ಮಂಗಳೂರು : ಕನ್ನಡ ಕಟ್ಟೆಯ ವಿಂಶತಿ ಆಚರಣೆಯ ಉದ್ಘಾಟನಾ ಸಮಾರಂಭವು ದಿನಾಂಕ 05-11-2023ರಂದು ಮಂಗಳೂರಿನ ಕದ್ರಿಯ ಹೊಟೇಲ್ ಡಿಂಕಿ ಡೈನ್ ಇದರ ಸಭಾಂಗಣದಲ್ಲಿ ನಡೆಯಿತು.
“ನಾಡು, ನುಡಿ, ನೆಲ, ಪರಿಸರ, ಪ್ರಕೃತಿ ಪರ ಚಿಂತನೆ ಹೋರಾಟಗಳಿಗೆ ಹಾಗೂ ಅನುಷ್ಠಾನಕ್ಕೆ ನೇರ ನಿಷ್ಠುರ ಗಟ್ಟಿ ಧ್ವನಿಯ ಕನ್ನಡ ಕಟ್ಟೆಯಂತಹ ಸಂಘಟನೆಗಳು ಇನ್ನಷ್ಟು ಬೇಕು” ಎಂದು ಡಾ. ಹರಿಕೃಷ್ಣ ಪುನರೂರು ಹಾಗೂ ಪ್ರದೀಪ್ ಕುಮಾರ್ ಕಲ್ಕೂರ ಅಭಿಪ್ರಾಯಪಟ್ಟರು.
ವಿಂಶತಿ ಆಚರಣೆಯ ಪ್ರಯುಕ್ತ ಶಾಲಾ ಮಕ್ಕಳಿಗೆ ಏರ್ಪಡಿಸಿದ ಕಾರ್ಡಿನಲ್ಲಿ ಕಥೆ ಬರೆಯುವ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಹಿರಿಯ ಹೋರಾಟಗಾರರನ್ನು ಮತ್ತು ಸಂತೋಷ್ ಕುಮಾರ್ ಶೆಟ್ಟಿ ಜಪ್ತಿ ಅವರನ್ನು ಸಮ್ಮಾನಿಸಲಾಯಿತು. ತುಳುನಾಡ ರಕ್ಷಣಾ ವೇದಿಕೆಯ ಜಪ್ಪು ಯೋಗೀಶ್ ಶೆಟ್ಟಿ ಅವರು ಹೋರಾಟದ ದಿನಗಳನ್ನು ನೆನಪಿಸಿಕೊಂಡರು. ಕುಂದಾಪುರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಉಮೇಶ್ ಪುತ್ರನ್ ಮತ್ತು ಡಾ. ವಿಜಯ್ ಕುಮಾರ್ ಶುಭ ಹಾರೈಸಿದರು.
ಕನ್ನಡ ಕಟ್ಟೆಯ ವಿಂಶತಿ ಕಾರ್ಯಕ್ರಮದ ಮುಂದಿನ ಭಾಗವಾಗಿ ‘ಬ್ರಿಟೀಷರಿಗೊಂದು ಪತ್ರ – ಸಾರ್ವಜನಿಕರಿಗೆ ಮುಕ್ತ ಲೇಖನ ಸ್ಪರ್ಧೆ’ಯನ್ನ ಹಮ್ಮಿಕೊಂಡಿದ್ದು, ಲೇಖನಗಳನ್ನು ದಿನಾಂಕ 31-03-2024ರ ಒಳಗಾಗಿ ಕನ್ನಡ ಕಟ್ಟೆ ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನ, ಕೊಡಕ್ಕಲ್ ಪಡೀಲ್-ಮಂಗಳೂರು 575007 ಇಲ್ಲಿಗೆ ಕಳುಹಿಸಬಹುದು. ವಿಜೇತರಿಗೆ ದಿನಾಂಕ 01-05-2024ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಬಹುಮಾನ ನೀಡಲಾಗುವುದು ಎಂದು ಕನ್ನಡ ಕಟ್ಟೆಯ ಅಧ್ಯಕ್ಷ ಡಾ. ಅಣ್ಣಯ್ಯ ಕುಲಾಲ್ ಉಳ್ಳೂರು ತಿಳಿಸಿದರು.
ಹಿರಿಯ ನಾಯಕರಾದ ಸ್ವರ್ಣ ಸುಂದರ್, ಜಾರ್ಜ್, ಸುರೇಶ್ ಆಚಾರ್, ಅನಿತಾ ಭಂಡಾರ್ಕಾರ್, ಜಗದೀಶ್ ಬಿಜೈ, ಸುಧಾಕರ್ ಸುರತ್ಕಲ್, ವಿನಯ ಕೃಷಿ ಬಳಗದ ವಿಜಯ್ ಶೆಟ್ಟಿ ಮತ್ತು ಚಂದ್ರಹಾಸ್, ಮಹಾಬಲ ಮಾಸ್ಟರ್, ಹಮೀದ್ ಹಸನ್, ಫಾರೂಕ್ ಕಿನ್ಯ, ಹಮೀದ್ ಕಿನ್ಯ, ಯೋಗೀಶ್ ರಾವ್, ಗೋಪಾಲ್ ಕೆದೂರು, ಸುಬ್ರಮಣ್ಯ, ಮಹೇಶ್ ನಾಯಕ್, ನಿಶ್ಚಿತ್, ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನದ ಮಮತಾ ಕುಲಾಲ್, ಎನ್.ಇ.ಸಿ.ಎಫ್. ಇದರ ಹರೀಶ್, ಡಾ. ಚಂದನಾ, ಕಾಸರಗೋಡಿನ ಕರ್ಮಾರ್ಕರ್, ಡಾ. ವಾಣಿ ಮತ್ತು ಡಿಂಕಿ ಡೈನ್ ನ ತೇಜು ಪೂಜಾರಿ ಸಹಿತ ಉಡುಪಿ, ಕುಂದಾಪುರ, ಕಾರ್ಕಳ, ಮೂಲ್ಕಿ ಸುರತ್ಕಲ್, ಉಳ್ಳಾಲ, ಕಾಸರಗೋಡು ಭಾಗದ `ಸಮಾನ ಮನಸ್ಕ ಕನ್ನಡ ಹೋರಾಟಗಾರರು ಭಾಗವಹಿಸಿದ್ದರು.
ಮಣ್ಣಗುಡ್ಡ ಶಾಲಾ ಮಕ್ಕಳು ಕನ್ನಡ ಗೀತೆ ಮತ್ತು ಯಕ್ಷಗಾನದ ಶೈಲಿಯಲ್ಲಿ ಡಾ. ಚಂದನಾ ಹಾಗೂ ಪವಿತ್ರ ನಿಶ್ಚಿತ ಮತ್ತು ತಂಡದವರು ನಾಡಗೀತೆ ಹಾಡಿದರು. ಕಾರ್ಯಕ್ರಶಮಕ್ಕೆ ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನ, ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ ಮತ್ತೂ ಡಿಂಕಿ ಡೈನ್ ಹೋಟೆಲ್ ನ ಪದಾಧಿಕಾರಿಗಳು ಸಹಕರಿಸಿದ್ದರು. ಡಾ. ಅಣ್ಣಯ್ಯ ಕುಲಾಲ್ ಸ್ವಾಗತಿಸಿ, ಪ್ರಸ್ತಾಪಿಸಿದರು. ಕಾರ್ಯದರ್ಶಿ ಶಶಿಧರ್ ಶೆಟ್ಟಿ ನಿರೂಪಿಸಿ, ಹಮೀದ್ ಹಸನ್ ಮಾಡೂರು ವಂದಿಸಿದರು.