Subscribe to Updates

    Get the latest creative news from FooBar about art, design and business.

    What's Hot

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    ಕಾಸರಗೋಡು ಜಿಲ್ಲೆಯ ಬಳ್ಳಪದವಿನಲ್ಲಿ ‘ನಾದ ಮಾಧುರಿ’ ಸಂಗೀತ ಕಾರ್ಯಾಗಾರ | ಮೇ 09ರಿಂದ 11

    May 8, 2025

    ಯಶಸ್ವಿಯಾಗಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ’

    May 8, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಅಭಿಜಿತ್ ಪ್ರಕಾಶನದ ಸಾಧನೆಗೀಗ ಇಪ್ಪತ್ತು ವರ್ಷ
    Article

    ಅಭಿಜಿತ್ ಪ್ರಕಾಶನದ ಸಾಧನೆಗೀಗ ಇಪ್ಪತ್ತು ವರ್ಷ

    June 4, 2024No Comments3 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಭಾಷಿಕ ಸಂವಹನವು ಮನುಷ್ಯ ನಾಗರಿಕತೆಯ ದಾರಿಯಲ್ಲಿ ಕಂಡುಕೊಂಡ ಕ್ರಿಯೆ. ದಿನನಿತ್ಯದ ವ್ಯವಹಾರಗಳ ವಿವರದ ದಾಖಲೆಗಾಗಿ ಅದು ಹುಟ್ಟಿಕೊಂಡಿತು ಎನ್ನಬಹುದೇನೋ. ನಮ್ಮೊಳಗೆ ನಾವು ಇಳಿಯಲು ಸಹಾಯ ಮಾಡುವುದು ಭಾಷೆಯೆಂಬ ಸೋಪಾನ. ಅವಿರತವಾಗಿ ಅವರವರ ಇಂಗಿತವನ್ನು ಭಾಷೆಯ ಮೂಲಕವೇ ಜನ ಮನಗಳಿಗೆ ಹೇಳುವುದು ಜಗದ ನಿಯಮವಾಗಿದೆ. ಗತಕಾಲದಿಂದಲೂ ಶಿಲೆಗಳ ಮೇಲೆ, ತಾಮ್ರ ಪಟಗಳ ಮೇಲೆ, ತಾಳೆ ಗರಿಗಳ ಮೇಲೆ ಅಕ್ಷರಗಳನ್ನು ಅಚ್ಚು ಮಾಡಿದ್ದರ ಹಿಂದಿರುವ ಉದ್ದೇಶವೇನಿತ್ತು? ಇಂದಿನ ದಿನಗಳಲ್ಲಿ ಕೃತಿಗಳನ್ನು ಪ್ರಕಟಿಸುವ ಕಾರಣವೇನು? ಇವೆರಡಕ್ಕೂ ಉತ್ತರ ‘ತ್ರಿಕಾಲಪ್ರಜ್ಞೆ’ಯೇ? ನಮ್ಮ ಓದಿನ ಸಂಸ್ಕೃತಿ ಆರಂಭವಾದದ್ದು ಮಣ್ಣಿನ ಶಿಲಾಪಲಕಗಳಿಂದ. ಆ ನಂತರವೇ ಮಾನವ ರೂಪುಗೊಳ್ಳುತ್ತ ಬಂದು ಪ್ರಸ್ತುತದಲ್ಲಿ ತನ್ನದಲ್ಲದ ಲೋಕದ ಬಗೆಗೂ ತಿಳಿಯುವಂತಾಗಿದೆ. ಇವೆಲ್ಲವೂ ಓದುವ, ದಾಖಲಿಸುವ ಸಂಸ್ಕೃತಿಯಿಂದಲೇ ಹುಟ್ಟಿಕೊಂಡ ನಡವಳಿಕೆಗಳು ಎಂಬುದಾಗಿ ಹಿಂದಣ ಹೆಜ್ಜೆಗಳು ಹೇಳುತ್ತವೆ. ನಮ್ಮ ನಡೆ ಪಡೆ ಎಲ್ಲವನ್ನು ಸಂಸ್ಕಾರಗೊಳಿಸಿ ಅದನ್ನು ತಲೆಮಾರಿನಿಂದ ತಲೆಮಾರಿಗೆ ಬೆಳೆಸಿಕೊಂಡು ಹೋಗಬೇಕೆಂದರೆ ಅದಕ್ಕೆ ತಕ್ಕ ಸಿದ್ಧತೆಯನ್ನು ಮಾಡಬೇಕಾಗುವುದು. ಇಲ್ಲವಾದರೆ ಆ ಹರಿವು ಎಲ್ಲೋ ಒಂದು ಕಡೆ ಸ್ಥಗಿತವಾಗುತ್ತದೆ. ಮನದಿಂದಲೇ ಬದುಕನ್ನು ಓದುವುದರಿಂದ ಮೂಡಿದ ಬೆಳಕು ಒಂದು ಬಗೆಯದು. ಬುದ್ಧಿಯ ಉದ್ದೀಪನ, ಅನುಭವದ ಅಭಿವ್ಯಕ್ತಿ, ತಿಳುವಳಿಕೆಯ ತಂಪು ಎಲ್ಲವೂ ಒಂದಾಗಿ ಹುಟ್ಟಿಕೊಳ್ಳುವ ‘ಸರ್ವ ಹೃದಯ ಸಂಸ್ಕಾರಿ’ಯಾದ ಪುಸ್ತಕಗಳಿಗೆ ಹೊಸ ಹೊಳಪನ್ನು ನೀಡುವುದು ಇನ್ನೊಂದು ಬಗೆ. ಅದೇ ಪ್ರಕಾಶನ. ನಮ್ಮ ನೆಲದಲ್ಲೇ ಇದ್ದುಕೊಂಡು ಇದನ್ನು ಮಾಡುವಾಗ ಭಾಧಕಗಳು ಕಡಿಮೆ. ಆದರೆ ಬಹು ಸಂಸ್ಕೃತಿಯ ನೆಲದಲ್ಲಿ ನಿಂತು ಕನ್ನಡದ ನೆಲಕ್ಕೆ ಹೊಳಪು ಕೊಡುವುದು ಕಷ್ಟಸಾಧ್ಯ. ಹೀಗಿರುವಾಗ ಹೊರನಾಡಾದ ಮುಂಬೈಯಲ್ಲಿ 2004 ರಲ್ಲಿ ಆರಂಭವಾಗಿ ಪುಸ್ತಕ ಪ್ರಕಟಣೆಯನ್ನು ಸಾರಸ್ವತ ವೃತವೆಂಬಂತೇ ಪಾಲಿಸಿಕೊಂಡು ಬಂದಿರುವ ಅಭಿಜಿತ್ ಪ್ರಕಾಶನದ ಇಪ್ಪತ್ತು ವಸಂತಗಳು ಅರ್ಥಪೂರ್ಣವಾಗಿ ಕಳೆದಿವುದು ಹೆಮ್ಮೆ ಪಡಬೇಕಾದ ಸಂಗತಿ. ಮರಿಯಪ್ಪ ನಾಟೇಕರ್ ಅವರ ‘ಇತಿಹಾಸವನ್ನು ಮರೆತವರು’ ಎಂಬ ಕವನ ಸಂಕಲನವು ಇದರ ಮೊದಲ ಪ್ರಕಟಣೆಯಾಗಿದ್ದು ಈ ತನಕ ಸುಮಾರು 130 ವೈವಿಧ್ಯಮಯವಾದ ಕೃತಿಗಳನ್ನು ಪ್ರಕಟಿಸುವ ಮೂಲಕ ಮುಂಬೈಯ ಅನೇಕ ಹೊಸ ಬರಹಗಾರರನ್ನು ಬೆಳಕಿಗೆ ತರುವಲ್ಲಿ ಅಭಿಜಿತ್ ಪ್ರಕಾಶನ ಸಂಸ್ಥೆ ಯಶಸ್ವಿಯಾಗಿದೆ.

