ಉಡುಪಿ : ಕೇರಳದ ಗ್ರಂಥಾಲಯ ಚಳವಳಿಯ ಪಿತಾಮಹ ಪಿ.ಎನ್. ಪಣಿಕ್ಕರ್ ಪುಣ್ಯತಿಥಿ ಅಂಗವಾಗಿ ಹಮ್ಮಿಕೊಳ್ಳಲಾದ ‘ಓದುವ, ಡಿಜಿಟಲ್ ಓದುವ ದಿನ ಮತ್ತು ಓದುವ ತಿಂಗಳು’ ಆಚರಣೆ ಪ್ರಯುಕ್ತ ಪುಸ್ತಕ ಪ್ರದರ್ಶನ ಮತ್ತು ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಕಾರ್ಯಕ್ರಮ ಅಜ್ಜರಕಾಡು ವಿದ್ಯಾವಾಚಸ್ಪತಿ ಡಾ.ಬನ್ನಂಜೆ ಗೋವಿಂದಾಚಾರ್ಯ ಸ್ಮಾರಕ ನಗರ ಕೇಂದ್ರ ಗ್ರಂಥಾಲಯದಲ್ಲಿ ದಿನಾಂಕ 18-07-2023ರಂದು ನಡೆಯಿತು. ಮಕ್ಕಳು ಹಾಗೂ ಸಾರ್ವಜನಿಕರನ್ನು ಗ್ರಂಥಾಲಯದತ್ತ ಆಕರ್ಷಿಸಿ, ಅವರಲ್ಲಿ ಪುಸ್ತಕ ಓದುವ ಹವ್ಯಾಸ ಮತ್ತು ಗ್ರಂಥಾಲಯಗಳ ಮಹತ್ವದ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಈ ಓದುವ ತಿಂಗಳು ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಈ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಉದ್ಘಾಟಿಸಿ ಮಾತನಾಡುತ್ತಾ “ಪುಸ್ತಕಗಳಲ್ಲಿ ಆಗಾಧ ಮಾಹಿತಿ ಸಿಗುವುದರಿಂದ ಮಕ್ಕಳು ಬಾಲ್ಯದಿಂದಲೇ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಓದು ನಮ್ಮ ಹವ್ಯಾಸವಾದಾಗ ಮುಂದೆ ಓದುವ ಪ್ರವೃತ್ತಿ ಬೆಳೆಯುತ್ತದೆ. ಗ್ರಂಥಾಲಯಗಳು ವಿವಿಧ ತರಹದ ಸ್ಪರ್ಧೆಗಳನ್ನು ಏರ್ಪಡಿಸುವ ಮೂಲಕ ಓದುವ ಪ್ರವೃತ್ತಿಯನ್ನು ಉತ್ತೇಜಿಸಬೇಕು. ಇದು ಹೈಟೆಕ್ ಗ್ರಂಥಾಲಯವಾಗಿದ್ದು, ಎಲ್ಲಾ ತರಹದ ಪುಸ್ತಕಗಳು ಲಭ್ಯವಿದೆ. ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಗ್ರಂಥಾಲಯದ ಸದ್ಬಳಕೆ ಮಾಡಿಕೊಳ್ಳಬೇಕು” ಎಂದು ತಿಳಿಸಿದರು.
ಕಾರ್ಯಕ್ರಮದ ಅಂಗವಾಗಿ ನಗರದ 1ರಿಂದ 4ನೇ ತರಗತಿಯ ವಿದ್ಯಾರ್ಥಿಗಳಿಗೆ ಪುಸ್ತಕ ಓದುವ ಸ್ಪರ್ಧೆ, 5ರಿಂದ 7ನೇ ತರಗತಿಯ ವಿದ್ಯಾರ್ಥಿಗಳಿಗೆ ಕನ್ನಡ ಪುಸ್ತಕ ಓದಿ ಕಥೆ ಹೇಳುವ ಸ್ಪರ್ಧೆ ಹಾಗೂ 8ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಪುಸ್ತಕ ಓದಿ ಅದರಲ್ಲಿರುವ ವಿಷಯ ತಿಳಿಸುವ ಸ್ಪರ್ಧೆಗಳನ್ನು ಏರ್ಪಡಿಸಿದ್ದು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಎಸ್. ದೇವೇಂದ್ರ ಪೆಜತ್ತಾಯ ಬರೆದಿರುವ 400ಕ್ಕೂ ಅಧಿಕ ಪುಸ್ತಕಗಳನ್ನು ಉಚಿತವಾಗಿ ಜಿಲ್ಲಾಧಿಕಾರಿ ಮುಖಾಂತರ ಗ್ರಂಥಾಲಯಕ್ಕೆ ಹಸ್ತಾಂತರಿಸಲಾಯಿತು ಮತ್ತು ಜಿಲ್ಲಾಧಿಕಾರಿ ವಿದ್ಯಾ ಕುಮಾರಿಯವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಹಾಗೂ ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಉಪಾಧ್ಯಕ್ಷೆ ಶ್ರೀಮತಿ ವಸಂತಿ ಶೆಟ್ಟಿ ಬ್ರಹ್ಮಾವರ ಹಾಗೂ ಸಾಹಿತಿ ಸಂಗೀತ ಜಾನ್ಸನ್ ಉಪಸ್ಥಿತರಿದ್ದರು. ನಗರ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ನಳಿನಿ ಜಿ.ಐ. ಸ್ವಾಗತಿಸಿ, ಗ್ರಂಥಪಾಲಕಿ ರಂಜಿತ ಸಿ. ನಿರೂಪಿಸಿ, ಪ್ರಥಮ ದರ್ಜೆ ಸಹಾಯಕಿ ಶಕುಂತಳಾ ಕುಂದರ್ ವಂದಿಸಿದರು.