ಮಂಗಳೂರು : ನವಭಾರತ ಎಜುಕೇಶನ್ ಸೊಸೈಟಿ ಆಶ್ರಯದಲ್ಲಿ ಕಾರ್ಯನಿರ್ವಹಿಸುತ್ತಿರುವ ನವಭಾರತ ಯಕ್ಷಗಾನ ಅಕಾಡೆಮಿಯ ‘ದಶಮಾನೋತ್ಸವ ಸಮಾರಂಭವು ದಿನಾಂಕ 11 ಜನವರಿ 2025ರಂದು ಮಂಗಳೂರಿನ ಮಣ್ಣಗುಡ್ಡೆ ಸಂಘನಿಕೇತನದ ‘ಸುಜ್ಞಾನ’ ಸಭಾಂಗಣದಲ್ಲಿ ನಡೆಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಡಾ. ಪಿ. ವಾಮನ ಶೆಣೈಯವರು ಮಾತನಾಡಿ “ನಮ್ಮ ಭಾರತೀಯ ಸಂಸ್ಕೃತಿಗಳನ್ನು ಯಕ್ಷಗಾನ ಪ್ರತಿಪಾದಿಸುತ್ತಿದೆ. ದೈಹಿಕ ಶ್ರಮದ ಮೂಲಕ, ಅದರಲ್ಲಿನ ಲಾಸ್ಯದ ಮೂಲಕ, ನಾಟ್ಯದ ಮೂಲಕ ಭಿನ್ನಭಿನ್ನ ಪರಂಪರೆಯನ್ನು ಒಂದೇ ಸುತ್ತಿನಡಿ ತಂದು ಅದು ಬೆಳಗುತ್ತದೆ. ಶಿಕ್ಷಣದ ಪ್ರತಿಯೊಂದು ರೆಂಬೆಗಳೂ ತುಂಬಿಕೊಂಡಿರಬೇಕಾದರೆ ಈ ರೀತಿಯ ಸಾಂಸ್ಕೃತಿಕ ಪುನರುತ್ಥಾನ ಈ ವಿಶಿಷ್ಠ ಕಲೆಯಲ್ಲಿದೆ. ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ ಉದಿಸಿದ ನವಭಾರತ ಎಜ್ಯುಕೇಶನ್ ಸೊಸೈಟಿಯಲಿ ಯಕ್ಷಗಾನ ಅಕಾಡೆಮಿಯನ್ನು ನಡೆಸುತ್ತಾ ಇದೀಗ ಹತ್ತರ ಸಂಭ್ರಮದಲ್ಲಿದೆ. ನಗರದ ಬೇರೆ ಬೇರೆ ಶಾಲೆಗಳಿಂದ ಇಲ್ಲಿ ಯಕ್ಷ ಶಿಕ್ಷಣಕ್ಕಾಗಿ ಬರುವ ವಿದ್ಯಾರ್ಥಿಗಳಿಗೆ ನಾವು ಮುಕ್ತವಾಗಿ ಶಿಕ್ಷಣ ನೀಡುತ್ತಿದ್ದೇವೆ. ಈ ಪ್ರಕ್ರಿಯೆಗಾಗಿ ನಾವೆಲ್ಲರೂ ಕೈಜೋಡಿಸಿ ಸಹಯೋಗಿಗಳಾಗೋಣ ಎಂದು ಕರೆ ನೀಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶ್ರೀ ಮಧೂಸೂದನ ಅಯಾರ್ ಇವರು ಮಾತನಾಡಿ ನವಭಾರತ ಎಜ್ಯುಕೇಶನ್ ಸೊಸೈಟಿಯ ಸ್ಥಾಪನೆಯ ಉದ್ದೇಶ. ಅದರ ಬೆಳವಣಿಗೆಗಳ ಬಗ್ಗೆ ಪ್ರಸಾವಿಸಿದರು. ಎಲ್ಲಾ ವರ್ಗಗಳವರನ್ನೂ ತಲುಪುವ ಸಿ.ಎ. ತರಗತಿಗಳು, ಯಕ್ಷಗಾನ, ವೇದಿಕ್ ಮ್ಯಾಥ್ಸ್, ಯೋಗ ಇತ್ಯಾದಿಗಳನ್ನು ಕಲಿಸುವ ವ್ಯವಸ್ಥೆ ಇದೆ. ಅದರಲ್ಲೂ ಯಕ್ಷಗಾನ ಅಕಾಡೆಮಿ ಕೂಡಾ ದಶಮಾನೋತ್ಸವ ವರ್ಷ ಆಚರಿಸುತ್ತಿರುವುದು ಹರ್ಷದ ವಿಚಾರ ಎಲ್ಲರನ್ನೂ ತಲಪಲಿ ಎಂಬುದೇ ಸೊಸೈಟಿಯ ಆಶಯ ಎಂದು ಹೇಳಿದರು.
ರೊ. ಜೆ.ವಿ. ಶೆಟ್ಟಿ, ಸೊಸೈಟಿ ಸದಸ್ಯ ಆರ್.ಎಂ. ಬಸವರಾಜು, ಅಂತಾರಾಷ್ಟ್ರೀಯ ಈಜುಪಟು ನಾಗರಾಜ ಖಾರ್ವಿ, ಕಿರಣ್ ಕುಮಾರ್ ಕೋಡಿಕಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ನವಭಾರತ ಯಕ್ಷಗಾನ ಅಕಾಡೆಮಿಯ ಹಿರಿಯ ಸದಸ್ಯೆ ಹಾಗೂ ಕಲಾವಿದೆ ಸಾವಿತ್ರಿ ಯಸ್. ಮಲ್ಯರನ್ನು ಗೌರವಿಸಿ ಸನ್ಮಾನಿಸಲಾಯಿತು. ಸನ್ಮಾನ ಪತ್ರವನ್ನು ಭಾರತೀ ಪ್ರಮೋದ್‌ರವರು ವಾಚಿಸಿದರು. ನಿರ್ದೇಶಕ ವರ್ಕಾಡಿ ರವಿ ಅಲೆವೂರಾಯರು ನಿರ್ವಹಿಸಿ, ದಿನೇಶ್ ಕುಮಾರ್ ಧನ್ಯವಾದವಿತ್ತರು. ಸಭಾ ಕಾರ್ಯಕ್ರಮದ ಮೊದಲು ‘ಶ್ರೀದೇವಿ ಮಹಿಷಮರ್ದಿನಿ’ ಹಾಗೂ ಬಳಿಕ ನವಭಾರತ ಯಕ್ಷಗಾನ ಅಕಾಡೆಮಿಯ ಶಿಕ್ಷಣಾರ್ಥಿ ವಿದ್ಯಾರ್ಥಿಗಳಿಂದ ‘ಶ್ರೀದೇವಿ ಕೌಶಿಕೆ’ ಎಂಬ ಯಕ್ಷಗಾನ ಬಯಲಾಟ ಜರಗಿತು.