ಮಂಗಳೂರು : ಮಾಂಡ್ ಸೊಭಾಣ್ ಸಂಘಟನೆಯು ತಿಂಗಳ ವೇದಿಕೆಯ 272ನೇ ಸರಣಿ ಕಾರ್ಯಕ್ರಮವು 04 ಆಗಸ್ಟ್ 2024 ರಂದು ಮಂಗಳೂರಿನ ಶಕ್ತಿನಗರದ ಕಲಾಂಗಣದಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಗೋವಾದ ಖ್ಯಾತ ‘ತಿಯಾತ್ರ್’ ತಂಡದಿಂದ ‘ತುಂ ನಾಸ್ಲೊ ತರ್’ (ನೀನಿಲ್ಲದಿರೆ) ಎಂಬ ತಿಯಾತ್ರ್ ಪ್ರದರ್ಶನಗೊಳ್ಳಲಿದೆ. ಫಾ. ಮಿಲ್ಟನ್ ರೊಡ್ರಿಗಸ್ ಇದನ್ನು ರಚಿಸಿದ್ದು, ಶಾಂತಾರಾಮ್ ಪವಾರ್ ನಿರ್ದೇಶನ ಮಾಡಿದ್ದಾರೆ. ನಿರ್ಮಾಣ ಜವಾಬ್ದಾರಿ ಗೋವನ್ ಡಾಟ್ ಕಾಮ್ ಇವರದ್ದು. ಈ ತಿಯಾತ್ರ್ ಗೋವಾದ ಕಲಾ ಅಕಾಡೆಮಿ ನಡೆಸಿದ ಸ್ಪರ್ಧೆಯ ವಿವಿಧ ವಿಭಾಗಗಳಲ್ಲಿ ಬಹುಮಾನಗಳನ್ನು ಪಡೆದಿದ್ದು, ಅಲ್ಲಿ ಹಲವಾರು ಪ್ರದರ್ಶನಗಳನ್ನು ಕಂಡಿದೆ. ಇದನ್ನು ಪತ್ರಕರ್ತ ಮತ್ತು ಕೊಂಕಣಿ ಮುಖಂಡ ದಿ. ಜೊಯ್ ಫೆರ್ನಾಂಡಿಸ್ ಗೋವಾ ಇವರ ಸ್ಮರಣಾರ್ಥ ಆಯೋಜಿಸಲಾಗಿದೆ. ಸುಮಾರು 25 ಜನರ ತಂಡ ಪ್ರದರ್ಶನ ನೀಡಲಿದೆ.
ಕೊಂಕಣಿ ರಂಗಭೂಮಿಯಲ್ಲಿ ‘ತಿಯಾತ್ರ್’ ಎಂದರೆ ಒಪೆರಾ ಹಾಗೂ ನಾಟಕ ಪ್ರಕಾರದ ಸಮ್ಮಿಲನವಾಗಿದ್ದು, ಗೋವಾ ಹಾಗೂ ಉತ್ತರ ಕನ್ನಡದ ಕೊಂಕಣಿ ಜನರಲ್ಲಿ ಪ್ರಸಿದ್ದಿ ಪಡೆದಿದೆ. ಈ ಕಾರ್ಯಕ್ರಮಕ್ಕೆ ಸರ್ವರಿಗೂ ಪ್ರವೇಶ ಉಚಿತವಾಗಿದೆ.

