ಲಿ ನನ್ನ ಸರಸ್ವತಿಯಕ್ಕ ಮತ್ತು ಶಂಕರಭಾವ ‘ಬರ್ತೀಯೇನೇ ನಮ್ಮ ಜತೆಗೆ ? ಮಂಗಳೂರಿನಿಂದ ನಮ್ಮದೊಂದು ತಂಡ ಹೋಗ್ತಾ ಇದೆ. ಒಟ್ಟಿಗೆ ಹೋಗಿ ಬರೋಣ” ಅಂದರು. ಯಾಕೋ ಇರಲಿ ಅನ್ನಿಸಿತು. ಹೊರಟು ಬಿಟ್ಟೆ. ಆದರೆ ಅಕ್ಟೋಬರ್ 4ರಂದು ಹೊರಡುವ ದಿನ ಬಂದಾಗ ಅಕ್ಕನ ಆರೋಗ್ಯದಲ್ಲಿ ಏರುಪೇರಾಗಿ ಅವರಿಬ್ಬರೂ ಬರಲಿಲ್ಲ. ನಾನೊಬ್ಬಳೇ ತಂಡವನ್ನು ಸೇರಿದೆ. ಸೇರಿದ ಕ್ಷಣದಿಂದ ಕೊನೆಯ ತನಕ ಅಕ್ಕ-ಭಾವ ಜತೆಗಿಲ್ಲದ ಕೊರತೆಯನ್ನು ತಂಡದಲ್ಲಿ ಸಿಕ್ಕಿದ ಅಣ್ಣ-ತಮ್ಮ-ತಂಗಿಯರೆಲ್ಲರೂ ತಮ್ಮ ಅಪಾರ ಪ್ರೀತಿಯಿಂದ ನೀಗಿಸಿದ್ದು ನನ್ನ ಅದೃಷ್ಟ. ಸಹಯಾತ್ರಿಗಳಾಗಿ ಸಾಹಿತಿಗಳಾದ ಶ್ರೀ ವಿ.ಬಿ. ಕುಳಮರ್ವ ಮತ್ತು ಲಕ್ಷ್ಮಿ ವಿ. ಭಟ್ ಸಿಕ್ಕಿದ್ದು ಒಂದು ಬೋನಸ್.
49 ಮಂದಿಯ ನಮ್ಮ ತಂಡವು ಶ್ರೀ ಮಾಧವ ಅವರ ನೇತೃತ್ವದಲ್ಲಿ 4ರಂದು ಬೆಳಗ್ಗೆ 4-00 ಗಂಟೆಗೆ ಹೊರಡುವ ಎರ್ನಾಕುಲಂ-ಓಖಾ ಎಕ್ಸ್ ಪ್ರೆಸ್ ನಲ್ಲಿ ಹೊರಟಿತು. ಎಲ್ಲರಿಗೂ ಎ.ಸಿ. ಯಲ್ಲಿ ಟಿಕೆಟ್ ಸಿಕ್ಕದೆ ಕೆಲವರು ಸ್ಲೀಪರ್ ನಲ್ಲೂ ಪ್ರಯಾಣಿಸಬೇಕಾಗಿ ಬಂದ ಕಾರಣ ನಾವೆಲ್ಲರೂ ಜತೆಯಾಗಿ ಕುಳಿತುಕೊಳ್ಳಲು ಸಾಧ್ಯವಾಗಲಿಲ್ಲ. ಆದರೂ ಬೋಗಿಗಳ ನಡುವೆ ಮತ್ತೆ ಮತ್ತೆ ನುಸುಳಿಕೊಂಡು ಓಡಾಡುತ್ತ ಜತೆಗೆ ಕುಳಿತು ಪರಸ್ಪರ ಪರಿಚಯ ಮಾಡಿಕೊಂಡು ಮಾತುಕತೆಯಾಡಿ ಒಳ್ಳೆಯ ಸ್ನೇಹಿತರಾಗುವುದು ನಮಗೇನೂ ಕಷ್ಟವಾಗಲಿಲ್ಲ. ನಾನು ಕುಳಿತ ಬೋಗಿಯಲ್ಲಿದ್ದ ಹಿರಿಯರಾದ ಶಿಕಾರಿಪುರ ಕೃಷ್ಣಮೂರ್ತಿ, ಶಿವಶಂಕರ್, ಕೇಶವ ಶೆಟ್ಟಿ, ಶಿವರಾಮ ಶೆಟ್ಟಿ, ಅವರ ಮಗಳು ನೀಹಾರಿಕಾ, ರಮೇಶ ಕಾರಂತ, ಯಶೋದಾ ಕಾರಂತರು ಮನೆಯಿಂದ ತಂದ ತಿಂಡಿ-ತೀರ್ಥಗಳನ್ನು ಜತೆಯಾಗಿ ಹಂಚಿಕೊಂಡು ಉಪಚಾರ ಮಾಡುತ್ತ ಸೇವಿಸುವುದರಲ್ಲಿ ಅಪಾರ ಆನಂದ ಪಡೆದೆವು. ನಮ್ಮ ಬೋಗಿಯ ಹತ್ತಿರವೇ ರೈಲಿನ ಪಾಕಶಾಲೆ ಇದ್ದುದರಿಂದ ನಮ್ಮ ತಂಡದ ಮಾಧವ ಅವರು ನಮಗೆ ಸಕ್ಕರೆ ರಹಿತ ಚಹ-ಕಾಫಿಗಳನ್ನು ಬೇಕಾದಾಗಲೆಲ್ಲ ಅಲ್ಲಿಗೆ ಕರೆದೊಯ್ದು ವಿಶೇಷವಾಗಿ ಮಾಡಿಸಿ ಕೊಡಿಸುತ್ತಿದ್ದರು.
ಭಾನುವಾರ ಸಂಜೆ ಮೂರೂವರೆ ಗಂಟೆಗೆ ನಾವು ದ್ವಾರಕಾ ರೈಲ್ವೆ ಸ್ಟೇಷನ್ ತಲುಪಿದೆವು. ಅಲ್ಲಿಂದ ಸೀದಾ ಅಟೋರಿಕ್ಷಾದಲ್ಲಿ ಹೋಟೆಲ್ ಶ್ರೀಗಣೇಶ್ ತಲುಪಿದೆವು. ಹೊಸ ಹೋಟೆಲ್ ಆಗಿದ್ದುದರಿಂದ ನೋಡಲು ತುಂಬಾ ಚೆನ್ನಾಗಿಯೇ ಇದ್ದರೂ ರೂಮುಗಳಲ್ಲಿ ನಮಗೆ ಬೇಕಾದ ಎಲ್ಲ ವ್ಯವಸ್ಥೆಗಳು ಇನ್ನೂ ಸಿದ್ಧವಾಗಿರಲಿಲ್ಲ. ನಾವು ರೂಮಿಗೆ ಹೋಗಿ ಸ್ನಾನ ಇತ್ಯಾದಿ ಮುಗಿಸಿ ಫ್ರೆಷ್ ಅಪ್ ಆಗಿ ದ್ವಾರಕಾಧೀಶ ದೇವಸ್ಥಾನಕ್ಕೆ ಅಟೋರಿಕ್ಷಾದಲ್ಲೇ ಹೋದೆವು.
ಮಾರ್ಗದರ್ಶಕರಾಗಿ ಧಾರ್ಮಿಕ್ ಅನ್ನುವವರು ನಮ್ಮ ಜತೆ ಸೇರಿದರು. ಮೊಬೈಲ್ ಗಳನ್ನು ಒಳಗೆ ಕೊಂಡುಹೋಗುವುದು ನಿಷಿದ್ಧವಾಗಿದ್ದರಿಂದ ನಾವೆಲ್ಲರೂ ನಮ್ಮ ಮೊಬೈಲ್ ಹಾಗೂ ಷೂಗಳನ್ನು ಒಂದು ಅಂಗಡಿಯಲ್ಲಿ ಇಟ್ಟೆವು. ಧಾರ್ಮಿಕ್ ನಮಗೆ ದೇವಾಸ್ಥಾನ ಹಾಗೂ ಪರಿಸರದ ಇತರ ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ಅವುಗಳ ಇತಿಹಾಸ ಹಾಗೂ ಅವುಗಳ ಹಿಂದೆ ಇರುವ ದಂತಕಥೆಗಳ ಬಗ್ಗೆ ವಿವರಿಸಿ ಹೇಳಿದರು. ದೇವಸ್ಥಾನವನ್ನು ಮಹಾಭಾರತ ಕಾಲದಲ್ಲೇ-ಅಂದರೆ ಸಾವಿರಾರು ವರ್ಷಗಳ ಹಿಂದೆಯೇ ಭಗವಾನ್ ಶ್ರೀಕೃಷ್ಣನ ವಂಶಕ್ಕೆ ಸೇರಿದ ರಾಜಾ ವಜ್ರನಾಥನು ಕಟ್ಟಿಸಿದನಂತೆ. 72 ಬೃಹತ್ ಕಂಬಗಳ ಮೇಲೆ ನಿಂತ ಐದು ಅಂತಸ್ತುಗಳುಳ್ಳ ಈ ದೇವಾಲಯದ ರಚನೆಯನ್ನು ಬರೇ ಮರಳುಕಲ್ಲುಗಳನ್ನು ಬಳಸಿ ಮಾಡಿದರಂತೆ. ಕಣ್ಣುಗಳು ಹೋದಲ್ಲೆಲ್ಲ ಕಂಡ ಸೂಕ್ಷ್ಮ ಕೆತ್ತನೆಗಳು ಮತ್ತು ಕುಸುರಿ ವಿನ್ಯಾಸಗಳು ದೇವಸ್ಥಾನದ ಅಂದವನ್ನು ಹೆಚ್ಚಿಸಿದ್ದವು. ಸರತಿ ಸಾಲು ಬಹಳಷ್ಟು ಉದ್ದವಿದ್ದುದರಿಂದ ದೇವರ ದರ್ಶನಕ್ಕಾಗಿ ನಾವು ಬಹಳಷ್ಟು ಕಾಯಬೇಕಾಯಿತು. ಎಲ್ಲೆಡೆ ಪ್ರಸಿದ್ಧ ಕ್ಷೇತ್ರಗಳಲ್ಲಿ ಇರುವಂತೆ ಪೋಲೀಸರು ನಮ್ಮನ್ನು ಶ್ರೀಕೃಷ್ಣನ ಮುದ್ದು ಮೂರ್ತಿಯನ್ನು ಒಂದು ಕ್ಷಣವೂ ಕಣ್ತುಂಬಿಸಿಕೊಳ್ಳಲು ಬಿಡದೆ ಓಡಿಸಿದರು. ಹೊರಗೆ ಬಂದ ನಂತರ ಗೈಡ್ ನಮ್ಮನ್ನು ಜಾಂಬವತಿ, ಸತ್ಯಭಾಮ, ಲಕ್ಷ್ಮೀನಾರಾಯಣ, ಆಂಜನೇಯ ಮೊದಲಾದ ದೇವತೆಗಳಿಗಾಗಿ ಪ್ರತಿಷ್ಠಾಪಿಸಿದ ಪುಟ್ಟ ಗುಡಿಗಳಿರುವಲ್ಲಿಗೆ ಕರೆದೊಯ್ದರು. ಈ ಎಲ್ಲ ಗುಡಿಗಳಲ್ಲಿ ಅಲಂಕೃತ ಮೂರ್ತಿಗಳು ಥಳಥಳಿಸುತ್ತಿದ್ದವು. ಅಲ್ಲಿಂದ ಮುಂದೆ ಶಾರದಾಮಠದಲ್ಲಿ ಶಾರದಾಮಾತೆಯ ಜತೆಗೆ ಶಂಕರಾಚಾರ್ಯರ ಮೂರ್ತಿ ಮತ್ತು ಓರ್ವ ಸ್ವಾಮೀಜಿಯವರ ಭಾವಚಿತ್ರವೂ ಇತ್ತು.
