ಮಂಗಳೂರು: ತುಳು ಕೂಟ ಕುಡ್ಲದ ಬಂಗಾರ ಪರ್ಬದ ಸರಣಿ ವೈಭವೋ – 2 ಅಂಗವಾಗಿ ‘ಬಿಸು ಪರ್ಬ ಸಂಭ್ರಮೊ’ ಮಂಗಳೂರಿನ ಶ್ರೀ ಮಂಗಳಾದೇವಿ ದೇವಸ್ಥಾನದ ಸಭಾಂಗಣದಲ್ಲಿ ದಿನಾಂಕ 15-04-2023 ಶನಿವಾರ ನೆರವೇರಿತು. ಇದೇ ವೇದಿಕೆಯಲ್ಲಿ ರತ್ನವರ್ಮ ಹೆಗ್ಗಡೆ ಪ್ರಶಸ್ತಿ -2023 ಪ್ರದಾನ ಮಾಡಲಾಯಿತು.
ತುಳು ಕೂಟ ಕುಡ್ಲದ ಅಧ್ಯಕ್ಷ ಶ್ರೀ ಬಿ.ದಾಮೋದರ ನಿಸರ್ಗ ಇವರ ಅಧ್ಯಕ್ಷತೆಯಲ್ಲಿ ಶ್ರೀಮತಿ ಪ್ರಸೀತಾ ಪ್ರದೀಪ್ ಮತ್ತು ಶ್ರೀಮತಿ ಹೇಮ ನಿಸರ್ಗ ಇವರ ನೇತೃತ್ವದಲ್ಲಿ ಬಿಸು ಕಣಿ (ವಿಷು ಕಣಿ) ಇಟ್ಟು ಬಿಸು ಹಬ್ಬ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶ್ರೀಮತಿ ರೂಪಕಲಾ ಆಳ್ವ ಇವರ ಬಿಸು ಆಚರಣೆಯನ್ನು ವಿವರಿಸುವ ‘ಬಿಸು’ ಹಾಡು ಮತ್ತು ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಇವರ ‘ಬಿಸುತ ಮಿನದನ’ ಹಾಡುಗಳನ್ನು ಹಾಡಲಾಯಿತು. ಈ ಕಾರ್ಯಕ್ರಮವನ್ನು ರಾಜ್ಯ ಧಾರ್ಮಿಕ ಪರಿಷತ್ ಮಾಜಿ ಸದಸ್ಯರಾದ ಶ್ರೀ ಪದ್ಮನಾಭ ಬಿ. ಕೋಟ್ಯಾನ್ ಉದ್ಘಾಟಿಸಿ, ಮಾತನಾಡುತ್ತಾ “ಹಿಂದಿನ ಆಚರಣೆ-ಕಟ್ಟುಪಾಡುಗಳನ್ನು ಇಂದಿನ ಪೀಳಿಗೆ ತಿಳಿಯಬೇಕು” ಎಂಬ ಸಂದೇಶ ನೀಡಿದರು. ಪ್ರಧಾನ ಕಾರ್ಯದರ್ಶಿ ಶ್ರೀ ರವಿ ಅಲೆವೂರಾಯ ಪಂಚಾಂಗ ಪಠಣ ಮಾಡಿದರು.
ಲೇಖಕಿ ಶ್ರೀಮತಿ ಅಕ್ಷತಾರಾಜ್ ಪೆರ್ಲ ಬಿಸು ಹಬ್ಬದ ಕುರಿತು ಮಾತನಾಡುತ್ತಾ “ಬಿಸು ಹಬ್ಬ ಒಂದು ವಿಶೇಷವಾದ ಹಬ್ಬ. ಕಣಿ ಇಟ್ಟು ಅದರಲ್ಲಿ ಜೋಡಿಸಿದ ಕನ್ನಡಿಯಲ್ಲಿ ಮುಂಜಾನೆ ಮೊದಲು ಹೋಗಿ ನಮ್ಮನ್ನು ನಾವು ನೋಡುವುದು ಅಂದರೆ ನಾವು ಏನು ಎಂದು ತಿಳಿದುಕೊಳ್ಳುವುದು, ನಮ್ಮಲ್ಲಿರುವ ದೋಷಗಳನ್ನು ಗಮನಿಸಿ ತಿದ್ದಿಕೊಳ್ಳುವುದು ಮುಖ್ಯ” ಎಂಬುದನ್ನು ಅರ್ಥವತ್ತಾಗಿ ವಿವರಿಸಿದರು.
