ಮಂಗಳೂರು : ಶಿಶಿರ – ಶಿಕ್ಷಕ ಶಿಕ್ಷಣ ರಂಗ, ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಕನ್ನಡ ವಿಭಾಗ ಹಾಗೂ ತುಳು ಸ್ನಾತಕೋತ್ತರ ಹಳೆ ವಿದ್ಯಾರ್ಥಿಗಳ ಸಂಘದ ವತಿಯಿಂದ ಆಯೋಜಿಸಲಾಗಿದ್ದ ತುಳು ಪರ್ಬ ಸಂಭ್ರಮ, ವಿಚಾರ ಗೋಷ್ಠಿ ಮತ್ತು ಕವಿಗೋಷ್ಠಿ ಕಾರ್ಯಕ್ರಮವು ದಿನಾಂಕ 05 ಡಿಸೆಂಬರ್ 2025ರಂದು ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾ ಭವನದಲ್ಲಿ ನಡೆಯಿತು.

ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ರಾಜ್ಯ ವಿಧಾನ ಸಭಾ ಸ್ಪೀಕರ್ ಯು.ಟಿ. ಖಾದರ್ ಮಾತನಾಡಿ “ಒಂದು ಭಾಷೆ ದೇಶದ ಸಂಸ್ಕೃತಿ ಮತ್ತು ಪರಂಪರೆಯನ್ನು ತೋರಿಸುತ್ತದೆ. ಅಲ್ಲಿನ ಆಹಾರ ಶೈಲಿ, ರೀತಿ-ನೀತಿ ಎಲ್ಲವೂ ಭಾಷೆಯ ಮೇಲೆ ಅವಲಂಬಿತವಾಗಿರುತ್ತದೆ. ಇಡೀ ದೇಶದಲ್ಲೇ ತುಳುನಾಡಿನ ಸಂಸ್ಕೃತಿ, ಆಹಾರ ಶೈಲಿ, ಸಂಪ್ರದಾಯ, ಆಚರಣೆ ಎಲ್ಲವೂ ವಿಭಿನ್ನವಾಗಿದೆ. ಹಾಗಾಗಿಯೇ ಇದನ್ನು ಮುಂದಿನ ತಲೆಮಾರಿಗೂ ಕೊಂಡೊಯ್ಯುವ ಗುರುತರ ಜವಾಬ್ದಾರಿ ಎಲ್ಲರ ಮೇಲಿದೆ. ಯಾವುದೇ ಭಾಷೆ ಉಳಿಯಬೇಕಾದರೆ ಜನರ ಸಹಕಾರ ಅಗತ್ಯವಾಗಿ ಬೇಕಾಗುತ್ತದೆ. ಭಾಷೆ ಮೇಲೆ ಅಭಿಮಾನ ಇದ್ದಾಗ ಮಾತ್ರ ಭಾಷೆ ಉಳಿಯಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ತುಳು ಭಾಷಾ ವಿಚಾರಗೋಷ್ಠಿ, ಕವಿಗೋಷ್ಠಿ ಆಯೋಜನೆ ಮಾಡಿರುವುದು ಪ್ರಶಂಸನೀಯ” ಎಂದರು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಂಗಳೂರು ವಿ.ವಿ. ಕುಲಪತಿ ಪ್ರೊ. ಪಿ.ಎಲ್. ಧರ್ಮ ಅವರು “ಯಾವುದೇ ಭಾಷೆಯನ್ನು ಬೆಳೆಸುವುದು ಎಂದರೆ ಗಿಡವೊಂದಕ್ಕೆ ನೀರು, ಗೊಬ್ಬರ ಹಾಕಿ ಬೆಳೆಸಿದಂತೆ ಅಲ್ಲ. ಬದಲಾಗಿ ಆ ಭಾಷೆ ಕುರಿತು ಆಸಕ್ತಿ ಬೆಳೆಸಿಕೊಳ್ಳಬೇಕು. ನಮ್ಮ ಭಾಷೆ ಎಂಬ ಅಭಿಮಾನದಲ್ಲಿ ಅದನ್ನು ನಿತ್ಯವೂ ಬಳಕೆ ಮಾಡಬೇಕು. ಆ ಮೂಲಕ ಭಾಷೆ ಮೇಲಿನ ಅಭಿವ್ಯಕ್ತಿಯನ್ನು ತೋರಿಸಬೇಕು” ಎಂದು ಸಲಹೆ ನೀಡಿದರು.
ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಎ.ಸಿ. ಭಂಡಾರಿ, “ಪದವಿ ಹಂತದಲ್ಲೇ ತುಳು ಭಾಷೆಯನ್ನು ಅಧ್ಯಯನ ನಡೆಸಲು ಅವಕಾಶ ಸಿಕ್ಕಿರುವುದು ಉತ್ತಮ ಬೆಳವಣಿಗೆ. ಇದರಿಂದ ಸಹಜವಾಗಿ ವಿದ್ಯಾರ್ಥಿಗಳಿಗೆ ತಮ್ಮ ಮಾತೃಭಾಷೆ ಕುರಿತು ಅಭಿಮಾನ ಮೂಡಲು ಸಹಾಯವಾಗುತ್ತದೆ” ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ವಿಶ್ವವಿದ್ಯಾನಿಲಯ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ನಿಕಟ ಪೂರ್ವ ಅಧ್ಯಕ್ಷ ನಿಟ್ಟೆಗುತ್ತು ಕರ್ನಲ್ ಶರತ್ ಭಂಡಾರಿ “ದ.ಕ.ದಲ್ಲಿ ತುಳು ಭಾಷೆಯೇ ಮಾತೃಭಾಷೆಯಾಗಿದೆ. ಯಾವುದೇ ವ್ಯಾವಹಾರಿಕ ಭಾಷೆಯನ್ನು ಕಲಿತರೂ, ತುಳುನಾಡ ಜನರು ಮಾತೃಭಾಷೆಯನ್ನು ಮರೆಯಬಾರದು” ಎಂದರು.
ಶಿಶಿರದ ಅಧ್ಯಕ್ಷ ಸುಭಾಷ್ ಚಂದ್ರ ಕಣ್ವತೀರ್ಥ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ಪ್ರೊ. ಗಣಪತಿ ಗೌಡ, ಕನ್ನಡ ವಿಭಾಗದ ಸಹ ಪ್ರಾಧ್ಯಾಪಕ ಡಾ. ಮಾಧವ, ಭಾಷಾ ಸಂಘದ ಸಹ ನಿರ್ದೇಶಕಿ ಪ್ರೊ. ನಾಗರತ್ನ ಎನ್. ರಾವ್, ಶಿಶಿರದ ಕೋಶಾಧಿಕಾರಿ ಆರ್. ಚೇತನ್, ತುಳು ವಿದ್ಯಾರ್ಥಿ ಸಂಘದ ಕೋಶಾಧಿಕಾರಿ ಪ್ರಶಾಂತ್ ಇರುವೈಲು ಸೇರಿದಂತೆ ವಿವಿಧ ವಿಭಾಗಗಳ ಪ್ರಾಧ್ಯಾಪಕರು ಉಪಸ್ಥಿತರಿದ್ದರು. ಬಳಿಕ ವಿಚಾರಗೋಷ್ಠಿ ಮತ್ತು ತುಳು ಭಾಷಾ ಕವಿಗೋಷ್ಠಿ ಪ್ರಸ್ತುತಗೊಂಡವು.