    “ಕೆರೆಯಂ ಕಟ್ಟಿಸು ಬಾವಿಯಂ ಸವೆಸು ದೇವಾಗಾರಮಂ ಮಾಡಿಸಜ್ಜರೆಯೊಳ್ ಸಿಲ್ಕಿದನಾಥರಂ ಬಿಡಿಸು ಮಿತ್ರರ್ಗಿಂಬುಕೆಯ್ ನಂಬಿದರ್ಗೆರೆವಟ್ಟಾಗಿರು ಶಿಷ್ಟರಂ ಪೊರೆ”(ಕೆರೆಯನ್ನು ಕಟ್ಟಿಸು, ಬಾವಿಯನ್ನು ಸವೆಸು, ದೇವಾಲಯಗಳನ್ನು ನಿರ್ಮಿಸು, ಸೆರೆಸಿಕ್ಕ ಅನಾಥರನ್ನು ಬಿಡಿಸು, ನಂಬಿದ ಮಿತ್ರರಿಗೆ ನೆರವು ನೀಡು, ಶಿಷ್ಟರನ್ನು ರಕ್ಷಿಸು)ಎಂಬ ಶಾಸನ ವಚನದ ಸಾಲುಗಳು ಕೆಲವು ವ್ಯಕ್ತಿಗಳನ್ನು ಕಂಡಾಗ ತಂತಾನೆ ನೆನಪಿಗೆ ಬರುವವು. ಕನ್ನಡ ತಾಯಿಯು ಆಗಾಗ ಬಂದು ನಾಡು, ನುಡಿ, ಸಾಹಿತ್ಯವನ್ನು ಕಟ್ಟುವುದು ಹೇಗೆ ಎಂಬುದನ್ನು ಅಂಥವರಿಗೆ ಹೇಳಿ ಹೋಗುವಳೋ ಎಂಬ ಗುಮಾನಿ ಬರುವಷ್ಟು ಅವರು ಕನ್ನಡದ ಕೆಲಸದಲ್ಲಿ ತಮ್ಮನ್ನು ತೇಯ್ದುಕೊಳ್ಳುತ್ತಾರೆ. ಅಂತಹ ವಿರಳರಾಗಿ ಮುಂಬೈಯ ಅಭಿಜಿತ್ ಪ್ರಕಾಶನದ ಸಂಚಾಲಕರಾದ ಪ್ರಾ. ಜಿ. ಎನ್. ಉಪಾಧ್ಯ ಅವರು ಕಾಣುತ್ತಾರೆ. ಹಲವು ಲೇಖಕರಿಗೆ ಗುರುತನ್ನು ಕೊಡುವ ಗುರುವಾಗಿ ಅವರು ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗದಲ್ಲಿ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುಂಬೈ ಮಹಾನಗರದಲ್ಲಿ ನೆಲೆ ನಿಂತು ಈ ಮಣ್ಣಿನಲ್ಲಿ ಕನ್ನಡತನವನ್ನು ಹುಡುಕಿ ಅದಕ್ಕೆ ಕಸುವು ತುಂಬುವಲ್ಲಿ ವಿಶೇಷ ಆಸ್ಥೆಯನ್ನು ಹೊಂದಿ ಉಭಯ ನಾಡುಗಳಿಗೆ ಕೊಂಡಿಯಾಗಿ ಅವರು ಕೊಟ್ಟ ಕೊಡುಗೆ ಗಮನಾರ್ಹವಾದುದು. ವರ್ತಮಾನದ ಸಮಾಜದಲ್ಲಿ ಸಾಹಿತ್ಯದ ಕುರಿತು ಹೊಸ ಪ್ರಜ್ಞೆಯನ್ನು ಮೂಡಿಸುವ ಜವಾಬ್ದಾರಿ ಅವರ ಮಾತು ಕೃತಿಗಳಲ್ಲಿ ಎದ್ದು ಕಾಣುತ್ತದೆ. ನಿಖರವಾದ ಶಾಸ್ತ್ರದೃಷ್ಟಿ, ವೈಜ್ಞಾನಿಕ ಮನೋಭಾವ, ಪಾರಿಭಾಷಿಕ ಪದಗಳ ಪರಿಜ್ಞಾನ, ಔಚಿತ್ಯಪ್ರಜ್ಞೆ, ನಿಸ್ವಾರ್ಥ, ವಿಶಾಲ ಮನಸ್ಥಿತಿ ಎಲ್ಲವನ್ನು ಸಿದ್ಧಿಸಿಕೊಂಡಿರುವ ಕಾಯಕಯೋಗಿಯು ಹಿಡಿದ ಕೆಲಸದಲ್ಲಿ ಹಿನ್ನಡೆಯದೇ ಲೇಖಕರಿಗೆ ಹೊರೆಯಾಗದಂತೆ ಪ್ರಕಟಣೆಯ ಕಾರ್ಯವನ್ನು ಕೈಗೊಂಡು ಈ ಪ್ರಕಾಶನ ಸಂಸ್ಥೆಯನ್ನು ಸಶಕ್ತವಾಗಿ ಮುನ್ನಡೆಸುತ್ತಿರುವುದು ದೊಡ್ಡ ಸಾಧನೆ.