ಜಾನಪದ ವಿವಿಯ ವಿಶ್ರಾಂತ ಕುಲಪತಿ ಡಾ. ಚಿನ್ನಪ್ಪ ಗೌಡ ಮಾತನಾಡಿ “ತುಳು ಕೂಟ ಅಂದಿನಿಂದ ಇಂದಿನವರೆಗೂ ಎಷ್ಟೋ ಉತ್ತಮ ಕೆಲಸಗಳನ್ನು ಮಾಡುತ್ತಾ ಬಂದಿದೆ. ಸುವರ್ಣ ಮಹೋತ್ಸವದ ಸಂದರ್ಭದಲ್ಲಿಯಾದರೂ ಈ ಚಟುವಟಿಕೆಗಳ ದಾಖಲೀಕರಣ ಆಗಬೇಕು. 46 ವರ್ಷಗಳಿಂದ ತುಳು ಕೂಟವು ಅಪ್ರಕಟಿತ ತುಳು ನಾಟಕ ಕೃತಿಗಳಿಗೆ ರತ್ನವರ್ಮ ಹೆಗ್ಗಡೆ ಪ್ರಶಸ್ತಿಯನ್ನು ನೀಡುತ್ತಾ ಬಂದಿದೆ. ಈಗಲಾದರೂ ಆ ನಾಟಕ ಕೃತಿಗಳ ಬಗ್ಗೆ ಗಮನ ಹರಿಸಬೇಕಾಗಿದೆ” ಎಂದರು.
ರೊ|| ವಿಶ್ವನಾಥ ಶೆಟ್ಟಿ, ತೀರ್ಥಹಳ್ಳಿ ಮುಖ್ಯ ಅತಿಥಿಯ ಸ್ಥಾನದಿಂದ ಮಾತನಾಡಿ “ತುಳು ಮತ್ತು ಕನ್ನಡ ಸಹೋದರಿ ಭಾಷೆಗಳು. ಅದರ ಬೆಳೆವಣಿಗೆಗೆ ನಾವೆಲ್ಲರೂ ಶ್ರಮಿಸೋಣ” ಎಂದರು. “ಭಾಷೆ ಬೆಳೆಸುವ ಕೆಲಸ ಆಗಬೇಕು. ಭಾಷೆ ಉಳಿಯಬೇಕಾದರೆ ತುಳು ರಾಜ್ಯ ಆಗಬೇಕು” ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷರಾದ ಶ್ರೀ ಹರಿಕೃಷ್ಣ ಪುನರೂರು ಹೇಳಿದರು.
ಶ್ರೀ ಮಂಗಳಾದೇವಿ ದೇವಾಲಯದ ಮೊಕ್ತೇಸರ ಪಿ.ರಮಾನಾಥ ಹೆಗ್ಡೆ, ಉಪಾಧ್ಯಕ್ಷರಾದ ವಿ.ಜಿ. ಪಾಲ್, ಜನತಾ ಬಜಾರ್ ಮಂಗಳೂರು ಇದರ ಅಧ್ಯಕ್ಷ ಶ್ರೀ ಪುರುಷೋತ್ತಮ ಭಟ್ ಹಾಗೂ ಜೆ.ವಿ.ಶೆಟ್ಟಿ ಉಪಸ್ಥಿತರಿದ್ದರು.
