ಬಂಟ್ವಾಳ : ಶ್ರೀಕ್ಷೇತ್ರ ಒಡಿಯೂರಿನಲ್ಲಿ ‘ಸಿರಿರಾಮೆ’ ಎಂಬ ಪರಿಕಲ್ಪನೆಯಡಿಯಲ್ಲಿ 24ನೇ ‘ತುಳು ಸಾಹಿತ್ಯ ಸಮ್ಮೇಳನ’ವು ಮಣಿಪಾಲದ ಹಿರಿಯ ಬರಹಗಾರ, ಯಕ್ಷಗಾನ ಕಲಾವಿದ ಹಾಗೂ ಜನಪ್ರಿಯ ವೈದ್ಯ ಡಾ. ಭಾಸ್ಕರಾನಂದಕುಮಾರ್ ಅವರ ಅಧ್ಯಕ್ಷತೆಯಲ್ಲಿ ದಿನಾಂಕ 18-02-2024ರಂದು ಜರಗಿತು. ಸಮ್ಮೇಳನದ ಅಂಗವಾಗಿ ಪುಸ್ತಕ ಬಿಡುಗಡೆ, ವಿದ್ವಾಂಸರಿಂದ ‘ರಾಮಾಯಣ’ ಬಗ್ಗೆ ‘ತುಲಿಪು’ ಎಂಬ ವಿಚಾರಸಂಕಿರಣ, ಅರವತ್ತು ಮಂದಿ ಕವಿಗಳ ಚುಟುಕು ಕವಿಗೋಷ್ಠಿ, ಕಬಿತೆ-ಪದೊ-ಚಿತ್ರ ಎಂಬ ಕಾರ್ಯಕ್ರಮ, ವಿವಿಧ ಕ್ಷೇತ್ರಗಳ ಹನ್ನೆರಡು ಮಂದಿ ಸಾಧಕರಿಗೆ ‘ತುಳುಸಿರಿ’ ಪ್ರಶಸ್ತಿ ಪ್ರದಾನ ಮೊದಲಾದ ಕಾರ್ಯಕ್ರಮಗಳು ಜರಗಿದವು.
ಉದ್ಘಾಟನಾ ಸಮಾರಂಭದಲ್ಲಿ ಶ್ರೀ ಗುರುದೇವಾನಂದ ಸ್ವಾಮೀಜಿಯವರು ತುಳು ಲಿಪಿಯಲ್ಲಿ ಬರೆದ ಅಧ್ಯಾತ್ಮ ರಾಮಾಯಣದ ‘ಸುಂದರಕಾಂಡ’ ಎಂಬ ಕೃತಿ ಹಾಗೂ ಡಾ. ವಸಂತಕುಮಾರ ಪೆರ್ಲ ಅವರು ಬರೆದ ತುಳುನಾಡಿನ ಸಾಹಿತ್ಯ ಹಾಗೂ ಸಂಸ್ಕೃತಿ ಕುರಿತ ಲೇಖನಗಳ ಸಂಕಲನ ‘ತೂಪರಿಕೆ’ ಬಿಡುಗಡೆಗೊಂಡವು.
ಶ್ರೀ ಗುರುದೇವಾನಂದ ಸ್ವಾಮೀಜಿಯವರು ಸಮ್ಮೇಳನವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ವಗೆನಾಡು ಸುಬ್ರಾಯ ದೇವಸ್ಥಾನದ ಆಡಳಿತ ಮೊಕ್ತೇಸರ ಮುಗುಳಿ ತಿರುಮಲೇಶ್ವರ ಭಟ್ ಮತ್ತು ಕನ್ಯಾನದ ಉದ್ಯಮಿ ಶ್ರೀಧರ ಕೆ. ಶೆಟ್ಟಿ ಗುಬ್ಯಮೇಗಿನಗುತ್ತು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಅನಂತರ ನಡೆದ ವಿಚಾರಸಂಕಿರಣದಲ್ಲಿ ‘ರಾಮಾಯಣದ ಪೊರ್ಲು ತಿರ್ಲ್’ ಎಂಬ ವಿಷಯದ ಬಗ್ಗೆ ಡಾ. ರಾಜಶ್ರೀ ಶೆಟ್ಟಿ, ‘ರಾಮಾಯಣೊಡು ದೆಂಗ್ ನ ಮಾನವೀಯ ಮೌಲ್ಯ’ ಎಂಬ ವಿಷಯದ ಬಗ್ಗೆ ಡಾ. ಶ್ರೀಶಕುಮಾರ ಎಂ.ಕೆ. ಮತ್ತು ‘ಜಾನಪದ ಪಿಂದರಿಕೆಡ್ ರಾಮಾಯಣೊ’ ಎಂಬ ವಿಷಯದ ಬಗ್ಗೆ ಡಾ. ರವೀಶ್ ಪಡುಮಲೆ ವಿಚಾರ ಮಂಡಿಸಿದರು.
