30 ಮಾರ್ಚ್ 2023, ಮಂಗಳೂರು: ಅಖಿಲ ಭಾರತ ಬಿಲ್ಲವ ಮಹಿಳಾ ಸಂಘದ ಅಧ್ಯಕ್ಷೆ ಸುಮಲತಾ ಎನ್. ಸುವರ್ಣ ಇವರು ‘ತುಳು ಕೂಟ ಕುಡ್ಲ’ದ ಸುವರ್ಣ ಮಹೋತ್ಸವದ ಹಿನ್ನೆಲೆಯಲ್ಲಿ ನಡೆಯುವ ಸರಣಿ ಕಾರ್ಯಕ್ರಮದ ಭಾಗವಾಗಿ ದಿನಾಂಕ 26-03-2023 ರವಿವಾರದಂದು ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದ ಸಭಾಂಗಣದಲ್ಲಿ ‘ತುಳು ಕುಣಿತ ಭಜನ ಸ್ಪರ್ಧೆ 2023’ಕ್ಕೆ ಚಾಲನೆ ನೀಡಿ ಮಾತನಾಡುತ್ತಾ “ಭಜನೆ ಧರ್ಮದ ಆಚರಣೆಯ ಭಾಗವಾದರೆ, ತುಳು ಭಾಷೆ ನಮ್ಮ ಸಂಸ್ಕೃತಿಯ ಭಾಗ. ಧಾರ್ಮಿಕ ಹಿನ್ನೆಲೆಯಲ್ಲಿ ಸಂಸ್ಕೃತಿಯನ್ನು ಒಟ್ಟು ಸೇರಿಸಿ ಆಯೋಜಿಸಿರುವ ಕುಣಿತ ಭಜನ ಕಾರ್ಯಕ್ರಮ ಅರ್ಥಪೂರ್ಣವಾದುದು. ತುಳು ಭಾಷೆಯಲ್ಲಿ ಮಾತನಾಡುವುದನ್ನು ನಾವು ನಮ್ಮ ಹಿರಿಯರಿಂದ ಕಲಿತಿದ್ದೇವೆ. ತುಳುನಾಡಿನಲ್ಲಿ ಹುಟ್ಟಿದ ನಮಗೆ ತುಳು ಭಾಷೆಯನ್ನು ಉಳಿಸುವ ಮಹತ್ವದ ಜವಾಬ್ದಾರಿಯಿದೆ. ಈ ಕೆಲಸ ಯಶಸ್ವಿಯಾಗಬೇಕಿದ್ದರೆ ನಾವು ನಮ್ಮ ಮಕ್ಕಳ ಮೂಲಕ ಮೊಮ್ಮಕ್ಕಳಿಗೆ ಭಾಷೆಯನ್ನು ಕಲಿಸಿಕೊಡಬೇಕು. ಅವರು ಕಲಿತು ಮಾತನಾಡಲು ತೊಡಗಿದರೆ ಮುಂದಿನ ತಲೆಮಾರಿಗೆ ಭಾಷೆ ಉಳಿಯಲು ಸಾಧ್ಯ” ಎಂದರು.
ಶ್ರೀ ಕ್ಷೇತ್ರ ಮಂಗಳಾದೇವಿಯ ಆಡಳಿತ ಮೊಕ್ತೇಸರ ಪಿ. ರಮಾನಾಥ ಹೆಗ್ಡೆ ಮಾತನಾಡಿ, “ಭಜನೆ ದೇವರಿಗೆ ಅತ್ಯಂತ ಪ್ರಿಯವಾದುದು. ಅದರಲ್ಲೂ ಕುಣಿತ ಭಜನೆ ಇಂದು ಹೆಚ್ಚು ಜನಪ್ರಿಯತೆ ಪಡೆದಿದೆ. ಸಾಕಷ್ಟು ಮಂದಿ ಯುವ ಸಮುದಾಯ ಇದರಲ್ಲಿ ತೊಡಗಿಸಿಕೊಂಡಿದೆ. ಇದು ನಮ್ಮ ಸಂಸ್ಕೃತಿಯನ್ನು ಉಳಿಸುವಲ್ಲಿ ತುಳು ಭಾಷೆಯನ್ನು ಬೆಳೆಸುವಲ್ಲಿ ನೆರವಾಗಿದೆ” ಎಂದರು.
ಕ.ಸಾ.ಪ. ಮಾಜಿ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಮಾತನಾಡಿದರು. ತುಳು ಕೂಟದ ಅಧ್ಯಕ್ಷ ದಾಮೋದರ ನಿಸರ್ಗ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ವರ್ಕಾಡಿ ರವಿ ಅಲೆವೂರಾಯ ಮೊದಲಾದವರು ಉಪಸ್ಥಿತರಿದ್ದರು.
ಶೋಭಾ ಕೇಶವ ಸ್ವಾಗತಿಸಿ, ಉಪಾಧ್ಯಕ್ಷ ವಿ.ಜಿ. ಪಾಲ್ ನಿರೂಪಿಸಿದರು. ಕಾರ್ಯದರ್ಶಿ ಡಾ. ರಾಕೇಶ್ ಕುಮಾರ್ ವಂದಿಸಿದರು. ಸ್ಪರ್ಧೆಯ ತೀರ್ಪುಗಾರರಾಗಿ ಭಜನ ಶಿಕ್ಷಕರಾದ ರಮೇಶ್ ಕಲ್ಮಾಡಿ ಮತ್ತು ಕಲಾವಿದ ತೋನ್ಸೆ ಪುಷ್ಕಳ ಕುಮಾರ್ ಭಾಗವಹಿಸಿದ್ದರು. ವಿವಿಧ ಭಜನ ತಂಡಗಳು ಕುಣಿತ ಭಜನ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.