ಉಡುಪಿ : ಗೋವಿಂದ ಪೈ ಸಂಶೋಧನ ಕೇಂದ್ರ, ಯಕ್ಷಗಾನ ಕೇಂದ್ರ, ಆರ್.ಆರ್.ಸಿ.ಯ ನಿರ್ದೇಶಕರಾಗಿ, ಎಂ.ಜಿ.ಎಂ. ಕಾಲೇಜಿನ ಸಂಸ್ಕೃತ ಉಪನ್ಯಾಸಕರಾಗಿ, ಎಸ್ಟೇಟ್ ಮ್ಯಾನೇಜರರಾಗಿ, ಹಲವು ಬಾರಿ ಪರ್ಯಾಯ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ತಾನು ವಹಿಸಿಕೊಂಡ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿರ್ವಹಿಸಿ ಉಡುಪಿಯ ಸಾಂಸ್ಕೃತಿಕ, ಧಾರ್ಮಿಕ, ಸಾಮಾಜಿಕ ಕ್ಷೇತ್ರಕ್ಕೆ ಅಪೂರ್ವ ಕೊಡುಗೆ ನೀಡಿ, ನಮ್ಮನ್ನಗಲಿದ ಹಿರಿಯ ಚೇತನ ಪ್ರೊ. ಹೇರಂಜೆ ಕೃಷ್ಣ ಭಟ್ಟರ ಶ್ರದ್ಧಾಂಜಲಿ ಕಾರ್ಯಕ್ರಮ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ದಿನಾಂಕ 14 ಮೇ 2025ರಂದು ಜರಗಿತು.
ಪರ್ಯಾಯ ಶ್ರೀ ಪುತ್ತಿಗೆ ಮಠ ಆಯೋಜಿಸಿದ್ದ ಈ ಸಭೆಯಲ್ಲಿ ಪುತ್ತಿಗೆ ಮಠಾಧೀಶರಾದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಮಾತನಾಡಿ “ಕೃಷ್ಣ ಭಟ್ಟರು ಶ್ರೀಕೃಷ್ಣ ಗೀತೆಯಲ್ಲಿ ಹೇಳಿದ ನಿಷ್ಕಾಮ ಕರ್ಮಕ್ಕೆ ವ್ಯಾಖ್ಯಾನ ಸ್ವರೂಪದಂತಿದ್ದರು. ಅವರೊಬ್ಬ ಶ್ರದ್ಧಾವಂತ ಭಕ್ತರಾಗಿದ್ದರು” ಎಂದು ಹೇಳಿದರು. ಸಾನಿಧ್ಯ ವಹಿಸಿದ್ಧ ಶ್ರೀ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಅವರ ಅಸಾಧಾರಣ ವ್ಯಕ್ತಿತ್ವ ಬೆರಗು ಪಡುವಂತಹದ್ದೆಂದು ಅಭಿಪ್ರಾಯಪಟ್ಟರು. ಹಿರಿಯ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿ ನಿಡುಗಾಲದ ಒಡನಾಟವನ್ನು ಸ್ಮರಿಸಿಕೊಂಡು, ಅವರ ಕರ್ತೃತ್ವ ಶಕ್ತಿ, ಸಂಘಟನಾ ಚಾತುರ್ಯ, ಎಲ್ಲವನ್ನು ಕ್ಲಪ್ತ ಸಮಯಕ್ಕೆ ಮಾಡಿ ಮುಗಿಸಿ ನಿರ್ಲಿಪ್ತವಾಗಿರುವ ವ್ಯಕ್ತಿತ್ವ ಸಾಮಾಜಿಕ ಕಾರ್ಯಕರ್ತರಿಗೆ ಅತ್ಯುತ್ತಮ ಮಾದರಿಯಾಗಿದೆ ಎಂದರು. ಪ್ರೊ. ಎನ್.ಟಿ. ಭಟ್, ಡಾ. ಕೆ.ಪಿ. ರಾವ್, ಪ್ರೊ. ಎಂ.ಎಲ್. ಸಾಮಗ, ಡಾ. ರಾಘವ ನಂಬಿಯಾರ್, ಡಾ. ಭಾಸ್ಕರಾನಂದ ಕುಮಾರ್, ಡಾ. ಪಾದೆಕಲ್ಲು ವಿಷ್ಣು ಭಟ್, ಡಾ. ಹರಿರಾಮ ಆಚಾರ್ಯ, ಶ್ರೀ ಪ್ರದೀಪ ಕುಮಾರ್ ಕಲ್ಕೂರ್ ನುಡಿ ನಮನ ಸಲ್ಲಿಸಿ ಕೃಷ್ಣ ಭಟ್ಟರ ಕರ್ತವ್ಯ ನಿಷ್ಠೆ, ಕ್ರಿಯಾಶೀಲತೆ, ಸಂಯೋಜನಾ ಸಾಮರ್ಥ್ಯ, ಅರ್ಪಣಾ ಮನೋಭಾವ, ನೇರ ನಡೆನುಡಿ, ಸರಳತೆ ಮೊದಲಾದ ಸದ್ಗುಣಗಳನ್ನು ಕೊಂಡಾಡಿದರು. ಪರ್ಯಾಯ ಮಠದ ದಿವಾನರಾದ ಶ್ರೀ ನಾಗರಾಜ ಆಠಚಾರ್ಯ ಹಾಗು ಶ್ರೀ ಪ್ರಸನ್ನ ಆಚಾರ್ಯರು ಉಪಸ್ಥಿತರಿದ್ದರು. ದೊಡ್ಡ ಸಂಖ್ಯೆಯಲ್ಲಿ ಉಡುಪಿಯ ಗಣ್ಯರು ಪಾಲ್ಗೊಂಡು ಅಗಲಿದ ಚೇತನಕ್ಕೆ ಗೌರವ ಸಲ್ಲಿಸಿದರು. ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು.