ಮಂಗಳೂರು : ಶಕ್ತಿನಗರದ ಸಾನಿಧ್ಯ ಮಾನಸಿಕ ಭಿನ್ನ ಸಾಮರ್ಥ್ಯದ ಮಕ್ಕಳ ವಸತಿಯುತ ಶಾಲೆ ಮತ್ತು ತರಬೇತಿ ಸಂಸ್ಥೆಯು 20 ವರ್ಷ ಪೂರೈಸಿದ ನೆನಪಿಗಾಗಿ ಭಿನ್ನ ಸಾಮರ್ಥ್ಯದ ಮಕ್ಕಳ ರಾಜ್ಯಮಟ್ಟದ ಜನಪದ ನೃತ್ಯೋತ್ಸವ ಸ್ಪರ್ಧೆ ‘ಟ್ವಿಂಕ್ಲಿಂಗ್ ಸ್ಟಾರ್ -2023′ ಕಾರ್ಯಕ್ರಮವನ್ನು ದಿನಾಂಕ 13-12-2023 ಮತ್ತು 14-12-2023ರಂದು ಅಯೋಜಿಸಲಾಗಿತ್ತು.
ಹುಲಿವೇಷ ಧರಿಸಿದ್ದ ಮೂವರು ಭಿನ್ನ ಸಾಮರ್ಥ್ಯದ ಮಕ್ಕಳು ತಾಸೆ ಪೆಟ್ಟಿಗೆ ಲಯಬದ್ಧವಾಗಿ ಹೆಜ್ಜೆ ಹಾಕಿದರೆ, ಶ್ರೀದೇವಿ, ಮಹಿಷಾಸುರ ಮೊದಲಾದ ಪೌರಾಣಿಕ ಯಕ್ಷಗಾನ ವೇಷಧಾರಿಗಳು ಚೆಂಡೆವಾದನ, ಕೊಂಬು ಕಹಳೆಗಳೊಂದಿಗೆ ವೇದಿಕೆ ಏರಿದರು. ಭಿನ್ನ ಸಾಮರ್ಥ್ಯದ ಮಿನುಗು ತಾರೆಗಳು ಇಲ್ಲಿನ ಪುರಭವನದಲ್ಲಿ ಜಾನಪದ ಲೋಕವೇ ಅವತರಿಸುವಂತೆ ಮಾಡಿದರು. ಇದೇ ವೇಳೆ ರಾಜ್ಯ ಮಟ್ಟದ ಸ್ಪರ್ಧೆಯ ಟ್ರೋಫಿಗಳ ಅನಾವರಣ ನಡೆಯಿತು.
ಸಾನಿಧ್ಯ ಶಾಲೆಯ ವಿಶೇಷ ವಿದ್ಯಾರ್ಥಿನಿಯರು ದೀಪ ನೃತ್ಯದ ಮೋಹಕ ಪ್ರಸ್ತುತಿಯ ಮೂಲಕ ರಾಜ್ಯದ ನಾನಾ ಭಾಗಗಳಿಂದ ಬಂದ ಸ್ಪರ್ಧಿಗಳಿಗೆ ಹಾಗೂ ಪ್ರೇಕ್ಷಕರಿಗೆ ಸ್ವಾಗತ ಕೋರಿದರು. ಝಗಮಗಿಸುವ ಬೆಳಕಿನ ಲೋಕ, ಚೆಂದದ ವಸ್ತ್ರಾಲಂಕಾರ, ಅದಕ್ಕೆ ಪೂರಕ ನೃತ್ಯ ಸಂಯೋಜನೆಯ ಮೂಲಕ ಮೂಡಿಬಂದ ಈ ನೃತ್ಯ ನೋಡುಗರು ಮೂಗಿನ ಮೇಲೆ ಬೆರಳಿಡುವಂತೆ ಮಾಡಿತು. ಭಿನ್ನ ಸಾಮರ್ಥ್ಯದ ಮಕ್ಕಳ ಪ್ರತಿಭೆಗೆ ಚಪ್ಪಾಳೆಯ ಮಳೆ ಸುರಿಯಿತು…!