ಹೊರಗೆ ಬಂದು ನಮ್ಮ ಷೂ-ಮೊಬೈಲುಗಳನ್ನು ತೆಗೆದುಕೊಂಡು ದೇವಸ್ಥಾನದ ಹಿಂಭಾಗದಲ್ಲಿದ್ದ ಗೋಮತಿ ನದಿ ತೀರಕ್ಕೆ ಹೋದೆವು. ಅಲ್ಲಿಗೆ ಸುಮಾರು 56 ಮೆಟ್ಟಲುಗಳನ್ನಿಳಿದು ಹೋಗಬೇಕು. ನದಿಯು ಸಮುದ್ರದೊಂದಿಗೆ ಲೀನವಾಗುವ ಸ್ಥಳವದು. ಸಹಜವಾಗಿಯೇ ಸಮುದ್ರದ ತೆರೆಗಳು ಬಂದು ಅಪ್ಪಳಿಸುತ್ತಿದ್ದವು. ನಾವು ಇನ್ನೂ ಒಂದಷ್ಟು ಮೆಟ್ಟಲುಗಳನ್ನಿಳಿದು ನೀರಿನಲ್ಲಿ ಕಾಲಿಟ್ಟೆವು. ಎಲ್ಲರೂ ತಲೆಯ ಮೇಲೆ ನೀರು ಪ್ರೋಕ್ಷಿಸಿಕೊಳ್ಳಲೆಂದು ಬಾಗುತ್ತಿದ್ದಂತೆ ಜೋರಾದ ತೆರೆಗಳು ಬಂದು ಅಪ್ಪಳಿಸಿ ನಮ್ಮಲ್ಲಿ ಅನೇಕರ ತಲೆಗಳೂ ಒದ್ದೆಯಾದವು. ಒಂದು ರೋಮಾಂಚನವಿತ್ತ ಅನುಭವವದು. ನಾವು ಅಲ್ಲಿ-ಇಲ್ಲಿ ಒಂದಷ್ಟು ಅಲೆದಾಡಿ ಅಟೋರಿಕ್ಷಾ ಹಿಡಿದು ಹೋಟೆಲಿಗೆ ಬಂದು ಊಟ ಮಾಡಿ ವಿಶ್ರಾಂತಿ ತೆಗೆದುಕೊಂಡೆವು. ನನಗೆ ರೂಮ್ ಮೇಟ್ ಆಗಿ ಸಿಕ್ಕಿದ ಬಹಳ ಒಳ್ಳೆಯ ಕವಯಿತ್ರಿ ಲಕ್ಷ್ಮಿ ವಿ. ಭಟ್ ಜತೆಗೆ ಸಾಹಿತ್ಯದ ಕುರಿತು ಮಾತನಾಡುತ್ತ ಸಮಯ ಸರಿದುದೇ ಗೊತ್ತಾಗಲಿಲ್ಲ.
ಮರುದಿನ ಬೆಳಗ್ಗೆ ಎಂಟು ಗಂಟೆಗೆ ನಾವು ರುಕ್ಮಿಣಿ ಮಾತಾ ಮಂದಿರ್ ನೋಡಲು ನಮಗಾಗಿ ವ್ಯವಸ್ಥೆ ಮಾಡಿದ್ದ ಸುಖಾಸೀನ ಬಸ್ಸಿನಲ್ಲಿ ಹೋದೆವು. ಸುಮಾರು ಐದು ಕಿಲೋಮೀಟರ್ ದೂರ. ಪ್ರವಾಸದ ನೇತೃತ್ವ ವಹಿಸಿದ ಮಾಧವ್ ಅವರು ಪ್ರಾರ್ಥನೆ, ಶಾಂತಿ ಮಂತ್ರ, ಚಿಂತನ ಮೊದಲಾದ ಆರಂಭಿಕ ಕ್ರಿಯೆಗಳನ್ನು ಮಾಡಿಸಿದ ನಂತರ ಬಸ್ ರುಕ್ಮಿಣಿ ಮಂದಿರದ ಮುಂದೆ ನಿಂತಿತು. ಪ್ರಕೃತಿ ಟ್ರಾವೆಲ್ಸ್ ನ ಮಾಲೀಕ ಪ್ರಕಾಶ್ ನಮ್ಮ ಮುಂದಿನ ಎಲ್ಲಾ ಸ್ಥಳಗಳ ಭೇಟಿಗಳಿಗೂ ಮಾರ್ಗದರ್ಶಕರಾಗಿ ಕೆಲಸ ಮಾಡಿದರು. ದ್ವಾರಕೆಯಲ್ಲಿ ಕೃಷ್ಣನ ಜತೆಗೆ ಅವನ ಪ್ರಿಯ ಮಡದಿಯಾದ ರುಕ್ಮಿಣಿ ಇಲ್ಲದಿರುವುದಕ್ಕೆ ಕಾರಣವಾದ ಒಂದು ಕಥೆಯನ್ನು ಹೇಳಿದರು. ಒಮ್ಮೆ ಕೃಷ್ಣನು ಆಸ್ಥಾನದಲ್ಲಿ ತನ್ನ ಪಟ್ಟದರಸಿ ರುಕ್ಮಿಣಿಯೊಂದಿಗೆ ಕುಳಿತಿರಲು ಅಲ್ಲಿಗೆ ದೂರ್ವಾಸ ಮುನಿಗಳು ಬಂದರಂತೆ. ಗಂಡ-ಹೆಂಡತಿ ಇಬ್ಬರೂ ಬಂದು ಅವರನ್ನು ಉಪಚರಿಸಿದರಂತೆ. ಆಗ ರುಕ್ಮಿಣಿಗೆ ತುಂಬಾ ಬಾಯಾರಿಕೆಯಾಯಿತಂತೆ. ಅದು ಮಹಾಬರಗಾಲದ ಸಮಯ. ಅಲ್ಲೆಲ್ಲೂ ನೀರಿರಲಿಲ್ಲವಂತೆ. ಕೃಷ್ಣನು ನೆಲಕ್ಕೆ ಬಾಣ ಹೂಡಿ ಅವಳಿಗೋಸ್ಕರ ನೀರು ಬರಿಸಿದನಂತೆ. ತನಗೆ ಮಾಡುತ್ತಿದ್ದ ಉಪಚಾರಕ್ಕೆ ಚ್ಯುತಿ ಬಂದಿತೆಂದು ಕ್ರುದ್ಧರಾದ ದೂರ್ವಾಸರು ಕೃಷ್ಣ-ರುಕ್ಮಿಣಿಯರು ದೂರ ದೂರ ಇರುವಂತಾಗಲೆಂದು ಶಾಪ ಕೊಟ್ಟರಂತೆ. ಹಾಗೆ ರುಕ್ಮಿಣಿಯ ಮಂದಿರವು ದ್ವಾರಕಾಧೀಶನ ದೇವಸ್ಥಾನಕ್ಕೆ ತುಸು ದೂರದಲ್ಲಿರುವುದಂತೆ.
ಬೆಳಗ್ಗೆ ಎಂಟೂವರೆಯ ಹೊತ್ತಿಗೇ ರುಕ್ಮಿಣಿ ಮಂದಿರದಲ್ಲಿ ಸರತಿ ಸಾಲು ದೀರ್ಘವಾಗಿತ್ತು. ನಾವು ಸಾಲಿನಲ್ಲಿ ನಿಂತು ದೇವಸ್ಥಾನದ ಹೊರಭಾಗದ ಶಿಲ್ಪಕಲೆಯ ಸೌಂದರ್ಯವನ್ನು ಆಸ್ವಾದಿಸಿದೆವು. ದ್ವಾರಕಾಧೀಶ ದೇವಸ್ಥಾನಕ್ಕಿಂತ ಭಿನ್ನವಾಗಿ ಇಲ್ಲಿ ದೇವಾಧಿದೇವತೆಗಳು, ಸ್ತ್ರೀಯರು, ಪುರಾಣದ ಪಾತ್ರಗಳ ಶಿಲ್ಪಗಳು ಎದ್ದು ಕಾಣುತ್ತಿದ್ದವು. ಅರ್ಧಾಂಶ ಕ್ಯೂ ಮುಗಿದಾಗ ದೇವಿಗೆ ‘ಭೋಗ’ದ (ನೈವೇದ್ಯದ) ಸಮಯವಾದ್ದರಿಂದ ಮೂರ್ತಿಯ ಮುಂದೆ ಪರದೆ ಹಾಕಲಾಯಿತು. ನಾವು ಇನ್ನೂ ಸ್ವಲ್ಪ ಹೊತ್ತು ಕಾದೆವು. ಆದರೆ ರುಕ್ಮಿಣಿಯ ಸುಂದರ ಮೂರ್ತಿಯನ್ನು ನೋಡಿದಾಗ ಕಾದದ್ದು ಸಾರ್ಥಕವಾದ ಭಾವದಿಂದ ನಮ್ಮ ಮನಸ್ಸು ತುಂಬಿ ಬಂದಿತು.
ಮುಂದೆ ನಾವು ಬೇಟ್ ದ್ವಾರಕೆಗೆ ಪ್ರಯಾಣಿಸಿದೆವು. ಅದು ದ್ವಾರಕೆಯಿಂದ 12 ಕಿಲೋಮೀಟರ್ ದೂರದಲ್ಲಿರುವ ಒಂದು ದ್ವೀಪ. ಮೊದಲು ಅಲ್ಲಿಗೆ ಯಾತ್ರಿಕರು ದೋಣಿಯಲ್ಲೇ ಹೋಗಬೇಕಿತ್ತಂತೆ. ದೋಣಿಯವರು ಪ್ರಯಾಣಿಕರನ್ನು ವಿಪರೀತ ದೋಚುತ್ತಿದ್ದರಂತೆ. ಆದರೆ ಈಗ ಅಲ್ಲಿ ಭವ್ಯವಾದ ‘ಸುದರ್ಶನ ಸೇತುವೆ’ಯು ದ್ವೀಪವನ್ನು ಮುಖ್ಯ ಭೂಮಿಗೆ ಜೋಡಿಸುತ್ತದೆ. ನಮ್ಮ ಬಸ್ಸು ನಮ್ಮನ್ನು ಆ ಸೇತುವೆಯ ಮೂಲಕವೇ ಬೇಟ್ ದ್ವಾರಕಕ್ಕೆ ಕರೆದೊಯ್ದಿತು. ಬೇಟ್ ದ್ವಾರಕಾ ಕೃಷ್ಣನು ವಾಸಿಸುತ್ತಿದ್ದ ಮನೆಯಿದ್ದ ಜಾಗ. ದ್ವಾರಕೆಯಲ್ಲಿ ಅವನು ರಾಜ್ಯದ ವ್ಯವಹಾರಗಳನ್ನು ನೋಡುತ್ತಿದ್ದ ಆಸ್ಥಾನವಿದ್ದರೆ ಬೇಟ್ ದ್ವಾರಕದಲ್ಲಿ ಅವನ ಮನೆಯಿತ್ತು. ಚಿನ್ನದ ದ್ವಾರಕೆಯೂ ಅಲ್ಲೇ ಇತ್ತು ಅನ್ನುವುದನ್ನು ಭಾರತ ಸರಕಾರದ ಪುರಾತತ್ವ ಇಲಾಖೆಯು ಉತ್ಖನನದ ಮೂಲಕ ಕಂಡು ಹಿಡಿದಿದೆಯಾದರೂ ಅದು ಸಮುದ್ರದ ನೀರಿನ ಅಡಿಯಲ್ಲಿದೆ.
