ಪುತ್ತೂರು : ತುಳು ಅಪ್ಪೆ ಕೂಟ ಪುತ್ತೂರು ವತಿಯಿಂದ ಶ್ರೀ ಮಹಾಲಿಂಗೇಶ್ವರ ದೇವಾಲಯದ ನಟರಾಜ ವೇದಿಕೆಯಲ್ಲಿ ದಿನಾಂಕ 27-08-2023ರ ಭಾನುವಾರ ಉದಿಪನ, ತಮ್ಮನ ಬಲ್ಮನ, ಪಂಚ ಮಿನದನ ಲೇಸ್ ನಡೆಯಿತು.
ಈ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಆಶೀರ್ವಚನ ನೀಡಿದ ಒಡಿಯೂರು ಸಂಸ್ಥಾನದ ಸಾಧ್ವಿ ಶ್ರೀ ಮಾತಾನಂದಮಯೀ “ಸಂಸ್ಕೃತಿಯ ಜೀವಾಳ ಸಂಸ್ಕಾರ. ಆ ಸಂಸ್ಕಾರಕ್ಕೆ ಮೂಲ ತಾಯಿ. ಆಕೆಯಲ್ಲಿ ದೈವಶಕ್ತಿ, ಭಕ್ತಿ, ನೈತಿಕತೆ ಬೇಕು. ತುಳುವಿಗೆ ಸಂಬಂಧಿಸಿದಂತೆ ಅಪ್ಪೆ ಕೂಟದಂತಹ ಒಗ್ಗೂಡುವಿಕೆಯೊಂದಿಗೆ ತುಳುನಾಡ ಸಂಸ್ಕೃತಿ, ಶ್ರೀಮಂತಿಕೆಯನ್ನು ಉಳಿಸಿ, ಬೆಳೆಸುವ ಕಾರ್ಯ ನಡೆಯಲಿದೆ. ಮಾರ್ಗದರ್ಶನ, ಪ್ರಯತ್ನ ಉದ್ದೇಶವಿದ್ದರೆ ಕಾರ್ಯ ಸಫಲತೆಯಾಗುತ್ತದೆ. ತುಳು ಭಾಷೆ, ಸಂಸ್ಕೃತಿ ಪ್ರೀತಿಯಿಂದ ಕೂಡಿದೆ. ಕ್ರಿ.ಶ. 2ನೇ ಶತಮಾನದಲ್ಲೇ ತುಳು ಭಾಷೆ ಚಾಲ್ತಿಯಲ್ಲಿದ್ದ ಕುರಿತು ಆಗಿನ ಬರಹಗಳು ಸಾಬೀತುಪಡಿಸಿವೆ. ಜಾಗತೀಕರಣದ ಗಾಳಿಯ ನಡುವೆ ತುಳುವನ್ನು ಉಳಿಸಿಕೊಂಡು ಹೋಗುವ ಕೆಲಸ ಆಗಬೇಕು” ಎಂದು ಆಶಯ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, “ಮುಂದಿನ 6 ತಿಂಗಳಲ್ಲಿ ತುಳುವನ್ನು ಅಧಿಕೃತ ಭಾಷೆಯಾಗಿ ಮಾಡದೇ ಬಿಡುವುದಿಲ್ಲ. ಈ ನಿಟ್ಟಿನಲ್ಲಿ 5 ಇಲಾಖೆಗಳ ಎನ್.ಒ.ಸಿ. ಅಗತ್ಯವಿದ್ದು, ಈ ನಿಟ್ಟಿನಲ್ಲಿ ಪ್ರಯತ್ನ ಸಾಗುತ್ತಿದೆ” ಎಂದರು. ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ದುರ್ಗಾಪ್ರಸಾದ್ ರೈ ಕುಂಬ್ರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಎ.ಸಿ. ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮುಳಿಯ ಕೇಶವಪ್ರಸಾದ್, ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ ಕೆ. ಸೀತಾರಾಮ ರೈ, ಅಕ್ಷಯ್ ಗ್ರೂಪ್‌ನ ಉದ್ಯಮಿ ಜಯಂತ ನಡುಬೈಲು, ತುಳು ಸಾಹಿತ್ಯ ಅಕಾಡೆಮಿ ಸದಸ್ಯ ವಿಜಯಲಕ್ಷ್ಮೀ ಪ್ರಸಾದ್ ರೈ ಕ.ಸಾ.ಪ. ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಉಮೇಶ್ ನಾಯಕ್, ಪುತ್ತೂರು ತುಳುಕೂಟದ ಅಧ್ಯಕ್ಷ ಪ್ಯಾಟ್ರಿಕ್ ಸಿಪ್ರಿಯಾನ್, ಪತ್ರಕರ್ತ ವಿಜಯಕುಮಾರ್ ಭಂಡಾರಿ ಹೆಬ್ಬಾರಬೈಲು ಅತಿಥಿಗಳಾಗಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ನಾಟಿವೈದ್ಯೆ ಲಕ್ಷ್ಮೀ ಬಳ್ಳಕ್ಕುರಾಯ, ವಿದುಷಿ ನಯನಾ ವಿ. ರೈ ಕುದ್ಕಾಡಿ, ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯೆ ಪ್ರೇಮಾಲತಾ ರಾವ್, ಕಲಾವಿದೆ ಅಪರ್ಣಾ ಕೊಡೆಂಕಿರಿ, ಕೃಷಿ ಸಾಧಕಿ ಪ್ರೇಮಲತಾ ಮಾಧವ ಬಂಗೇರ ಅವರನ್ನು ಸನ್ಮಾನಿಸಲಾಯಿತು. ಕೂಟದ ಪ್ರಮುಖರಾದ ವಸಂತಲಕ್ಷ್ಮೀ ಪುತ್ತೂರು, ಮಲ್ಲಿಕಾ ಜೆ. ರೈ, ಶಾಂತಾ ಕುಂಟಿನಿ ಮೊದಲಾದವರು ಸನ್ಮಾನ ಪತ್ರ ವಾಚಿಸಿದರು. ಕೂಟದ ಅಧ್ಯಕ್ಷೆ ಹರಿಣಾಕ್ಷಿ ಜೆ. ಶೆಟ್ಟಿ ಸ್ವಾಗತಿಸಿದರು. ವಿದ್ಯಾಶ್ರೀ ಎಸ್. ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಮಾಜಿ ಶಾಸಕಿ ಶಕುಂತಲಾ ಟಿ. ಶೆಟ್ಟಿ ಅಧ್ಯಕ್ಷತೆಯಲ್ಲಿ ತುಳು ಕಬಿಕೂಟ ಸೇರಿದಂತೆ ಅಪರಾಹ್ನ ತನಕ ವಿವಿಧ ಕಾರ್ಯಕ್ರಮಗಳು ನಡೆದವು.