ಮಡಿಕೇರಿ : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಪೊನ್ನಂಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಪೊನ್ನಂಪೇಟೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಗೋಣಿಕೊಪ್ಪಲು ಪ್ರೌಢಶಾಲೆ ಗೋಣಿಕೊಪ್ಪಲು ಇವರ ಸಂಯುಕ್ತ ಆಶ್ರಯದಲ್ಲಿ ಗೋಣಿಕೊಪ್ಪಲು ಪ್ರೌಢಶಾಲಾ ಸಭಾಂಗಣದಲ್ಲಿ ದಿನಾಂಕ 11 ಸೆಪ್ಟೆಂಬರ್ 2024ರಂದು ಜರುಗಿದ ಕಲಾವಿದ ದಿ. ಶ್ರೀನಿವಾಸ್ ನೆನಪು ನುಡಿ ಮತ್ತು ಗಾನ ನಮನ ಕಾರ್ಯಕ್ರಮವನ್ನು ‘ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನನ್ನನ್ನು’ ಎನ್ನುವ ಗಾಯನದೊಂದಿಗೆ ಉದ್ಘಾಟಿಸಲಾಯಿತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ನಿನಾದ ಸಂಗೀತ ನೃತ್ಯ ಸಂಸ್ಥೆಯ ಅಧ್ಯಕ್ಷೆ ಚೇಂದಿರ ನಿರ್ಮಲ ಬೋಪಣ್ಣ ಇವರು ಮಾತನಾಡಿ “ದಿ. ವಿ.ಟಿ. ಶ್ರೀನಿವಾಸ್ ಸಂಗೀತ ರಂಗದಲ್ಲಿ ಅತ್ಯದ್ಭುತ ಸಾಧನೆ ಮಾಡಿದಂತಹ ಕಲಾವಿದರಾಗಿದ್ದು, ತಬಲ ಕ್ಯಾಸಿಯೋ ವಾದನಗಳಲ್ಲಿ ಪರಿಣಿತರಾಗಿದ್ದರು. ಯಾವುದೇ ರಾಗವನ್ನು ನಿಮಿಷ ಮಾತ್ರದಲ್ಲಿ ಕ್ಯಾಸಿಯೋದಲ್ಲಿ ಅಳವಡಿಸುವ ಕಲೆ ಹೊಂದಿದ್ದರು. ಅಜಾತಶತ್ರುವಾಗಿದ್ದ ಅವರು ಸಾವಿರಾರು ಸಂಗೀತ ಮತ್ತು ನೃತ್ಯ ಶಿಷ್ಯರನ್ನು ಹೊಂದಿದ್ದು ಅವರ ನಿಧನವು ಸಂಗೀತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ” ಎಂದು ನುಡಿದರು.
ಪೊನ್ನಂಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕೋಳೆರ ದಯಾ ಚಂಗಪ್ಪ ಇವರು ಪ್ರಾಸ್ತಾವಿಕವಾಗಿ ಮಾತನಾಡಿ “ವಿ.ಟಿ. ಶ್ರೀನಿವಾಸ್ ಇವರು ಅತ್ಯುತ್ತಮ ಕಲಾವಿದರಾಗಿದ್ದು, ಸುಮಾರು 40 ವರ್ಷಗಳಿಂದ ತಾವು ಅಧ್ಯಕ್ಷರಾಗಿದ್ದ ಸೃಷ್ಟಿ ನಾಟಕ ಸಂಸ್ಥೆಯಲ್ಲಿ ನಾಟಕಕ್ಕೆ ಸಂಗೀತ ನೀಡುತ್ತಿದ್ದರಲ್ಲದೆ ಜಿಲ್ಲೆಯ ಹಲವಾರು ಶಾಲೆಗಳಲ್ಲಿ ಸಂಗೀತ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ತಾಲೂಕಿನಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದರು” ಎಂದರು.