ಬೇಟ್ ದ್ವಾರಕದ ಹಿಂದೆ ಕೃಷ್ಣ-ಸುದಾಮರ ನಡುವಣ ಅನನ್ಯ ಗೆಳೆತನದ ಕಥೆಯೂ ಇದೆ. ಸಾಂದೀಪನಿ ಆಶ್ರಮದಲ್ಲಿ ಜತೆಯಾಗಿ ವಿದ್ಯಾಭ್ಯಾಸ ಪಡೆದ ಕೃಷ್ಣ-ಸುದಾಮರ ನಡುವೆ ಗಳಸ್ಯ-ಕಂಠಸ್ಯ ಮಿತ್ರತ್ವವಿತ್ತು. ದೊಡ್ಡವರಾದ ನಂತರ ಕೃಷ್ಣ ದ್ವಾರಕೆಯ ರಾಜನಾದ. ಸುದಾಮ ಕಡು ಬಡವನಾಗಿಯೇ ಉಳಿದ. ಒಂದು ದಿನ ಹೆಂಡತಿಯ ಒತ್ತಾಯದ ಮೇರೆಗೆ ಮಹಾ ಸ್ವಾಭಿಮಾನಿಯಾದ ಸುದಾಮ ಕೃಷ್ಣನ ಆಸ್ಥಾನಕ್ಕೆ ಸಹಾಯ ಬೇಡಲೆಂದು ಬರುತ್ತಾನೆ. ಕಾವಲುಗಾರರು ಅವನನ್ನು ಬಾಗಿಲಲ್ಲೇ ತಡೆ ಹಿಡಿದಾಗ ಅವನು ಅಲ್ಲಿ ನಿಲ್ಲದೆ ತಿರುಗಿ ವೇಗವಾಗಿ ಓಡುತ್ತಾನೆ. ಕೃಷ್ಣನಿಗೆ ಈ ವಿಚಾರ ಗೊತ್ತಾದ ಕೂಡಲೇ ಅವನು ಸುದಾಮನನ್ನು ಹಿಂಬಾಲಿಸಿ ಓಡುತ್ತಾನೆ. ಅವನಿಗೆ ಸುದಾಮ ಸಿಕ್ಕಿದ ಜಾಗವೇ ಬೇಟ್ ದ್ವಾರಕ ಅಂತೆ. ಗೆಳೆಯನಿಗಾಗಿ ಸುದಾಮ ತಂದಿದ್ದ ಒಂದು ಮುಷ್ಟಿ ಅವಲಕ್ಕಿ ಅಕ್ಷಯವಾಗಿ ಕೃಷ್ಣನ ಹೊಟ್ಟೆ ತುಂಬಿಸಿದ ಕಥೆ ಅತ್ಯಂತ ಹೃದಯಂಗಮವಾದದ್ದು. ಆ ನೆನಪಿಗಾಗಿ ಬೇಟ್ ದ್ವಾರಕದಲ್ಲಿರುವ ಕೃಷ್ಣ ಮಂದಿರದಲ್ಲಿ ಅವಲಕ್ಕಿಯೇ ಪ್ರಧಾನ ನೈವೇದ್ಯವಾಯಿತಂತೆ. ಆದರೆ ಈಗ ಅವಲಕ್ಕಿಯ ಬದಲು ಅಕ್ಕಿಯ ನೈವೇದ್ಯ ಮಾಡುತ್ತಾರೆ. ಭಕ್ತರು ಅಕ್ಕಿಯನ್ನೇ ಕಾಣಿಕೆಯಾಗಿ ಅರ್ಪಿಸುತ್ತಾರೆ. ಮಂದಿರದಲ್ಲಿ ಶ್ರೀಕೃಷ್ಣ ಮಾತ್ರವಲ್ಲದೆ ರಾಧಾಕೃಷ್ಣ, ಲಕ್ಷ್ಮಿನಾರಾಯಣ, ತ್ರಿವಿಕ್ರಮ, ಆಂಜನೇಯ ಮತ್ತು ಸುದಾಮನಿಗೂ ಒಂದು ಗುಡಿಯಿದೆ. ಇಲ್ಲಿ ಅಷ್ಟೇನೂ ಶಿಲ್ಪಕಲೆಯಿಲ್ಲ. ಜಾಗವೂ ತುಸು ಹಳತರಂತೆ ಕಾಣುತ್ತದೆ.
ಬೇಟ್ ದ್ವಾರಕಾದಿಂದ ನಾವು ತಿರುಗಿ ಬಂದ ನಂತರ ಮುಂದುವರಿದು ಗೋಪಿ ತಾಲಾಬ್ ನೋಡಲು ಹೋದೆವು. ಕೃಷ್ಣ ಗೋಪಿಕೆಯರೊಂದಿಗೆ ಜಲಕ್ರೀಡೆಯಾಡಿದ್ದನೆಂದು ನಂಬಲಾಗುವ ತಿಳಿನೀರಿನ ಒಂದು ದೊಡ್ಡ ಕೊಳ. ಅಲ್ಲಿ ಕೃಷ್ಣನು ಗೋಪಿಕೆಯೊಂದಿಗೆ ನಿಂತ ಮೂರ್ತಿಯಿರುವ ಒಂದು ಪುಟ್ಟ ಗುಡಿಯೂ ಇದೆ. ಗುಡಿಯ ಹೊರಗೆ ಮತ್ತು ಕೊಳದ ಬಳಿ ಗೋಪಿ ಚಂದನ ಯಥೇಚ್ಛವಾಗಿ ಮಾರಾಟ ಮಾಡುವ ಅಂಗಡಿಗಳಿವೆ. ಅಲ್ಲೆಲ್ಲ ನೋಡಿ ನಾವು ಮುಂದೆ ನಾಗೇಶ್ವರ ಜ್ಯೋತಿರ್ಲಿಂಗ ದೇವಸ್ಥಾನ ನೋಡಲು ಹೋದೆವು.
ನಾಗೇಶ್ವರ ಜ್ಯೋತಿರ್ಲಿಂಗವು ಭಾರತದಲ್ಲಿ ಇರುವ ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಹತ್ತನೇಯದಂತೆ. ಶಿವಪುರಾಣದ ಪ್ರಕಾರ ಒಮ್ಮೆ ಬ್ರಹ್ಮ ವಿಷ್ಣು-ಮಹೇಶ್ವರರ ನಡುವೆ ಯಾರು ಶ್ರೇಷ್ಠರು ಎಂಬ ಚರ್ಚೆ ಉಂಟಾಯಿತು. ಅದನ್ನು ಪರೀಕ್ಷೆಗೊಡ್ಡಲೆಂದು ಶಿವನು ಒಂದು ಬೃಹತ್ ಬೆಳಕಿನ ಕಂಬವನ್ನು ಸೃಷ್ಟಿಸಿ ಅದರಿಂದ ಭೂಮಿಯನ್ನು ಒತ್ತಿ ಹಿಡಿದ. ವಿಷ್ಣು ಮತ್ತು ಬ್ರಹ್ಮರ ಕೈಯಲ್ಲಿ ಅದರ ಎರಡೂ ತುದಿಗಳಿಗೆ ಹೋಗಿ ಮುಟ್ಟಲು ಹೇಳಿದ. ಬ್ರಹ್ಮ ಅದರ ಮೇಲ್ಭಾಗಕ್ಕೆ ಹೋಗುತ್ತ ತುದಿ ಮುಟ್ಟುವ ಮೊದಲೇ ತಾನು ಮುಟ್ಟಿದೆನೆಂದು ಸುಳ್ಳು ಹೇಳಿದ. ವಿಷ್ಣು ಕಂಬದ ಕೆಳಭಾಗದಿಂದ ಹೋಗಿ ತನಗೆ ತುದಿ ಸಿಗಲಿಲ್ಲವೆಂದು ನಿಜ ಹೇಳಿದ. ಆಗ ಶಿವ ಎರಡನೇ ಜ್ಯೋತಿರ್ಲಿಂಗವಾಗಿ ಬಂದು ‘ನಿನಗೆ ಇಲ್ಲಿ ಇನ್ನು ಜಾಗವಿಲ್ಲ’ ಎಂದು ಬ್ರಹ್ಮನನ್ನು ಶಪಿಸಿದ. ಜ್ಯೋತಿರ್ಲಿಂಗವೆಂದರೆ ಶಿವನು ತೋರಿಸುವ ಶ್ರೇಷ್ಠವೂ ಅಖಂಡವೂ ಆದ ಸತ್ಯ. ಜ್ಯೋತಿರ್ಲಿಂಗಗಳು ಶಿವನು ಆ ಜಾಗದಲ್ಲಿ ಪ್ರತ್ಯಕ್ಷನಾದ ಕಾಲದ ಸ್ಮರಣೆಗಾಗಿ ಸ್ಥಾಪಿತವಾಗಿರುತ್ತವೆ. ಮೂಲದಲ್ಲಿ 64 ಜ್ಯೋತಿರ್ಲಿಂಗಗಳಿದ್ದವು. ಇವುಗಳಲ್ಲಿ 12 ಜ್ಯೋತಿರ್ಲಿಂಗಗಳು ವಿಶೇಷವೂ ಪವಿತ್ರವೂ ಆಗಿರುವಂಥವು. ಪ್ರತಿಯೊಂದು ಜ್ಯೋತಿರ್ಲಿಂಗವೂ ಆ ನಿರ್ದಿಷ್ಟ ದೇವಸ್ಥಾನದ ಮುಖ್ಯ ದೇವತೆಯ ಹೆಸರನ್ನು ಪಡೆಯುತ್ತದೆ ಮತ್ತು ಪ್ರತಿಯೊಂದೂ ಶಿವನ ಪ್ರತ್ಯೇಕ ಮುಖವೆಂಬುದಾಗಿ ಪರಿಗಣಿಸಲಾಗುತ್ತದೆ. ಜ್ಯೋತಿರ್ಲಿಂಗವು ಶಿವನ ಅನಂತ ರೂಪಗಳ ಪ್ರತೀಕ.
