ಮಂಗಳಾದೇವಿ : ಶ್ರೀ ಮಂಗಳಾದೇವಿ ದೇವಸ್ಥಾನದ ಸಭಾಂಗಣದಲ್ಲಿ ದಿನಾಂಕ 19-05-2023ರಂದು ಜರಗಿದ ತುಳು ಕೂಟ ಕುಡ್ಲ ಇದರ ಸುವರ್ಣ ವರ್ಷದ ಮೂರನೇ ಸರಣಿ ಕಾರ್ಯಕ್ರಮ ‘ತುಳುವೆರೆ ಪರ್ಬದ ಸಂಭ್ರಮ’ ವಿಚಾರ ಸಂಕಿರಣದಲ್ಲಿ ಮುಂಗಳೂರು ಆಕಾಶವಾಣಿಯ ವಿಶ್ರಾಂತ ನಿರ್ದೇಶಕ ಡಾ. ವಸಂತಕುಮಾರ್ ಪೆರ್ಲ “ತುಳುನಾಡಿನ ಯಾವುದೇ ಹಬ್ಬಹರಿದಿನಗಳ ಆಚರಣೆ ಮತ್ತು ಆರಾಧನಾ ಪದ್ಧತಿಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ಸಮಾನ ಸಂಪ್ರದಾಯಗಳಿಂದ ಕೂಡಿವೆ. ಆಷಾಢ ಮಾಸದಲ್ಲಿನ ಆಚಾರ-ವಿಚಾರಗಳಲ್ಲಿ ಹಿಂದೆ ಮತ್ತು ಈಗಿನ ವ್ಯತ್ಯಾಸಗಳನ್ನು ತಿಳಿಸಿ, ನಮ್ಮ ಹಿರಿಯರು ಅನುಸರಿಸಿಕೊಂಡು ಬಂದ ನಂಬಿಕೆ ಹಾಗೂ ಉದ್ದೇಶಗಳನ್ನು ಗೌರವದಿಂದ ಕಾಪಾಡಿಕೊಂಡು ಬರುವ ಕರ್ತವ್ಯ ನಮಲ್ಲಿ ಇರಬೇಕು” ಎಂದು ಅಭಿಪ್ರಾಯಪಟ್ಟರು.
ಶ್ರೀ ಮಂಗಳಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರ ರಮಾನಾಥ ಹೆಗ್ಡೆ ಕಾರ್ಯಕ್ರಮ ಉದ್ಘಾಟಿಸಿದರು. ತುಳುಕೂಟದ ಅಧ್ಯಕ್ಷ ದಾಮೋದರ ನಿಸರ್ಗ ಅಧ್ಯಕ್ಷತೆ ವಹಿಸಿ ಮಾತನಾಡಿ, “ತುಳುನಾಡಿನಲ್ಲಿ ವರ್ಷದ ಪ್ರತಿ ತಿಂಗಳು ಹೊಂದಿರುವ ಮಹತ್ವಗಳಲ್ಲಿ ಪ್ರಕೃತಿ ಪೂಜೆ, ಆಹಾರ, ಆಯುರ್ವೇದ, ಆರೋಗ್ಯ ವಿಚಾರಗಳು ಅಡಗಿದ್ದು, ಮುಂದಿನ ಪೀಳಿಗೆಗೆ ಇದರ ತಿಳಿವಳಿಕೆಗಾಗಿ ತುಳುಕೂಟದ ಸುವರ್ಣ ಸಂಭ್ರಮ ಸರಣಿಯಲ್ಲಿ ಇಂತಹ ಉಪಯುಕ್ತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ” ಎಂದರು.
ಉದ್ಯಮಿ ಶೈಲೇಂದ್ರ ವೈ. ಸುವರ್ಣ, ಅಖಿಲ ಭಾರತ ತುಳು ಒಕ್ಕೂಟದ ಉಪಾಧ್ಯಕ್ಷೆ ವಿಜಯಲಕ್ಷ್ಮಿ ಬಿ. ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ತುಳುನಾಡಿನ – ಪತ್ತನಾಜೆಯ ಕುರಿತು ತುಳು ವರ್ಲ್ಡ್ ನಿರ್ದೇಶಕ ಡಾ. ರಾಜೇಶ್ ಆಳ್ವ, ಸೋಣ ತಿಂಗಳ ಬಗ್ಗೆ ವಿಶ್ವವಿದ್ಯಾನಿಲಯ ಉಪನ್ಯಾಸಕ ಡಾ. ಮಾಧವ ಎಂ.ಕೆ, ವಿಚಾರ ಸಂಕಿರಣದಲ್ಲಿ ವಿಷಯ ಮಂಡಿಸಿದರು.
ತುಳುಕೂಟದ ಉಪಾಧ್ಯಕ್ಷ ವಿ.ಜಿ. ಪಾಲ್, ಕೋಶಾಧಿಕಾರಿ ಚಂದ್ರಶೇಖರ ಸುವರ್ಣ, ಪಿ.ಎ. ಪೂಜಾರಿ, ಗೋಪಾಲಕೃಷ್ಣ, ರಮೇಶ್ ಕುಲಾಲ್, ಹೇಮಾ ನಿಸರ್ಗ, ಮಮತಾ ಪ್ರವೀಣ್, ನಿರ್ಮಲಾ ರೈ, ಕಾಮಾಕ್ಷಿ ಮತ್ತಿತರರು ಉಪಸ್ಥಿತರಿದ್ದರು. ತೋನ್ಸೆ ಪುಷ್ಕಳ ಕುಮಾರ್ ಸ್ವಾಗತಿಸಿ, ವಂದಿಸಿದರು. ಬಳಿಕ ತುಳುಕೂಟದ ಪ್ರಧಾನ ಕಾರ್ಯದರ್ಶಿ ರವಿ ಅಲೆವೂರಾಯ ನಿರ್ದೇಶನದಲ್ಲಿ ಭಾಗವತ ಅಶೋಕ್ ಬೋಳೂರು ಸಂಗಡಿಗರಿಂದ ಪತ್ತನಾಜೆಗೆ ಸಂಬಂಧಿಸಿದ ಯಕ್ಷಗಾನ ಪ್ರಾತ್ಯಕ್ಷಿಕೆ, ವಸಂತಿ ಜೆ. ಪೂಜಾರಿ ಬಳಗದಿಂದ ಆಟಿಕಳಂಜೆ, ಸೋಣದ ಮದಿಮಾಲ್ ಪ್ರದರ್ಶನ ಜರಗಿತು.