ಮುಖ್ಯ ಅತಿಥಿಯಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಚಾನಲ್ ಕೂರ್ಗನ ಸಂಪಾದಕ ಶ್ರೀಧರ ನೆಲ್ಲಿತಾಯ ಮಾತನಾಡುತ್ತಾ “ಕುಟ್ಟದಿಂದ ಕೊಡ್ಲಿಪೇಟೆಯವರೆಗೆ ಎಲ್ಲಿಯೇ ಕಾರ್ಯಕ್ರಮ ನಡೆದರೂ ಶ್ರೀನಿವಾಸ್ ರವರ ಉಪಸ್ಥಿತಿ ಕಾಣುತ್ತಿತ್ತು. ಅವರ ತಂಡದ ಸಂಗೀತ ಅಥವಾ ನೃತ್ಯ ಇಲ್ಲದೆ ಕಾರ್ಯಕ್ರಮ ನಡೆಯುತ್ತಿರಲಿಲ್ಲ. ಅಂಚೆ ಇಲಾಖೆಯಲ್ಲಿ ಕಾರ್ಯನಿರ್ವಹಿಸಿ ನೃತ್ಯ ಮತ್ತು ಸಂಗೀತ ಅಭ್ಯಾಸ ಮಾಡಿ ತಾವೇ ಶ್ರೀನಿವಾಸ ಸಂಗೀತ ನೃತ್ಯ ಶಾಲೆ ಪ್ರಾರಂಭ ಮಾಡುವ ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ ದಾರಿದೀಪವಾಗಿದ್ದಾರೆ” ಎಂದರು.
ಇನ್ನೋರ್ವ ಮುಖ್ಯ ಅತಿಥಿ ಡಾಕ್ಟರ್ ಕೆ.ಕೆ. ಶಿವಪ್ಪ ಮಾತನಾಡುತ್ತಾ “ವಿ.ಟಿ. ಶ್ರೀನಿವಾಸ್ ಮರೆಯಲಾಗದ ಕಲಾವಿದ ಅವರ ಕ್ಯಾಸಿಯೋ ಪರಿಣಿತಿ ಇನ್ನೊಬ್ಬರಿಗೆ ಸಾಧ್ಯವಿಲ್ಲ” ಎಂದರು. ದಿ. ವಿ.ಟಿ. ಶ್ರೀನಿವಾಸ್ ಸ್ನೇಹಿತರಾದ ಆಕಾಶವಾಣಿ ಕಲಾವಿದ ಬಿ.ಎ. ಗಣೇಶ್, ವಿದ್ವಾನ್ ದಿಲಿ ಕುಮಾರ್, ಕೆ. ಚಂದ್ರಶೇಖರ್, ತಬಲವಾದಕ ಚಂದ್ರು, ಸಂಗೀತ ಶಿಕ್ಷಕಿ ವತ್ಸಲಾ ನಾರಾಯಣ್ ಇನ್ನಿತರರು ಹಾಡು ಹಾಡುವ ಮೂಲಕ ಗಾನ ನಮನ ನಡೆಸಿಕೊಟ್ಟರು.
ಶ್ರೀನಿವಾಸ್ ರವರ ಶಿಷ್ಯೆ ಹಿತೈಷಿಣಿ ಮಾತನಾಡುತ್ತಾ “ತಾವು ಒಂದನೇ ತರಗತಿಯಿಂದ ಡಿಗ್ರಿವರೆಗೆ ಶ್ರೀನಿವಾಸ್ ರವರಲ್ಲಿ ವಿದ್ಯಾಭ್ಯಾಸ ಮಾಡಿದ್ದು, ಅವರು ಕಲಿಸುವ ರೀತಿ ತಾನು ಇಂದು ಉತ್ತಮ ನೃತ್ಯಗಾತಿಯಾಗಲು ಸಾಧ್ಯವಾಗಿದೆ” ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಮಾತನಾಡುತ್ತಾ “ಕಲಾವಿದ ದಿ. ಶ್ರೀನಿವಾಸ್ ಮತ್ತು ತಾನು ಬಾಲ್ಯ ಸ್ನೇಹಿತರು ಇಬ್ಬರು ಒಂದೇ ಶಾಲೆಯಲ್ಲಿ ಓದಿದವರು. ಬಹುಮುಖ ಪ್ರತಿಭೆಯ ಶ್ರೀನಿವಾಸ್ ಕೇವಲ ನೃತ್ಯ ಮತ್ತು ಸಂಘ ಸಂಗೀತ ಶಿಕ್ಷಕರಲ್ಲ ಆತ ಯೋಗಪಟು, ಕವಿ ಹಾಗೂ ಹಾಸ್ಯಪ್ರಿಯರೂ ಆಗಿದ್ದರು. ಹಲವಾರು ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದರು. ಅಂತಹ ಒಂದು ಸಂಗೀತ ಶಿಕ್ಷಕರನ್ನು ಕಳೆದುಕೊಂಡಿದ್ದು ಕೊಡಗಿನ ಸಂಗೀತ ಲೋಕಕ್ಕೆ ತುಂಬಲಾರದ ನಷ್ಟ” ಎಂದರು.