ನಾಗೇಶ್ವರ ಜ್ಯೋತಿರ್ಲಿಂಗವು ಗುಜರಾತಿನ ದಾರುಕಾವನದಲ್ಲಿದೆ. ದಾರುಕ ಒಬ್ಬ ರಾಕ್ಷಸ. ಅವನು ಮಹಾ ಶಿವಭಕ್ತನಾದ ಸುಪ್ರಿಯನನ್ನು ಸೋಲಿಸಿ ಇನ್ನೂ ಕೆಲವರೊಂದಿಗೆ ಸೆರೆಯಲ್ಲಿ ಹಾಕಿದ. ದಾರುಕಾವನವೆಂಬ ಆ ಸೆರೆಮನೆಯ ಅಡಿಯಲ್ಲಿ ರಾಕ್ಷಸರೂ ಹಾವುಗಳೂ ತುಂಬಿದ್ದವು. ಸುಪ್ರಿಯನ ಸಲಹೆಯಂತೆ ಸೆರೆಮನೆಯಲ್ಲಿದ್ದ ಎಲ್ಲ ಕೈದಿಗಳೂ ಶಿವನ ಪವಿತ್ರ ಮಂತ್ರವನ್ನು ಜಪಿಸಿದರು. ಶಿವನು ಪ್ರತ್ಯಕ್ಷನಾಗಿ ದಾರುಕನನ್ನು ಸೋಲಿಸಿ ಅಲ್ಲಿ ಜ್ಯೋತಿರ್ಲಿಂಗವಾಗಿ ನೆಲೆಸಿದನು. ದಾರುಕನಿಗೆ ದಾರುಕಾ ಅನ್ನುವ ಪತ್ನಿಯಿದ್ದಳು. ಅವಳು ಮಾತಾ ಪಾರ್ವತಿಯ ಕುರಿತು ತಪಸ್ಸು ಮಾಡುತ್ತಿದ್ದಳು. ಪಾರ್ವತಿ ಪ್ರತ್ಯಕ್ಷಳಾಗಿ ಅವಳಿಗೆ ದಾರುಕಾವನವನ್ನು ವಶಕ್ಕೆ ತೆಗೆದುಕೊಳ್ಳುವ ಸಾಮರ್ಥ್ಯವಿತ್ತಳು. ಅನಂತರ ದಾರುಕಾ ಅಲ್ಲಿ ಕುಳಿತು ತಪಸ್ಸು ಮಾಡಿದಳು. ಆದ್ದರಿಂದ ಅದಕ್ಕೆ ದಾರುಕಾವನ ಎಂಬ ಹೆಸರು ಬಂದಿತು. ದಾರುಕಾ ಹೋದಲ್ಲೆಲ್ಲಾ ಆ ವನವು ಅವಳ ಹಿಂದಿನಿಂದಲೇ ಬರುತ್ತಿತ್ತು. ದಾರುಕಾವನವನ್ನು ರಾಕ್ಷಸರಿಂದ ರಕ್ಷಿಸಲು ದಾರುಕಾ ಪಾರ್ವತಿ ಕೊಟ್ಟ ವರವನ್ನು ನೆನಪಿಸಿಕೊಂಡಳು. ನಂತರ ಆ ವನವನ್ನು ಇಡಿಯಾಗಿ ಸಮುದ್ರದೊಳಕ್ಕೆ ಕೊಂಡು ಹೋಗಿ ಸಮುದ್ರದ ತಳದಲ್ಲಿಟ್ಟಳು. ಮಹಾ ಶಿವಭಕ್ತ ಸುಪ್ರಿಯನು ದಾರುಕನಿಂದಾಗಿ ಸಿಕ್ಕಿಹಾಕಿಕೊಂಡಿದ್ದು ಅಲ್ಲಿ. ಸುಪ್ರಿಯನ ಆಗಮನವು ಅಲ್ಲಿ ಒಂದು ಕ್ರಾಂತಿಯನ್ನೇ ಉಂಟುಮಾಡಿತು. ಅವನು ಒಂದು ಲಿಂಗವನ್ನು ಮಾಡಿ ಸೆರೆಮನೆಯಲ್ಲಿರುವ ಎಲ್ಲ ಕೈದಿಗಳೂ ಓಂ ನಮಃ ಶಿವಾಯ ಎಂದು ಜಪಿಸುವಂತೆ ಮಾಡಿದ. ಆಗ ದಾರುಕ ಸುಪ್ರಿಯನನ್ನು ಕೊಲ್ಲಲು ಹೊರಟ. ತಕ್ಷಣವೇ ಶಿವನು ಪ್ರತ್ಯಕ್ಷನಾಗಿ ಸುಪ್ರಿಯನಿಗೊಂದು ದೈವೀ ಖಡ್ಗವನ್ನು ಕೊಡುತ್ತಾನೆ. ಆ ಖಡ್ಗದ ಸಹಾಯದಿಂದ ಸುಪ್ರಿಯ ತನ್ನನ್ನು ರಕ್ಷಿಸಿಕೊಳ್ಳುತ್ತಾನೆ. ದಾರುಕ ಮತ್ತು ಎಲ್ಲ ರಾಕ್ಷಸರು ಸೋಲುತ್ತಾರೆ. ಸುಪ್ರಿಯ ಸ್ಥಾಪಿಸಿದ ಆ ಲಿಂಗದ ಹೆಸರು ನಾಗೇಶ್ವರ. ಶಿವನು ಲಿಂಗರೂಪಿ ನಾಗೇಶ್ವರನಾದರೆ ಪಾರ್ವತಿ ನಾಗೇಶ್ವರಿಯಾದಳು. ತನ್ನನ್ನು ಪೂಜಿಸುವವರಿಗೆ ಸತ್ಪಥವನ್ನು ತೋರಿಸುವುದಾಗಿ ಶಿವನು ಘೋಷಿಸುತ್ತಾನೆ. ಶಿವ ಮಹಾಪುರಾಣದಲ್ಲಿ ಈ ಜ್ಯೋತಿರ್ಲಿಂಗವು ಪಶ್ಚಿಮ ಕರಾವಳಿಯಲ್ಲಿದೆ ಎಂದು ಹೇಳಲಾಗಿದೆ. ನಿಜವಾದ ದಾರುಕಾವನ ಎಲ್ಲಿದೆ ಅನ್ನುವುದು ಈಗಲೂ ಚರ್ಚೆಯ ವಿಷಯವಾಗಿದೆ. ಅದು ದಾರುವೃಕ್ಷಗಳ ವನವೂ ಆಗಿರಬಹುದು.
ನಾಗೇಶ್ವರ ಜ್ಯೋತಿರ್ಲಿಂಗವು ಬಹಳ ಹಳೆಯ ದೇವಾಲಯ. ಒಳಗೆ ವಿಶಾಲವಾದ ಜಾಗವಿದೆ. ಗರ್ಭಗುಡಿಗೆ ಮೆಟ್ಟಲುಗಳನ್ನಿಳಿದು ಕೆಳಗೆ ಹೋಗಬೇಕು. ಶಿವಪಾರ್ವತಿಯರು ಇಲ್ಲಿ ನಾಗಗಳಾಗಿರುವುದು ಇಲ್ಲಿನ ಒಂದು ವೈಶಿಷ್ಟ್ಯ. ನಾವೆಲ್ಲರೂ ನೆಲದ ಮೇಲೆ ಕುಳಿತು ನಮ್ಮ ನಡುವಿನ ಸಂಸ್ಕೃತ ಪಂಡಿತರಾದ ಶಿಕಾರಿಪುರ ಕೃಷ್ಣಮೂರ್ತಿಯವರು ಹೇಳಿಕೊಟ್ಟ ಶಿವನ ಕುರಿತಾದ ಮಂತ್ರಗಳನ್ನು ಒಕ್ಕೊರಲಿನಲ್ಲಿ ಉಚ್ಚರಿಸಿ ದೇವರಿಗೆ ನಮಿಸಿ ಕೃತಾರ್ಥ ಭಾವ ತಾಳಿದೆವು. ದೇವಸ್ಥಾನದ ಪಕ್ಕದಲ್ಲಿ ಇತ್ತೀಚೆಗೆ ಹೊಸದಾಗಿ ಸ್ಥಾಪಿತವಾದ ಶಿವನ 80 ಅಡಿ ಎತ್ತರದ ಸುಂದರ ಬೃಹತ್ ಮೂರ್ತಿಯಿದೆ.
ಆ ಬೆಡಗನ್ನು ನೋಡುತ್ತಿದ್ದಂತೆ ನಾನು ಭಾವಪರವಶಳಾದೆ. ಅಲ್ಲೆಲ್ಲ ಸುತ್ತಮುತ್ತ ನಿಂತು ಫೋಟೋ ತೆಗೆಸಿಕೊಂಡು ಊಟದ ಹೊತ್ತು ಮೀರಿದ್ದರಿಂದ ನಾವು ಹೋಟೆಲಿಗೆ ಹೋದೆವು. ಪ್ರವಾಸದ ನಿರ್ವಾಹಕರು ಊರಿನಿಂದ ಅಡುಗೆಯವರನ್ನು ಕರೆದುಕೊಂಡು ಬಂದು ನಮ್ಮ ಊಟ ತಿಂಡಿಗಳ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದುದರಿಂದ ನಮಗೆ ನಮ್ಮ ಆರೋಗ್ಯದ ಬಗ್ಗೆ ನಿಶ್ಚಿಂತೆ. ಊಟ ಮುಗಿಸಿ ವಿಶ್ರಾಂತಿ ತೆಗೆದುಕೊಂಡ ನಂತರ ನಾವು ದ್ವಾರಕೆಯ ಸುತ್ತಮುತ್ತ ಷಾಪ್ಪಿಂಗ್ ಮಾಡಲು ಹೋದೆವು. ಗೋಮತಿಘಟ್ಟದಲ್ಲಿ ನಿಂತು ಪ್ರಕೃತಿ ವೀಕ್ಷಣೆ ಮಾಡಿದೆವು. ಅಲ್ಲಿ ಹೊಸದಾಗಿ ನಿರ್ಮಾಣವಾದ ‘ಸುದಾಮ ಸೇತುವೆ’ ತಲೆಯೆತ್ತಿ ನಿಂತಿತ್ತು. ತೀರದಲ್ಲಿ ಒಂಟೆ ಸವಾರಿ ಮಾಡಿಸುವವರಿದ್ದರು. ಒಂದು ಸವಾರಿಗೆ ಐವತ್ತು ರೂಪಾಯಿ. ನನಗೆ ಒಂಟೆ ಮೇಲೆ ಕುಳಿತುಕೊಳ್ಳಲು ಆಸೆಯಾಗಿ ನನ್ನ ಮಕ್ಕಳು ಮೊದಲೇ ಎಚ್ಚರಿಕೆ ಕೊಟ್ಟಿದ್ದರೂ, ಒಳಗಿನ ಭಯ ಹಿಂದಕ್ಕೆ ಜಗ್ಗುತ್ತಿದ್ದರೂ ಒಮ್ಮೆ ಹತ್ತಿ ಕುಳಿತೇ ಬಿಟ್ಟೆ.
