ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ತುಳು ಪರಿಷತ್ ಕುಡ್ಲ ಸಹಭಾಗಿತ್ವದಲ್ಲಿ 2ನೇ ವಿದ್ಯಾರ್ಥಿ ತುಳು ಸಮ್ಮೇಳನವು ದಿನಾಂಕ 26 ಮಾರ್ಚ್ 2025ರಂದು ಮಂಗಳೂರು ಪುರಭವನದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿಧಾನ ಸಭೆಯ ಸ್ಪೀಕರ್ ಯು. ಟಿ. ಖಾದರ್ ಮಾತನಾಡಿ “ಗ್ರಾಮ ಪಂಚಾಯತ್ ಮಟ್ಟದಲ್ಲಿ ವರ್ಷದಲ್ಲಿ ಒಂದು ತುಳು ಕಾರ್ಯಕ್ರಮ ಪಂಚಾಯತ್ ಅಧಿಕೃತ ಕಾರ್ಯಕ್ರಮವಾಗಿ ನಡೆಯಬೇಕು. ಸಂಬಂಧಪಟ್ಟವರ ಜತೆ ಈ ಕುರಿತು ಚರ್ಚಿಸಿ ಗ್ರಾ. ಪಂ. ಅನುದಾನದಲ್ಲೇ ಕಾರ್ಯಕ್ರಮ ಆಯೋಜಿಸುವ ನಿಟ್ಟಿನಲ್ಲಿ ಮಾತುಕತೆ ನಡೆಸಲಾಗುವುದು. ನಾಟಕ ಯಕ್ಷಗಾನ ಮತ್ತಿತರ ಕಲೆಗಳ ಮೂಲಕ ತುಳು ಭಾಷೆ ಎಲ್ಲ ಕಡೆ ವ್ಯಾಪಿಸಿದೆ. ವಿದ್ಯಾರ್ಥಿಗಳು ಈ ಭಾಷೆಯ ರಾಯಭಾರಿಗಳಾಗಬೇಕು. ಇದರಿಂದ ಭಾಷೆ ಬೆಳೆಯುವ ಜತೆಗೆ ಇನ್ನಷ್ಟು ಅಭಿವೃದ್ಧಿಯಾಗಲು ಸಹಾಯವಾಗುತ್ತದೆ” ಎಂದರು.
ಸಮ್ಮೇಳನವನ್ನು ಉದ್ಘಾಟಿಸಿದ ಐಕಳ ಪೊಂಪೈ ಕಾಲೇಜಿನ ಪದವಿ ವಿದ್ಯಾರ್ಥಿನಿಯಾದ ಸನ್ನಿಧಿ ಮಾತನಾಡಿ “ತುಳು ಮಾತನಾಡಲು ಹಿಂಜರಿಕೆ ಬೇಡ. ತುಳುವರೇ ತುಳು ಮಾತನಾಡದಿದ್ದರೆ ಈ ಭಾಷೆಯನ್ನು ಉಳಿಸುವವರು ಯಾರು? ತುಳು ಭಾಷೆಯ ಬಗ್ಗೆ ನಮ್ಮಲ್ಲಿ ಹೆಮ್ಮೆ ಅಗತ್ಯ” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್. ಡಿ. ಎಂ. ಕಾನೂನು ಕಾಲೇಜು ವಿದ್ಯಾರ್ಥಿಯಾದ ವಿಜೇತ್ ಶೆಟ್ಟಿ ಮಾತನಾಡಿ “ನಂಬಿಕೆಯೇ ತುಳುನಾಡಿನ ಸಂಸ್ಕೃತಿಯ ಮೂಲ ನಂಬಿಕೆ. ಆದರೆ ಈಗ ಅದು ಮೇಣದ ಸೇತುವೆಯ ಹಾಗೆಯೇ ಕರಗುತ್ತಿದೆ. ತುಳು ಸಂಸ್ಕೃತಿ ಕೇವಲ ಮಾತಿನಿಂದ ಉಳಿಯದು ಎಂಬ ಜಾಗೃತಿ ನಮ್ಮಲ್ಲಿ ಬೆಳೆಯಬೇಕು” ಎಂದರು.
ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ತಾರಾನಾಥ ಗಟ್ಟಿ ಕಾಪಿಕಾಡ್ ಮಾತನಾಡಿ “ಭಾಷೆಯನ್ನು ಮುಂದಿನ ತಲೆಮಾರಿಗೆ ದಾಟಿಸುವ ಕಾರ್ಯ ಆಗಬೇಕು” ಎಂದು ಹೇಳಿದರು.
ಹಿರಿಯ ವಿದ್ವಾಂಸರಾದ ಡಾ.ಇಂದಿರಾ ಹೆಗ್ಗಡೆ, ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ಸಂಚಾಲಕರಾದ ಪಾಂಗಾಳ ಬಾಬು ಕೊರಗ, ಮೋಹನದಾಸ್ ಕೊಟ್ಟಾರಿ, ತುಳು ಪರಿಷತ್‌ನ ಸಮಿತಿ ಸದಸ್ಯರಾದ ಧರಣೇಂದ್ರ ಕುಮಾರ್, ಚಂದ್ರಕಲಾ ರಾವ್ ಉಪಸ್ಥಿತರಿದ್ದರು.
ತುಳು ಪರಿಷತ್ ಇದರ ಅಧ್ಯಕ್ಷರಾದ ಕೆ. ಶುಭೋದಯ ಆಳ್ವ ಸ್ವಾಗತಿಸಿ, ಗೌರವ ಅಧ್ಯಕ್ಷ ಡಾ.ಪ್ರಭಾಕರ ನೀರುಮಾರ್ಗ ಪ್ರಸ್ತಾವನೆಗೈದರು. ಬಳಿಕ ಸಂಶೋಧಕಿ ಇಂದಿರಾ ಹೆಗ್ಗಡೆ ಅವರೊಂದಿಗೆ ಸಂವಾದ ನಡೆಯಿತು. ಸಮಾರಂಭದಲ್ಲಿ ಕವಿ ಭೋಜ ಸುವರ್ಣ ಇವರಿಗೆ ಡಾ. ಪ್ರಭಾಕರ್ ನೀರುಮಾರ್ಗ ‘ತುಳು ಪರಿಷತ್ ಪ್ರಶಸ್ತಿ’ ಪ್ರದಾನ ಮಾಡಲಾಯಿತು.