ಬಿಸುಪರ್ಬದ ಆಚರಣೆಯ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶ್ರೀಮತಿ ವಿಜಯಲಕ್ಷ್ಮೀ ಎಲ್. ನಿಡ್ಡಣ್ಣಾಯ ಮತ್ತು ಬಳಗದವರಿಂದ ತುಳು ಯಕ್ಷಗಾನ “ಮಣ್ಣ ಮಗೆ’ ಕಾರ್ಯಕ್ರಮವು ನಡೆದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಪೂಜ್ಯ ಖಾವಂದರ ಸಹಕಾರದೊಂದಿಗೆ ತುಳುಕೂಟವು ಕಳೆದ 46 ವರ್ಷಗಳಿಂದ ಅಪ್ರಕಟಿತ ತುಳು ನಾಟಕ ಕೃತಿಗಳಿಗೆ ‘ಧರ್ಮಸ್ಥಳ ರತ್ನವರ್ಮ ಹೆಗ್ಗಡೆ ಪ್ರಶಸ್ತಿ’ ನೀಡುತ್ತಾ ಬಂದಿದೆ. ಈ ಬಾರಿಯೂ ಬಂಗಾರ್ ಪರ್ಬದ ಸರಣಿ ವೈಭವ-2ರ ಜೊತೆಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ನಡೆಯಿತು. ಶ್ರೀ ದೀಪಕ್ ಎಸ್. ಕೋಟ್ಯಾನ್ ಕುತ್ತೆತ್ತೂರು ಇವರ ನಾಟಕ ಕೃತಿ ‘ಮಾಯದಪ್ಪೆ ಮಾಯಂದಾಲ್’ ಗೆ ಪ್ರಥಮ, ಶ್ರೀ ಪರಮಾನಂದ ಸಾಲ್ಯಾನ್ ಸಸಿಹಿತ್ಲು ಇವರ ನಾಟಕ ಕೃತಿ ‘ಪುರ್ಸೆ ಬಿರ್ಸೆ ರಾಮೆ’ ದ್ವಿತೀಯ ಮತ್ತು ಪ್ರೊ. ಅಕ್ಷಯ ಆರ್. ಶೆಟ್ಟಿ ಪೆರಾರ ಮುಂಡಬೆಟ್ಟು ಗುತ್ತು ಅವರ ನಾಟಕ ಕೃತಿ ‘ಪೆರ್ಗ’ ತೃತೀಯ ಬಹುಮಾನವನ್ನು ಪಡೆದಿದೆ.
ಪ್ರಶಸ್ತಿ ವಿಜೇತರ ಬಗ್ಗೆ :
ಶ್ರೀ ದೀಪಕ್ ಎಸ್. ಕೋಟ್ಯಾನ್ ಕುತ್ತೆತ್ತೂರು:
ಅಪ್ರಕಟಿತ ತುಳು ನಾಟಕ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರತ್ನವರ್ಮ ಹೆಗ್ಗಡೆ ಪ್ರಶಸ್ತಿಗೆ ಆಯ್ಕೆಯಾದ ಕೃತಿ ‘ಮಾಯಾದಪ್ಪೆ ಮಾಯನ್ದಾಲ್’. ಇದರ ರಚನಾಕಾರರಾದ ಇವರು ಶ್ರೀ ಶೇಖರ ಮತ್ತು ಶ್ರೀಮತಿ ವಿನೋದ ದಂಪತಿಯ ಸುಪುತ್ರ. ಒಂದು ಖಾಸಗಿ ಕಂಪೆನಿಯಲ್ಲಿ ತಂತ್ರಜ್ಞರಾಗಿ ಕಾರ್ಯ ನಿರ್ವಹಿಸುತ್ತಿದ್ದು ಬರವಣಿಗೆಯ ಹವ್ಯಾಸ ಇರುವ ಇವರು ಸುಮಾರು 300ಕ್ಕೂ ಹೆಚ್ಚು ಕನ್ನಡ ಮತ್ತು ತುಳು ಭಾಷೆಯಲ್ಲಿ ದೈವಗಳ ಭಕ್ತಿಗೀತೆಗಳನ್ನು ರಚನೆ ಮಾಡಿದ್ದಾರೆ. ಸುಮಾರು 25ಕ್ಕೂ ಹೆಚ್ಚು ದೇವರ ಹಾಡು, 8 ಕನ್ನಡ ಮತ್ತು ತುಳು ಆಲ್ಬಮ್ ಹಾಡುಗಳು, ‘ತೊಟ್ಟಿಲ್’ ತುಳು ಸಿನಿಮಾಕ್ಕೆ ಸಾಹಿತ್ಯ ರಚನೆ ಮಾಡಿದ ಖ್ಯಾತಿಯ ಇವರು 5 ತುಳು ನಾಟಕ ರಚನೆ ಮತ್ತು 3 ಮಕ್ಕಳ ಕನ್ನಡ ನಾಟಕ ರಚನೆಯನ್ನೂ ಮಾಡಿದ್ದಾರೆ. ಬಂಟರ ಸಂಘ ಸುರತ್ಕಲ್ ಇವರದೇ ರಚನೆಯ ಕಿರು ನಾಟಕವನ್ನು ಪ್ರದರ್ಶಿಸಿ ದ್ವಿತೀಯ ಪ್ರಶಸ್ತಿ ಪಡೆದಿದೆ. ಇದೇ ರೀತಿ ಯುವವಾಹಿನಿ ಪೆರ್ಮುದೆ ಮತ್ತು ಬಂಟರ ಸಂಘ ಚೇಳ್ಯಾರು ಈ ಎರಡೂ ಸಂಘಗಳಿಗೆ ಪ್ರಶಸ್ತಿಗಳು ಬಂದಿರುತ್ತದೆ. ಕಾರ್ಯಕ್ರಮಗಳ ನಿರೂಪಣೆ ಮತ್ತು ಹಿನ್ನೆಲೆ ಗಾಯನ ಇವರ ಹವ್ಯಾಸ. ತುಳು ಮತ್ತು ಕನ್ನಡ ಮಾಸಿಕ ಪತ್ರಿಕೆಗಳಿಗೆ ಅಂಕಣಕಾರರಾಗಿ ಬರಹಗಳನ್ನು ಬರೆಯುತ್ತಾರೆ. ಇವರ ಈ ಎಲ್ಲಾ ಸಾಹಿತ್ಯ ಕೃಷಿ ಹಾಗೂ ಚಟುವಟಿಕೆಯ ಹಿಂದೆ ಅವರ ಪತ್ನಿ ಶ್ರೀಮತಿ ಪ್ರಿಯಾ ದೀಪಕ್ ಇವರ ಪ್ರೋತ್ಸಾಹವಿದೆ. ಇವರ ಸಾಹಿತ್ಯ ಕೃಷಿ ಇನ್ನಷ್ಟು ಅಭಿವೃದ್ಧಿ ಹೊಂದಲಿ ಎಂಬ ಆಶಯದೊಂದಿಗೆ ಅವರಿಗೆ ಧರ್ಮಸ್ಥಳ ರತ್ನವರ್ಮ ಹೆಗ್ಗಡೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಶ್ರೀ ಪರಮಾನಂದ ಸಾಲ್ಯಾನ್ ಸಸಿಹಿತ್ಲು:
ಇವರ ಅಪ್ರಕಟಿತ ತುಳು ನಾಟಕ ‘ಪುರ್ಸೆ ಬಿರ್ಸೆ ರಾಮೆ’ ಕೃತಿ ದ್ವಿತೀಯ ಸ್ಥಾನವನ್ನು ಪಡೆದು ರತ್ನವರ್ಮ ಹೆಗ್ಗಡೆ ಪ್ರಶಸ್ತಿಗೆ ಆಯ್ಕೆಯಾಗಿದೆ. ಇವರು ಒಬ್ಬ ಪತ್ರಕರ್ತ, ರಂಗಕರ್ಮಿ ಪತ್ರಿಕಾ ಅಂಕಣಕಾರ ಆಗಿ ಸಾಹಿತ್ಯ ಕೃಷಿ ಮಾಡುತ್ತಿರುವವರು. ಸಸಿಹಿತ್ಲಿನ ಯುವಕ ಮಂಡಲ, ಉತ್ಥಾನ ಬಳಗ ಮತ್ತು ಹಳೆಯಂಗಡಿ ಜೇಸಿಸ್ ನ ಮಾಜಿ ಅಧ್ಯಕ್ಷರು. ಮುಂಗಾರು ಮತ್ತು ಹೊಸ ದಿಗಂತ ದಿನ ಪತ್ರಿಕೆಯ ಉಪ ಸಂಪಾದಕರಾಗಿದ್ದಾರೆ. ಬಿಲ್ಲವರ ವಿಶ್ವವಾಣಿ ಹಾಗೂ ಯುವವಾಹಿನಿ ಪತ್ರಿಕೆಯ ಸ್ಥಾಪಕ ಸಂಪಾದಕರು.
