ಉಡುಪಿ : ಡಾ. ವಿರೂಪಾಕ್ಷ ದೇವರಮನೆಯವರ ‘ಕಣ್ಣಿಗೆ ಕಾಣುವ ದೇವರು’ ಮತ್ತು ‘DID YOU TALK TO YOUR CHILD TODAY’ ಎಂಬ ಎರಡು ಕೃತಿಗಳು ದಿನಾಂಕ 29-10-2023ರಂದು ಸಂಜೆ 5 ಗಂಟೆಗೆ ಉಡುಪಿಯ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಲೋಕಾರ್ಪಣೆಗೊಳ್ಳಲಿದೆ.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವ ಹಿರಿಯ ಸಾಹಿತಿ ಯಂಡಮೂರಿ ವೀರೇಂದ್ರನಾಥ್ ಇವರು ‘ಪೋಷಕರು ಆರು ಬಗೆ’ ಮತ್ತು ರೂಬಿಕ್ಸ್ ಕ್ಯೂಬ್ ಗ್ರಾಂಡ್ ಮಾಸ್ಟರ್ ಆಫಾನ್ ಕುಟ್ಟಿ ಇವರು ‘ಅಂತರ್ಜಾಲ ವ್ಯಸನದಿಂದ ರೂಬಿಕ್ಸ್ ಕ್ಯೂಬ್ ನ ಇಂದ್ರಜಾಲದತ್ತ’ ಎಂಬ ವಿಷಯಗಳ ಬಗ್ಗೆ ಮಾತನಾಡಲಿದ್ದಾರೆ.
ಡಾ. ಎ.ವಿ. ಬಾಳಿಗಾ ಸಮೂಹ ಸಂಸ್ಥೆಗಳ ನಿರ್ದೇಶಕರಾದ ಡಾ. ಪಿ.ವಿ. ಭಂಡಾರಿ, ಒನ್ ಗುಡ್ ಸ್ಟೆಪ್ ಇದರ ಸ್ಥಾಪಕರು ಮತ್ತು ಟ್ರಸ್ಟಿಗಳಾದ ಅಮಿತಾ ಪೈ ಮತ್ತು ಸಾವಣ್ಣ ಪ್ರಕಾಶನ ಇದರ ಪ್ರಕಾಶಕರಾದ ಜಮೀಲ್ ಸಾವಣ್ಣ ಇವರುಗಳು ನಮ್ಮೊಂದಿಗೆ ವೇದಿಕೆ ಹಂಚಿಕೊಳ್ಳಲಿದ್ದಾರೆ. ಈ ಕಾರ್ಯಕ್ರಮಕ್ಕೆ ಡಾ. ವಿರೂಪಾಕ್ಷ ದೇವರಮನೆ ಮತ್ತು ಡಾ. ವೀಣಾ ವಿರೂಪಾಕ್ಷ ಇವರುಗಳು ತಮ್ಮೆಲ್ಲರಿಗೂ ಸ್ವಾಗತ ಕೋರಿದ್ದಾರೆ.
ವಿರೂಪಾಕ್ಷ ದೇವರಮನೆ ಮೂಲತಃ ಹೊಸಪೇಟೆಯ ನಾಗೇನಹಳ್ಳಿಯವರು. ದಾವಣಗೆರೆಯ ಜೆಜೆಎಂ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಹಾಗೂ ಮಂಗಳೂರಿನ ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿಯಲ್ಲಿ ಮನೋವೈದ್ಯಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದು 2008ರಿಂದ ಉಡುಪಿಯ ಡಾ.ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯಲ್ಲಿ ಮನೋವೈದ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರವೃತ್ತಿಯಲ್ಲಿ ಲೇಖಕರಾದ ವೈದ್ಯರು ಮಾನವ ಸಂಬಂಧಗಳು, ಸಂಬಂಧಗಳಲ್ಲಿ ಸಂವಹನ ಹಾಗೂ ಸಾಮರಸ್ಯ, ಪೇರೆಂಟಿಂಗ್, ಮಕ್ಕಳ ಆರೈಕೆ ಹಾಗೂ ಪೋಷಣೆಯ ಕುರಿತ ಉಪನ್ಯಾಸಗಳ ಮೂಲಕ ಪರಿಚಿತರು. ಮಕ್ಕಳು, ಹದಿಹರೆಯದವರು ಮತ್ತು ಯುವಜನತೆಯ ಶಿಕ್ಷಣ, ಬೆಳವಣಿಗೆ ಹಾಗೂ ಮಾನಸಿಕ ಆರೋಗ್ಯದ ಬಗ್ಗೆ ಆಸಕ್ತಿ ಹೊಂದಿದ್ದು ಮದ್ಯವ್ಯಸನಿಗಳ ಮಕ್ಕಳಿಗಾಗಿ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಸದ್ಯ ಮಣಿಪಾಲದಲ್ಲಿ ನೆಲೆಸಿದ್ದಾರೆ. ‘ಸ್ವಲ್ಪ ಮಾತಾಡಿ ಪ್ಲೀಸ್’, ‘ಮಕ್ಕಳತ್ರ ಮಾತಾಡಿ ಪ್ಲೀಸ್’, ನೀನು ಒಂಟಿಯಲ್ಲ’, ನೀನಿಲ್ಲದೆ ನನಗೇನಿದೆ’ ಇತ್ಯಾದಿ ಇವರ ಮನೋವೈಜ್ಞಾನಿಕ ಕೃತಿಗಳು.