ಪುತ್ತೂರು : ಪುತ್ತೂರಿನ ವಿವೇಕಾನಂದ ಕಾಲೇಜು ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ)ದ ತುಳು ಸಂಘ, ಮಾನವಿಕ ಸಂಘ ಹಾಗೂ ಐಕ್ಯೂಎಸಿ ಆಶ್ರಯದಲ್ಲಿ ನಡೆದ ತುಳು ಸಂಘದ ಉದ್ಘಾಟನಾ ಕಾರ್ಯಕ್ರಮವು ದಿನಾಂಕ 13-10-2023ರಂದು ನಡೆಯಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ‘ತುಳು ಮೌಖಿಕ ಸಾಹಿತ್ಯ’ ಎಂಬ ವಿಷಯದ ಕುರಿತು ಮಾತನಾಡಿದ ಪುತ್ತೂರಿನ ತುಳು ಕೂಟದ ಕಾರ್ಯದರ್ಶಿ ಡಾ. ರಾಜೇಶ್ ಬೆಜ್ಜಂಗಳ “ಸಾಂಸ್ಕೃತಿಕವಾಗಿ, ಸಾಹಿತ್ಯಿಕವಾಗಿ ಪಾರಂಪರಿಕವಾಗಿ ಶ್ರೀಮಂತಿಕೆಯನ್ನು ಹೊಂದಿದ ತುಳುನಾಡಿನ ವೈಶಿಷ್ಟಗಳನ್ನು ಜನಪದ ಸಾಹಿತ್ಯವು ತಿಳಿಸಿಕೊಡುತ್ತದೆ. ತುಳುನಾಡಿನಲ್ಲಿ ದೈವಗಳ ಶಕ್ತಿ ಅಪಾರ. ಅಂತಹ ದೈವದ ಕಥೆಯನ್ನು ಸಿರಿವಂತಿಕೆಯ ರೂಪದಲ್ಲಿ ತೋರಿಸಿ ಕೊಡುವ ಶ್ರೀಮಂತ ಕಲೆ ಪಾಡ್ದನ. ಇದು ತುಳುನಾಡಿನ ವಿಶೇಷತೆಯನ್ನು ತಿಳಿಸಿ ಕೊಡುತ್ತದೆ. ತುಳುನಾಡಿನಲ್ಲಿ ವೈದಿಕ ಮತ್ತು ಜಾನಪದ ಸಾಹಿತ್ಯದ ಪರಿಕಲ್ಪನೆಗಳು ವಿಭಿನ್ನ” ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ವಿಶೇಷ ಅಧಿಕಾರಿ ಮತ್ತು ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಶ್ರೀಧರ್ ನಾಯ್ಕ್ ಬಿ. “ತುಳುನಾಡು ಚಾರಿತ್ರ್ಯಿಕವಾದ ಸೃಷ್ಟಿ ಹೊಂದಿರುವಂತಹ ಪ್ರದೇಶ. ಪರಶುರಾಮನ ಸೃಷ್ಟಿ ನಮ್ಮ ತುಳುನಾಡು. ಇದು ಅದರದ್ದೇ ಆದ ಇತಿಹಾಸವನ್ನು ಹೊಂದಿದೆ. ಇಲ್ಲಿಯ ಪರಂಪರೆ ಅದ್ಭುತವಾಗಿದೆ. ತುಳುವಿಗೆ ಲಿಪಿ ಇದ್ದು ಅದು ತನ್ನದೇ ಆದ ಭಾಷಾ ಶೈಲಿಯನ್ನು ಹೊಂದಿದೆ. ಎಂಟನೇ ಪರಿಚ್ಛೇದಕ್ಕೆ ತುಳು ಭಾಷೆ ಸೇರುವಂತಾಗಬೇಕು” ಎಂದು ಹೇಳಿದರು.
ವೇದಿಕೆಯಲ್ಲಿ ಮಾನವಿಕ ಸಂಘದ ಸಂಯೋಜಕಿ ಮತ್ತು ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಅನಿತಾ ಕಾಮತ್ ಮತ್ತು ವ್ಯವಹಾರಶಾಸ್ತ್ರ ವಿಭಾಗದ ಉಪನ್ಯಾಸಕಿ ದೀಪಿಕಾ ಎಸ್. ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕಾಲೇಜಿನ ತುಳು ಸಂಘದ ಅಧ್ಯಕ್ಷ ಆಶಿಶ್ ಆಳ್ವ ಸ್ವಾಗತಿಸಿ, ಕಾರ್ಯದರ್ಶಿ ಮನೀಶ್ ಪೂಜಾರಿ ವಂದಿಸಿದರು. ತೃತೀಯ ಕಲಾ ವಿಭಾಗದ ವಿದ್ಯಾರ್ಥಿನಿ ರಮ್ಯ ಶ್ರೀನಿವಾಸ್ ನಿರ್ವಹಿಸಿದರು.