ಈ ಜಾನಪದ ನೃತ್ಯೋತ್ಸವ ಸ್ಪರ್ಧೆಯನ್ನು ಡೋಲು ಬಾರಿಸಿ ಉದ್ಘಾಟಿಸಿದ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, “ಭಿನ್ನ ಸಾಮರ್ಥ್ಯದ ಮಕ್ಕಳ ಪೋಷಕರು ಮನೆ ನಿರ್ಮಿಸುವುದಾದರೆ, ಅವರಿಗೆ ಪಾಲಿಕೆ ಆರ್ಥಿಕ ನೆರವು ಒದಗಿಸಲಿದೆ. ಭಿನ್ನ ಸಾಮರ್ಥ್ಯದವರು ಸ್ವ-ಉದ್ಯೋಗ ಕೈಗೊಳ್ಳುವುದಾದರೆ ಅವರು ಪಡೆಯುವ ಸಾಲಕ್ಕೆ ಪಾಲಿಕೆಯಿಂದ ರೂ.1.5 ಲಕ್ಷದವರೆಗೆ ಸಬ್ಸಿಡಿ ಹಣವನ್ನು ಪಾಲಿಕೆ ನೀಡಲಿದೆ. ಇಂತಹ ಮಕ್ಕಳ ಪೋಷಕರಿಗೆ ತಿಂಗಳಿಗೆ ರೂ.500 ರಂತೆ ಪೋಷಣಾ ಭತ್ಯೆ ನೀಡುವುದಕ್ಕೂ ಅವಕಾಶ ಇದೆ. ವಿಶೇಷ ಸಾಮರ್ಥ್ಯದವು ಕ್ರೀಡಾ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದರೆ ರೂ.10 ಸಾವಿರದಿಂದ ರೂ.1 ಲಕ್ಷದವರೆಗೆ ನೆರವು ನೀಡಲಾಗುತ್ತದೆ” ಎಂದರು.
ಗುರುಬೆಳದಿಂಗಳು ಟ್ರಸ್ಟ್ ಪದ್ಮರಾಜ್ ಆರ್. “ನಮ್ಮನ್ನು ಭಾವುಕಗೊಳಿಸುವ ಅಭೂತಪೂರ್ವ ಕಾರ್ಯಕ್ರಮವಿದು. ಭಿನ್ನ ಸಾಮರ್ಥ್ಯದವರ ಪ್ರತಿಭೆಗಳ ಬಗ್ಗೆ ಹೆಮ್ಮೆ ಪಡೋಣ. ಅವರ ಶಾಲೆಗಳಿಗೆ ಸರ್ಕಾರ ಹೆಚ್ಚಿನ ಅನುದಾನಕೊಡಬೇಕು” ಎಂದರು. ಸಿನಿಮಾ ನಿರ್ದೇಶಕ ವಿಜಯ ಕುಮಾರ್ ಕೊಡಿಯಾಲ್‌ಬೈಲ್ “ಸಾನಿಧ್ಯದಲ್ಲಿ ಜಾತಿ, ಧರ್ಮ ಮತ್ತು ಪಕ್ಷ ಭೇದವಿಲ್ಲ. ಸೌಹಾರ್ದ ಇದ್ದುದರಿಂದ ಸಾನಿಧ್ಯಕ್ಕೆ ಶಕ್ತಿಬಂತು. ‘ಬರವುದ ಬಂಡಸಾಲೆ’ ನಾಟಕದ ಮೂಲಕ ಭಿನ್ನ ಕಾರ್ಯಕ್ರಮ ಸಾಮರ್ಥ್ಯದವರ ಬಗ್ಗೆ ಬಿಂಬಿಸಿದ್ದೇನೆ. ಅವರ ಕುರಿತು ಮತ್ತೊಂದು ಸಿನಿಮಾ ಪ್ರಯತ್ನ ಮಾಡುತ್ತೇನೆ” ಎಂದರು. ಸಂಸ್ಥೆಯ ಆಡಳಿತಾಧಿಕಾರಿ ವಸಂತ ಕುಮಾರ್ ಶೆಟ್ಟಿ “ಆಟಿಸಂ ಮಕ್ಕಳಿಗಾಗಿಯೇ ಸುಸಜ್ಜಿತ ಕೇಂದ್ರವನ್ನು ಆರಂಭಿಸುವ ಹಂಬಲ ಇದೆ. ಈ ಕನಸು ಈಡೇರಿಸಲು ಎಲ್ಲರೂ ನೆರವಾಗಬೇಕು” ಎಂದರು.
