ಕೋಟ : ಐವತ್ತರ ಸಂಭ್ರಮದ ಸುವರ್ಣ ಪರ್ವವನ್ನು ಆಚರಿಸುತ್ತಿರುವ ವಿಶ್ವ ವಿಖ್ಯಾತ ಸಾಲಿಗ್ರಾಮ ಮಕ್ಕಳ ಮೇಳದ ಸ್ಥಾಪಕ ನಿರ್ದೇಶಕ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ, ಲೇಖಕ, ಯಕ್ಷಗಾನ ಹಾಗೂ ನಾಟಕ ಕಲಾವಿದರಾದ ದಿವಂಗತ ಕಾರ್ಕಡ ಶ್ರೀನಿವಾಸ ಉಡುಪ ಮತ್ತು ಎಚ್. ಶ್ರೀಧರ ಹಂದೆಯವರ ಹೆಸರಿನ 2025ರ ಸಾಲಿನ ‘ಉಡುಪ-ಹಂದೆ ಪ್ರಶಸ್ತಿ’ಗೆ ಯಕ್ಷಗಾನದ ಪ್ರಸಿದ್ಧ ಭಾಗವತರಾದ ಹೆರೆಂಜಾಲು ಗೋಪಾಲ ಗಾಣಿಗ ಮತ್ತು ರಾಷ್ಟೀಯ ರಂಗ ನಿರ್ದೇಶಕ ಡಾ. ಶ್ರೀಪಾದ ಭಟ್ ಆಯ್ಕೆಯಾಗಿದ್ದಾರೆ.
ಹೆರೆಂಜಾಲು ಗೋಪಾಲ ಗಾಣಿಗ :
ಕುಂದಾಪುರ ತಾಲೂಕಿನ ನಾಗೂರಿನ ಯಕ್ಷಗಾನ ಭಾಗವತ ಹೆರಂಜಾಲು ಗೋಪಾಲ ಗಾಣಿಗರು, ತಂದೆ ವೆಂಕಟರಮಣ ಗಾಣಿಗರಿಂದ ಬಳುವಳಿಯಾಗಿ ಬಂದ ಯಕ್ಷ ಸಂಪತ್ತನ್ನು ವಿಸ್ತರಿಸಿಕೊಂಡವರು. ಡಾ. ಶಿವರಾಮ ಕಾರಂತರ ನಿರ್ದೇಶನದ ಉಡುಪಿಯ ಯಕ್ಷಗಾನ ಕೇಂದ್ರವನ್ನು ಸೇರಿ, ಗುರು ನೀಲಾವರ ರಾಮಕೃಷ್ಣಯ್ಯ ಹಾಗೂ ಮಹಾಬಲ ಕಾರಂತರ ಗರಡಿಯಲ್ಲಿ ಪಳಗಿ, ಯಕ್ಷಾನದ ಹಿಮ್ಮೇಳ ಮತ್ತು ಮುಮ್ಮೇಳಗಳಲ್ಲಿ ಸಾಧನೆಗೈದರು. ಡಾ. ಶಿವರಾಮ ಕಾರಂತರ ಯಕ್ಷ ಬ್ಯಾಲೆ ತಂಡದ ಮೂಲಕ ರಷ್ಯ, ಲಂಡನ್, ಪ್ರಾನ್ಸ್, ಕುವೈತ್ ಮೊದಲಾದೆಡೆ ಯಕ್ಷ ಕಂಪನ್ನು ಪಸರಿಸಿದ ಇವರು ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯಲ್ಲಿ ರಂಗ ನಿರ್ದೇಶಕ ಬಿ. ವಿ. ಕಾರಂತರ ‘ಶಾಕುಂತಲ’ ನೃತ್ಯನಾಟಕಕ್ಕೆ ಯಕ್ಷ ನೃತ್ಯವನ್ನು ನಿರ್ದೇಶಿಸಿದರು. ಅಮೃತೇಶ್ವರಿ ಮೇಳದಲ್ಲಿ ನರಸಿಂಹ ದಾಸರ ಸಹಚರ್ಯದಿಂದ ಪ್ರಭಾವಿತರಾಗಿ ದಾಸ ಪರಂಪರೆಯೊಂದಿಗೆ ಸ್ವಂತಿಕೆಯನ್ನು ಮೆರೆದ ಶ್ರೀಯುತರು ಮಾರಣಕಟ್ಟೆ, ಕಮಲಶಿಲೆ, ಮಂದರ್ತಿ, ಸಾಲಿಗ್ರಾಮ, ಶಿರಸಿ, ಸೌಕೂರು ಮೇಳಗಳಲ್ಲಿ ಪ್ರಧಾನ ಭಾಗವತರಾಗಿ ಪೌರಾಣಿಕ ಮತ್ತು ಆಧುನಿಕ ಪ್ರಸಂಗಗಳಲ್ಲಿ ಸೈ ಎನಿಸಿಕೊಂಡವರು.