ಅವತ್ತು ರಾತ್ರಿ ದ್ವಾರಕೆಯ ಹೋಟೆಲ್ಲಿನಲ್ಲೇ ಉಳಿದುಕೊಂಡೆವು. ದ್ವಾರಕೆ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಬೀದಿ ಬದಿಗಳಲ್ಲಿ ಎಲ್ಲಿ ನೋಡಿದರಲ್ಲಿ ಪ್ರಸನ್ನ ಮುಖಗಳ ಗೋವುಗಳು ಕಾಣಿಸಿಕೊಳ್ಳುತ್ತಿದ್ದವು. ಅವು ನಮ್ಮ ಬಳಿಗೆ ಬಂದು ‘ಏನಾದರೂ ತಿನ್ನಲಿಕ್ಕೆ ಕೊಡುತ್ತೀರಾ?’ ಎಂದು ಬೇಡುವ ದೃಶ್ಯ ಕೃಷ್ಣನ ಕಾಲದ ದ್ವಾರಕೆಯನ್ನು ನೆನಪಿಸಿ ಮನಸ್ಸಿಗೆ ಮುದ ನೀಡಿತು. ಇನ್ನು ಕೆಲವೆಡೆ ಕೋತಿಗಳೂ ಬಳಿ ಬಂದು ಬೇಡುತ್ತಿದ್ದವು. ಒಂದು ಬೆಳಿಗ್ಗೆ ಎಮ್ಮೆಗಳ ಒಂದು ದಿಬ್ಬಣವನ್ನೂ ನೋಡಿದೆವು. ನಾನು ಅದನ್ನು ನನ್ನ ಮೊಬೈಲ್ ಕೆಮರಾದಲ್ಲಿ ಸೆರೆ ಹಿಡಿದೆ.
ಮರುದಿನ ಬೆಳಗ್ಗೆ ನಾವು ವೆರಾವಲ್ ನ ಪ್ರಭಾಸ ಪಟ್ಟಣದಲ್ಲಿ ಸಮುದ್ರ ತೀರದ ಸೌರಾಷ್ಟ್ರ ಪ್ರದೇಶದಲ್ಲಿರುವ ಜಗತ್ಪ್ರಸಿದ್ಧ ಸೋಮನಾಥ ದೇವಸ್ಥಾನಕ್ಕೆ ಹೊರಟೆವು. ದಾರಿಯಲ್ಲಿ ಪೋರ್ ಬಂದರಿನಿಂದ 5 ಕಿ.ಮೀ. ದೂರದಲ್ಲಿರುವ ಸಾಂದೀಪನಿ ವಿದ್ಯಾನಿಲಯದ ಅವರಣದೊಳಗಿನ ‘ಶ್ರೀಹರಿಮಂದಿರ’ ಎಂಬ ಭವ್ಯವೂ ನಯನಮನೋಹರವೂ ಆದ ದೇವಸ್ಥಾನವನ್ನು ನೋಡಿದೆವು. ಇದು ಗುಜರಾತಿನ ಅತ್ಯಂತ ದೊಡ್ಡ ಕೃಷ್ಣ ದೇವಾಲಯಗಳಲ್ಲಿ ಒಂದು. ಕುಸುರಿ ಕೆತ್ತನೆಗಳಿಂದಲೂ ಶಿಲ್ಪಕಲಾ ವಿನ್ಯಾಸಗಳಿಂದಲೂ ತುಂಬಿದ 66 ಬೃಹತ್ ಆಧಾರ ಸ್ತಂಭಗಳೂ ಮೇಲೆ ದೊಡ್ಡ ದೊಡ್ಡ ಗುಮ್ಮಟಗಳೂ ಇರುವ ಈ ಮಂದಿರದ ವಾಸ್ತುಶಿಲ್ಪ ಬಹಳ ವಿಶೇಷವಾಗಿದೆ. ರಾತ್ರಿಯ ಹೊತ್ತು ದೀಪ ಬೆಳಗಿಸಿದಾಗ ಈ ದೇವಾಲಯವು ಬಹಳ ಸುಂದರವಾಗಿ ಕಾಣುತ್ತದೆಯಂತೆ. ರಾಧಾಕೃಷ್ಣ, ಲಕ್ಮೀನಾರಾಯಣ, ಆಂಜನೇಯ ಶಿವ, ರಾಮ-ಸೀತೆ-ಲಕ್ಷ್ಮಣರ ಜತೆಗೆ ಗಣಪತಿ, ದುರ್ಗೆಯರೂ ಇಲ್ಲ ಬೇರೆ ಬೇರೆ ಗುಡಿಗಳಲ್ಲಿ ಸ್ಥಾನ ಪಡೆದಿದ್ದಾರೆ. ಅತ್ಯಂತ ಪ್ರಶಾಂತವೂ ಸ್ವಚ್ಛ ಸುಂದರವೂ ಆದ ಮಂದಿರ ಮತ್ತು ಅದರ ಪರಿಸರಗಳು ನಮ್ಮನ್ನು ಉಲ್ಲಸಿತಗೊಳಿಸಿದವು. ಅಲ್ಲಿ ತೋಟದಲ್ಲಿ ಗಾಂಧೀಜಿಯವರು ಮತ್ತು ಕಸ್ತೂರಬಾ ಜತೆಗೆ ನಿಂತ ಹೊಂಬಣ್ಣದ ಒಂದು ಸುಂದರ ಶಿಲ್ಪವಿತ್ತು. ಇನ್ನೊಂದೆಡೆ ಅದೇ ರೀತಿಯ ಶ್ರೀಕೃಷ್ಣ-ಸುದಾಮರು ಜತೆಗೆ ನಿಂತ ಶಿಲ್ಪ. ನಾವು ತೋಟದ ಒಂದು ಬದಿಯಲ್ಲಿ ನಿಂತು ಚಹ ಸೇವಿಸಿ ಮತ್ತೆ ಹೊರಟೆವು. ಇನ್ನೂ ಸ್ವಲ್ಪ ಮುಂದೆ ಹೋಗಲು ನಿರ್ವಾಹಕರು ನಮ್ಮನ್ನು ಜಾಂಬವ ಗುಹೆಗೆ ಕರೆದುಕೊಂಡು ಹೋದರು. ಬಸ್ಸಿನಲ್ಲಿ ಪ್ರಕಾಶ್ ನಮಗೆ ಶ್ಯಮಂತಕ ಮಣಿಯ ಕಥೆ ಹೇಳಿದರು. ಗುಹೆಯ ಒಳಗೆ ಇಳಿಯಬೇಕಾದರೆ ಮೆಟ್ಟಲುಗಳಿದ್ದರೂ ಅನೇಕ ಕೊರಕಲುಗಳಿದ್ದುದರಿಂದ ಹಗ್ಗ ಹಿಡಿದುಕೊಂಡು ಜಾಗ್ರತೆಯಾಗಿ ಇಳಿಯಬೇಕು. ಒಳಗೆ ತುಂಬಾ ವಿಶಾಲವಾದ ಜಾಗವಿತ್ತು. ಹಲವು ಶಿವಲಿಂಗಗಳೂ ಇದ್ದವು. ದಿನವೂ ಅಲ್ಲಿ ಹೂವು-ಮಂಡಲಗಳನ್ನು ಹಾಕಿ ದೀಪ ಹಚ್ಚಿ ಪೂಜೆ ಸಲ್ಲಿಸಲಾಗುತ್ತದೆ. ನಾವು ಗುಹೆಯೊಳಗೆ ವಿವಿಧ ಭಂಗಿಗಳಲ್ಲಿ ನಿಂತು ಫೋಟೋ ತೆಗೆಸಿಕೊಂಡೆವು. ಮೇಲೆ ಬಂದು ಮರಗಳ ನೆರಳಿನಲ್ಲಿ ಕುಳಿತು ಊಟ ಮಾಡಿದೆವು.
ಮುಂದೆ ನಾವು ಹೋಗಿದ್ದು ಭಾಲ್ಕಾ ತೀರ್ಥವನ್ನು ನೋಡಲು. ಭಾಲ್ಕಾ ತೀರ್ಥ ಅಂದರೆ ಶ್ರೀಕೃಷ್ಣ ಪರಂಧಾಮವನ್ನೈದಿದ ಜಾಗ. ಜರಾ ಎಂಬ ಬೇಡನು ಶ್ರೀಕೃಷ್ಣನ ಕಾಲಿಗೆ ತೀಕ್ಷ್ಣವಾದ ಒಂದು ಬಾಣ ಬಿಟ್ಟದ್ದೇ ಗಂಭೀರವಾದ ಒಂದು ಗಾಯವಾಗಿ ಕೃಷ್ಣನ ಅಂತ್ಯಕ್ಕೆ ಕಾರಣವಾಯಿತಂತೆ. ಅಲ್ಲಿ ಈಗ ಒಂದು ಕೃಷ್ಣ ಮಂದಿರವಿದೆ. ಅಲ್ಲಿ ಕೃಷ್ಣನ ಮೂರ್ತಿಯ ಬಳಿ ಸಾವಿರಾರು ವರ್ಷಗಳಿಂದಲೂ ಹಸಿರಾಗಿಯೇ ಉಳಿದಿರುವ ಒಂದು ವೃಕ್ಷವೂ ಇದೆ. ಹೊರಗೆ ಒಂದು ದೊಡ್ಡ ಕೆರೆಯಿದೆ. ಅಲ್ಲಿ ಸ್ವಲ್ಪ ಹೊತ್ತು ಕಳೆದು ನಮ್ಮ ಪ್ರಯಾಣ ವೆರಾವಲ್ ಕಡೆಗೆ ಸಾಗಿತು. ಅಲ್ಲಿಗೆ ಮುಟ್ಟುವಾಗ ಸಂಜೆಯಾಗಿತ್ತು. ನಾವು ‘ಸುಖಸಾಗರ್’ ಹೋಟೆಲಿನಲ್ಲಿಳಿದು ಫ್ರೆಷ್ ಅಪ್ ಆಗಿ ಸೋಮನಾಥ ದೇವಸ್ಥಾನಕ್ಕೆ ಹೋದೆವು.
ಸೋಮನಾಥ ದೇವಾಲಯವು ದೇಶದ ಅತಿ ದೊಡ್ಡ ಪುಣ್ಯಕ್ಷೇತ್ರ. ಗುಜರಾತದ ವೆರಾವಲ್ ಜಿಲ್ಲೆಯ ಪ್ರಭಾಸ ಪಟ್ಟಣದಲ್ಲಿದೆ. 12 ಜ್ಯೋತಿರ್ಲಿಂಗಗಳಲ್ಲಿ ಇದು ಮೊದಲನೆಯದು. ಅದನ್ನು ಕಟ್ಟಿದ್ದು ಯಾವಾಗ ಅನ್ನುವುದು ಸ್ಪಷ್ಟವಿಲ್ಲ. ಕ್ರಿ.ಶ. ಸುಮಾರು 1 ಮತ್ತು 9ನೇ ಶತಮಾನಗಳ ನಡುವೆ ಎಂಬ ನಂಬಿಕೆಯಿದೆ. ಇತಿಹಾಸಕಾರರು ಮತ್ತು ಪುರಾತತ್ವ ಇಲಾಖೆಯವರು ಇದರ ಬಗ್ಗೆ ಬಹಳಷ್ಟು ಅಧ್ಯಯನ ಮಾಡಿ ಈ ದೇವಸ್ಥಾನವು ಒಂದು ಮಸೀದಿಯಾಗಿ ಪರಿವರ್ತನೆಗೊಂಡಿತ್ತು ಅನ್ನುವುದನ್ನು ಕಂಡು ಹಿಡಿದಿದ್ದಾರೆ. ಸ್ವಾತಂತ್ರ್ಯದ ನಂತರ ಈ ಅವಶೇಷಗಳನ್ನು ನಾಶಮಾಡಿ ಹಿಂದೂ ವಾಸ್ತುಶಿಲ್ಪದ ಗುರ್ಜರ ಶೈಲಿಯಲ್ಲಿ ಪುನರ್ನಿರ್ಮಾಣ ಮಾಡಲಾಯಿತು.
