ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಾ. ಡಿಸೋಜರಿಗೆ ಶ್ರದ್ದಾಂಜಲಿ ಕಾರ್ಯಕ್ರಮವು ದಿನಾಂಕ 06 ಜನವರಿ 2025ರಂದು ನಡೆಯಿತು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಾಡೋಜ ಡಾ. ಮಹೇಶ ಜೋಶಿ ಇವರು ಮಾತನಾಡಿ “ಪ್ರಕೃತಿ ಕಾಳಜಿಯ ಮನವುಳ್ಳ ಬರಹಗಾರರೆಂದು ಪ್ರಖ್ಯಾತರಾಗಿದ್ದ ನಾರ್ಬರ್ಟ್ ಡಿಸೋಜಾ ಸಜ್ಜನಿಕೆಯ ವ್ಯಕ್ತಿತ್ವವನ್ನು ಹೊಂದಿದ್ದರೂ ಹೋರಾಟದ ವಿಷಯಕ್ಕೆ ಬಂದಾಗ ಮಂಚೂಣಿಯಲ್ಲಿರುತ್ತಿದ್ದರು. ಅವರು 2014 ವರ್ಷದಲ್ಲಿ ಮಡಿಕೇರಿಯಲ್ಲಿ ನಡೆದ 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ತು ಕಳೆದ ವರ್ಷ ಅವರಿಗೆ ಫಾದರ್ ಚೆಸೇರಾ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ನಾ. ಡಿಸೋಜರು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ 1937ರ ಜೂನ್ 6ರಂದು ಜನಿಸಿದರು. ಇವರ ತಂದೆ ಫಿಲಿಪ್ ಡಿಸೋಜರು ಶಾಲಾ ಮಾಸ್ತರರಾಗಿದ್ದರು. ಅವರು ಶಾಲಾ ಮಕ್ಕಳಿಗೆ ಕಲಿಸಲು ಬರೆದುಕೊಂಡಿದ್ದ ಪುಸ್ತಕಗಳಲ್ಲಿನ ಪದ್ಯಗಳನ್ನು ಓದತೊಡಗಿದ ಬಾಲಕ ನಾ ಡಿಸೋಜ ಅವರಲ್ಲಿ ತಾನೇ ತಾನಾಗಿ ಸಾಹಿತ್ಯದೊಲವು ಮೊಳೆಯಿತು. ಜೊತೆಗೆ ತಾಯಿ ರೊಪೀನಾ ಅವರು ಹೇಳುತ್ತಿದ್ದ ಜನಪದ ಹಾಡುಗಳು ಮತ್ತು ಕತೆಗಳು ಡಿಸೋಜ ಅವರ ಮನಸ್ಸಿನ ಮೇಲೆ ಮೋಡಿ ಮಾಡತೊಡಗಿದ್ದವು. ಗೊರೂರು ನರಸಿಂಹಾಚಾರ್ ಅವರು ಅಕರ್ಷಕವಾಗಿ ಶಾಲೆಯಲ್ಲಿ ಬೋಧಿಸುತ್ತಿದ್ದ ರೀತಿ ಮತ್ತು ಕಾಲೇಜಿನ ದಿನಗಳಲ್ಲಿ ಗುರುಗಳಾಗಿದ್ದ ಡಾ. ಜಿ.ಎಸ್. ಶಿವರುದ್ರಪ್ಪನವರ ಪಾಂಡಿತ್ಯದ ಪ್ರಭಾವ ನಾ. ಡಿಸೋಜಾ ಅವರನ್ನು ಸಾಕಷ್ಟು ಮೋಡಿಮಾಡಿತ್ತು. ನಾ. ಡಿಸೋಜ ಅವರು ಲೋಕೋಪಯೋಗಿ ಇಲಾಖೆಯಲ್ಲಿ ವೃತ್ತಿಜೀವನ ಪ್ರಾರಂಭಿಸಿ ಶರಾವತಿ ಯೋಜನೆ, ಕಾರ್ಗಲ್, ಮಾಸ್ತಿಕಟ್ಟೆ, ತೀರ್ಥಹಳ್ಳಿ, ಸಾಗರಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದರು. ನಾ. ಡಿಸೋಜರು 75 ಕಾದಂಬರಿಗಳು, 6 