ಉಡುಪಿ: ಉಡುಪಿಯಲ್ಲಿ 1965ರಲ್ಲಿ ಹುಟ್ಟಿಕೊಂಡ, ಇಂದು ಕರ್ನಾಟಕದಾದ್ಯಂತ ಮನೆ ಮಾತಾಗಿರುವ ಪ್ರಸಿದ್ಧ ನಾಟಕ ಸಂಸ್ಥೆ “ರಂಗಭೂಮಿ”ಯ ಆರಂಭದ ದಿನಗಳಲ್ಲಿ ಬಹು ಹಾಸ್ಯ ಪ್ರಜ್ಞೆಯ, ಆಕರ್ಷಕ ನಗುಮೊಗದ, ಪಾದರಸದಂತೆ ಸದಾ ಚಟುವಟಿಕೆಯ ದಕ್ಷಿಣ ಕನ್ನಡ ಜಿಲ್ಲೆಯ ಜನಪ್ರಿಯ ಹಾಸ್ಯ ಕಲಾವಿದರಾಗಿ ತಮ್ಮದೇ ಆದ ವಿಶಿಷ್ಟ ಛಾಪನ್ನು ಮೂಡಿಸಿದವರು ಹೆಸರಾಂತ ಹಿರಿಯ ರಂಗ ಕಲಾವಿದ ಉಡುಪಿ ಮಹಮ್ಮದ್ ಅಸ್ಲಾಂ (ಯು.ಎಂ. ಅಸ್ಲಾಂ) (86)ರವರು ಇಂದು ವಯೋಸಹಜ ಅಸೌಖ್ಯದಿಂದ ತಮ್ಮ ಸ್ವಗೃಹದಲ್ಲಿ ದಿನಾಂಕ 02-05-2023ರಂದು ದೈವಾಧೀನರಾದರು. ಮಡದಿ ಮತ್ತು 4 ಗಂಡು ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
04-12-1937ರಂದು ಹುಟ್ಟಿದ ಅಸ್ಲಾಂರು, ಶ್ರೀ ಅಬ್ದುಲ್ ಆಲಿ ಸಾಹೇಬ್ ಹಾಗೂ ಹಫೀಝಬಿ ದಂಪತಿಗಳ 13 ಮಕ್ಕಳಲ್ಲಿ ಅಸ್ಲಾಂರು ಹಿರಿಯರು. ಅಸ್ಲಾಂ ಶಾಲಾ ದಿನಗಳಲ್ಲಿಯೇ ನಟನೆಯ ಕಡೆಗೆ ಒಲವನ್ನು ತೋರಿದವರು. ಕಾಲೇಜಿನ ಬಿ.ಎ.- ಎ.ಎಫ್.ಐ.ಐ. ಶಿಕ್ಷಣ ಪೂರೈಸುತ್ತಲೇ ಭಾರತೀಯ ಜೀವ ವಿಮಾ ನಿಗಮದಲ್ಲಿಯೇ 1967ರಲ್ಲಿ ಉದ್ಯೋಗ ದೊರಕಿಸಿಕೊಂಡರು. 20 ವರ್ಷಗಳ ಕಾಲ ಎಲ್.ಐ.ಸಿ.ಯ ವಿವಿಧ ಹುದ್ದೆಗಳಲ್ಲಿ ಪದೋನ್ನತಿ ಪಡೆದು ಕೊನೆಗೆ ಉನ್ನತ ಅಧಿಕಾರಿಯ ಹುದ್ದೆಯಲ್ಲಿದ್ದರೂ, ತನ್ನ ಉದ್ಯೋಗಕ್ಕೆ ರಾಜೀನಾಮೆ ನೀಡಿ ಗಲ್ಫ್ ರಾಷ್ಟ್ರ ಸೌದಿ ಅರೇಬಿಯಾದಲ್ಲಿ ದೊಡ್ಡ ಉದ್ಯೋಗದ ಅವಕಾಶ ಪಡೆದು ಅಲ್ಲಿ ಸುಮಾರು 25 ವರ್ಷಗಳ ಕಾಲ ನೆಲೆಸಿ ತಮ್ಮ ಹುಟ್ಟೂರಾದ ಉಡುಪಿಗೆ ಮರಳಿದ್ದರು.
