ಮಂಗಳೂರು : ನಗರದ ಪುರಭವನದಲ್ಲಿ ತುಳುವೆರೆ ಆಯನೊ ಕೂಟ ಕುಡ್ಲ ಇದರ ಪದಗ್ರಹಣ ಸಮಾರಂಭವು ದಿನಾಂಕ 30-09-2023ರಂದು ನಡೆಯಿತು. ಇದೇ ಸಂದರ್ಭದಲ್ಲಿ ಶ್ರೀ ಸದಾಶಿವ ಶೆಟ್ಟಿ ಕನ್ಯಾನ ಇವರಿಗೆ ‘ತುಳುವೆರೆ ಕರ್ಣೆ’ ಬಿರುದು ನೀಡಿ ಗೌರವಿಸಲಾಯಿತು. ಅವರು ಮಾತನಾಡುತ್ತಾ “ತುಳು ಭಾಷೆಯಲ್ಲಿ ವಿವಿಧ ರೀತಿಯ ಪ್ರಾದೇಶಿಕ ಬದಲಾವಣೆ, ಜಾತಿಯಲ್ಲಿಯೂ ಭಾಷೆಯ ಬದಲಾವಣೆಗಳಿವೆ. ಇದೆಲ್ಲವೂ ತುಳುನಾಡಿನ ತುಳು ಭಾಷೆಯ ವೈಶಿಷ್ಟ್ಯತೆ ಸಾರುತ್ತದೆ” ಎಂದು ಹೇಳಿದರು.
ಈ ಸಮಾರಂಭವನ್ನು ಕಟೀಲು ಕ್ಷೇತ್ರದ ಆನುವಂಶಿಕ ಅರ್ಚಕ ಶ್ರೀ ಹರಿನಾರಾಯಣ ಆಸ್ರಣ್ಣ ಉದ್ಘಾಟಿಸಿದರು. ಸಂಸದ ಶ್ರೀ ನಳಿನ್ ಕುಮಾರ್ ಕಟೀಲು, ಶಾಸಕರಾದ ಶ್ರೀ ವೇದವ್ಯಾಸ ಕಾಮತ್, ಶ್ರೀ ಸುರೇಶ್ ಶೆಟ್ಟಿ ಗುರ್ಮೆ, ಮಾಜಿ ಸಚಿವ ಶ್ರೀ ರಮನಾಥ ರೈ, ವಿಶ್ವ ಬಂಟರ ಕೂಟಗಳ ಒಕ್ಕೂಟದ ಅಧ್ಯಕ್ಷ ಶ್ರೀ ಐಕಳ ಹರೀಶ್ ಶೆಟ್ಟಿ, ಮಾಜಿ ಮೇಯರ್ ಶ್ರೀ ಪ್ರೇಮಾನಂದ ಶೆಟ್ಟಿ, ಪಾಲಿಕೆ ಹಣಕಾಸು ಸ್ಥಾಯೀ ಸಮಿತಿ ಅಧ್ಯಕ್ಷ ಶ್ರೀ ವರುಣ್ ಚೌಟ, ವಕೀಲ ಶ್ರೀ ಪದ್ಮರಾಜ್, ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಶ್ರೀ ಎ.ಸಿ. ಭಂಡಾರಿ, ಶ್ರೀ ದಯಾನಂದ ಕತ್ತಲ್ಸಾರ್, ಶ್ರೀ ಯೋಗೀಶ್ ಶೆಟ್ಟಿ ಜಪ್ಪು, ಶ್ರೀ ಪ್ರವೀಣ್ ಕುಮಾರ್ ಕೋಡಿಯಾಲಬೈಲ್ ಮೊದಲಾದವರು ಉಪಸ್ಥಿತರಿದ್ದರು.
ಸಂಗೀತ ನಿರ್ದೇಶಕ ಶ್ರೀ ಪ್ರಮೋದ್ ಸಪ್ರೆ ಮತ್ತು ಬಳಗದವರು ತುಳುನಾಡ ಗೀತೆ ಹಾಡಿದರು. ಶ್ರೀ ನವೀನ್ ಶೆಟ್ಟಿ ಎಡ್ಮೆಮಾರ್ ನಿರೂಪಿಸಿದರು. ಗೌರವಾಧ್ಯಕ್ಷರಾಗಿ ಸಾಯಿರಾಧ ಗ್ರೂಪ್ಸ್ ಆಡಳಿತ ನಿರ್ದೇಶಕ ಶ್ರೀ ಮನೋಹರ್ ಎಸ್. ಶೆಟ್ಟಿ, ಅಧ್ಯಕ್ಷರಾಗಿ ಶ್ರೀಮತಿ ಶಮಿನ ಆಳ್ವ, ಕಾರ್ಯದರ್ಶಿಯಾಗಿ ಶ್ರೀ ರಾಜೇಶ್ ಹೆಗ್ಡೆ ಪೊಳಲಿ, ಉಪಾಧ್ಯಕ್ಷರಾಗಿ ಶ್ರೀ ಗೋಪಾಡ್ಕರ್, ಶ್ರೀಮತಿ ಆಶಾ ಶೆಟ್ಟಿ ಅತ್ತಾವರ, ಶ್ರೀ ಯಾದವ್ ಕೋಟ್ಯಾನ್ ಸಹಿತ ಸದಸ್ಯರು ಪ್ರಮಾಣವಚನ ಸ್ವೀಕರಿಸಿದರು. ಡಾ. ರಾಜೇಶ್ ಆಳ್ವ ಪ್ರಮಾಣ ವಚನ ಬೋಧಿಸಿದರು.
ಅಗರಿ ಶ್ರೀನಿವಾಸ ಭಾಗವತರು ಬರೆದ, ದೇವದಾಸ್ ಈಶ್ವರಮಂಗಲ ತುಳುವಿಗೆ ಅನುವಾದಿಸಿ, ಸರಪಾಡಿ ಅಶೋಕ್ ಶೆಟ್ಟಿ ಸಂಪಾದಿಸಿದ, ಐಲೇಸಾ ಬೆಂಗಳೂರು ಮತ್ತು ಟೋಟಲ್ ಕನ್ನಡ ಪ್ರಕಾಶನ ಮಾಡಿದ ‘ಸಿರಿ ದೇವಿ ಮಾತ್ಮೆ’ ಯಕ್ಷಗಾನ ಪ್ರಸಂಗ ಕೃತಿಯನ್ನು ಬಿಡುಗಡೆಗೊಳಿಸಲಾಯಿತು. ವಾಯ್ಸ್ ಆಫ್ ಆರಾಧನಾ ಕೂಟದ ಮಕ್ಕಳಿಂದ ಜೋಕ್ಲೆ ಮಿನದನ ಕಾರ್ಯಕ್ರಮ ನಡೆಯಿತು. ಸರಪಾಡಿ ಅಶೋಕ್ ಶೆಟ್ಟಿ ಸಂಯೋಜನೆಯಲ್ಲಿ ಸುಮಾರು 40 ಮಂದಿ ತೆಂಕುತಿಟ್ಟಿನ ಕಲಾವಿದರ ಕೂಡುವಿಕೆಯಿಂದ ‘ಸಿರಿ ದೇವಿ ಮೈಮೆ’ ತುಳು ಯಕ್ಷಗಾನ ಪ್ರದರ್ಶನಗೊಂಡಿತು.