ಉಡುಪಿ : ಉಡುಪಿಯ ಎಂ.ಜಿ.ಎಂ. ಕಾಲೇಜು ವತಿಯಿಂದ ಕಾಲೇಜಿನ ತುಳು ಸಂಘ ಹಾಗೂ ಉಡುಪಿ ತುಳು ಕೂಟ ಆಶ್ರಯದಲ್ಲಿ ತುಳು ಸಂಸ್ಕೃತಿ ಹಬ್ಬ, ಸಾಂಪ್ರದಾಯಿಕ ದಿನದ ಅಂಗವಾಗಿ ‘ತುಳು ಐಸಿರಿ 2024’ ಕಾರ್ಯಕ್ರಮವು ದಿನಾಂಕ 28-05-2024ರಂದು ಕಾಲೇಜಿನ ಮುದ್ದಣ ಮಂಟಪದಲ್ಲಿ ಜರಗಿತು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ದೇಶಕ ಹಾಗೂ ನಟ ಕಾಸರಗೋಡು ಚಿನ್ನಾ “ನಾವಾಡುವ ಭಾಷೆ ಬಾಂಧವ್ಯವಾಗಿ ಗಟ್ಟಿಗೊಳ್ಳಬೇಕು. ಭಾಷೆಗಳನ್ನು ಮನೆಮನೆಗಳಲ್ಲಿ ಸಂಭ್ರಮಿಸಬೇಕು. ಈ ನಿಟ್ಟಿನಲ್ಲಿ ಫರ್-ಫರ್ ಕೊಂಕಣಿ ಕಾರ್ಯಕ್ರಮ ರೂಪಿಸಲಾಯಿತು. ಇದೇ ಮಾದರಿಯಲ್ಲಿ ಮನೆಮನೆಗಳಲ್ಲಿ ತುಳು ಕಾರ್ಯಕ್ರಮಗಳನ್ನು ಆಯೋಜಿಸಬೇಕು. ತುಳು 8ನೇ ಪರಿಚ್ಛೇದಕ್ಕೆ ಸೇರ್ಪಡೆಗೆ ಸಾಕಷ್ಟು ಹೋರಾಟಗಳು, ಪ್ರಯತ್ನಗಳು ನಡೆಯುತ್ತಿದ್ದರೂ ತುಳು ಭಾಷೆಗೆ ಮಾನ್ಯತೆ ಸಿಗುತ್ತಿಲ್ಲ. ಇದಕ್ಕೆ ಮುಖ್ಯ ಕಾರಣ ಹೆಚ್ಚಿನ ಪ್ರಮಾಣದಲ್ಲಿ ದಾಖಲಾಗದ ತುಳು ಸಾಹಿತ್ಯ. ತುಳು ಲಿಪಿ ಬರವಣಿಗೆ ಮತ್ತು ಓದು ಪರಿಣಾಮಕಾರಿಯಾಗಿ ನಡೆಯಬೇಕು. ಲಿಪಿಯ ಬಳಕೆಗೆ ಒತ್ತು ನೀಡಬೇಕು. ಮಾತೃ ಭಾಷೆ ಜತೆಗೆ ಇತರ ಭಾಷೆಗಳನ್ನು ಕಲಿಯುವ, ಮಾತನಾಡುವ ಆಸಕ್ತಿ ಇರಬೇಕು” ಎಂದು ಸಲಹೆ ನೀಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ತುಳುಕೂಟ ಉಡುಪಿ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, “ತುಳು ಭಾಷೆ ಸಂಸ್ಕೃತಿ ಶ್ರೀಮಂತ ಇತಿಹಾಸವನ್ನು ಹೊಂದಿದ್ದು, ಸರಕಾರದ ಮಟ್ಟದಲ್ಲಿ ತುಳು ಭಾಷೆಗೆ ಸಿಗಬೇಕಾದ ಸೂಕ್ತ ಸ್ಥಾನಮಾನಕ್ಕೆ ಎಲ್ಲರೂ ಒಗ್ಗಟ್ಟಿನಿಂದ ಧ್ವನಿಯಾಗಬೇಕು” ಎಂದು ಅಭಿಪ್ರಾಯಪಟ್ಟರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ಲಕ್ಷ್ಮೀನಾರಾಯಣ್ ಕಾರಂತ ಅಧ್ಯಕ್ಷತೆ ವಹಿಸಿದ್ದರು. ಟಿ. ಮೋಹನ್‌ದಾಸ್ ಪೈ ಕೌಶಲ್ಯಾಭಿವೃದ್ಧಿ ಸಂಸ್ಥೆ ನಿರ್ದೇಶಕ ಟಿ. ರಂಗ ಪೈ, ಎಂ.ಜಿ.ಎಂ. ಪದವಿ ಪೂರ್ವ ಕಾಲೇಜು ಪ್ರಾಂಶುಪಾಲೆ ಮಾಲತಿ ದೇವಿ ಉಪಸ್ಥಿತರಿದ್ದರು. ಕಾಲೇಜಿನ ತುಳು ಸಂಘದ ಸಂಚಾಲಕ ಡಾ. ಪುತ್ತಿ ವಸಂತ್ ಕುಮಾರ್ ಸ್ವಾಗತಿಸಿ, ಪ್ರಸ್ತಾವನೆಗೈದರು. ಕಾರ್ಯದರ್ಶಿ ಸಾಕ್ಷಿ ವಂದಿಸಿ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಸುಚಿತ್ ಕೋಟ್ಯಾನ್ ನಿರೂಪಿಸಿದರು. ಶೈಕ್ಷಣಿಕ ಸಾಧನೆಗೈದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.