ಮಂಗಳೂರು : ಕುಳಾಯಿ ಹೊಸಬೆಟ್ಟು ಇಲ್ಲಿರುವ ಶ್ರೀ ಶಾರದಾ ನಾಟ್ಯಾಲಯದ ವತಿಯಿಂದ ‘ತ್ರಿದಶ ನಾಟ್ಯ ಕಲೋತ್ಸವ’ ಕಾರ್ಯಕ್ರಮವನ್ನು ದಿನಾಂಕ 05 ಜನವರಿ 2025ರಂದು ಸಂಜೆ 5-30 ಗಂಟೆಗೆ ಸುರತ್ಕಲ್ಲಿನ ಗೋವಿಂದ ದಾಸ ಕಾಲೇಜಿನ ರಂಗ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ಮಂಗಳೂರಿನ ಸನಾತನ ನಾಟ್ಯಾಲಯದ ಕರ್ನಾಟಕ ಕಲಾಶ್ರೀ ವಿದುಷಿ ಶಾರದಾಮಣಿ ಶೇಖರ್ ಇವರಿಂದ ನಟರಾಜ ದೀಪ ಪ್ರಜ್ವಲನೆಯೊಂದಿಗೆ ಪ್ರಾರಂಭವಾಗಲಿರುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೋವಿಂದ ದಾಸ ಕಾಲೇಜಿನ ಆಡಳಿತಾತ್ಮಕ ನಿರ್ದೇಶಕರಾದ ಪ್ರೊ. ರಮೇಶ್ ಭಟ್ ಎಸ್. ಜಿ. ಇವರು ವಹಿಸಲಿರುವರು. ಇದೇ ಸಂದರ್ಭದಲ್ಲಿ ಕಾರ್ಕಳದ ಶ್ರೀ ನೃತ್ಯಾಲಯದ ನೃತ್ಯ ಗುರುಗಳಾದ ವಿದ್ವಾನ್ ಶ್ರೀ ಸುಬ್ರಹ್ಮಣ್ಯ ನಾವಡ ಇವರನ್ನು ಸನ್ಮಾನಿಸಲಾಗುವುದು. ಗಾನಶ್ರೀ ಸಂಗೀತ ವಿದ್ಯಾಲಯದ ಶ್ರೀಮತಿ ಶೀಲಾ ದಿವಾಕರ್ ಇವರ ಶಿಷ್ಯ ವೃಂದದವರಿಂದ ‘ಗಾನಾಮೃತ ಸಿಂಚನ’ ಮತ್ತು ಆರ್ಯಭಟ ಪ್ರಶಸ್ತಿ ವಿಜೇತ ಶ್ರೀ ಕೆ. ಮುರಳೀಧರ್ ಇವರಿಂದ ವೇಣುವಾದನದಲ್ಲಿ ‘ಸ್ವರ ಮಾಧುರ್ಯ’ ಭಕ್ತಿ ಭಾವ, ಚಿತ್ರ ಗೀತೆಗಳ ಸುಮಧುರ ಪ್ರಸ್ತುತಿಗೊಳ್ಳಲಿದೆ. ಬಳಿಕ ಸಂಸ್ಥೆಯ ವಿದ್ಯಾರ್ಥಿಗಳಿಂದ ನೃತ್ಯ ವೈವಿಧ್ಯ ಕಾರ್ಯಕ್ರಮ ನಡೆಯಲಿದೆ.