ಪ್ರಭಾಸ ಪಟ್ಟಣವು ಹಿಂದೆ ದೇಶದ ಒಂದು ಬಹು ಮುಖ್ಯ ಬಂದರಾಗಿತ್ತು. ವ್ಯಾಪಾರಿಗಳು ಅಲ್ಲಿಂದ ವಿದೇಶಗಳಿಗೆ ಸರಕು ಸಾಗಾಟ ಮಾಡುತ್ತಿದ್ದರು. 11ನೇ ಶತಮಾನದ ಪರ್ಷಿಯನ್ ಇತಿಹಾಸಕಾರ ಅಲ್ ಬಿರೂನಿ ಈ ಪಟ್ಟಣವು ಸಮುದ್ರ ವ್ಯಾಪಾರಿಗಳಿಗೆ ಆಶ್ರಯಸ್ಥಾನವಾಗಿತ್ತು ಮತ್ತು ಮಧ್ಯಪ್ರಾಚ್ಯ ಹಾಗೂ ಆಗ್ನೇಯ ಏಷ್ಯಾದ ದೇಶಗಳೊಂದಿಗೆ ವ್ಯಾಪಾರ ಸಂಪರ್ಕ ಹೊಂದಿತ್ತೆಂದೂ ಹೇಳುತ್ತಾನೆ. ಇದರಿಂದ ನಗರಕ್ಕೆ ತುಂಬಾ ಸಂಪತ್ತು ಬರುತ್ತಿತ್ತೆಂದೂ ಸೋಮನಾತ ದೇವಸ್ಥಾನವು ಬಂಗಾರದಿಂದ ಕೂಡಿ ಸಂಪದ್ಭರಿತವಾಗಿರಲು ಇದೇ ಕಾರಣವಾಗಿತ್ತೆಂದೂ ಹೇಳುತ್ತಾನೆ.
ಸೋಮನಾಥ ದೇವಸ್ಥಾನಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಇದನ್ನು ಸೋಮದೇವನು (ಚಂದ್ರ) ಚಿನ್ನದಲ್ಲಿ ಕಟ್ಟಿಸಿದನು. ದಕ್ಷ ಪ್ರಜಾಪತಿಯ 27 ಮಂದಿ ಮಗಳಂದಿರನ್ನು ಮದುವೆಯಾದ ಚಂದ್ರನು ರೋಹಿಣಿ ಎಂಬ ಹೆಂಡತಿಯನ್ನು ಮಾತ್ರ ಹೆಚ್ಚು ಪ್ರೀತಿಸಿದಾಗ ಅವನ ಮೇಲೆ ಸಿಟ್ಟಾದ ದಕ್ಷನು ಅವನ ಮುಖ ಕಳೆಗುಂದಲಿ ಎಂದು ಶಾಪ ಕೊಡುತ್ತಾನೆ. ಆಗ ಚಂದ್ರನು ಶಿವನ ಮೊರೆಹೊಗುತ್ತಾನೆ. ಕೊನೆಗೆ ಶಿವನಿಂದ ಚಂದ್ರನಿಗೆ 15 ದಿನಗಳ ಕಾಲ ಅವನ ಸೌಂದರ್ಯ ಉಳಿಯಲೆಂದೂ 15 ದಿನ ಅವನು ಕಪ್ಪಾಗಲೆಂದೂ ವರ ಸಿಗುತ್ತದೆ. ಹಾಗೆ ಕೃತಜ್ಞತೆಯ ಪ್ರತೀಕವಾಗಿ ಚಂದ್ರನು ಸೋಮನಾಥ ದೇವಸ್ಥಾನ ಕಟ್ಟಿಸುತ್ತಾನೆ. ಅನಂತರ ರಾವಣನು ಬೆಳ್ಳಿಯಿಂದಲೂ, ಕೃಷ್ಣ ಮರದಿಂದಲೂ, ಭೀಮನು ಕಲ್ಲಿನಿಂದಲೂ ದೇವಸ್ಥಾನದ ಪುನರ್ನಿರ್ಮಾಣ ಮಾಡುತ್ತಾರೆ. ಅನಂತರ ಕಣ್ಣುಕುಕ್ಕುವಷ್ಟು ಅಪಾರ ಸಂಪತ್ತನ್ನು ಹೊಂದಿದ ಈ ದೇವಸ್ಥಾನದ ಮೇಲೆ ವಿದೇಶಿಯರ ಕಣ್ಣು ಬೀಳುತ್ತದೆ. ಹದಿನೇಳಕ್ಕೂ ಹೆಚ್ಚು ಬಾರಿ ಇದರ ಮೇಲೆ ಆಕ್ರಮಣವಾಗಿ ವೈರಿಗಳು ಇಲ್ಲಿನ ಸಂಪತ್ತನ್ನು ದೋಚಿಕೊಂಡು ಹೋಗುತ್ತಾರೆ. ಅವರಲ್ಲಿ ಮುಖ್ಯನಾದವನು ಘಜನಿಯ ಮಹಮ್ಮದ್ (1026ರಲ್ಲಿ). ಆದರೆ ಸೋಮನಾಥನ ಶಕ್ತಿ ಎಷ್ಟಿದೆಯೆಂದರೆ ಪ್ರತಿ ಬಾರಿ ಆಕ್ರಮಣವಾದಾಗಲೂ ಅದರಿಂದ ಚೇತರಿಸಿಕೊಂಡು ದೇವಸ್ಥಾನವನ್ನು ಮೊದಲಿದ್ದ ಸ್ಥಿತಿಗೆ ತರಲು ಭಕ್ತರಿಗೆ ಸಾಧ್ಯವಾಗುತ್ತಿತ್ತು. ಕೊನೆಯ ಬಾರಿ ದೇವಸ್ಥಾನದ ಪುನರ್ನಿರ್ಮಾಣವಾಗಿದ್ದು 1951ರಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲರ ಮುಂದಾಳುತ್ವದಲ್ಲಿ. ಈಗ ಅದು ಸರ್ವಾಂಗ ಸುಂದರವಾಗಿ ಶೋಭಿಸುತ್ತಿದೆ.
ಇಲ್ಲಿ ಬಿಗಿಯಾದ ಬಂದೋಬಸ್ತು ಇದೆ. ಮೂರು ಕಡೆ ಪ್ರವಾಸಿಗರ ತಪಾಸಣೆ ಮಾಡುತ್ತಾರೆ. ಮೊಬೈಲ್ ಮತ್ತು ಬ್ಯಾಗ್ ಗಳನ್ನು ಒಯ್ಯುವಂತಿಲ್ಲ. ದೇವಸ್ಥಾನದ ತನಕ ವಾಹನದಲ್ಲಿ ಹೋಗುವಂತಿಲ್ಲ. ಕಿಲೋಮೀಟರ್ ವರೆಗೆ ನಡೆದೇ ಹೋಗಬೇಕು. ಬಹುಶಃ ಭಾರತದ ಬೇರಾವ ಕ್ಷೇತ್ರಗಳಲ್ಲೂ ಇಲ್ಲದ ಬಹಳ ವಿಶಾಲವಾದ ಆವರಣ. ದೂರದಿಂದಲೇ ಝಗಮಗಿಸುತ್ತ ಕಣ್ಣು ಕೋರೈಸುತ್ತಿದ್ದ ಭವ್ಯವಾದ ದೇಗುಲವನ್ನು ಕಂಡು ನಾವು ಆನಂದತುಂದಿಲರಾದೆವು. ಶಿಲಾಮಯ ದೇಗುಲ. ಗರ್ಭಗುಡಿ ಸ್ವರ್ಣಮಯ. ವಾಸ್ತು ಶಿಲ್ಪ ವಿನ್ಯಾಸಗಳ ಸೌಂದರ್ಯಕ್ಕೆಣೆಯಿಲ್ಲ. ಆದರೇನು? ಒಳಗೆ ನಿಂತು ನೋಡುತ್ತ ಮೈಮರೆಯುವ ಅವಕಾಶವಿಲ್ಲ. ಒಂದು ಕ್ಷಣದ ನೋಟ. ಆಮೇಲೆ ನಮ್ಮನ್ನು ಓಡಿಸುತ್ತಾರೆ. ನಾವು ಹೊರಗಿನ ಹುಲ್ಲುಹಾಸಿನ ಮೇಲೆ ಕುಳಿತು ಶಿಲ್ಪಕಲಾ ವೈಭವವನ್ನು ವೀಕ್ಷಿಸುತ್ತಾ ಆಸ್ವಾದಿಸುತ್ತಾ ಶಿಕಾರಿಪುರ ಸರ್ ಹೇಳಿಕೊಟ್ಟ ಮಂತ್ರಗಳನ್ನು ಜಪಿಸುತ್ತ ಸೋಮನಾಥನಿಗೆ ನಮ್ಮ ಪ್ರಾರ್ಥನೆ ಸಲ್ಲಿಸಿ ನಮ್ಮ ಬೇಡಿಕೆಗಳನ್ನು ನಿವೇದಿಸಿಕೊಂಡೆವು. ಅಷ್ಟು ಹೊತ್ತಿಗೆ ಜನನಿಬಿಡತೆ ತುಸು ಕಡಿಮೆಯಾಗಿದ್ದನ್ನು ಗಮನಿಸಿ ಇನ್ನೊಮ್ಮೆ ಒಳಗೆ ಹೋಗಿ ದೇವರ ದರ್ಶನ ಮಾಡಿ ಬಂದೆವು. ಅನಂತರ ಸುಮಾರು 200 ಮೀಟರ್ ಅಷ್ಟೇ ದೂರದಲ್ಲಿ ಭೋರ್ಗರೆಯುತ್ತಿರುವ ಸಮುದ್ರರಾಜನ ಬಳಿಗೆ ಹೋಗಿ ಸ್ವಲ್ಪ ಹೊತ್ತು ಕುಳಿತು ಬಂದೆವು.