    “ಭಾಷೆಯ ಬಣ್ಣ ಬನಿಯನ್ನು ಗಾಢಗೊಳಿಸಲು ಸಾಹಿತ್ಯವು ಪೂರಕ. ಸಾಹಿತ್ಯ ಕೃತಿಗಳ ಮೂಲಕ ನಾಡಿನ ಇತಿಹಾಸ, ಹಿರಿಮೆ ಗರಿಮೆಯನ್ನು ಹೊಸ ತಲೆಮಾರಿಗೆ ಪರಿಚಯಿಸಲು ಸಾಧ್ಯ. ಇದು ಕನ್ನಡದ ತೇರನೆಳೆಯುವ, ಕನ್ನಡವನ್ನು ಕಟ್ಟಿ ಬೆಳೆಸುವ ಕಾಯಕ. ಎದುರಾಗುವ ಅಡೆತಡೆಗಳನ್ನು ದಾಟಿ ಈ ಕೆಲಸವು ನಿರಂತರವಾಗಿ ನಡೆಯಬೇಕಾಗಿದೆ.” ಎನ್ನುವ ಕಾಳಜಿಯೇ ಅವರ ಕನ್ನಡ ಪರಿಚಾರಿಕೆಗೆ ಸ್ಪೂರ್ತಿ ಎನ್ನಬಹುದು. ಅನೇಕ ಹಿರಿಯ ಸಾಹಿತಿಗಳ, ವಿದ್ವಾಂಸರ ಒಡನಾಟ, ಮಾರ್ಗದರ್ಶನ, ಸಹಾಯ, ಸಹಕಾರವನ್ನೇ ಶ್ರೀರಕ್ಷೆಯಾಗಿಟ್ಟುಕೊಂಡು ಕನ್ನಡ ಪರಿಚಾರಿಕೆಯನ್ನು ಅಲೆ ಬೇಸರವಿಲ್ಲದೆ ಅವರು ಮುಂಬೈಯಲ್ಲಿ ಮಾಡುತ್ತಿದ್ದಾರೆ. ಕನ್ನಡ ಮರಾಠಿ ಉಭಯ ಭಾಷಾಭಿಮಾನ, ಹಲವು ಸಂಸ್ಕೃತಿಗಳ ಹೊಂದಾಣಿಕೆ, ಎಲ್ಲವನ್ನೂ ಎಲ್ಲರನ್ನೂ ಅರಿಯುವ ಇಚ್ಛೆ ಇವೆಲ್ಲ ಉಪಾಧ್ಯ ಅವರಿಗೆ ನಿತ್ಯ ಚಿಂತನೆಯ ವಿಷಯಗಳು. ಅವರ ಪ್ರಕಟಣೆಯ ಕೈಂಕರ್ಯ ಕೇವಲ ಅಭಿಜಿತ್ ಪ್ರಕಾಶನಕ್ಕೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ ಮುಂಬೈ ವಿವಿ ಕನ್ನಡ ವಿಭಾಗದ ಮುಖಾಂತರ ವಿದ್ಯಾರ್ಥಿಗಳ ಪಿ. ಎಚ್. ಡಿ., ಎಂ. ಫಿಲ್., ಎಂ. ಎ. ಅಧ್ಯಯನಕ್ಕೆ ಸಂಬಂಧಿಸಿದ ಎಂಬತ್ತಕ್ಕೂ ಹೆಚ್ಚು ಕೃತಿಗಳನ್ನು ಅವರು ಪ್ರಕಟಿಸಿದ್ದಾರೆ. ಇಂದು ಪ್ರಕಟಣೆಯಲ್ಲಿ ಎಲ್ಲ ವಿಭಾಗಗಳಿಗಿಂತ ಕನ್ನಡ ವಿಭಾಗವು ಮುಂಚೂಣಿಯಲ್ಲಿದೆ ಎನ್ನುವುದು ಕನ್ನಡದ ಹಿರಿಮೆ. ಅವರದೇ ಕೃತಿಗಳು ಎಂಬತ್ತೈದರಷ್ಟಿವೆ. ಒಟ್ಟಿನಲ್ಲಿ ಸುಮಾರು ಮುನ್ನೂರು ಕೃತಿಗಳ ಪ್ರಕಟಣೆಯ ಹಿಂದೆ ಅವರ ಅವಿರತ ಪರಿಶ್ರಮವಿದೆ ಎನ್ನುವುದು ಗಮನಾರ್ಹವಾಗಿದೆ.