ಚಾರಿತ್ರಿಕ ಕಾದಂಬರಿ, ಮಕ್ಕಳಿಗಾಗಿ 25 ಕಾದಂಬರಿ, 9 ಕಥಾ ಸಂಕಲನ, ಸಮಗ್ರ ಕಥೆಗಳ ಎರಡು ಸಂಪುಟಗಳು, ಸುಮಾರು ಐದು ನೂರು ಕಥೆಗಳು, ಹತ್ತಾರು ನಾಟಕಗಳು, ರೇಡಿಯೋ ನಾಟಕಗಳು, ಅನೇಕ ಪತ್ರಿಕಾ ಲೇಖನಗಳು ಹೀಗೆ ವಿಶಾಲ ವ್ಯಾಪ್ತಿಯ ಬರಹಗಳನ್ನು ಮಾಡಿದ್ದಾರೆ. ಅವರು ಮಡಕೇರಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯಿಂದ ‘ರೈತರನ್ನು ತಾನು ಬೆಳೆಯುತ್ತಿದ್ದ ಭೂಮಿಯ ಮೇಲಿನ ಕಾರ್ಖಾನೆಯ ಕಾವಲುಗಾರನನ್ನಾಗಿ ನಿಲ್ಲಿಸುವುದು ಇಂದಿನ ದು:ಸ್ಥಿತಿಯ ರೂಪಕವಾಗಿದೆ’ ಎಂದು ಹೇಳಿದ್ದು ಅವರ ಮಾನವೀಯ ಕಾಳಜಿಗೆ ನಿದರ್ಶನವಾಗಿತ್ತು” ಎಂದು ವಿಶ್ಲೇಷಿಸಿದರು.
ಮಲೆನಾಡಿನ ಸಾಮಾಜಿಕ ಪ್ರಜ್ಞೆ ಎಂದು ನಾ.ಡಿಸೋಜ ಅವರನ್ನು ವಿಶ್ಲೇಷಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಣಾ ವಿಭಾಗದ ಸಂಚಾಲಕರಾದ ಎನ್.ಎಸ್. ಶ್ರೀಧರ ಮೂರ್ತಿಯವರು ಶರಾವತಿ ಮುಳಗಡೆ ಪ್ರದೇಶದ ಆತಂಕಗಳನ್ನು ಹತ್ತಿರದಿಂದ ಕಂಡಿದ್ದ ನಾ. ಡಿಸೋಜರು ಅದನ್ನು ಪರಿಣಾಮಕಾರಿ ಕೃತಿಗಳನ್ನಾಗಿಸಿದರು. ಸುರೇಶ್ ಹೆಬ್ಳೀಕರ್ ಅವರ ನಿರ್ದೇಶನದಲ್ಲಿ ‘ಕಾಡಿನ ಬೆಂಕಿ’, ಗಿರೀಶ್ ಕಾಸರವಳ್ಳಿಯವರ ನಿರ್ದೇಶನದಲ್ಲಿ ‘ದ್ವೀಪ’, ಸಿರಿಗಂದ ಶ್ರೀನಿವಾಸಮೂರ್ತಿಯವರ ನಿರ್ದೇಶನದಲ್ಲಿ ‘ಬಳುವಳಿ’, ಕೋಡ್ಲು ರಾಮಕೃಷ್ಣ ನಿರ್ದೇಶನದಲ್ಲಿ ‘ಬೆಟ್ಟದಪುರದ ದಿಟ್ಟಮಕ್ಕಳು’ ಮತ್ತು ಮನು ಅವರ ನಿರ್ದೇಶನದಲ್ಲಿ ‘ಆಂತರ್ಯ’ ಎಂಬ ಅವರ ಕಾದಂಬರಿಗಳು ಚಲನಚಿತ್ರಗಳಾಗಿವೆ ಎಂದು ಹೇಳಿ ತಮ್ಮ ಒಡನಾಟದ ನೆನಪುಗಳನ್ನು ಹಂಚಿಕೊಂಡರು.
ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ನೇ. ಭರಾಮಲಿಂಗ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು. ಗೌರವ ಕಾರ್ಯದರ್ಶಿಗಳಾದ ಡಾ. ಪದ್ಮಿನಿ ನಾಗರಾಜು, ವಕೀಲರಾದ ಪಿ. ಆನಂದ್, ಮಂಜುನಾಥ ರೆಡ್ಡಿ, ಬರಹಗಾರ ಸಿಸಿರಾ, ಕನ್ನಡ ಸಾಹಿತ್ಯ ಪರಿಷತ್ತಿನ ಸಿಬ್ಬಂದಿ ಕಾರ್ಯಕ್ರಮದಲ್ಲಿ ಹಾಜರಿದ್ದರು.