ಬಳಿಕ ಜರಗಿದ ಅರವತ್ತು ಮಂದಿ ಚುಟಕ ಕವಿಗಳ ಗೋಷ್ಠಿಯನ್ನು ಗೀತಾ ಲಕ್ಮೀಶ್ ನಡೆಸಿಕೊಟ್ಟರು. ಕಬಿತೆ-ಪದ-ಚಿತ್ರ ಕಾರ್ಯಕ್ರಮದಲ್ಲಿ ಕದ್ರಿ ನವನೀತ ಶೆಟ್ಟಿ, ವಸಂತಿ ಎ. ವಿಟ್ಲ, ಸುಬ್ರಹ್ಮಣ್ಯ ಒಡಿಯೂರು, ರಾಜಶ್ರೀ ಟಿ. ರೈ, ವಿಜಯಾ ಶೆಟ್ಟಿ ಸಾಲೆತ್ತೂರು ಕವಿಗಳಾಗಿಯೂ ರವಿರಾಜ ಶೆಟ್ಟಿ, ಶೇಖರ ಶೆಟ್ಟಿ ಬಾಯಾರು, ಶಿವಪ್ರಸಾದ್, ರೇಣುಕಾ ಎಸ್. ರೈ ಹಾಡುವ ಕಲಾವಿದರಾಗಿಯೂ ಭಾಗವಹಿಸಿದರು. ಈ ಗೀತೆಗಳಿಗೆ ರವಿರಾಜ ಶೆಟ್ಟಿ ಒಡಿಯೂರು ರಾಗ ಸಂಯೋಜಿಸಿದ್ದರು. ಚಿತ್ರ ಕಲಾವಿದರಾದ ಬಿ. ಗಣೇಶ ಸೋಮಯಾಜಿ, ಜಯಶ್ರೀ ಶರ್ಮ ಮತ್ತು ಪ್ರೊ. ಅನಂತಪದ್ಮನಾಭ ರಾವ್ ಪದ್ಯಗಳಿಗೆ ಸ್ಥಳದಲ್ಲೇ ಚಿತ್ರ ಬಿಡಿಸುವ ಮೂಲಕ ಕಾರ್ಯಕ್ರಮಕ್ಕೆ ಮೆರುಗು ತಂದಿತ್ತರು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಹನ್ನೆರಡು ಮಂದಿ ಸಾಧಕರಿಗೆ ಸನ್ಮಾನ ಏರ್ಪಟ್ಟಿತು. ಶ್ರೀ ಗುರು ದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಅಧ್ಯಕ್ಷತೆ ವಹಿಸಿದ ಡಾ. ಭಾಸ್ಕರಾನಂದ ಕುಮಾರ್ ಅವರು “ಶ್ರೀರಾಮ ನಮ್ಮ ಜೀವನಮೌಲ್ಯದ ಸಂಕೇತ, ಇಡೀ ಭಾರತವನ್ನು ಸಾಂಸ್ಕೃತಿಕವಾಗಿ ಬೆಸೆದ ಅಪೂರ್ವ ನಾಯಕ” ಎಂದು ಬಣ್ಣಿಸಿದರು. ಚಂದ್ರಶೇಖರ ಶೆಟ್ಟಿ ಅನೆಯಾಲಮಂಟಮೆ ಮತ್ತು ವಿಟ್ಲದ ಉದ್ಯಮಿ ಸುರೇಶ್ ಭಂಡಾರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ತುಳು ಸಾಹಿತ್ಯ ಸಮ್ಮೇಳನದ ಪ್ರಧಾನ ಸಂಚಾಲಕ ಡಾ. ವಸಂತಕುಮಾರ್ ಪೆರ್ಲ ಸ್ವಾಗತಿಸಿ ಪ್ರಸ್ತಾವನೆಗೈದರು. ಪ್ರಧಾನ ಸಂಚಾಲಕ ಕದ್ರಿ ನವನೀತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಸ್ವಾಗತ ಸಮಿತಿ ಸಂಚಾಲಕ ಲಿಂಗಪ್ಪ ಗೌಡ ಪನೆಯಡ್ಕ ವಂದಿಸಿದರು. ಸಭಾ ಕಾರ್ಯಕ್ರಮ ನಂತರ ಪಾವಂಜೆಯ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಕೃಪಾಪೋಷಿತ ಯಕ್ಷಗಾನ ಮಂಡಳಿ ಮೇಳದವರಿಂದ ‘ಅಯೋಧ್ಯಾ ದೀಪ’ ಯಕ್ಷಗಾನ ಪ್ರದರ್ಶನಗೊಂಡಿತು.