18 ಐತಿಹಾಸಿಕ, 10 ಪೌರಾಣಿಕ ಮತ್ತು 15 ಸಾಮಾಜಿಕ ಹೀಗೆ ಒಟ್ಟು 43 ನಾಟಕ ಕೃತಿಗಳ ರಚನಾಕಾರರು. ವಿದೇಶದಲ್ಲಿಯೂ ತಮ್ಮ ಅಸ್ಮಿತೆಯ ಛಾಪನ್ನು ಮೂಡಿಸಿದ ಇವರು ದೇಶದಾದ್ಯಂತ ಹಲವು ಕಡೆ ಕಾರ್ಯಕ್ರಮಗಳನ್ನು ನೀಡಿದ ಖ್ಯಾತರು. ‘ಸೇವೆ ಮತ್ತು ನೋವು’ ಹಾಗೂ ‘ನಾಯೆರ್’ ಎಂಬ ಎರಡು ಕಿರುಚಿತ್ರ, ‘ಬಾರೆರ್ ಬೀರೆರ್’, ‘ದೇಯಿ’, ‘ಅಮ್ಮ ಬತ್ತೆರ್’, ‘ಸಿರಿ ಗಂಧದ ಕರಿಯಜ್ಜೆರ್’ ಎಂಬ ಸಾಕ್ಷ್ಯ ಚಿತ್ರಗಳನ್ನು ನಿರ್ಮಾಣ ಮಾಡಿದ ಇವರ ತುಳು ಮತ್ತು ಕನ್ನಡ ಸಾಹಿತ್ಯ ರಚನೆಯ ಕೆಲಸ ಹೀಗೇ ಮುಂದುವರಿಯಲಿ ಎಂಬ ಆಶಯದೊಂದಿಗೆ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರೊ. ಅಕ್ಷಯ ಆರ್. ಶೆಟ್ಟಿ ಪೆರಾರ ಮುಂಡಬೆಟ್ಟು ಗುತ್ತು:
ಇವರ ರಚಿಸಿದ ಕೃತಿ “ಪೆರ್ಗ”ವು ಸ್ಪರ್ಧೆಯಲ್ಲಿ ತೃತೀಯ ಸ್ಥಾನವನ್ನು ಪಡೆದು ರತ್ನವರ್ಮ ಹೆಗ್ಡೆ ಪ್ರಶಸ್ತಿಗೆ ಆಯ್ಕೆಯಾಗಿದೆ. ಮಂಗಳೂರಿನ ಅಡ್ಯಾರ್ ಸಹ್ಯಾದ್ರಿ ಇಂಜಿನಿಯರಿಂಗ್ ಮತ್ತು ಮ್ಯಾನೆಜ್ಮೆಂಟ್ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಮಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ಪಿ.ಎಚ್.ಡಿ. ಮಾಡುತ್ತಿರುವ ಇವರು, ‘ನನ್ನ ಹಾದಿ’ (ಕವನ ಸಂಕಲನ), ‘ಬದುಕು ಭಾವದ ತೆನೆ’, ‘ಕನಕ ಚಿಂತನ’, ‘ದೆಂಗ’ (ತುಳು ಕಾದಂಬರಿ)ಇತ್ಯಾದಿ ಕೃತಿಗಳ ರಚನಾಕಾರರೂ ಆಗಿದ್ದಾರೆ.
‘ಬದುಕು ಭಾವದ ತೆನೆ’ ಗೆ ಸುಶೀಲಾ ಶೆಟ್ಟಿ ಸ್ಮಾರಕ ದತ್ತಿ ನಿಧಿ ಕಾವ್ಯ ಪ್ರಶಸ್ತಿ, ಮತ್ತು ‘ಬಿಡಿ ಕಥೆ’ಗೆ ರಾಜ್ಯ ಮಟ್ಟದ ಕರ್ನಾಟಕ ಲೇಖಕಿಯರ ಸಂಘದಿಂದ ಪ್ರಥಮ ಸ್ಥಾನ ಬಂದಿರುತ್ತದೆ. ‘ದೆಂಗ’ ಕಾದಂಬರಿಗೆ ಎಸ್.ಯು.ಪಣಿಯಾಡಿ ಪ್ರಶಸ್ತಿ ದೊರೆತಿರುತ್ತದೆ.ಇನ್ನಷ್ಟು ಕೃತಿಗಳು ಇವರ ಲೇಖನಿಯಿಂದ ಹೊರಬರಲಿ ಎಂಬ ಹಾರೈಕೆಯೊಂದಿಗೆ ಇವರಿಗೆ ಧರ್ಮಸ್ಥಳ ರತ್ನವರ್ಮ ಹೆಗ್ಗಡೆ ಪ್ರಶಸ್ತಿ ಪ್ರದಾನ ಮಾಡಲಾಯಿತು.