ವೇದಿಕೆಯಲ್ಲಿ ಶ್ರೀಮಂಗಲ ಕ.ಸಾ.ಪ. ಹೋಬಳಿ ಅಧ್ಯಕ್ಷೆ ಉಳುವಂಗಡ ಕಾವೇರಿ ಉದಯ, ಬಾಳೆಲೆ ಹೋಬಳಿ ಕಾರ್ಯದರ್ಶಿ ಪಿ.ಜಿ.ಜಾನಕಿ, ದಿ. ವಿ.ಟಿ. ಶ್ರೀನಿವಾಸ್ ರವರ ಪತ್ನಿ ಶ್ರೀಮತಿ ಶಾಂತ ಶ್ರೀನಿವಾಸ್, ಮಕ್ಕಳಾದ ಪ್ರಮೋದ್ ಕುಮಾರ್, ನವೀನ್ ಕುಮಾರ್, ಸಹೋದರ ವಿ.ಟಿ. ಮಂಜುನಾಥ್, ಶ್ರೀಮತಿ ಗಿರಿಜಾ ಮಂಜುನಾಥ್, ಬಾವಾ ಮಾಲ್ದಾರೆ, ಪುರುಷೋತ್ತಮ್, ಸಾಹಿತಿ ಟಿ.ಆರ್. ವಿನೋದ್, ಶ್ರೀಮತಿ ಸಂಧ್ಯಾ ಕಾಮತ್, ಶ್ರೀಮತಿ ಶಾಂಭವಿ ಕಾಮತ್, ಶ್ರೀಮತಿ ಚಂದನಾ ಮಂಜುನಾಥ್, ಶ್ರೀಮತಿ ನಿರ್ಮಲ ಬೋಪಣ್ಣ, ಅಧ್ಯಾಪಕರುಗಳಾದ ಕೃಷ್ಣ ಚೈತನ್ಯ, ಟಿ. ಗಿಡ್ಡಯ್ಯ, ಈಶ, ಗಿರೀಶ, ನವೀನ, ರಶ್ಮಿ, ಸಬೀನಾ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳು ಹಾಗೂ ಇತರರು ಉಪಸ್ಥಿತರಿದ್ದರು.
ಕಲಾವಿದ ದಿವಂಗತ ಶ್ರೀನಿವಾಸ್ ರವರ ಜ್ಞಾಪಕಾರ್ಥವಾಗಿ ಶಾಲಾ ವಿದ್ಯಾರ್ಥಿಗಳಿಗೆ ಗಾಯನ ಸ್ಪರ್ಧೆ ಏರ್ಪಡಿಸಲಾಗಿತ್ತು. ವಿದ್ಯಾರ್ಥಿನಿ ಮಂಜುಳಾ ಪ್ರಥಮ, ತನ್ಮಯ ದ್ವಿತೀಯ, ಅಮೂಲ್ಯ ತೃತೀಯ ಬಹುಮಾನ ಪಡೆದುಕೊಂಡರು. ಮೊದಲ ಬಹುಮಾನ ಪಡೆದ ಮಂಜುಳ ವಿ.ಟಿ. ಶ್ರೀನಿವಾಸ್ ರವರ ಶಿಷ್ಯೆ. ಕಾರ್ಯಕ್ರಮವನ್ನು ಪೊನ್ನಂಪೇಟೆ ತಾಲೂಕು ಕ.ಸಾ.ಪ. ಗೌರವ ಕಾರ್ಯದರ್ಶಿ ಶ್ರೀಮತಿ ಶೀಲಾ ಬೋಪಣ್ಣ ನಿರೂಪಿಸಿ, ಪೊನ್ನಂಪೇಟೆ ಹೋಬಳಿ ಗೌರವ ಕೋಶಾಧಿಕಾರಿ ಚಂದನ್ ಕಾಮತ್ ಸ್ವಾಗತಿಸಿದರು.