ರೋಟರಿ ಜಿಲ್ಲೆ 3181ರ ವಲಯ 3ರ ಸಹಾಯಕ ಗವರ್ನರ್ ಶಿವಾನಿ ಬಾಳಿಗಾ ಅಧ್ಯಕ್ಷತೆ ವಹಿಸಿದ್ದರು. ಪಾಲಿಕೆ ಸದಸ್ಯರಾದ ಕಿಶೋರ್ ಕೊಟ್ಟಾರಿ, ಕೋಶಾಧಿಕಾರಿ ಜಗದೀಶ ಶೆಟ್ಟಿ, ಕಾರ್ಪೋರೇಟರ್ ಶಕೀಲಾ ಕಾವ, ಕಾರ್ಯಕ್ರಮದ ಸಂಚಾಲಕ ಅಶ್ವಿನ್ ಕೊಟ್ಟಾರಿ, ಸಂತೋಷ್ ಆರೇಂಜರ್ಸ್ ಮಾಲೀಕ ಸಂತೋಷ್ ಸಿಕ್ವೆರಾ, ವಸಂತ ಶೆಟ್ಟಿ, ಹೋಪ್ ಫೌಂಡೇಷನ್‌ನ ಸೈಫ್ ಸುಲ್ತಾನ್, ರಾಕೇಶ್ ಶೆಟ್ಟಿ ಹಾಗೂ ಇತರರು ಭಾಗವಹಿಸಿದ್ದರು. ಸಾನಿಧ್ಯ ಸಂಸ್ಥೆಯ ಆಡಳಿತಾಧಿಕಾರಿ ವಸಂತ ಕುಮಾರ್ ಶೆಟ್ಟಿ ಸ್ವಾಗತಿಸಿ, ಶ್ರೀ ಗಣೇಶ ಸೇವಾ ಟ್ರಸ್ಟ್ ಅಧ್ಯಕ್ಷ ಮಹಾಬಲ ಮಾರ್ಲ ವಂದಿಸಿ, ಶಿಕ್ಷಕಿಯರಾದ ಸುಲತಾ ಮತ್ತು ಸುಮಾ ಡಿಸಿಲ್ವ ಕಾರ್ಯಕ್ರಮ ನಿರೂಪಿಸಿದರು.
ಎರಡು ದಿನಗಳ ಈ ಜಾನಪದ ನೃತ್ಯೋತ್ಸವ ಸ್ಪರ್ಧೆಯಲ್ಲಿ ನಾನಾ ವಿಭಾಗದ ಸ್ಪರ್ಧೆಗಳು ನಡೆದವು. ಈ ಸ್ಪರ್ಧೆಯಲ್ಲಿ ಬೀದರ್, ಶಿವಮೊಗ್ಗ, ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಯ ವಿಶೇಷ ಶಾಲೆಗಳ 37 ಸಂಸ್ಥೆಗಳಿಂದ 500ಕ್ಕೂ ಅಧಿಕ ಸ್ಪರ್ಧೆಗಳು ಭಾಗವಹಿಸಿದ್ದವು. ಶ್ರಾವಣ್ ಉಳ್ಳಾಲ್, ರತ್ನಾವತಿ ಜೆ. ಬೈಕಾಡಿ, ವಿನಾಯಕ ಆಚಾರ್ಯ ತೀರ್ಪುಗಾರರಾಗಿದ್ದರು. ಉದ್ಘಾಟನಾ ಕಾರ್ಯಕ್ರಮಕ್ಕೂ ಮುನ್ನ ನೆಹರೂ ಮೈದಾನದಿಂದ ಪುರಭವನಕ್ಕೆ ವಿಶೇಷ ಚೇತನರ ಸಾರ್ವಜನಿಕ ಅರಿವಿನ ಮೆರವಣಿಗೆ ನಡೆಯಿತು.
ಪ್ರಥಮ ಬಹುಮಾನ – ಲಯನ್ಸ್ ಸ್ಪೆಷಲ್ ಸ್ಕೂಲ್ ಸುರತ್ಕಲ್
ದ್ವಿತೀಯ ಬಹುಮಾನ – ಪ್ರೀತಿ ಸ್ಪೆಷಲ್ ಸ್ಕೂಲ್ ಮಂಡ್ಯ
ತೃತೀಯ ಬಹುಮಾನ – ಅಜಿತಾ ಮನೋಚೇತನ ಸಿರಸಿ ಉತ್ತರ ಕನ್ನಡ
ಸಮಾಧಾನಕರ ಬಹುಮಾನಗಳು :
1. ಸಮರ್ಥನಂ ಬೆಂಗಳೂರು
2. ವಿಜೇತಾ ಸ್ಪೆಷಲ್ ಸ್ಕೂಲ್ ಕಾರ್ಕಳ
3. ಸ್ಪೂರ್ತಿ ಸ್ಪೆಷಲ್ ಸ್ಕೂಲ್ ಮೂಡುಬಿದೆರೆ
4. ಮಾನಸ ಪಂಬೂರ ಉಡುಪಿ
5. ನವಚೇತನ ಸೊರಬ ಶಿವಮೊಗ್ಗ
ಶಿಸ್ತಿನ ತಂಡಗಳೆಂದು ಕಿನ್ನಿಗೋಳಿಯ ಸೈಂಟ್ ಮೇರಿಸ್ ಸ್ಪೆಷಲ್ ಸ್ಕೂಲ್ ಮತ್ತು ಉಜಿರೆಯ ಸಾನಿಧ್ಯ ಸ್ಕಿಲ್ ಟ್ರೋಗ್ ಸೆಂಟರ್ ಆಯ್ಕೆಯಾಗಿದ್ದವು.