ಮಂಗಳೂರು : ಕುಳಾಯಿ ಹೊಸಬೆಟ್ಟು ಇಲ್ಲಿರುವ ಶ್ರೀ ಶಾರದಾ ನಾಟ್ಯಾಲಯದ ವತಿಯಿಂದ ‘ತ್ರಿದಶ ನಾಟ್ಯ ಕಲೋತ್ಸವ’ ಕಾರ್ಯಕ್ರಮವನ್ನು ದಿನಾಂಕ 19 ಜುಲೈ 2025ರಂದು ಸಂಜೆ 5-00 ಗಂಟೆಗೆ ಮಂಗಳೂರು ಕುದ್ಮುಲ್ ರಂಗರಾವ್ ಪುರಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ರಂಗ ಸಂಗೀತ, ಜಾನಪದ ಗೀತೆ ಗಾಯನ ಹಾಗೂ ನೃತ್ಯ ವೈವಿಧ್ಯ ಕಾರ್ಯಕ್ರಮಗಳು ನಡೆಯಲಿದೆ.
ಸುರತ್ಕಲ್ ಗೋವಿಂದ ದಾಸ ಕಾಲೇಜಿನ ಆಡಳಿತಾತ್ಮಕ ನಿರ್ದೇಶಕರಾದ ಪ್ರೊ. ರಮೇಶ್ ಭಟ್ ಎಸ್.ಜಿ. ಇವರು ಅಧ್ಯಕ್ಷತೆ ವಹಿಸಲಿದ್ದು, ಸನಾತನ ನಾಟ್ಯಾಲಯದ ಕರ್ಣಾಟಕ ಕಲಾಶ್ರೀ ವಿದುಷಿ ಶಾರದಾಮಣಿ ಶೇಖರ್ ಇವರು ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಲಿದ್ದಾರೆ. ನೃತ್ಯ ನಿರ್ದೇಶಕಿ ವಿದುಷಿ ವಿನಯ ರಾವ್ ಇವರನ್ನು ಸನ್ಮಾನಿಸಲಿದ್ದು, ಮಂಗಳೂರಿನ ಜರ್ನಿ ಥೇಟರ್ ಗ್ರೂಪ್ ಪ್ರಸ್ತುತ ಪಡಿಸುವ ರಂಗ ಸಂಗೀತ ಮತ್ತು ಜಾನಪದ ಗೀತೆ ಗಾಯನ ಹಾಗೂ ಸಂಸ್ಥೆಯ ವಿದ್ಯಾರ್ಥಿಗಳಿಂದ ನೃತ್ಯ ವೈವಿಧ್ಯ ಕಾರ್ಯಕ್ರಮಗಳು ನಡೆಯಲಿವೆ.