    ಬದುಕನ್ನು ಕಟ್ಟಿಕೊಳ್ಳಲು ಮುಂಬೈಗೆ ಬಂದವರ ಭಾವ ಪ್ರಪಂಚದ ಭಾರವನ್ನು ಹಗುರಾಗಿಸಿದ ವೈವಿಧ್ಯಮಯವಾದ ಕೃತಿಗಳ ಪ್ರಕಟಣೆಯು ಅಂದಿನ ಅಗತ್ಯತೆಯಾಗಿತ್ತು. ಅದನ್ನರಿತು ಮಹಾನಗರದಲ್ಲಿ ಹುಟ್ಟಿಕೊಂಡ ಅನೇಕ ಪ್ರಕಾಶನ ಸಂಸ್ಥೆಗಳ ಸಾಲಿನಲ್ಲಿ ನಿಂತು ಎರಡು ದಶಕಗಳ ಕಾಲ ಅವಿಚ್ಛಿನ್ನವಾಗಿ ಪ್ರಕಟಣೆಯ ಕಾರ್ಯವನ್ನು ಮುಂದುವರಿಸಿಕೊಂಡು ಬರುತ್ತಿರುವ ಅಭಿಜಿತ್ ಪ್ರಕಾಶನವು ಮುಂಬೈಯಲ್ಲಿ ಕನ್ನಡವು ಕೈ ಎತ್ತುವಂತೆ ಮಾಡುವಲ್ಲಿ ಇಂದು ಜಯಶಾಲಿಯಾಗಿದೆ.

    ಲೇಖಕರು : ಕಲಾ ಭಾಗ್ವತ್

    ಮುಂಬೈನ ಉದಯೋನ್ಮುಖ ಪ್ರತಿಭಾವಂತ ಲೇಖಕರಲ್ಲಿ ಕಲಾ ಚಿದಾನಂದ ಭಾಗ್ವತ್ ಅವರದು ಎದ್ದು ಕಾಣುವ ಹೆಸರು. ಇವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಸಮೀಪದ ಹಳದೀಪುರದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ವಿಜ್ಞಾನ ವಿಷಯದಲ್ಲಿ ಪದವಿ ಪಡೆದ ಇವರು ಉತ್ಕಟ ಸಾಹಿತ್ಯಾಭಿಮಾನಿ. ಮುಂಬೈ ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಎಂ.ಎ. ಪದವಿ ಪಡೆದಿರುವ ಕಲಾ ಗಮಕ, ಸಂಗೀತ ಕ್ಷೇತ್ರದಲ್ಲೂ ಹಿಡಿತ ಸಾಧಿಸಿದ್ದಾರೆ. ನಾಡಿನ ಅನೇಕ ಪತ್ರಿಕೆಗಳಲ್ಲಿ ಅವರ ಕವಿತೆ, ಕತೆ, ಬಿಡಿ ಬರಹಗಳು ಬೆಳಕು ಕಂಡಿವೆ. ‘ವೈದ್ಯ ಭೂಷಣ ಡಾ. ಬಿ.ಎಂ. ಹೆಗ್ಡೆ’ ಇದು ಕಲಾ ಭಾಗ್ವತ್ ಅವರ ಚೊಚ್ಚಲ ಕೃತಿ.

    Share. Facebook Twitter Pinterest LinkedIn Tumblr WhatsApp Email
    Previous Articleಉಡುಪಿಯಲ್ಲಿ ಕೃತಿ ಲೋಕಾರ್ಪಣೆ ಹಾಗೂ ಉಪನ್ಯಾಸ ಕಾರ್ಯಕ್ರಮ | ಜೂನ್ 8
    Next Article ಸಾಹಿತ್ಯ ಗಂಗಾ ರಾಜ್ಯಮಟ್ಟದ ಕಥಾಸ್ಪರ್ಧೆಯ ಫಲಿತಾಂಶ ಪ್ರಕಟ
    roovari

    Add Comment Cancel Reply


    Related Posts

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    ಯಶಸ್ವಿಯಾಗಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ’

    May 8, 2025

    ಖ್ಯಾತ ಸಾಹಿತಿ ಪ್ರೊ. ಜಿ.ಎಸ್. ಸಿದ್ಧಲಿಂಗಯ್ಯ ನಿಧನ

    May 8, 2025

    ಆಳ್ವಾಸ್‌ನ ಶಿವರಾಮ ಕಾರಂತ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ

    May 7, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.