ಮರುದಿವಸ ಬೆಳಗ್ಗೆ ಬೇಗನೆ ಎದ್ದು ಒಂದೆರಡು ಕಿಲೋಮೀಟರ್ ದೂರದಲ್ಲಿರುವ ಗೀತಾ ಮಂದಿರ, ಬಲರಾಮ ಮಂದಿರ, ಲಕ್ಷ್ಮೀನಾರಾಯಣ ಮಂದಿರಗಳನ್ನು ನೋಡಿ ಮುಗಿಸಿ ಅಲ್ಲೇ ಆವರಣದಲ್ಲಿದ್ದ ಹುಲ್ಲುಹಾಸಿನ ಮೇಲೆ ನಿಂತು ಪ್ರಭಾತ ಸೌಂದರ್ಯವನ್ನು ಸವಿಯುತ್ತ ಒಂದಷ್ಟು ಆಟಗಳನ್ನು ಆಡಿದೆವು. ಮುಂದೆ ಕಪಿಲಾ, ಹಿರಣ್ ಮತ್ತು ಸರಸ್ವತಿ ನದಿಗಳ ತ್ರಿವೇಣಿ ಸಂಗಮವನ್ನು ನೋಡಿ ನಂತರ ಹಳೆಯ ಸೋಮನಾಥ ಮಂದಿರವನ್ನು ನೋಡಲೆಂದು ಹೋದೆವು. ಹಳೆಯ ದೇವಾಲಯ ತುಂಬಾ ಸರಳವಾಗಿದೆ. ರಚನೆಯಲ್ಲಾಗಲಿ ವಾಸ್ತು ಶಿಲ್ಪ ವಿನ್ಯಾಸದಲ್ಲಾಗಲಿ ಅಂಥ ವೈಶಿಷ್ಟ್ಯವೇನೂ ಇಲ್ಲ. ಪೂಜೆಗೊಳಗಾಗುವ ಒಂದು ದೊಡ್ಡ ಶಿವಲಿಂಗವು ಗರ್ಭಗುಡಿಯಲ್ಲಿ ಮತ್ತು ಮೇಲೆ ಎಂಟು ಹತ್ತು ಮೆಟ್ಟಲುಗಳನ್ನು ಹತ್ತಿದ ನಂತರ ಅಲ್ಲಿಯೂ ಒಂದು ಶಿವಲಿಂಗ. ಇಲ್ಲಿ ಲಿಂಗವನ್ನು ಭಕ್ತರು ಧಾರಾಳವಾಗಿ ಸ್ಪರ್ಶಿಸಬಹುದು. ಪುಷ್ಪಾರ್ಚನೆ ಮಾಡಬಹುದು. ಅಭಿಷೇಕವನ್ನೂ ಮಾಡಬಹುದು.
ಹಳೆಯ ಸೋಮನಾಥ ದೇವಸ್ಥಾನ ನೋಡಿಯಾದ ಮೇಲೆ ನಾವು ಭಾವನಗರದತ್ತ ಮುಖ ಮಾಡಿ ಸಾಗಿದೆವು. ಸೋಮನಾಥದಿಂದ ಭಾವನಗರವು ಸುಮಾರು 270 ಕಿ.ಮೀ. ದೂರದಲ್ಲಿದೆ. ನಾಲ್ಕು-ಐದು ಗಂಟೆಗಳ ಪ್ರಯಾಣ. ದಾರಿಯಲ್ಲಿ ಊಟ-ಕಾಫಿಗಳಿಗೆ ಬಿಟ್ಟರೆ ಬಸ್ಸು ನೇರವಾಗಿ ಆರು ಗಂಟೆಗೆ ಭಾವನಗರ ತಲುಪಿತು. ನಾವು ಅಲ್ಲಿ ‘ಸಾನ್ವಿ ರೆಸಾರ್ಟ್’ನಲ್ಲಿ ಉಳಿದುಕೊಂಡೆವು. ಬಣ್ಣ ಬಣ್ಣದ ಹೂಗಳು ಸಮೃದ್ಧವಾಗಿ ಅರಳಿದ ವ್ಯವಸ್ಥಿತವಾಗಿ ನೆಟ್ಟ ಗಿಡಗಳ ನಡುವೆ ತಲೆಯೆತ್ತಿದ ಸುಂದರ ರೆಸಾರ್ಟ್. ಅಲ್ಲೇ ಹತ್ತಿರ ಇರುವ ಸಮುದ್ರ ತೀರದಲ್ಲಿ ಪ್ರಪಂಚದ ದೊಡ್ಡದೊಂದು ಪ್ರಕೃತಿ ವೈಚಿತ್ರ್ಯವಿದೆ. ಅಲ್ಲಿ ಕೋಲಿಯಾಕ್ ಸಮುದ್ರ ತೀರದಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿ ಒಂದು ತೆರೆದ ಪಂಚಲಿಂಗ ಶಿವದೇವಾಲಯವಿದೆ. ಅದರ ಹೆಸರು ‘ನಿಷ್ಕಳಂಕ ಮಹಾದೇವ ಮಂದಿರ’. ದಿನದ ಸುಮಾರು ಅರ್ಧ ಹೊತ್ತು ಈ ದೇವಾಲಯವು ಸಮುದ್ರದ ನೀರಿನಲ್ಲಿ ಪೂರ್ತಿಯಾಗಿ ಮುಳುಗಿರುತ್ತಿದ್ದು ಸುಮಾರು 30 ಅಡಿ ಎತ್ತರದ ಅದರ ಧ್ವಜಸ್ತಂಭದ ತುದಿಯಲ್ಲಿರುವ ಅದರ ಧ್ವಜದ ತುದಿ ಮಾತ್ರ ಕಾಣುತ್ತದೆ. ಇನ್ನರ್ಧ ಹೊತ್ತು ಸಮುದ್ರದ ನೀರು ದೇವಸ್ಥಾನದ ತನಕ ಹಿಂದೆ ಹೋಗಿ ಮನುಷ್ಯರಿಗೆ ನಡೆದು ಹೋಗಲು ಅನುಕೂಲ ಮಾಡಿಕೊಡುತ್ತದೆ. ಆ ಸಮಯ ನೋಡಿ ಭಕ್ತರು ಅಲ್ಲಿಗೆ ನಡೆದು ಹೋಗಿ ಐದೂ ಲಿಂಗಗಳಿಗೆ ಪೂಜೆ ಸಲ್ಲಿಸಿ ಬರುತ್ತಾರೆ. ಈ ಶಿವಲಿಂಗಗಳನ್ನು ಪಾಂಡವರು ರಾಜಸೂಯ ಯಾಗ ಮಾಡುವ ಸಂದರ್ಭದಲ್ಲಿ ತಾವು ಮಾಡಿದ ಪಾಪಗಳನ್ನು ಕಳೆಯಲೆಂದು ಕೃಷ್ಣನ ಸಲಹೆಯಂತೆ ಸ್ಥಾಪಿಸಿದರು ಎಂಬ ಕಥೆಯಿದೆ. ನಾವು ಸಮುದ್ರದ ನೀರಿಳಿದು ಕೆಸರು-ಹೂಳು ತುಂಬಿ ಜಾರುತ್ತಿದ್ದ ನೆಲದ ಮೇಲೆ ಎಚ್ಚರಿಕೆಯಿಂದ ನಡೆಯುತ್ತ ಹೋಗಿ ಪೂಜೆ ಸಲ್ಲಿಸಿ ಬಂದೆವು.
ಮುಂದೆ ನಮ್ಮ ವೇಳಾಪಟ್ಟಿಯಲ್ಲಿ ಬಾಕಿಯಿದ್ದದ್ದು 2018ರಲ್ಲಿ ವಡೋದರದಿಂದ 90 ಕಿಲೋಮೀಟರ್ ದೂರದ ಕೆವಾಡಿಯಾ (ಈಗ ಏಕತಾನಗರ)ದಲ್ಲಿ ಸ್ಥಾಪಿತವಾದ ಉಕ್ಕಿನ ಮನುಷ್ಯ ಸರ್ದಾರ ವಲ್ಲಭಭಾಯಿ ಪಟೇಲ್ ಅವರ ‘ಸ್ಟೇಚ್ಯೂ ಆಪ್ ಯೂನಿಟಿ’ ಮಾತ್ರ. ಅದನ್ನು ನೋಡಲು ನಾವು ಮೊದಲು ವಡೋದರಕ್ಕೆ ಪ್ರಯಾಣ ಬೆಳೆಸಿ ಅಲ್ಲಿ ‘ವಿಂಟೇಜ್ ಲಾಡ್ಜ್’ ನಲ್ಲಿ ರಾತ್ರಿ ಉಳಿದೆವು. ಮರುದಿನ ಶುಕ್ರವಾರ ಬೆಳಗ್ಗೆ ಒಂಭತ್ತು ಗಂಟೆಗೆ ಬಸ್ಸಿನಲ್ಲಿ ಹೊರಟು ಅಲ್ಲಿಗೆ ತಲುಪಿದೆವು. ಟಿಕೆಟ್ (ರೂ.350/-) ಮೊದಲೇ ಆನ್ ಲೈನ್ ನಲ್ಲಿ ಬುಕ್ ಮಾಡಿ ಆಗಿತ್ತು. ನಮಗೆ ಅವರು ಕೊಟ್ಟಿದ್ದ ಸಮಯ ಮಧ್ಯಾಹ್ನ 2-00ರಿಂದ 4-00 ಗಂಟೆ. ಅಲ್ಲಿಗೆ ಹೋಗಲು ಪ್ರವೇಶದ್ವಾರದಿಂದ ಅವರದ್ದೇ ಬಸ್ಸಿದೆ. ದಟ್ಟ ಕಾಡಿನ ಮಧ್ಯೆ 6 ಕಿಲೋಮೀಟರ್ ಹೋಗಬೇಕು. ಜಾಗ ತಲುಪಿದ ಕೂಲೇ ಅಲ್ಲಿ ಬಿಗಿಯಾದ ಸೆಕ್ಯೂರಿಟಿ ಇದೆ. ಚೆಕಿಂಗ್ ಎಲ್ಲ ಮಾಡಿಸಿಕೊಂಡು ಕಾರಿಡಾರಿನಲ್ಲಿ ನಾವು ತುಂಬಾ ದೂರ ನಡೆದೇ ಸಾಗಿದೆವು. ಕರೆದುಕೊಂಡು ಹೋಗಲು ಅವರದ್ದೇ ವಾಹನವೂ ಇದೆ. ಆರಂಭದ ಜಾಗದಿಂದಲೇ ಮುಂದೆ 594 ಅಡಿ ಎತ್ತರದ, ಕಬ್ಬಿಣದಿಂದ ಮಾಡಿದ ಭವ್ಯವಾದ ಸ್ಟೇಚ್ಯೂ ಕಾಣುತ್ತಿದ್ದಂತೆ ದೇಶದ ಏಕತೆಗಾಗಿ ತಮ್ಮ ಸರ್ವಸ್ವವನ್ನೂ ತ್ಯಾಗ ಮಾಡಿ ಪರಿಶ್ರಮಿಸಿದ ಪಟೇಲರ ಬಗ್ಗೆ ಅಪಾರ ಗೌರವವನ್ನು ಸದಾ ಕಾಪಿಟ್ಟುಕೊಂಡಿದ್ದ ನನ್ನ ಮನಸ್ಸು ತುಂಬಿ ಬಂತು.