ಅಸ್ಲಾಂರ ರಂಗ ಚಟುವಟಿಕೆಗಳ ಬಗ್ಗೆ ಬರೆಯುತ್ತಾ ಹೋದರೆ ಹಲವು ಪುಟಗಳೇ ಬೇಕಾದೀತು. ರಂಗಭೂಮಿ (ರಿ.) ಉಡುಪಿಯ ಆರಂಭದಿಂದ ಹಲವಾರು ವರ್ಷಗಳ ಕಾಲ ಕಾರ್ಯಕಾರಿ ಮಂಡಳಿಯ ಸಕ್ರಿಯ ಸದಸ್ಯನಾಗಿದ್ದುಕೊಂಡು ತನ್ನನ್ನು ರಂಗಭೂಮಿಯ ಕೆಲಸಗಳಿಗಾಗಿ ಸಂಪೂರ್ಣ ತೊಡಗಿಸಿಕೊಂಡಿದ್ದರು. ರಂಗಭೂಮಿಯ ಆರಂಭದ ರಂಗಪ್ರಯೋಗಗಳಾದ ರಾಷ್ಟ್ರಭಕ್ತಿ, ಅಣ್ಣತಮ್ಮ, ಪುತ್ಥಳಿ, ಸಾಧ್ವೀಮಣಿ, ಮಂಗಳ, ಕುಮಾರರಾಮ, ಶಹರದ ಹುಡುಗಿ, ಬಾಣಸಿಗ ಭೀಮ, ಧರ್ಮಚಕ್ರ, ಸಾಮ್ರಾಟ ಅಶೋಕ, ವೀರ ಪುರೂರವ ಮುಂತಾದ ಪ್ರಸಿದ್ಧ ನಾಟಕಗಳಲ್ಲಿ ಅವರ ಹಾಸ್ಯ ಪಾತ್ರಗಳು ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತಿದ್ದವು. ಅಸ್ಲಾಂರು ತಮ್ಮ ನಿಜ ಜೀವನದಲ್ಲಿಯೂ ತುಂಬಾ ಹಾಸ್ಯ ಪ್ರವೃತ್ತಿಯವರಾಗಿದ್ದ ಕಾರಣಕ್ಕೆ ಅವರು ಅಭಿನಯಿಸಿದ ಎಲ್ಲಾ ಹಾಸ್ಯ ಪಾತ್ರಗಳೂ ಪ್ರೇಕ್ಷಕರಿಗೆ ಅಷ್ಟೇ ಮುದ ನೀಡುತ್ತಿದ್ದುವು. ರಂಗಭೂಮಿ ನಾಟಕ ಸಂಸ್ಥೆಯಲ್ಲಿ ಅವರು ಅಭಿನಯಿಸಿ ಸಂಸ್ಥೆಗೂ ಕೀರ್ತಿ ತಂದುದಲ್ಲದೇ ಆ ಕಾಲದ ಶ್ರೇಷ್ಟ ಹಾಸ್ಯ ನಟ ಎಂಬ ಹೆಗ್ಗಳಿಕೆಗೂ ಭಾಜನರಾಗಿದ್ದರು.
ಶ್ರೀ ಯು.ಎಂ. ಅಸ್ಲಾಂರವರ ಈ ಅಮೋಘ ಕಲಾಸೇವೆಯನ್ನು “ರಂಗಭೂಮಿ ಉಡುಪಿ”ಯು ಈ ವರ್ಷ ವಿಶ್ವರಂಗಭೂಮಿ ದಿನಾಚರಣೆಯ ಈ ಶುಭ ಸಂದರ್ಭದಲ್ಲಿ ಕೃತಜ್ಞತಾಪೂರ್ವಕವಾಗಿ ನೆನೆಸಿಕೊಂಡು ಸನ್ಮಾನಿಸಿತ್ತು.