ಮಂಗಳೂರು : ಮಂಗಳೂರಿನ ಶಾರದಾ ವಿದ್ಯಾಸಂಸ್ಥೆಯ ಕನ್ನಡ ಉಪನ್ಯಾಸಕಿ ಅ. ಭಾ. ಸಾ. ಪ. ಮಂಗಳೂರು ಸಮಿತಿಯ ಕೋಶಾಧಿಕಾರಿಯಾದ ಯಶೋದಾ ಕುಮಾರಿಯವರು ಅನುವಾದಿಸಿದ, ಡಾ. ಮೀನಾಕ್ಷಿ ರಾಮಚಂದ್ರರ ರಾಷ್ಟ್ರ ಮಟ್ಟದ ಪ್ರಶಸ್ತಿ ವಿಜೇತ ಕನ್ನಡ ಕೃತಿ ‘ಒಳದನಿ’ ಇದರ ತುಳು ಅವತರಣಿಕೆ ‘ಉಡಲ ದುನಿಪು’ ಕೃತಿಯ ಲೋಕರ್ಪಣಾ ಸಮಾರಂಭವು ದಿನಾಂಕ 18-07-2024 ರಂದು ಮಂಗಳೂರಿನ ಶಾರದಾ ವಿದ್ಯಾಸಂಸ್ಥೆಯ ಧ್ಯಾನ ಮಂದಿರದಲ್ಲಿ ನಡೆಯಿತು.
ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಮಂಗಳೂರು ತಾಲೂಕು ಸಮಿತಿ ಹಾಗೂ ಶಾರದಾ ಪದವಿ ಪೂರ್ವ ಕಾಲೇಜು ಮಂಗಳೂರು ಇದರ ಸಹಯೋಗದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪುಸ್ತಕ ಲೋಕಾರ್ಪಣೆಗೊಳಿಸಿದ ಶಾರದಾ ಸಮೂಹ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಹಾಗೂ ಶ್ರೇಷ್ಠ ಶಿಕ್ಷಣ ತಜ್ಞರಾದ ಡಾ. ಎಂ. ಬಿ. ಪುರಾಣಿಕ್ ಮಾತನಾಡಿ “ಒಂದು ಭಾಷೆಯ ಕೃತಿಯನ್ನು ಇನ್ನೊಂದು ಭಾಷೆಗೆ ಅನುವಾದ ಮಾಡುವುದೆಂದರೆ ಬಹು ಪ್ರಯಾಸದ ಕೆಲಸ. ಮೂಲ ಕೃತಿಯಲ್ಲಿ ಕೃತಿಕಾರನಿಗೆ ಸ್ವಾತಂತ್ರ್ಯವಿರುತ್ತದೆ. ಆದರೆ ಭಾಷಾಂತಕಾರನಿಗೆ ಬಹು ದೊಡ್ಡ ಜವಾಬ್ದಾರಿಯಿರುತ್ತದೆ. ಮೂಲ ಕೃತಿಗೆ ಅಪಚಾರವಾಗದಂತೆ ವಿಷಯವನ್ನು ಹಾಗೂ ಶಬ್ದವನ್ನು ಹುಡುಕಿ ಭಾಷಾಂತರಿಸಬೇಕಾಗುತ್ತದೆ. ಮಲಯಾಳ ಭಾಷೆಗೆ ಲಿಪಿ ಕೊಟ್ಟವರು ನಾವು. ಹಾಗಾಗಿ ತುಳು ಲಿಪಿಗೆ ಬಹಳ ಹಿಂದಿನ ಇತಿಹಾಸವಿದೆ. ತುಳು ಭಾಷೆಯ ಜೊತೆಗೆ ಇತರ ಭಾಷೆಗೆ ಗೌರವ ಕೊಡುವ ಸಂಸ್ಕೃತಿಯು ತುಳುವರಿಗಿದೆ.” ಎಂದು ಹೇಳಿದರು.
ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಪ್ರಾಂತೀಯ ವಿಶೇಷ ಆಹ್ವಾನಿತರಾದ ಡಾ. ಮಾಧವ ಎಂ. ಕೆ. ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ತುಳು ವಿದ್ವಾಂಸ ಹಾಗೂ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಮಂಗಳೂರು ತಾಲೂಕು ಸಮಿತಿಯ ಉಪಾಧ್ಯಕ್ಷರಾದ ಶ್ರೀ ಚಂದ್ರಹಾಸ ಕಣಂತೂರು ಕೃತಿ ಪರಿಚಯವನ್ನು ಮಾಡಿಕೊಟ್ಟರು. ಮುಖ್ಯ ಅತಿಥಿಗಳಾಗಿ ಶಾರದಾ ಸಮೂಹ ಸಂಸ್ಥೆಯ ಕಾರ್ಯದರ್ಶಿ ಹಾಗೂ ಕಲ್ಕೂರ ಪ್ರತಿಷ್ಠಾನದ ಶ್ರೀಯುತ ಪ್ರದೀಪ ಕುಮಾರ ಕಲ್ಕೂರ, ಶಾರದಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಪ್ರಕಾಶ್ ನಾಯಕ್, ನಿವೃತ್ತ ಪ್ರಾಂಶುಪಾಲರಾದ ಡಾ. ಲೀಲಾ ಉಪಾಧ್ಯಾಯ ಹಾಗೂ ಪ್ರಭಾಕರ ಪೇಜಾವರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಮಂಗಳೂರು ತಾಲೂಕು ಸಮಿತಿಯ ಅಧ್ಯಕ್ಷರಾದ ಡಾ. ಮೀನಾಕ್ಷಿ ರಾಮಚಂದ್ರ ಸ್ವಾಗತಿಸಿ, ಪದಾಧಿಕಾರಿ ಸಂಧ್ಯಾ ಆಳ್ವ ನಿರೂಪಿಸಿ, ಕಾರ್ಯದರ್ಶಿ ಗೀತಾ ಲಕ್ಷ್ಮೀಶ್ ವಂದಿಸಿದರು.