ನಮ್ಮ ಎಡಬದಿಯಲ್ಲಿ ನರ್ಮದಾ ನದಿ ತುಂಬಿ ಹರಿಯುತ್ತಿತ್ತು. ಪ್ರವೇಶ ದ್ವಾರ ದಾಟಿ ಒಳ ಹೊಕ್ಕ ಕೂಡಲೇ ಪಟೇಲರ ಜೀವನ ಚಿತ್ರಗಳ ಗ್ಯಾಲರಿ, ಡಾಕ್ಯುಮೆಂಟರಿ, ಅವರ ಲೈಬ್ರರಿ ಮೊದಲಾದವುಗಳನ್ನು ನೆಲ ಅಂತಸ್ತಿನಲ್ಲಿ ನೋಡಿದೆವು. ಲಿಫ್ಟ್ ನಲ್ಲಿ 45ನೇ ಮಾಳಿಗೆಗೆ ಏರಿ ಅಲ್ಲಿಂದ ಕೆಳಗೆ ತುಸು ದೂರದಲ್ಲಿ ಕಾಣುತ್ತಿದ್ದ ನರ್ಮದಾ ನದಿಗೆ ಅಡ್ಡಲಾಗಿ ಕಟ್ಟಿದ್ದ ‘ಸರ್ದಾರ್ ಸರೋವರ ಅಣೆಕಟ್ಟು’ ಮತ್ತು ತುಂಬಿ ಹರಿಯುತ್ತಿದ್ದ ನರ್ಮದಾ ನದಿಯನ್ನು ದೂರದಿಂದಲೇ ಕಣ್ತುಂಬಾ ನೋಡಿ ಮನಸೋ ಇಚ್ಛೆ ಫೋಟೋಗಳನ್ನು ಕ್ಲಿಕ್ಕಿಸಿಕೊಂಡು ಬಂದೆವು.
ನಮ್ಮ ಗುಂಪಿನ ವೈಶಿಷ್ಟ್ಯದ ಬಗ್ಗೆ ಒಂದೆರಡು ಮಾತುಗಳನ್ನಿಲ್ಲಿ ಹೇಳಲೇ ಬೇಕು. ಇಡೀ ಗುಂಪಿನ ನೇತೃತ್ವ ವಹಿಸಿದ ಚುರುಕು ವ್ಯಕ್ತಿತ್ವದ ಬಹುಮುಖ ಪ್ರತಿಭೆಯ ಶ್ರೀ ಮಾಧವ್ ಮತ್ತು ಲತೇಶ್. ನಾವು ಬಸ್ ನಲ್ಲಿ ಪ್ರಯಾಣಿಸುವಾಗಲಾಗಲಿ ಕೆಳಗೆ ಇಳಿದು ನಡೆಯುತ್ತಿರುವಾಗಲಾಗಲಿ ಒಂದು ಕ್ಷಣ ಕೂಡಾ ಸುಮ್ಮನಿರಲಿಕ್ಕಾಗಲಿ ನಿದ್ದೆ ತೂಗಲಿಕ್ಕಾಗಲಿ ಬಿಡಲಿಲ್ಲ. ಹಾಡು, ಕುಣಿತ, ಅಂತ್ಯಾಕ್ಷರಿ, ಚಿಂತನ, ಮಂಥನ, ಚರ್ಚೆ, ವ್ಯಾಯಾಮ, ಆಟಗಳು ಹೀಗೆ ವೈವಿಧ್ಯಮಯ ಚಟುವಟಿಕೆಗಳಿಂದಾಗಿ ನೂರಾರು ಮೈಲಿಗಳು ಸಾಗಿದ್ದು ಗೊತ್ತೇ ಆಗುತ್ತಿರಲಿಲ್ಲ. ಹಾಡುವುದೇನೋ ನನಗೆ ಕರತಲಾಮಲಕ. ಆದರೆ ಕುಣಿಯುವುದು…!!. ನಾವು ಹೆಚ್ಚಿನವರು ಹಿರಿಯ ನಾಗರಿಕರು. ನಾವೂ ಎದ್ದು ನಿಂತು ಹಾಡುಗಳ ತಾಳಕ್ಕೆ ಕುಣಿದು ನಲಿಯುವಂತೆ ಅವರು ಮಾಡಿದ್ದು ಪ್ರಶಂಸನೀಯ. ಅಲ್ಲದೆ ನಮ್ಮ ಗುಂಪಿನಲ್ಲಿದ್ದ ವಿಶೇಷ ಚೇತನದ ಹುಡುಗಿ ಮಂಗಳೂರಿನ ಮಣ್ಣಗುಡ್ಡೆ ನಿವಾಸಿ ಶ್ರೀ ರಮೇಶ ಕುಲಾಲ್ ಮತ್ತು ಜಯಂತಿಯವರ ಮಗಳು ದೀಕ್ಷಿತಾಳ ಕಂಠಸಿರಿ ಮತ್ತು ನೂರಾರು ಹಾಡುಗಳನ್ನು ಒಂದಿಷ್ಟೂ ತಪ್ಪಿಲ್ಲದೆ ಸುಶ್ರಾವ್ಯವಾಗಿ ಹಾಡಬಲ್ಲ ಆಕೆಯ ಅದ್ಭುತ ಪ್ರತಿಭೆ ನೋಡಿ ನಾವೆಲ್ಲರೂ ಬೆರಗಾಗಿದ್ದೆವು ಮತ್ತು ಆಕೆಯನ್ನು ಹಾಡು ಎಂದು ಮತ್ತೆ ಮತ್ತೆ ಪೀಡಿಸಿದ್ದೆವು. ಅನೇಕ ಬಾರಿ ಗ್ರೂಪು ಪ್ರವಾಸಗಳಲ್ಲಿ ಭಾಗವಹಿಸಿದ್ದರೂ ಇಂಥ ಅನುಭವ ನನಗಾಗುತ್ತಿರುವುದು ಇದೇ ಮೊದಲು.
ನನಗೆ ವಿಮಾನ ಪ್ರಯಾಣಕ್ಕಿಂತ ರೈಲಿನಲ್ಲಿ ಹೋಗುವುದೇ ಹೆಚ್ಚು ಖುಷಿ. ರೈಲಿನಲ್ಲಿ ಹೋಗುವಾಗ ಹೆಚ್ಚಾಗಿ ಊರ ಹೊರಭಾಗದಿಂದ ಹೋಗುವ ಕಾರಣ ದಾರಿಯಲ್ಲಿ ಪ್ರಕೃತಿಯ ದಟ್ಟ ಹಸಿರು ದೃಶ್ಯಗಳು ಕಾಣುವುದೇ ಹೆಚ್ಚು. ಮಂಗಳೂರಿನಿಂದ ದ್ವಾರಕೆಯ ತನಕವೂ ನಾನು ಹಸಿರು ಪೈರಿನಿಂದ ಸಂಪದ್ಭರಿತ ಹೊಲಗಳನ್ನೂ ಗಿಡಮರಗಳನ್ನೂ ನೋಡುವ ಅಮಿತಾನಂದವನ್ನು ಸವಿಯುತ್ತ ಹೋದೆ. ಮಂಗಳೂರಿನಿಂದ ಪನವೇಲ್ ತನಕವೂ ನೂರಾರು ಕತ್ತಲು ತುಂಬಿದ ಸುರಂಗಗಳು. ಕೆಲವಂತೂ ಕಿಲೋಮೀಟರ್ ಗಟ್ಟಲೆ ಉದ್ದ…! ಕತ್ತಲ ಹಿಂದೆ ಬೆಳಕು – ಬೆಳಕಿನ ನಂತರ ಕತ್ತಲು ಎಂಬ ತತ್ವಜ್ಞಾನವನ್ನು ನೆನಪಿಸುವ ಆ ಸನ್ನಿವೇಶಗಳು ಅದ್ಭುತವಾಗಿದ್ದವು. ಪಟೇಲರ ಪ್ರತಿಮೆಯ ವೀಕ್ಷಣೆಯೊಂದಿಗೆ ನಮ್ಮ ಪ್ರವಾಸ ಕೊನೆಗೊಂಡಿತ್ತು. ನಾವು ಬಸ್ಸು ಹಿಡಿದು ಹೊಟೇಲ್ ರೂಮಿಗೆ ಬಂದೆವು. ಮರುದಿನ ಬೆಳಿಗ್ಗೆ 5-00 ಗಂಟೆಗೆ ವಡೋದರದಿಂದ ಮಂಗಳೂರಿಗೆ ಹೋಗುವ ಟ್ರೈನ್ ಹತ್ತಿ ಊರಿಗೆ ಬಂದೆವು.
ಡಾ. ಪಾರ್ವತಿ ಜಿ. ಐತಾಳ್
ಡಾ. ಪಾರ್ವತಿ ಗಂಗಾಧರ ಐತಾಳರು ಕಾಸರಗೋಡು ಜಿಲ್ಲೆಯ ಧರ್ಮತ್ತಡ್ಕದವರು. ಕಣ್ಣೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ ಪದವಿಯನ್ನು ಪಡೆದ ಇವರು ಮುಲ್ಕಿಯ ವಿಜಯಾ ಕಾಲೇಜು ಹಾಗೂ ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಮತ್ತು ಇಂಗ್ಲೀಷ್ ವಿಭಾಗದ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಶ್ರೀಮತಿ ಪಾರ್ವತಿ ಜಿ. ಐತಾಳರು ಸಣ್ಣ ಕಥೆ, ಕವನ, ನಾಟಕ ಬರೆದಿರುವುದರೊಂದಿಗೆ ಅನುವಾದ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಿದ್ದಾರೆ. ಉದ್ಯೋಗದೊಂದಿಗೆ ದಿನ ಪತ್ರಿಕೆಗಳಲ್ಲಿ ಲೇಖನ ಬರೆಯಲಾರಂಬಿಸಿದ ಇವರು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದು ಕನ್ನಡ ಮಾತೃಭಾಷೆಯಾಗಿರುವ ಇವರು ಸ್ನೇಹಿತರಿಂದ ಮಲಯಾಳಂ ಭಾಷೆಯನ್ನು ಕಲಿತು, ಕನ್ನಡ, ಹಿಂದಿ, ಇಂಗ್ಲಿಷ್, ಮಲಯಾಳಂ ಮತ್ತು ತುಳು ಭಾಷೆಗಳನ್ನು ತಿಳಿದ ಪಂಚಭಾಷಾ ಪ್ರವೀಣೆಯಾಗಿದ್ದಾರೆ.
ಡಾ. ಪಾರ್ವತಿಯವರು ಸ್ವತಂತ್ರ ಸಾಹಿತ್ಯದೊಂದಿಗೆ ವಿವಿಧ ಸಾಹಿತಿಗಳ ಹಿಂದಿ, ಮಲಯಾಳಂ, ಇಂಗ್ಲೀಷ್ ಮೂಲದ ನಾಟಕ, ಕಾದಂಬರಿ, ಸಣ್ಣ ಕತೆ ಇತ್ಯಾದಿಗಳನ್ನು ಅನುವಾದ ಮಾಡಿದ ಖ್ಯಾತಿ ಇವರದು. ಮಲ್ಲಿಕಾ ಪ್ರಶಸ್ತಿ, ಗೋವಿಂದರಾವ್ ದತ್ತಿನಿಧಿ ವಿಮರ್ಶಾ ಲೇಖನ ಬಹುಮಾನ ಮತ್ತು ಎಚ್. ಸಾವಿತ್ರಮ್ಮ ದತ್ತಿನಿಧಿ ಪ್ರಶಸ್ತಿ ಇವುಗಳು ಸಾಹಿತ್ಯ ಕ್ಷೇತ್ರದ ಇವರ ಸಾಧನೆಗೆ ಬಂದ ಪ್ರಶಸ್ತಿಗಳು.