ಡಾ. ಶ್ರೀಪಾದ ಭಟ್ :
ಮೂಲತಃ ಉತ್ತರ ಕನ್ನಡದ ಧಾರೇಶ್ವರದ ಡಾ. ಶ್ರೀಪಾದ ಭಟ್ ಇವರು ಪ್ರೌಢ ಶಾಲಾ ಅಧ್ಯಾಪನದೊಂದಿಗೆ ಸುಮಾರು ನಲ್ವತ್ತು ವರ್ಷಗಳ ಕಾಲ ರಂಗಭೂಮಿಯಲ್ಲಿ ಸಾಕಷ್ಟು ಕೃಷಿ ಮಾಡಿರುವ ಇವರು ಜನಪದ ರಂಗ ಭೂಮಿ, ಯಕ್ಷಗಾನ ಹಾಗೂ ಆಧುನಿಕ ರಂಗ ಭೂಮಿಯ ಕುರಿತಾದ ಸಂಶೋಧನೆಗಾಗಿ ಪಿ. ಎಚ್. ಡಿ. ಪದವಿ ಪಡೆದಿದ್ದಾರೆ. ಮಕ್ಕಳ ನಾಟಕ, ಬೀದಿ ನಾಟಕ, ಪ್ರೊಸೀನಿಯಂ ನಾಟಕ, ಕಾವ್ಯ ನಾಟಕ ಮೊದಲಾದ ಪ್ರಕಾರಗಳಲ್ಲಿ ನಾಟಕಗಳನ್ನು ನಿರ್ದೇಶಿಸಿದ ಇವರ ನಿರ್ದೇಶನದ ನೂರಾರು ನಾಟಕಗಳು ದೇಶದಾದ್ಯಂತ ಪ್ರಯೋಗಗೊಂಡಿವೆ. ಶಿಕ್ಷಣ ಮತ್ತು ರಂಗಭೂಮಿಯ ಸಮಾಸಕ್ಕಾಗಿ ನಿರಂತರ ಪ್ರಯತ್ನಿಸುತ್ತಿರುವ ಇವರು ನಾಟಕ ಅಕಾಡೆಮಿಯ ಸದಸ್ಯರಾಗಿ, ಹಂಪಿ ವಿ. ವಿ. ಇಲ್ಲಿನ ಅಧ್ಯಯನ ಮಂಡಳಿಯ ಸದಸ್ಯರಾಗಿ, ‘ರಂಗ ಸಮಾಜ’ದ ಸದಸ್ಯರಾಗಿ, ಉತ್ತರ ಕನ್ನಡದ ‘ಚಿಂತನ ರಂಗ ಅಧ್ಯಯನ ಕೇಂದ್ರ’, ಹಾವೇರಿಯ ‘ಶೇಷಗಿರಿ ಕಲಾತಂಡ’, ‘ಸಮುದಾಯ ಕರ್ನಾಟಕ’, ‘ನಿರ್ದಿಗಂತ’ ಮೊದಲಾದ ಸಂಸ್ಥೆಗಳಲ್ಲಿ ರಂಗ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ ಅನುಭವಿ. ಇವರಿಗೆ ಎರಡು ಬಾರಿ ರಾಷ್ಟ್ರೀಯ ಪ್ರಶಸ್ತಿ ದೊರೆತಿರುವುದಲ್ಲದೆ ಅನೇಕ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಕೋಟದ ಪಟೇಲರ ಮನೆಯಲ್ಲಿ 31 ಜನವರಿ ಮತ್ತು 01 ಫೆಬ್ರುವರಿ 2025ರಂದು ನಡೆಯುವ ಎರಡು ದಿನಗಳ ‘ಕಲೋತ್ಸವ’ದ ಸಂದರ್ಭ ಗೌರಾವಾನ್ವಿತ ಅಭ್ಯಾಗತರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿರುವುದು ಎಂದು ಮಕ್ಕಳ ಮೇಳದ ಕಾರ್ಯದರ್ಶಿ ಸುಜಯೀಂದ್ರ ಹಂದೆ ಎಚ್. ತಿಳಿಸಿದ್ದಾರೆ.