ಪುತ್ತೂರು: ಭರತನಾಟ್ಯ ಕಲಾವಿದೆಯಾಗಿರುವ ಲೇಖಕಿ ನರಿಮೊಗರು ಗ್ರಾಮದ ಶ್ರೀಮತಿ ಅಪರ್ಣಾ ಕೊಡೆಂಕಿರಿ ಅವರು ತುಳು ಲಿಪಿಯಲ್ಲಿ ಬರೆದ ಪ್ರಪ್ರಥಮ ಭಗವದ್ಗೀತೆ ಪುಸ್ತಕವನ್ನು ದಿನಾಂಕ 10-07-2023ರಂದು ಶ್ರೀ ಕ್ಷೇತ್ರ ಸುಬ್ರಹ್ಮಣ್ಯದಲ್ಲಿ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಬಿಡುಗಡೆಗೊಳಿಸಿದರು.
ಮೂಲತಃ ನೃತ್ಯ ವಿದುಷಿ ಆಗಿರುವ ಶ್ರೀಮತಿ ಅಪರ್ಣಾ ಕೊಡೆಂಕಿರಿ ಇವರು ತುಳು ಭಾಷೆಯ ಮೇಲಿನ ಪ್ರೀತಿ, ಅಕ್ಕರೆಯನ್ನು ಭಗವದ್ಗೀತೆ ಅನುವಾದದ ಮೂಲಕ ತುಳುನಾಡಿನ ಜನತೆಗೆ ಸಮರ್ಪಿಸಿದ್ದಾರೆ. ಇದರಲ್ಲಿ ತುಳು ಲಿಪಿಯ ವರ್ಣಮಾಲೆಯ ಸಹಿತ ಸಂಪೂರ್ಣ ಭಗವದ್ಗೀತೆಯನ್ನು ತುಳು ಹಾಗೂ ಕನ್ನಡದಲ್ಲಿ ಅಕ್ಕಪಕ್ಕದ ಪುಟಗಳಲ್ಲಿ ಸುಲಭವಾಗಿ ಹೊಂದಿಸಿ ನೋಡುವಂತೆ ನೀಡಲಾಗಿದೆ. ಎಡಪುಟದಲ್ಲಿ ತುಳುವಿನಲ್ಲೇ ಅರ್ಥ ಸಹಿತ ಶ್ಲೋಕ, ಬಲಪುಟದಲ್ಲಿ ಕನ್ನಡದಲ್ಲಿ ಶ್ಲೋಕ ಹಾಗೂ ಕನ್ನಡ ಲಿಪಿಯಲ್ಲಿ ಬರೆದ ತುಳು ಭಾಷಾರ್ಥ ನೀಡಲಾಗಿದೆ.
ತುಳು ಲಿಪಿ ಕಲಿಯುವವರಿಗೆ ಭಗವದ್ಗೀತೆಯಿಂದಲೇ ಪ್ರಾರಂಭಿಸುವ ಅವಕಾಶ, ಲಿಪಿ ಬಲ್ಲವರಿಗೆ ತುಳುವಿನಲ್ಲೇ ಓದುವ ಅವಕಾಶವನ್ನು ಅಪರ್ಣಾ ಮಾಡಿಕೊಟ್ಟಿದ್ದಾರೆ. ಈ ಸಂದರ್ಭದಲ್ಲಿ ಚಿಂತಕ ಲಕ್ಷ್ಮೀಶ ತೋಳ್ಪಾಡಿ ಹಾಗೂ ವೇದವ್ಯಾಸ ಸಂಶೋಧನಾ ಕೇಂದ್ರದ ನಿರ್ದೇಶಕ ಆನಂದತೀರ್ಥ ಸಗ್ರಿ ಉಪಸ್ಥಿತರಿದ್ದರು.