ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ರಾಘವೇಂದ್ರ ಯುವಕ ಮಂಡಲದ ಸಹಯೋಗದಲ್ಲಿ ‘ತುಳು ವಿಚಾರಗೋಷ್ಠಿ ಮತ್ತು ತುಳು ಕವಿಗೋಷ್ಠಿ’ ಕಾರ್ಯಕ್ರಮವು ದಿನಾಂಕ 18 ಅಕ್ಟೋಬರ್ 2025ರಂದು ಮೂಡುಪೆರಾರದ ಮಿತ್ತಕೊಲಪಿಲದಲ್ಲಿರುವ ರಾಘವೇಂದ್ರ ಭಜನಾ ಮಂದಿರದ ವಠಾರದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯೆಯಾದ ಅಕ್ಷಯ ಆರ್.ಶೆಟ್ಟಿ ಪೆರಾರ ಮಾತನಾಡಿ “ಊರಿನ ಸಮಸ್ತ ಜನತೆಯನ್ನು ಒಟ್ಟು ಸೇರಿಸಿ, ಒಗ್ಗಟ್ಟಿನ ಸಂದೇಶ ಸಾರುವಲ್ಲಿ ಯುವಕ ಮಂಡಲಗಳು ಪ್ರಮುಖ ಪಾತ್ರವಹಿಸುತ್ತವೆ. ತುಳು ವಿಚಾರಗೋಷ್ಠಿ ಮತ್ತು ಕವಿಗೋಷ್ಠಿಯನ್ನು ಆಯೋಜಿಸುವ ಮೂಲಕ ತುಳು ಭಾಷೆಯ ಬಗ್ಗೆ ರಾಘವೇಂದ್ರ ಭಜನಾ ಮಂದಿರ ಎಷ್ಟು ಅಭಿಮಾನವನ್ನು ಹೊಂದಿದೆ ಎಂಬುದನ್ನು ಸಾಬೀತುಪಡಿಸಿದೆ. ಭಾಷೆಯ ಕುರಿತು ವಿವಿಧ ಕಾರ್ಯಕ್ರಮಗಳು ನಡೆಯಬೇಕು. ಈ ನಿಟ್ಟಿನಲ್ಲಿ ಶ್ರೀ ರಾಘವೇಂದ್ರ ಯುವಕ ಮಂಡಲದ ಕಾರ್ಯ ಶ್ಲಾಘನೀಯ” ಎಂದರು.
ಶುಭಾಸಂಶನೆಗೈದ ಕ್ಷೇತ್ರ ಪೆರಾರದ ಬಲವಾಂಡಿ ದೈವದ ಮುಕ್ಕಾಲ್ಡಿ ಬಾಲಕೃಷ್ಣ ಶೆಟ್ಟಿ ಅಳಿಕೆಗುತ್ತು ಮಾತನಾಡಿ “ಸಾಹಿತ್ಯ ವಿಚಾರಗೋಷ್ಠಿ, ಕವಿಗೋಷ್ಠಿಯತ್ತ ಮಕ್ಕಳು ಸೇರಿದಂತೆ ಯುವ ಸಮೂಹ ಹೆಚ್ಚಿನ ಒಲವು ತೋರಬೇಕು. ನಮ್ಮ ಸಂಸ್ಕೃತಿ ಪರಂಪರೆ ಉಳಿಯಲು ವಿಚಾರಗೋಷ್ಠಿಯಂತಹ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕು” ಎಂದರು.
ಮಿತ್ತಕೊಲಪಿಲ ರಾಘವೇಂದ್ರ ಯುವಕ ಮಂಡಲದ ಅಧ್ಯಕ್ಷ ಚಂದ್ರಹಾಸ್ ಪೂಜಾರಿ ಬೋರುಗುಡ್ಡೆ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸುಂಕದಕಟ್ಟೆ ನಿರಂಜನ ಸ್ವಾಮಿ ಪ್ರ. ದ. ಕಾಲೇಜಿನ ಗ್ರಂಥಪಾಲಕ ವಿಶ್ವನಾಥ ಪೂಜಾರಿ ರೇಂಜಾಳ ಉಪನ್ಯಾಸ ನೀಡಿದರು.
ಶ್ರೀ ಬಲವಾಂಡಿ ಕ್ಷೇತ್ರ ಮಾವಂತೂರಿನ ಗಡಿಕಾರರಾದ ಶ್ರೀ ದುರ್ಗಾದಾಸ್ ಶೆಟ್ಟಿ, ಪಡುಪೆರಾರ ಗ್ರಾ. ಪಂ. ಅಧ್ಯಕ್ಷೆಯಾದ ಮೀನಾಕ್ಷಿ ಗೌಡ, ಜಿ. ಪಂ. ಮಾಜಿ ಸದಸ್ಯ ಕೃಷ್ಣ ಅಮೀನ್, ಪಡುಪೆರಾರ ಗ್ರಾ. ಪಂ. ಸದಸ್ಯ ದೇವಪ್ಪ ಶೆಟ್ಟಿ ಕೊಕ್ಕಾರು, ಜವನೆರ್ ಪೆರಾರ ಇದರ ಅಧ್ಯಕ್ಷರಾದ ಮೋಹನ್ ಶೆಟ್ಟಿ ಮರೋಳಿ, ರಾಘವೇಂದ್ರ ಭಜನಾ ಮಂದಿರದ ಅಧ್ಯಕ್ಷರಾದ ನಾರಾಯಣ ಗೌಡ, ಶೀನ ಪೂಜಾರಿ ಕಟ್ಟದಬರಿ, ಪ್ರದೀಪ್ ಪೂಜಾರಿ ಕುಕ್ಕಿಪಾಡಿ, ದುರ್ಗಾಪ್ರಸಾದ್ ಶೆಟ್ಟಿ ಕೊಳಪಿಲ ಉಪಸ್ಥಿತರಿದ್ದರು.

